ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿ ಶಾಸಕರ ವಿರುದ್ಧ ಮಾಜಿ ಶಾಸಕರ ವಾಗ್ದಾಳಿ

ಹಯ್ಯಾಳ ಗ್ರಾಮದಿಂದ ಕೆಜೆಪಿ ಚುನಾವಣಾ ಪ್ರಚಾರ ಆರಂಭ
Last Updated 1 ಏಪ್ರಿಲ್ 2013, 10:37 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದ ಕೆಜೆಪಿ, ಯಾದಗಿರಿ ಮತಕ್ಷೇತ್ರದಲ್ಲಿ ಚುನಾವಣಾ ಪ್ರಚಾರವನ್ನು ಆರಂಭಿಸಿದೆ. ಕೆಜೆಪಿ ಅಭ್ಯರ್ಥಿ ಡಾ. ವೀರಬಸವಂತರಡ್ಡಿ ಮುದ್ನಾಳ, ಕ್ಷೇತ್ರದ ಹಯ್ಯಾಳ ಬಿ. ಗ್ರಾಮದಲ್ಲಿ ಹಯ್ಯಾಳ ಲಿಂಗೇಶ್ವರನಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಆರಂಭಿಸಿದರು.

ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಡಾ. ವೀರಬಸವಂತರಡ್ಡಿ ಮುದ್ನಾಳ, ಹಾಲಿ ಶಾಸಕ ಡಾ. ಎ.ಬಿ. ಮಾಲಕರಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೆಲಸ ಮಾಡದೇ ಯಾದಗಿರಿ ಮತಕ್ಷೇತ್ರವನ್ನು ಅಭಿವೃದ್ದಿಯಿಂದ ವಂಚಿತವಾಗುವಂತೆ ಮಾಡಲಾಗಿದೆ. ಆದರೂ ಮತ್ತೊಮ್ಮೆ ಜನರ ಬಳಿ ಮತ ಕೇಳಲು ಹೊರಟಿದ್ದಾರೆ. ಇವರ ನಾಟಕ ನೋಡಿ ಜನರಿಗೆ ಸಾಕಾಗಿದೆ. ಅಂಥವರ ಕೈಗೆ ಮತ್ತೆ ಅಧಿಕಾರ ಕೊಡದೇ ಮತಕ್ಷೇತ್ರವನ್ನು ಕಾಪಾಡಿ. ಮತದಾರರೇ, ಈ ಬಾರಿ ಅದೇ ತಪ್ಪು ಮಾಡಿ ಚಿಂತಿಸಬೇಡಿ ಎಂದು ಡಾ. ವೀರಬಸವಂತರಡ್ಡಿ ಮುದ್ನಾಳ ಮತದಾರರಿಗೆ ಮನವಿ ಮಾಡಿದರು.

ಡಾ. ಮಾಲಕರೆಡ್ಡಿ ಅವರ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅವರು, ಹಾಲಿ ಶಾಸಕರು ನಾಲ್ಕು ಬಾರಿ ಶಾಸಕರಾಗಿ 20 ವರ್ಷ ಅಧಿಕಾರ ಅನುಭವಿಸಿದ್ದಾರೆ. ಆದರೆ ಮತಕ್ಷೇತ್ರದ ಜನತೆ ಬಗ್ಗೆ ಎಂದೂ ಚಿಂತಿಸಿಲ್ಲ. ಈ ನಡುವೆ ಮೂರೂವರೆ ವರ್ಷ ನಾನು ಶಾಸಕನಾಗಿದ್ದಾಗ ಪ್ರತಿ ಹಳ್ಳಿಗೆ ಒಂದಾದರೂ ಕೆಲಸ ಮಾಡಿಕೊಟ್ಟಿದ್ದೇನೆ. 20 ವರ್ಷ ಶಾಸಕರಾಗಿದ್ದ ಡಾ. ಮಾಲಕರಡ್ಡಿ ಏನು ಮಾಡಿದ್ದಾರೆ ಎನ್ನುವುದನ್ನು ಜನತೆಗೆ ತಿಳಿಸಲಿ ಎಂದು ಸವಾಲು ಹಾಕಿದರು.

ರಸ್ತೆ, ಕುಡಿಯುವ ನೀರು, ಆಸ್ಪತ್ರೆ  ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಡಾ. ಮಾಲಕರಡ್ಡಿ ಕಿಂಚಿತ್ತೂ ಯೋಚಿಸಿಲ್ಲ. ಕಳೆದ 5 ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಹಳ್ಳಿಗಳತ್ತ ಮುಖ ಮಾಡಿಲ್ಲ. ಈಗ ಮತ್ತೆ ಮತ ಕೇಳಲು ಬರುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಮುಂದಿನ 5 ವರ್ಷ ಯಾರಿಗೆ ಅಧಿಕಾರ ಕೊಡಬೇಕು ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಕಾಲ ಬಂದಿದೆ. ಕಳೆದ ಬಾರಿ ಅತ್ಯಲ್ಪ ಮತದಿಂದ ಸೋಲು ಅನುಭವಿಸುವಂತಾಯಿತು. ಅದಕ್ಕೆ ಜೆಡಿಎಸ್ ಕಾರಣವಾಯಿತು.

ಈ ಬಾರಿಯೂ ಜೆಡಿಎಸ್‌ನಿಂದ ಅದೇ ರೀತಿ ಆಗುವ ಅಪಾಯವಿದೆ. ಆದರೆ ಜೆಡಿಎಸ್ ಅಭ್ಯರ್ಥಿ ಶಾಸಕರಾಗಿ ಆಯ್ಕೆಯಾಗುವುದು ಕನಸಿನ ಮಾತು. ಅಲ್ಲದೇ ನೀವು, ನಿಮ್ಮ ಪಕ್ಷ ಹಾಗೂ ಮತಕ್ಷೇತ್ರ ಯಾವುದೂ ಉದ್ಧಾರವಾಗುವುದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT