ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: 10 ವರ್ಷದಲ್ಲಿ 18 ಆನೆ ಸಾವು

Last Updated 19 ಜುಲೈ 2012, 8:15 IST
ಅಕ್ಷರ ಗಾತ್ರ

ಹಾಸನ: ಆಲೂರು ತಾಲ್ಲೂಕಿನಲ್ಲಿ ವಿದ್ಯುತ್ ಸ್ಪರ್ಶದಿಂದ ಮಂಗಳವಾರ ಇನ್ನೊಂದು ಆನೆ ಸತ್ತಿದೆ. ಆ ಮೂಲಕ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷದಲ್ಲಿ ಒಟ್ಟಾರೆ 18 ಆನೆಗಳು ಪ್ರಾಣ ಬಿಟ್ಟಂತಾಗಿದೆ.

ಮಂಗಳವಾರದ ಘಟನೆಯಲ್ಲಿ ನೇರವಾಗಿ ಮನುಷ್ಯನ ಪಾತ್ರವೇನೂ ಇಲ್ಲ. ಹಲಸಿನ ಹಣ್ಣಿನ ಆಸೆಗೆ ಬಂದ ಆನೆ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ.

ಗುಡ್ಡದ ಮೇಲೊಂದು ಮತ್ತು ಕೆಳಗೊಂದು ಕಂಬ ನೆಟ್ಟು ತಂತಿ ಅಳವಡಿಸಿದ್ದರಿಂದ ಸಹಜವಾಗಿ ಮೇಲ್ಭಾಗದಲ್ಲಿ ತಂತಿಗಳು ಆನೆಯ ಸೊಂಡಿಲಿಗೆ ನಿಲುಕಬಹುದಾದಷ್ಟು (ಸುಮಾರು 16 ಡಿ ಎತ್ತರ) ಕೆಳಗಿದ್ದವು. ಈ ಎರಡು ಕಂಬಗಳ ಮಧ್ಯದಲ್ಲಿ ಇನ್ನೂ ಒಂದೆರಡು ಕಂಬಗಳನ್ನು ನೆಟ್ಟಿದ್ದರೆ ಈ ಅಪಘಾತವನ್ನು ತಡೆಯಬಹುದಾಗಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ನುಡಿದಿದ್ದಾರೆ. ಘಟನೆ ಬಗ್ಗೆ ಎಫ್‌ಐಆರ್ ದಾಖಲಿಸುವಾಗ ಚೆಸ್ಕಾಂ ಅನ್ನೂ ಪಾರ್ಟಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಆಲೂರು ತಾಲ್ಲೂಕಿನಲ್ಲಿ ಆನೆಗಳ ದಾಳಿಯಿಂದ ರೈತರು ಹಾಗೂ ಇತರ ಸ್ಥಳೀಯರು ನಲುಗುತ್ತಿರುವ ವಿಚಾರ ಎಲ್ಲರಿಗೂ ತಿಳಿದದ್ದೇ. ಈ ಘಟನೆಯಿಂದ ಆನೆಗಳ ದಾಳಿ ಹೆಚ್ಚಾಗಬಹುದು ಎಂಬ ಭೀತಿಯೂ ಅವರಲ್ಲಿ ಮೂಡಿದೆ. ಮಂಗಳವಾರ ಸತ್ತಿರುವ ಸುಮಾರು 20 ರಿಂದ 22 ವರ್ಷದ ಆನೆ ಈ ಭಾಗದಲ್ಲಿ ಹಲವು ದಿನಗಳಿಂದ ಸುತ್ತಾಡುತ್ತಿದ್ದ ಆರು ಆನೆಗಳ ಹಿಂಡಿನ ಸದಸ್ಯನಾಗಿತ್ತು.

ಘಟನೆ ನಡೆದ ಬಳಿಕ ಹಿಂಡಿನ ಇತರ ಆನೆಗಳು ಬಂದು ಇದನ್ನು ಎಬ್ಬಿಸುವ ಪ್ರಯತ್ನವನ್ನೂ ಮಾಡಿದ್ದವು. ಆದರೆ ಸಫಲವಾಗಲಿಲ್ಲ. ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಹೋದಾಗಲೂ ದೂರದಿಂದಲೇ ಆನೆಗಳು ಗಮನಿಸುತ್ತಿದ್ದವು.

ಅರ್ಧ ಕೋಟಿ ದಾಟಿದ ಪರಿಹಾರ: ಜಿಲ್ಲೆಯ ವಿವಿಧೆಡೆ ಆನೆ ದಾಳಿಯಿಂದ ಆಗಿರುವ ಹಾನಿಗೆ ಅರಣ್ಯ ಇಲಾಖೆ ನೀಡಿರುವ ಪರಿಹಾರ ಮೊತ್ತವೇ ಅರ್ಧ ಕೋಟಿ ರೂಪಾಯಿ ದಾಟಿದೆ. ಪ್ರಸಕ್ತ ಸಾಲಿನ ಏಪ್ರಿಲ್ 1ರಿಂದ ಈ ವರೆಗೆ ಒಟ್ಟಾರೆ 41.29 ಲಕ್ಷ ರೂಪಾಯಿ ನೀಡಲಾಗಿದೆ. ಇನ್ನೂ ಸುಮಾರು 35 ಲಕ್ಷ ರೂಪಾಯಿ ಪರಿಹಾರ ನೀಡಬೇಕಾಗಿದೆ.

ಕಳೆದ ಹತ್ತು ವರ್ಷಗಳಲ್ಲಿ (2002-03ರಿಂದ ಈಚೆಗೆ) ಜಿಲ್ಲೆಯಲ್ಲಿ 18 ಆನೆಗಳು ಸತ್ತಿದ್ದರೆ ಆನೆ ದಾಳಿಯಿಂದ 30  ಮಂದಿ ಪ್ರಾಣ ಬಿಟ್ಟಿದ್ದಾರೆ. ಇನ್ನೂ ಹಲವು ಮಂದಿಗೆ ಗಾಯಗಳಾಗಿದ್ದು ಕೆಲವರು ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ.

ಆನೆಗಳನ್ನು ಸ್ಥಳಾಂತರಿಸುವ ಯೋಜನೆ ಈಗ ನ್ಯಾಯಾಲಯದಲ್ಲಿದೆ. ಹೈಕೋರ್ಟ್ ತೀರ್ಪು ನೀಡಿದ ಬಳಿಕವಷ್ಟೇ ಅರಣ್ಯ ಇಲಾಖೆ ಯಾವುದಾದರೂ ಕ್ರಮ ಕೈಗೊಳ್ಳಬಹುದು. ಇತ್ತ ಸಕಲೇಶಪುರ ವ್ಯಾಪ್ತಿಯಲ್ಲಿ ಆನೆ ಕಾರಿಡಾರ್  ನಿರ್ಮಾಣ ಯೋಜನೆಯೂ ನಿರೀಕ್ಷಿತ  ವೇಗದಲ್ಲಿ ಮುಂದೆ ಹೋಗುತ್ತಿಲ್ಲ. ಈಗಾಗಲೇ ಕೆಲವು ಸುತ್ತಿನ ಸಭೆಗಳಾಗಿದ್ದು, ಈ ನಿಟ್ಟಿನಲ್ಲಿ ಮುಂದೆ ಸಾಕಷ್ಟು ಕೆಲಸಗಳು ಆಗಬೇಕಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT