ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಸ್ತಾನಿ ತಾಳ ನೋಟ; ಜೋಡಿ ನರ್ತನ

Last Updated 21 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಕರ್ನಾಟಕ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಗಳಲ್ಲಿ ಭಾವ, ರಾಗ ಮತ್ತು ಲಯಗಳ ಹಿತಕರ ಸಂಗಮ ಇರುತ್ತದೆ. ತಾಳ ಕ್ರಿಯೆ (ಲಘು, ದ್ರುತ ಇತ್ಯಾದಿ)ಗಳ ಮೂಲಕ ಪ್ರಕಟಗೊಳ್ಳುವ ಲಯಕ್ಕೆ ತನ್ನ ಮಕ್ಕಳನ್ನು ಶಿಸ್ತು ಮತ್ತು ನಿಯಮಬದ್ಧರನ್ನಾಗಿಸುವ ತಂದೆಯ ಸ್ಥಾನ ದೊರಕಿರುವುದು ಗಮನಿಸಬೇಕಾದ ಅಂಶ.

ಕರ್ನಾಟಕ ಸಂಗೀತ ಪ್ರಕಾರದಲ್ಲಿ ಅನಂತ ರಾಗಗಳು ಮತ್ತು ತಾಳಗಳಿರುವ ವಿಷಯ ಸರ್ವ ವಿದಿತ. ಅಂಗೈ ಮತ್ತು ಕೈ ಬೆರಳುಗಳ ಮೂಲಕ ತಾಳ ಕ್ರಿಯೆಗಳು ಹೊಮ್ಮುತ್ತವೆ. ಹಿಂದುಸ್ತಾನಿ ಸಂಗೀತದಲ್ಲೂ ಸಹ ಅನೇಕ ರಾಗಗಳು ಹಾಗೂ ಕೆಲವು ಬಹುಮುಖ್ಯ ತಾಳಗಳು ಬಳಕೆಯಲ್ಲಿವೆ. ಇದರಲ್ಲಿ ತಾಳ ಕ್ರಿಯೆಗಳ ಬಳಕೆ ಇಲ್ಲವೇ ಇಲ್ಲ ಎನ್ನಲಾಗದೇ ಹೋದರೂ ಸಹ ಆ ತಾಳಗಳು ತಬಲ ಅಥವಾ ಪಕ್ವಾಜ್ ಮುಖೇನ ಅಭಿವ್ಯಕ್ತಗೊಳ್ಳುವುದು ವಾಡಿಕೆ.

ಪರಸ್ಪರ ಹೋಲುವ ತಾಳಗಳು ಎರಡೂ ಪದ್ಧತಿಗಳಲ್ಲಿರುವುದು ಉಲ್ಲೇಖನೀಯ. ಗಾಯಕನಾಗಲೀ, ವಾದಕನಾಗಲೀ ಹಿಂದುಸ್ತಾನಿ ಸಂಗೀತದಲ್ಲಿ ತಾಳಕ್ಕಾಗಿ ತಬಲಾದ ’ಟೇಕಾ’ (ತಾಳಗಳನ್ನು ಒಂದು ಪರಿಯಲ್ಲಿ ಸಂಗೀತಾತ್ಮಕ ಗೊಳಿಸುವುದು) ಗಳನ್ನು ಅವಲಂಬಿಸುತ್ತಾನೆ.

ನುರಿತ ಮೃದಂಗ ಪಟು ಪ್ರೊ. ವಿ. ಕೃಷ್ಣ ಅವರ ಪರ್ಕಸ್ಸಿವ್ ಆರ್ಟ್ಸ್ ಸೆಂಟರ್ ಮತ್ತು ಎಂಇಎಸ್ ಕಲಾವೇದಿಗಳ ಜಂಟಿ ಆಶ್ರಯದಲ್ಲಿ ಮಲ್ಲೆೀಶ್ವರದ ಎಂಇಎಸ್ ಸಭಾಭವನದಲ್ಲಿ ನಡೆದ 9ನೇ ವಾರ್ಷಿಕ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಹಿಂದುಸ್ತಾನಿ ಲಯದ ತತ್ವಗಳು ಮತ್ತು ರಚನೆ’ ಬಗ್ಗೆ ಉಪಯುಕ್ತ ಬೆಳಕು ಚೆಲ್ಲಲಾಯಿತು. ಹಿರಿಯ ತಬಲಾ ಕಲಾವಿದ ಪಂ. ಶೇಷಗಿರಿ ಹಾನಗಲ್ ಸಂಕಿರಣ ಉದ್ಘಾಟಿಸಿದರು.

ವಿಸ್ತರಿಸಲಾಗದ ರಚನೆಗಳು
ಪುಣೆ ವಿವಿಯ ಬೋಧಕ ಮತ್ತು ಸಮರ್ಥ ತಬಲಾ ವಾದಕ ಉಮೇಶ್ ಮೋಗೆ ಅವರು ಸಂಪ್ರದಾಯದಂತೆ ವಿಸ್ತರಿಸಬಾರದ ಪೂರ್ವ ಸಂಕಲ್ಪಿತ ತಾಳ ರಚನೆ ಕುರಿತಾಗಿ ಸರಳ ಹಿಂದಿಯಲ್ಲಿ ಸೋದಾಹರಣ ಭಾಷಣ ಮಾಡಿದರು. ತಬಲಾದಲ್ಲಿ ನುಡಿಸುವ ಗತ್, ಟುಕುಡಾ, ಫರನ್, ಆಮದ್, ಮುಹ್ರಾಮುಖಡಾ, ಚಕ್ರಧರ್, ತಿಹಾಯಿ, ತ್ರಿಪಲ್ಲಿ ಮುಂತಾದ ರಚನೆಗಳನ್ನು ಅರ್ಥಸಹಿತ ವಿವರಿಸಿದರು. ವಿವಿಧ ಘರಾಣೆಗಳಲ್ಲಿ ಅವುಗಳ ಸ್ವರೂಪ ಮತ್ತು ಸ್ಥಿತಿಗತಿಗಳನ್ನೂ ಪ್ರಸ್ತಾಪಿಸಿದರು.

ಕಾಯದಾಗಳು
ಯುವ ತಬಲಾ ವಾದಕ ಉದಯರಾಜ ಕರ್ಪೂರ ಅವರು ವಿಸ್ತರಿಸಬಹುದಾದ ತಾಳ ರಚನೆಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಕಾಯದಾ ಅಂದರೆ ನಿಯಮಗಳು. ಅವು ಕಲಾವಿದರ ಮೆದುಳು ಮತ್ತು ಹೃದಯಗಳನ್ನು ತರಬೇತುಗೊಳಿಸುತ್ತವೆ. ಅದರ ವಿಸ್ತಾರಕ್ಕೆ ಸಂಬಂಧಿಸಿದಂತೆ ಐದು ಅಂಶಗಳಿವೆ (ಮುಖ್, ದೌರಾ, ಪರಶ್‌ಬಂದಿ ಮುಂತಾದವು) ಎಂದು ತಿಳಿಸಿಕೊಟ್ಟರು.

ಸಾಥ್‌ನ ವೈಶಿಷ್ಟ್ಯ
ತಬಲಾ ಸಾಥ್‌ನ ಕುರಿತಾಗಿ ಮಾತನಾಡಿದವರು ಹಿರಿಯ ತಬಲಾ ವಾದಕ ರವೀಂದ್ರ ಯಾವಗಲ್. ಧ್ರುಪದ್, ಧಮಾರ್, ಖಯಾಲ್ ಗಾಯನದ ಇತಿಹಾಸವನ್ನು ಉಲ್ಲೆೀಖಿಸಿ ಸಮೂಹ ಪ್ರದರ್ಶನಗಳು ತನಿ (ಸೋಲೋ) ಪ್ರದರ್ಶನಗಳಾಗಿ ಮಾರ್ಪಟ್ಟಾಗ ತಾಳ ನಿರ್ದೇಶನದ ಜವಾಬ್ದಾರಿಯನ್ನು ತಬಲಾ ವಾದಕನಿಗೆ ನೀಡಲಾಯಿತು. ಪ್ರಧಾನ ಕಲಾವಿದನ (ಗಾಯಕ ಅಥವಾ ವಾದಕ) ಮನೋಧರ್ಮದ ಅಬಾಧಿತ ಪ್ರವಾಹಕ್ಕಾಗಿ ತಾಳ ನಿರ್ದೇಶನವನ್ನು ವಿಕೇಂದ್ರೀಕರಣಗೊಳಿಸಲಾಯಿತು. ತಬಲಾ ವಾದಕ ತಾಳ ಕ್ರಿಯೆಗಳನ್ನು ತನ್ನ ಟೇಕಾಗಳ ಮೂಲಕ ತೋರತೊಡಗಿದ. ಗಾಯಕ ಅಥವಾ ವಾದಕನ ಮನೋಧರ್ಮಕ್ಕೆ ಅನುಗುಣವಾದ ಟೇಕಾಗಳನ್ನು ನಿರ್ಮಿಸಿ ಸಾಥ್ ನೀಡತೊಡಗಿದರು ಎಂದು ವ್ಯಾಖ್ಯಾನಿಸಿದರು.

ಆಕರ್ಷಕ ಭರತನಾಟ್ಯ
ಪ್ರತಿ ಬುಧವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಡಿ ನಡೆದ ಗುರು ವಸುಂಧರಾ ಸಂಪತ್‌ಕುಮಾರ್ ಅವರ ಶಿಷ್ಯೆಯರಾದ ಅಶ್ವಿನಿ ವಿಶ್ವನಾಥ್ ಮತ್ತು ಪಲ್ಲವಿ ಮಂಜುನಾಥ್ ಅವರ ಯುಗಳ ಭರತನಾಟ್ಯ ಪ್ರದರ್ಶನ ಉತ್ತಮವಾಗಿತ್ತು.ಇಬ್ಬರಲ್ಲೂ ಇದ್ದ ಹೊಂದಾಣಿಕೆ, ಭಾವ ಮತ್ತು ಲಯದ ಮೇಲಿನ ಹಿಡಿತ, ಪ್ರದರ್ಶನ ಅಪೇಕ್ಷಿತ ಫಲ ನೀಡಿತು. ಗುರು ವಸುಂಧರಾ ಸಂಪತ್ (ನಟುವಾಂಗ), ಬಾಲಸುಬ್ರಹ್ಮಣ್ಯ ಶರ್ಮ (ಗಾಯನ), ಪುರುಷೋತ್ತಮ (ಮೃದಂಗ) ಮತ್ತಿತರ ಕಲಾವಿದರ ಸಹಕಾರದೊಂದಿಗೆ ಭಾಗವತರ ‘ಭುವನೇಶ್ವರಿಯ’ ಕೃತಿಯ ಮೂಲಕ ದೇವಿಯ ನಾನಾ ರೂಪ ಲಾವಣ್ಯ ಹಾಗೂ ಲೀಲೆಗಳನ್ನು ಸುಂದರವಾಗಿ ಅಭಿನಯಿಸಿದರು.
ಬಾಗಿಲನು ತೆರೆದು ಪದಾಭಿನಯದಲ್ಲಿ ಗಜೇಂದ್ರಮೋಕ್ಷ, ದ್ರೌಪದಿ ಮಾನ ಸಂರಕ್ಷಣೆ, ಕನಕದಾಸರಿಗೆ ಕೃಷ್ಣನ ದರ್ಶನ ಮುಂತಾದ ಪ್ರಸಂಗಗಳನ್ನು ತೋರಿ ಬೃಂದಾವನ ಸಾರಂಗ ತಿಲ್ಲಾನದೊಂದಿಗೆ ಪ್ರದರ್ಶನ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT