ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಮಠ ವಿರುದ್ಧ ಹಕ್ಕುಚ್ಯುತಿ: ಖಂಡನೆ

Last Updated 4 ಡಿಸೆಂಬರ್ 2013, 7:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡದ ಸಮಾಜ ಪರಿವರ್ತನಾ ಸಂಸ್ಥೆಯ ಎಸ್.ಆರ್‌.ಹಿರೇಮಠ ಅವರ ವಿರುದ್ಧ ಶಾಸಕ ರಮೇಶ್ ಕುಮಾರ್ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಿರುವ ಕ್ರಮವನ್ನು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಖಂಡಿಸಿದರು.

‘ರಮೇಶ್ ಕುಮಾರ್ ಅವರ ಈ ಕ್ರಮ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಹಿರೇಮಠ ಅವರ ನೈತಿಕ ಸ್ಥೈರ್ಯ ಕುಂದಿಸುವ ಕೆಲಸ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮುತಾಲಿಕ ಹೇಳಿದರು.

ದಾಖಲೆಗಳು ಇಲ್ಲದೇ ಹಿರೇಮಠ ಯಾರ ವಿರುದ್ಧವೂ ಮಾತನಾಡುವುದಿಲ್ಲ. ರಮೇಶ್ ಕುಮಾರ್ ವಿರುದ್ಧವೂ ದಾಖಲೆಗಳನ್ನು ಇಟ್ಟುಕೊಂಡೇ ಅವರು ಆರೋಪ ಮಾಡಿದ್ದಾರೆ. ಅಕಸ್ಮಾತ್‌ ಅವರು ಸುಳ್ಳು ಆರೋಪ ಮಾಡಿದ್ದರೆ  ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಬಹುದಿತ್ತು. ಬದಲಿಗೆ ರಮೇಶ್ ಕುಮಾರ್ ತಮ್ಮ ಶಾಸಕ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಹಕ್ಕುಚ್ಯುತಿ ಮಂಡನೆ ಮಾಡಿದ್ದಾರೆ ಎಂದರು.

ಹಕ್ಕುಚ್ಯುತಿ ಮಂಡನೆ ವಿಚಾರದಲ್ಲಿ ಶ್ರೀರಾಮಸೇನೆ ಹಿರೇಮಠ ಅವರ ಬೆಂಬಲಕ್ಕೆ ನಿಲ್ಲಲಿದೆ ಎಂದು ಮುತಾಲಿಕ ಸ್ಪಷ್ಟಪಡಿಸಿದರು.

ತೇಜಪಾಲ್ ಗೆ ಭಗವದ್ಗೀತೆ ಪ್ರತಿ ರವಾನೆ...
ಕಿರಿಯ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ತೆಹಲ್ಕಾ ಪತ್ರಿಕೆಯ ಸಂಪಾದಕ ತರುಣ್ ತೇಜಪಾಲ್ ಅವರಿಗೆ ಶ್ರೀರಾಮಸೇನೆಯಿಂದ ಭಗವದ್ಗೀತೆ ಪುಸ್ತಕವನ್ನು ಕೊರಿಯರ್ ಮೂಲಕ ಕಳುಹಿಸಿಕೊಡುವುದಾಗಿ ಹೇಳಿದರು.

ಬ್ಲ್ಯಾಕ್ ಮೇಲ್ ಮೂಲಕ ಕೋಟ್ಯಂತರ ರೂಪಾಯಿ ಹಣ ಗಳಿಸಿರುವ ತೇಜಪಾಲ್, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತೇಜಪಾಲ್‌
ಅವರನ್ನು ರಕ್ಷಿಸಲು ಪ್ರಯತ್ನಿಸಿದ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಶೋಮಾ ಚೌಧರಿ ಹಾಗೂ ಸಿಬ್ಬಂದಿಗೆ ಭಗವದ್ಗೀತೆ ಪುಸ್ತಕಗಳನ್ನು ಕಳುಹಿಸಲಾಗುತ್ತಿದೆ. ಭಗವದ್ಗೀತೆ ಓದುವ ಮೂಲಕ ಅವರು ವರ್ತನೆಯಲ್ಲಿ ಬದಲಾವಣೆ ತಂದುಕೊಳ್ಳಲಿ ಎಂದು ಮುತಾಲಿಕ್ ವ್ಯಂಗ್ಯವಾಡಿದರು.

ಶಬರಿಮಲೆ ಯಾತ್ರೆಗೆ ಸಹಾಯಧನ ಕೊಡಿ...
ಹಜ್ ಯಾತ್ರಿಕರಿಗೆ ₨ 42 ಸಾವಿರ ಸಹಾಯಧನ ನೀಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ, ಶಬರಿಮಲೆಗೆ ತೆರಳುವ ಅಯ್ಯಪ್ಪ ಭಕ್ತರಿಗೆ ₨ 5 ಸಾವಿರ ಸಹಾಯಧನ ನೀಡಲು ಮುಂದಾಗಲಿ ಎಂದು ಆಗ್ರಹಿಸಿದರು.

ಕರಾವಳಿ, ಉತ್ತರ ಕರ್ನಾಟಕ ಭಾಗ ಭಯೋತ್ಪಾದಕರ ಬೀಡಾಗುತ್ತಿದೆ. ಅವರನ್ನು ಮಟ್ಟ ಹಾಕಲು ವಿಶೇಷ ಕಾರ್ಯಪಡೆ ರೂಪಿಸುವಂತೆ, 2006ರಿಂದ 13ರವರೆಗೆ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಬೇಕಿದ್ದ 918 ಖೈದಿಗಳು ಇನ್ನೂ ಜೈಲಿನಲ್ಲಿಯೇ ಇದ್ದಾರೆ. ಅವರನ್ನು ಬಿಡುಗಡೆ ಮಾಡುವಂತೆ ಹಾಗೂ ಜೈಲುಗಳಲ್ಲಿ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸರ್ಕಾರದ ಖರ್ಚಿನಲ್ಲಿಯೇ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಶ್ರೀರಾಮಸೇನೆಯಿಂದ ಮನವಿ ಸಲ್ಲಿಸಲಾಗುವುದು ಎಂದು ಮುತಾಲಿಕ ಇದೇ ಸಂದರ್ಭದಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT