ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೆರಡು ಸಂಚಾರೀ ಕಥೆಗಳು

Last Updated 29 ಮೇ 2012, 19:30 IST
ಅಕ್ಷರ ಗಾತ್ರ

ಕಾಯ್ಕಿಣಿಯವರ ನಗರಕ್ಕೂ ವಸುಧೇಂದ್ರರ ನಗರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ವಸುಧೇಂದ್ರರ ಕಥೆಯಲ್ಲಿ ವಿಷಾದವು ಹಾಸ್ಯದ ಮೂಲಕ ಹೊಮ್ಮಿದರೆ, ಕಾಯ್ಕಿಣಿಯವರ ಕಥೆಯಲ್ಲಿ ವಿಷಾದವು ಮತ್ತೊಂದು ಗಾಢ ವಿಷಾದದಿಂದಲೇ ಹೊಮ್ಮುತ್ತಿರುತ್ತದೆ.
 
ಹಾಗಾಗಿ ವಸುಧೇಂದ್ರರ ಯಾವುದೇ ಕಥೆಯನ್ನು ಕೂಡ ರಂಗಕ್ಕೆ ತರುವುದು ತೀರಾ ಸುಲಭವಲ್ಲದಿದ್ದರೂ ಕಷ್ಟವಂತೂ ಖಂಡಿತಾ ಅಲ್ಲ. ಆದರೆ ಅದೇ ಕಾಯ್ಕಿಣಿಯವರ ಕಥೆಯನ್ನು ರಂಗದ ಮೇಲೆ ಕಟ್ಟುವುದು ಕಟ್ಟುಕಥೆಯಷ್ಟೇ ಕಠಿಣ.

______________________________________________________

ಇತ್ತೀಚೆಗೆ ರಂಗಶಂಕರದಲ್ಲಿ ಸಂಚಾರಿ ರಂಗತಂಡವು `ಹೀಗೆರಡು ಕಥೆಗಳು~ ಎಂಬ ರಂಗಪ್ರಯೋಗವನ್ನು ಎನ್. ಮಂಗಳಾರವರ ನಿರ್ದೇಶನದಲ್ಲಿ ಪ್ರದರ್ಶಿಸಿತು. ಕನ್ನಡದಲ್ಲಿ ಸದ್ಯ ಸಕ್ರಿಯರಾಗಿ ಬರೆಯುತ್ತಾ, ಓದುಗ ಬಳಗವನ್ನೇ ಹುಟ್ಟುಹಾಕಿದ ವಸುಧೇಂದ್ರ ಅವರ `ಶ್ರೀದೇವೀ ಮಹಾತ್ಮೆ~ ಹಾಗೂ ಕನ್ನಡದ ಮುಖ್ಯ ಕಥೆಗಾರರಲ್ಲಿ ಒಬ್ಬರಾದ ಜಯಂತ ಕಾಯ್ಕಿಣಿಯವರ `ನೋ ಪ್ರೆಸೆಂಟ್ಸ್ ಪ್ಲೀಸ್~ ರಂಗರೂಪಗೊಂಡ ಕಥೆಗಳು.

ವಸುಧೇಂದ್ರ ಅವರ `ಶ್ರೀದೇವೀ ಮಹಾತ್ಮೆ~ ರಂಗರೂಪಗೊಂಡು ಸುರೂಪಗೊಂಡರೆ, ಕಾಯ್ಕಿಣಿಯವರ `ನೋ ಪ್ರೆಸೆಂಟ್ಸ್ ಪ್ಲೀಸ್~ ರಂಗರೂಪಗೊಂಡೇ ಕುರೂಪಗೊಂಡಿತೇನೋ...

ಬೆಂಗಳೂರೆಂಬ ಐಟಿಸಿಟಿಯ ಬಹುಮಹಡಿ ಅಪಾರ್ಟ್‌ಮೆಂಟಿನಲ್ಲಿ ವಾಸವಾಗಿರುವ ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್. ಅಷ್ಟು ದೊಡ್ಡ ಅಪಾರ್ಟ್‌ಮೆಂಟಿನ ಹಿಂದೆಯೇ ಇರುವ ಗುಡಿಸಲು ಹೊದ್ದ ಕೊಳಚೆ ಪ್ರದೇಶದಿಂದ ಅವರ ಮನೆಗೆಲಸಕ್ಕೆ ಬರುತ್ತಿರುವವಳು ಶ್ರೀದೇವಿ. ವಯಸ್ಕಳಾಗಿದ್ದೂ ಇನ್ನೂ ಬುದ್ಧಿ ಬಲಿಯದ `ಅಂಕಳ್ ಅಂಕಳ್~ ಎಂದು ಕರೆಯುತ್ತಾ ಕನ್ನಡ, ತಮಿಳು, ತೆಲುಗು ಹೀಗೆ ಎಲ್ಲಾ ಭಾಷೆಗಳನ್ನು ಕಲೆಸಿ ಮಾತನಾಡುತ್ತಾಳೆ ಅವಳು.

ವಾರಗಟ್ಟಲೆ ಸ್ನಾನ ಮಾಡದೆ, ಪ್ರತಿಸಾರಿ ತನ್ನನ್ನು ಹೊತ್ತುಬರುವ ಲಿಫ್ಟನ್ನು ಅದೇ ವಿಸ್ಮಯಭರಿತ ಕಣ್ಣುಗಳಿಂದ ನೋಡುತ್ತ, ಮುಗ್ಧವಾಗಿಯೇ ಉಳಿಯುವ ಶ್ರೀದೇವಿ ಮತ್ತು ನಿರೂಪಕ ಸಾಫ್ಟ್‌ವೇರ್ ಎಂಜಿನಿಯರ್‌ನ ನಡುವೆ ಮಾತು-ಕಥೆ ಸಾಗುತ್ತಾ ಶ್ರೀದೇವಿಯ ಬದುಕಿನ ಹಲವು ಮಜಲುಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಶ್ರೀದೇವಿಯಾಗಿ ಸುರಭಿ, ಸಾಫ್ಟ್‌ವೇರ್ ಎಂಜಿನಿಯರಾಗಿ ವಿಜಯ್ ಮತ್ತು ಸೆಕ್ಯೂರಿಟಿಯವನಾಗಿ ಚಂದ್ರಕೀರ್ತಿ ಸಶಕ್ತವಾಗಿ ಅಭಿನಯಿಸಿದ್ದಾರೆ. ರಂಗದ ಮೇಲೆ ಲಿಫ್ಟಿನ ಪರಿಕಲ್ಪನೆ ನಿಜಕ್ಕೂ ಕ್ರಿಯೆಟಿವ್ ಆಗಿತ್ತು.

ಇನ್ನು ಎರಡನೇ ಪ್ರಯೋಗ ಕಾಯ್ಕಿಣಿಯವರ `ನೋ ಪ್ರೆಸೆಂಟ್ಸ್ ಪ್ಲೀಸ್~. ಮುಂಬೈ ಎಂಬ ರಾಕ್ಷಸವೇಗದ ಬದುಕಿನಲ್ಲಿ, ಬಹುರೂಪಿ ಜಗತ್ತಿನಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದವರು ಅಸಾವರಿ ಲೋಕಂಡೆ ಮತ್ತು ಬೋಪಟ್. ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ಹೇಗಿರಬೇಕು, ಯಾವ ವಿಷಯ ಇರಬೇಕು, ಯಾರ ಹೆಸರು ಮೊದಲು, ಯಾರ‌್ಯಾರಿಗೆ ಕೊಡಬೇಕು ಎಂದು ಚರ್ಚಿಸಲು ಅವರಿಬ್ಬರೂ ಆಗಷ್ಟೆ ಕಾಮಗಾರಿಯಲ್ಲಿದ್ದ ಯಾವುದೋ ಫ್ಲೈಓವರಿನ ಬದಿಯಲ್ಲಿ ಸೇರುವುದರೊಂದಿಗೆ ಕಥೆ ಆರಂಭವಾಗುತ್ತದೆ.
 
ಅದು ಕ್ರಮೇಣ ಬೆಳೆದು ತಂದೆ ತಾಯಿ ಯಾರು ಎಂದು ತಿಳಿಯದ ತಮ್ಮಂಥ ಅನಾಥರಿಗೆ ಹೆಸರು ಎಂಬುದು ಎಷ್ಟು ಮುಖ್ಯ ಮತ್ತು ಅಮುಖ್ಯ ಎಂದು ಮುಂಬೈ ನಗರದ ಕೆಳವರ್ಗದ ಜನರ ಅಸ್ಮಿತೆಯ ಪ್ರಶ್ನೆಯನ್ನು ಎತ್ತುತ್ತದೆ ಕಾಯ್ಕಿಣಿಯವರ ಕಥೆ. ಪ್ರಯೋಗದ ದೃಷ್ಟಿಯಿಂದ ಕಾಯ್ಕಿಣಿಯವರ ಪ್ರಸ್ತುತ ಕಥೆ ರಂಗದ ಮೇಲೆ ಯಶಸ್ವಿಯಾಗಿಲ್ಲ ಎಂದೇ ಹೇಳಬೇಕು. ಅದಕ್ಕೆ ಹಲವು ಕಾರಣಗಳಿವೆ.

ಮೇಲ್ನೋಟಕ್ಕೆ ಎರಡೂ ಕಥೆಗಳು ನಗರ ಬದುಕಿನ ತಲ್ಲಣಗಳನ್ನು ಚಿತ್ರಿಸುತ್ತವೆ ಎಂದುಕೊಂಡರೂ ಕಾಯ್ಕಿಣಿಯವರ ನಗರಕ್ಕೂ ವಸುಧೇಂದ್ರರ ನಗರಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ವಸುಧೇಂದ್ರರ ಕಥೆಯಲ್ಲಿ ವಿಷಾದವು ಹಾಸ್ಯದ ಮೂಲಕ ಹೊಮ್ಮಿದರೆ, ಕಾಯ್ಕಿಣಿಯವರ ಕಥೆಯಲ್ಲಿ ವಿಷಾದವು ಮತ್ತೊಂದು ಗಾಢ ವಿಷಾದದಿಂದಲೇ ಹೊಮ್ಮುತ್ತಿರುತ್ತದೆ. ಹಾಗಾಗಿ ವಸುಧೇಂದ್ರರ ಯಾವುದೇ ಕಥೆಯನ್ನು ಕೂಡ ರಂಗಕ್ಕೆ ತರುವುದು ತೀರಾ ಸುಲಭವಲ್ಲದಿದ್ದರೂ ಕಷ್ಟವಂತೂ ಖಂಡಿತಾ ಅಲ್ಲ.
 
ಆದರೆ ಅದೇ ಕಾಯ್ಕಿಣಿಯವರ ಕಥೆಯನ್ನು ರಂಗದ ಮೇಲೆ ಕಟ್ಟುವುದು ಕಟ್ಟುಕಥೆಯಷ್ಟೇ ಕಠಿಣ. ವಸುಧೇಂದ್ರರ ಕಥೆಯ ಅಖಾಡ ಒಂದು ಅಪಾರ್ಟ್‌ಮೆಂಟಾದರೆ ಕಾಯ್ಕಿಣಿಯವರ ಕಥೆಯ ಅಖಾಡ ಅಖಂಡ ಮುಂಬೈ! ಅಂತಹ ಮುಂಬೈಯನ್ನು ಬರೀ ಸೆಟ್ಟಿನ ಮೂಲಕ ಹಿಡಿದಿಡಲು ಬರುವುದಿಲ್ಲ.

ಇನ್ನು ಈ ಪ್ರಯೋಗದಲ್ಲಿ ಅಭಿನಯಿಸಿದ ನಟರ ಸಮೂಹವು ಕೂಡ ಅಷ್ಟೇನೂ ಆಸಕ್ತಿದಾಯಕವಾದ ಪ್ರದರ್ಶನ ಕೊಡದೇ ಇದ್ದ ಕಾರಣ ಇದಕ್ಕೆ ಬಳಸಿದ ಹಾಡುಗಳು ಹಾಗೂ ಮೇಳ ಕೂಡ ಯಾವುದೇ ಪ್ರಭಾವ ಮಾಡದೇ ಉಳಿಯಿತು. ಮೊದಲ ಪ್ರಯೋಗದಲ್ಲಿ ಬರೀ ಮೂರೇ ಜನ ನಟರು ಪ್ರೇಕ್ಷಕರನ್ನು ಹಿಡಿದಿಟ್ಟರೆ ಇಲ್ಲಿ ಇಡೀ ನಟಸಮೂಹವೇ ಅಭಿನಯಿಸಿದರೂ ಪ್ರಯೋಗ ಮನಮುಟ್ಟದೇಹೋಯಿತು.

ಆದಾಗ್ಯೂ ತುಂಬಾ ಹುರುಪಿನಿಂದ, ಆಸಕ್ತಿಯಿಂದ, ಕ್ರಿಯಾಶೀಲವಾಗಿ ನಿರಂತರ ಹೊಸಹೊಸ ಪ್ರಯೋಗಗಳನ್ನು ಮಾಡುತ್ತಾ ಬರುತ್ತಿರುವ ಸಂಚಾರೀ ತಂಡದ ಪ್ರಯತ್ನ ಹೀಗೇ ಮುಂದುವರೆಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT