ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದು ಪತ್ತೇದಾರಿ ಅರ್ಜಿ

Last Updated 8 ಜನವರಿ 2011, 7:00 IST
ಅಕ್ಷರ ಗಾತ್ರ

ಬೆಂಗಳೂರು: ಹೈಕೋರ್ಟ್‌ಗೆ ಕಳೆದ ಜುಲೈ ತಿಂಗಳಿನಲ್ಲಿ ದಾಖಲಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯೊಂದು ಪತ್ತೇದಾರಿ ಕಾದಂಬರಿಯಂತೆ ಶುಕ್ರವಾರ ಕುತೂಹಲದ ತಿರುವು ಪಡೆದುಕೊಂಡಿದೆ. ಒಂದು ಸುಳ್ಳನ್ನು ಮುಚ್ಚಲು ಹೋಗಿ ಹಲವಾರು ಸುಳ್ಳು ಹೇಳಿ ನ್ಯಾಯಮೂರ್ತಿಗಳ ಕೈಯಲ್ಲಿ ಸಿಕ್ಕಿಬಿದ್ದಿರುವ ವಕೀಲ ಕೆ.ಎ.ಮಹಾದೇವ ಎನ್ನುವವರ ಪ್ರಕರಣ ಇದು. ಅರ್ಜಿಯ ಹಿಂದಿನ ಮರ್ಮ ಶೀಘ್ರದಲ್ಲಿ ಹೊರಬೀಳಲಿದೆ.

ರಾಮನಗರ ಜಿಲ್ಲೆ ಕನಕಪುರದ ನಿವಾಸಿ ಇಳೆಯರಾಜ ಎನ್ನುವವರ ಹೆಸರಿನಲ್ಲಿ ಅರ್ಜಿಯೊಂದನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ. ಅದರಲ್ಲಿ ತಮ್ಮ ಸಹೋದರ ಧನಪಾಲ್ ಎನ್ನುವವರು ನಾಪತ್ತೆಯಾಗಿದ್ದು ಅವರನ್ನು ಹಾಜರುಪಡಿಸಲು ಪೊಲೀಸರಿಗೆ ಆದೇಶಿಸಬೇಕು ಎಂದು ಕೋರಲಾಗಿದೆ. ಅರ್ಜಿದಾರರ ಪರವಾಗಿ ಮಹಾದೇವ ವಾದಿಸುತ್ತಿದ್ದಾರೆ.

ಕಳೆದ ಬಾರಿ ವಿಚಾರಣೆ ವೇಳೆ, ಅರ್ಜಿಯಲ್ಲಿ ಇದ್ದ ವಿಳಾಸದ ಆಧಾರದ ಮೇಲೆ ಇಳೆಯರಾಜ ಅವರನ್ನು ಪೊಲೀಸರು ಕೋರ್ಟ್‌ಗೆ ಕರೆ ತಂದಿದ್ದರು. ಆದರೆ ಅವರು ತಾವು ಯಾವುದೇ ಅರ್ಜಿ ಸಲ್ಲಿಸಿಯೇ ಇಲ್ಲ ಎಂದಿದ್ದರು. ಆಗ ಕೂಡಲೇ ವಕೀಲ ಮಹಾದೇವ ಅವರು, ‘ಇವರು ಅರ್ಜಿಯಲ್ಲಿನ ಇಳೆಯರಾಜ ಅಲ್ಲ. ನಾಪತ್ತೆಯಾಗಿರುವ ಧನಪಾಲ್ ಅವರು ಮನೆಗೆ ವಾಪಸು ಬಂದಿದ್ದು ಅರ್ಜಿಯನ್ನು ನಾನು ಹಿಂದಕ್ಕೆ ಪಡೆದುಕೊಳ್ಳುತ್ತೇನೆ’ ಎಂದಿದ್ದರು.

ಆದರೆ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ನೇತೃತ್ವದ ಪೀಠ ಇದಕ್ಕೆ ಸುತಾರಾಂ ಅನುಮತಿ ನೀಡಿರಲಿಲ್ಲ. ಮನೆಗೆ ಬಂದಿದ್ದಾನೆ ಎನ್ನಲಾದ ಧನಪಾಲ್ ಅವರನ್ನು ಕೋರ್ಟ್‌ಗೆ ಹಾಜರು ಪಡಿಸುವಂತೆ ಅವರು ಸೂಚಿಸಿದ್ದರು. ಇನ್ನೊಂದು ‘ಕಥೆ’: ಎರಡನೇ ಬಾರಿ ಪ್ರಕರಣ ವಿಚಾರಣೆಗೆ ಬಂದಿದ್ದಾಗ, ಧನಪಾಲ್ ಇರಲಿಲ್ಲ. ಆದರೆ ವಕೀಲರು ಭಾವಚಿತ್ರವೊಂದನ್ನು ಪೀಠಕ್ಕೆ ತೋರಿಸಿ, ಅರ್ಜಿಯಲ್ಲಿನ ನಿಜವಾದ ಇಳೆಯರಾಜ ಇವರೇ ಎಂದರು. ಆದರೆ ಆ ಬಾರಿಯೂ ಅವರ ಅದೃಷ್ಟ ಸರಿಯಿರಲಿಲ್ಲ. ಆ ಭಾವಚಿತ್ರದಲ್ಲಿ ಇರುವ ವ್ಯಕ್ತಿ ಚಂದ್ರನ್ ಪಾಂಡಿಯನ್ ಎಂಬುವವರೇ ವಿನಾ ಇಳೆಯರಾಜ ಅಲ್ಲ ಎಂದು ಅಲ್ಲಿ ಹಾಜರಿದ್ದ ಪೊಲೀಸರು ತಿಳಿಸಿದ್ದರು!

ಅಂತೂ, ಇಂತೂ ಆ ಭಾವಚಿತ್ರದಲ್ಲಿ ಇರುವ ತಮಿಳುನಾಡಿನ ಚಂದ್ರನ್ ಅವರನ್ನು ಪೊಲೀಸರು ಶುಕ್ರವಾರ ಕೋರ್ಟ್‌ಗೆ ಹಾಜರು ಪಡಿಸಿದರು. ಹೇಬಿಯಸ್ ಕಾರ್ಪಸ್ ಅರ್ಜಿಯ ಬಗ್ಗೆ ಅರಿವೇ ಇಲ್ಲದ ಅವರು ಕಕ್ಕಾಬಿಕ್ಕಿಯಾಗಿದ್ದರು. ‘ನಾನು ಯಾವುದೇ ರೀತಿಯ ಅರ್ಜಿ ಸಲ್ಲಿಸಿಯೇ ಇಲ್ಲ. ನನ್ನ ಫೋಟೋ ಅನ್ನು ಯಾರೋ ಮೊಬೈಲ್ ದೂರವಾಣಿಯಲ್ಲಿ ತೆಗೆದಿದ್ದರು. ಅದನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ’ ಎಂದರು. ಸಂಪೂರ್ಣ ಗೊಂದಲಮಯವಾಗಿರುವ ಈ ಪ್ರಕರಣಕ್ಕೆ ತೆರೆ ಎಳೆಯಬಯಸಿದ ನ್ಯಾಯಮೂರ್ತಿಗಳು ಚಂದ್ರನ್ ಅವರನ್ನು ಸೋಮವಾರ ಪುನಃ ಹಾಜರು ಪಡಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT