ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಅಭಯಾರಣ್ಯ: ಪರಿಷ್ಕೃತ ಮಾರ್ಗದರ್ಶಿ ಸೂತ್ರ ಪ್ರಕಟಣೆಗೆ ಅಸ್ತು

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹುಲಿ ಸಂರಕ್ಷಣೆ ಕುರಿತ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳ ಅಧಿಸೂಚನೆಯನ್ನು ಒಂದು ವಾರದೊಳಗೆ ಪ್ರಕಟಿಸಲು ಸುಪ್ರೀಂಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿದೆ. ಇದೇ ವೇಳೆ, ರಾಷ್ಟ್ರದ ಹುಲಿ ಅಭಯಾರಣ್ಯಗಳಲ್ಲಿ ಯಾವುದೇ ಪ್ರವಾಸೋದ್ಯಮ ಚಟುವಟಿಕೆ ನಡೆಸದಂತೆ ಜು. 24ರಂದು ನೀಡಿದ್ದ ಆದೇಶವನ್ನು ಪರಿಷ್ಕರಿಸುವ ಸಾಧ್ಯತೆ ಇದೆ ಎಂಬ ಸುಳಿವನ್ನೂ ನ್ಯಾಯಾಲಯ ನೀಡಿದೆ.

ಯಾವುದೇ ರಾಜ್ಯಕ್ಕೆ ಮಾರ್ಗದರ್ಶಿ ಸೂತ್ರಗಳಿಂದ ತೊಂದರೆಯಾಗಿದ್ದರೆ, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಎ.ಕೆ.ಪಟ್ನಾಯಕ್ ಮತ್ತು ಸ್ವತಂತ್ರ ಕುಮಾರ್ ಅವರಿರುವ ನ್ಯಾಯಪೀಠ ಮಂಗಳವಾರ ಸ್ಪಷ್ಟಪಡಿಸಿತು.

ನಾವು ಮಾರ್ಗದರ್ಶಿ ಸೂತ್ರಗಳ ಮೌಲ್ಯಮಾಪನ ಮಾಡಲಾಗಲೀ ಅಥವಾ ಅವನ್ನು ಸಂವಿಧಾನದ ಆಶಯಕ್ಕೆ ವಿರೋಧಿ ಎಂದಾಗಲೀ ಘೋಷಿಸಲು ಸಾಧ್ಯವಾಗದು ಎಂದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಅ.16ಕ್ಕೆ ಮುಂದೂಡಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ರೂಪಿಸುತ್ತಿರುವ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಅಭಯಾರಣ್ಯಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಿಷೇಧಿಸಿ ಜುಲೈ 24ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್,  ಈ ನಿಷೇಧವನ್ನು ಸೆ.27ರವರೆಗೆ ವಿಸ್ತರಿಸಿ ಆ.29ರಂದು ಆದೇಶ ನೀಡಿತ್ತು.ಹುಲಿ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿದ್ದೇ ಆದರೆ, ಅಭಯಾರಣ್ಯ ಪ್ರದೇಶದಲ್ಲಿ ನಿಯಂತ್ರಿತ ಪ್ರವಾಸೋದ್ಯಮ ಚಟುವಟಿಕೆಗೂ ಅವಕಾಶ ನೀಡಲೇಬಾರದೆಂಬ ಧೋರಣೆಯನ್ನು ತಾನು ಹೊಂದಿಲ್ಲ ಎಂದು ನ್ಯಾಯಾಲಯ ಸೆ.27ರಂದು ಆದೇಶ ನೀಡುವ ಸ್ಪಷ್ಟಪಡಿಸಿತ್ತು.

ನ್ಯಾಯಾಲಯದ ಆದೇಶ ಹೊರಬಿದ್ದ ನಂತರ, ಕೇಂದ್ರವು ರಾಜ್ಯಗಳಿಗಾಗಿ ತಾನು ಸಿದ್ಧಪಡಿಸುತ್ತಿದ್ದ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಸೆ.26ರಂದು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಹುಲಿ ಪ್ರಧಾನ ಆವಾಸ ಸ್ಥಾನಗಳ ಶೇ 20ರಷ್ಟು ಭಾಗದಲ್ಲಿ ನಿಯಂತ್ರಿತ ಹಾಗೂ ಹೆಚ್ಚು ಧಕ್ಕೆಯಾಗದ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ನೀಡಬಹುದೆಂದು ಅದರಲ್ಲಿ ಪ್ರಸ್ತಾಪಿಸಿತ್ತು.

ಹಾಗೆಯೇ, ಹುಲಿಯ ಪ್ರಧಾನ ಆವಾಸ ಸ್ಥಾನಗಳಲ್ಲಿ, ಪ್ರವಾಸೋದ್ಯಮ ಉದ್ದೇಶದಿಂದ ನಿರ್ಮಿಸಲಾಗಿರುವ ಕಾಯಂ ಸವಲತ್ತುಗಳನ್ನು ನಿಗದಿತ ಕಾಲಮಿತಿಯೊಳಗೆ ಹಂತಹಂತವಾಗಿ ನಿರ್ಮೂಲನೆ ಮಾಡಬೇಕು ಎಂಬುದೂ ಮಾರ್ಗದರ್ಶಿ ಸೂತ್ರದಲ್ಲಿ ಸೇರಿದೆ.

ಪ್ರವಾಸಿಗರು ಯಾವುದೇ ವನ್ಯಪ್ರಾಣಿಯಿಂದ ಕನಿಷ್ಠ 20 ಮೀಟರ್ ದೂರದಲ್ಲಿ ಇರಬೇಕು; ಯಾವುದೇ ವನ್ಯಪ್ರಾಣಿಗೆ ಪ್ರವಾಸಿಗರು ತಿಂಡಿ ತಿನಿಸಿದ ಆಮಿಷ ತೋರಬಾರದು ಎಂಬ ಅಂಶಗಳನ್ನೂ ಅದು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT