ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಗೆಮ್ಮ ದೇವಸ್ಥಾನದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್

Last Updated 14 ಫೆಬ್ರುವರಿ 2011, 11:20 IST
ಅಕ್ಷರ ಗಾತ್ರ

ಮುನಿರಾಬಾದ್:  ಹೈದರಾಬಾದ್ ಕರ್ನಾಟಕ ಭಾಗದ ಪ್ರಸಿದ್ಧ ಕ್ಷೇತ್ರ, ಕೊಪ್ಪಳ ಜಿಲ್ಲೆಯ ಹುಲಿಗಿಯ ಶ್ರೀಹುಲಿಗೆಮ್ಮದೇವಿ ದೇವಸ್ಥಾನ ಮತ್ತು ಆವರಣ ಪ್ರದೇಶದ ಸಮಗ್ರ ಅಭಿವೃದ್ಧಿಗೆ ರೂ. 150 ಕೋಟಿಗಳ ಅಂದಾಜು ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ (ಮಾಸ್ಟರ್‌ಪ್ಲಾನ್) ಯೋಜನೆಯ ನೀಲನಕ್ಷೆಯೊಂದನ್ನು ತಯಾರಿಸಲಾಗಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ರಮೇಶ್ ವೈದ್ಯ ಹೇಳಿದ್ದಾರೆ.

ಭಾನುವಾರ ಹುಲಿಗಿಯ ದೇವಸ್ಥಾನ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವೈದ್ಯ, ದೇವಸ್ಥಾನ ಆವರಣದ ವಿಸ್ತರಣೆಗೆ ಅವಶ್ಯಕವಾದ ಸುತ್ತಲಿನ 26 ಎಕರೆ ಖಾಸಗಿ ವ್ಯಕ್ತಿಗಳ ಜಮೀನನ್ನು ಎಕರೆಗೆ ರೂ 11 ಲಕ್ಷ ದರದಂತೆ ಸ್ವಾಧೀನ ಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.ಈಚೆಗೆ ಬೆಂಗಳೂರಿನಲ್ಲಿ ನಡೆದ ಮುಜರಾಯಿ ಇಲಾಖೆಯ ಸಚಿವರ ಸಭೆಯಲ್ಲಿ ರಾಜ್ಯದ ಸುಮಾರು 25 ದೇವಸ್ಥಾನಗಳನ್ನು ಸಮಗ್ರ ಅಭಿವೃದ್ಧಿಗೆ ಗುರುತಿಸಲಾಗಿದ್ದು ಅದರಲ್ಲಿ ಹುಲಿಗೆಮ್ಮದೇವಿ ದೇವಸ್ಥಾನವೂ ಒಂದು. ಧಾರ್ಮಿಕ ದತ್ತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳ ನೆರವಿನಿಂದ ಅಭಿವೃದ್ಧಿಕಾರ್ಯ ಕೈಗೊಳ್ಳಲಾಗುವುದು.

ರಾಜ್ಯ ಬಜೆಟ್ ಮಂಡನೆ ನಂತರ ಕಾಮಗಾರಿ ಪ್ರಾರಂಭವಾಗಲಿದೆ. ಕಾಮಗಾರಿಗಳ ವಿವರ (ಲಕ್ಷರೂಪಾಯಿಗಳಲ್ಲಿ) ಕಟ್ಟಡಗಳ ನಿರ್ಮಾಣ-ರೂ 13550, ಮುಖ್ಯರಸ್ತೆಗೆ-ರೂ 120, ದೇವಸ್ಥಾನ ಸುತ್ತಲಿನ ರಸ್ತೆಗೆ-170, ಪೆರಿಪರಿಯಲ್ ರಸ್ತೆಗೆ-360, ಆಂತರಿಕ ಸಂಪರ್ಕ ರಸ್ತೆಗೆ-222, ಒಳಚರಂಡಿ ಮತ್ತು ನೀರು ಪೂರೈಕೆಗೆ-300, ವಿದ್ಯುತ್ ವ್ಯವಸ್ಥೆಗೆ-200, ಇತರೆ-78 ಈ ರೀತಿಯಲ್ಲಿ ಹಂಚಿಕೆ ಮಾಡಲಾಗಿದ್ದು ಹಂತ ಹಂತವಾಗಿ ಕೈಗೊಳ್ಳಲಾಗುವ ಕಾಮಗಾರಿಯಿಂದ  ಮಾದರಿ ದೇವಸ್ಥಾನವಾಗಿ ರೂಪುಗೊಳ್ಳಲಿದೆ ಎಂದರು.

ದೇವಸ್ಥಾನಕ್ಕೆ ಬರುವ ಭಕ್ತರ ಸ್ನಾನಕ್ಕೆ ನದಿತೀರದಲ್ಲಿ ಸ್ನಾನಘಟ್ಟ ಮತ್ತು ಬಟ್ಟೆ ಬದಲಿಸುವ ಕೋಣೆ ನಿರ್ಮಾಣದ ಪ್ರಸ್ತಾವ ಮಾಸ್ಟರ್‌ಪ್ಲಾನ್‌ನಲ್ಲಿ ಇಲ್ಲದಿರುವ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ, ಅದನ್ನು ಪ್ರತ್ಯೇಕವಾಗಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯ ಸಮಜಾಯಿಷಿ ನೀಡಿದರು. ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ ಸಿ.ಎಸ್.ಚಂದ್ರಮೌಳಿ, ಸಮಿತಿಯ ಸದಸ್ಯರಾದ ಈ.ಈರಣ್ಣ, ಕಪಾತಪ್ಪ ಚೌರದ, ಬಸವನಗೌಡ, ಹನುಮಂತಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT