ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲ್ಲು ಹುಲ್ಲಿಗೂ ಅಮೃತ ಉಣಿಸುತ್ತ

ನಮ್ಮೂರ ಊಟ
Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

ಎಳ್ಳ ಅಮಾಸಿ ಚರಗಾ ಚಲ್ಲೂದು ಅಂದ್ರ ಸಾಕು, ನನ್ನ ಮುಖದ ಮೇಲೊಂದು ಎಳೆನಗು ಹಾದು ಹೋಗುತ್ತದೆ.

ಧಾರವಾಡದಲ್ಲಿ ಓದುವಾಗ ನನ್ನ ಸಹಪಾಠಿ ಉತ್ತರ ಕನ್ನಡದ ಭಟ್ಟರ ಮನೆ ಹುಡುಗಿಯನ್ನು ನನ್ನ ಜತೆ ಚರಗಾ ಚೆಲ್ಲಲು ಕರೆದುಕೊಂಡು ಬಂದಿದ್ದೆ. ನೋಡಿಯೇ ಬಿಡಬೇಕು ಅಂತ ನಾವೆಲ್ಲ ಗೆಳತಿ­ಯರು ಹೊಲದ ಒಳಗೆಲ್ಲ ಅಡ್ಡಾಡಲು ಹೋದಾಗ ಆಳು ಮಕ್ಕಳು ಉಳಿದ ಹುಡುಗರು ಕೂಡಿ ಚೆರಗಾ ಚೆಲ್ಲಿದ್ದರು. 

ಮಧ್ಯಾಹ್ನದ ಊಟ ಮುಗಿಸಿ ಎಲ್ಲಾರೂ ಮರದ ನೆರಳ­ನಾಗ ಅಡ್ಡಾಗಿದ್ರು. ಆಳುಮಗ ಬಸ್ಯಾ ಚರಗಿ ತೊಗೊಂಡು ‘ಬಯಲು ಕಡೆ’ ಹೊಂಟಿದ್ದ. ಭಟ್ಟರ ಹುಡುಗಿ ಕೇಳಿಯೇ ಬಿಟ್ಲು. ‘ಏನ ಬಸಪ್ಪಾ ಚರಗಾ ಚೆಲ್ಲಕ್ಕೆ ಹೊರಟಿದ್ದೀಯಾ’? ಬಸ್ಯಾ. ಕಕ್ಕಾಬಿಕ್ಕಿಯಾಗಿ ಮೊಟಕಾಗಿ ಉತ್ತರಿಸಿದ.
‘ಹೂನ್ರೀ ಅವ್ವಾರ ಆಟ ಚೆಲ್ಲಿ ಬರ್ತೀನ್ರೀ’ ಆ ಕ್ಷಣ ನಗು ಛಿಲ್ಲನೇ ಚಿಮ್ಮಿತ್ತು. ಕೊನೆಗೆ ನಾನು ಚರಗಾ ಚಲ್ಲೂದು ಬಸ್ಯಾನ ಚರಗಾ ಚಲ್ಲೂದು ಎಲ್ಲ ವಿವರಿಸಿ ಹೇಳಿದಾಗಲೇ ಎಳ್ಳಮವಾಸೆ ಅರ್ಥ ತಿಳಿದಿದ್ದು.

ಚರಗಾ ಚಲ್ಲೂದು ಅಂದ್ರೆ.....
ಹೊಲಕ್ಕೆ ಹೋದ ನಂತರ ಬನ್ನೀಗಿಡದ ಮುಂದೆ ಐದು ಕಲ್ಲನ್ನಿಟ್ಟು ಪಾಂಡವರೆಂದು ಪೂಜೆ ಮಾಡ್ತಾರೆ. ಇನ್ನೊಂದು ಕಲ್ಲು ಗಿಡದ ಹಿಂದಿಟ್ಟು, ಕರ್ಣ ಎನ್ನುತ್ತಾರೆ.

ಬನ್ನಿ ಮಹಾಂಕಾಳಿ ಮತ್ತು ಪಾಂಡವರಿಗೆ ನೈವೇದ್ಯ ತೋರಿ­ಸಿದ ನಂತರ ಅದೇ ಎಡೆಯನ್ನು ಹೊಲದ ತುಂಬ ಎರಚು­ತ್ತಾರೆ. ನೈವೇದ್ಯ ಚೆಲ್ಲುವವ ‘ಹುಲ್ಲುಲ್ಲಿಗೇ’ ಅಂದರೆ ಹಿಂದಿನ­ವರು ‘ಚಲಾಂಬರಿಗೇ’ ಎಂದು ಕೂಗು ಹಾಕುತ್ತಾರೆ.  ಇದನ್ನೇ ಚರಗಾ ಚೆಲ್ಲುವದು ಎನ್ನುತ್ತಾರೆ. ಹುಲ್ಲು ಹುಲ್ಲಿಗೂ ಅನ್ನದ ಕಾಳು ಅಮೃತವಾಗಿ ಸೋಂಕಲಿ ಎನ್ನುವುದು ಆಶಯ.

ಎಳ್ಳಾಮಾಸಿ ಹಿಂದಿನ ದಿನ ಕಾಯಿಪಲ್ಲೆ ಆರಿಸಿಡುವುದೇ ದೊಡ್ಡ ಸಂಭ್ರಮ!
ಮಿರಿ ಮಿರಿ ಮಿಂಚುವ ಮೆಂತೆ, ಹೊಸ ಹಸಿರಿನಂತೆ ಕಾಣುವ ಪಾಲಕ್‌, ಸಬ್ಬಸಿಗೆ, ಉಳ್ಳಾಗಡ್ಡಿ ತಪ್ಪಲ, ಗಜ್ಜರಿ ಎಳೆ ಹುಣಸೇಕಾಯಿ, ಮೈಗೆಲ್ಲ ಎಣ್ಣಿ ಮೆತ್ಗೊಂಡು ಕುಂತಂಥ ಮೆಣಸಿನಕಾಯಿ ಎಲ್ಲ ಹರವುಕೊಂಡು ಕುಂತ್ರ, ಮನ್ಯಾಗಿ­ದ್ದೋರೆಲ್ಲ ಕೈ ಜೋಡಸ್ತಿದ್ರು. ಎಣ್ಣಿಗಾಯಿಗೆ ಸಣ್ಣ ಬದ್ನಿ­ಕಾಯಿ ಆರಸೂದು. ಹಸೇ ಖಾರಕ್ಕ, ಬಲತ ಮೆಣಸಿನ­ಕಾಯಿ ಬ್ಯಾರೆ ಮಾಡೂದು. ಎಣ್ಣಿಯೊಳಗ ಉಪ್ಪಹಚ್ಚಿ ಹುರಿ­ಯಾಕಂತ ಎಳೀ ಮೆಣಸಿನ ಕಾಯಿ ಬ್ಯಾರೆ ಮಾಡೂದು, ಎಳೀ ಹುಣಸೀ ಕಾಯಿ ಬಿಡಿಸಿ ಇಡೂದು... ನೆನಸಿಟ್ಟ ಕಾಳಿಗೆ ಸಬ್ಬಸಿಗಿ ಸೋಸೂದು.. ಮೂಲಂಗಿ ಸೊಪ್ಪು ಕತ್ತರಿಸಿಡೂದು ಒಂದ, ಎರಡ... ರಾತ್ರಿ ಅಡಗಿ ಬಿಟ್ಟು ಇದೇ ಮಾಡ್ತಿದ್ವಿ. ಊಟಕ್ಕ ಮಾತ್ರ ಖಟರೊಟ್ಟಿ ಮ್ಯಾಲೆ ಎಲ್ಲಾ ತರಕಾರಿ ಹೆಚ್ಚಿ ಹಾಕಿದ್ದ ಖಾರಬ್ಯಾಳಿ ಒಂದೇ ಮಾಡ್ತಿದ್ವಿ. ಮರುದಿನದ ಊಟದ ಸಂಭ್ರಮಕ್ಕ ರಾತ್ರಿ ಅಷ್ಟೇ ಸಾಕು ಅನ್ನೂದೊಂದು ಎಚ್ಚರ ಅದು. ದವಸಾ ಕೊಡೂ ಭೂಮಿತಾಯಿಗೆ ಕುಬಸಾ ಮಾಡುವ ಸಡಗರವೆಂದು ಈ ಅಮಾವಾಸ್ಯೆಯನ್ನು ಬಣ್ಣಿಸುತ್ತಾರೆ. ಭೂಮಿತಾಯಿಗೆ ಒಯ್ಯುವ ಬಯಕಿ ಊಟ ಈ ಬುತ್ತಿ ಎಂದೂ ಹೇಳುತ್ತಾರೆ.

ಮಾಘಮಾಸದಲ್ಲಿ ಹೇರಳವಾಗಿ ಸಿಗುವ ಕಾಯಿಪಲ್ಯ, ಗಟ್ಟಿಯಾದ ಹಾಲು, ಮೊಸರು, ತುಪ್ಪದೊಂದಿಗೆ ಸ್ನಿಗ್ಧ ಪದಾರ್ಥ ಬಳಸಿ ಮಾಡುವ ಹಲವಾರು ಸಿಹಿ ತಿಂಡಿಗಳು ಥಂಡಿ ವಾತಾವರಣಕ್ಕೆ ಹೇಳಿ ಮಾಡಿಸಿದಂಥವು.

ಉತ್ತರ ಕರ್ನಾಟಕದವರ ಹಂಚಿ ತಿನ್ನುವ ಗುಣ, ಕೊಡು ಕೊಳ್ಳುವಿಕೆ ಬೆಳೆದ ಬೆಳೆ ತೋರಿಸುವ ಸಂಭ್ರಮ ಜನರ ನಡು­ವಿನ ಕಂದರಗಳನ್ನು ಮುಚ್ಚುತ್ತದೆ. ಬೆಚ್ಚನೆಯ ಬಿಸುಪು ಅತಿಥಿ ಸಕ್ಕರೆ, ಎಗ್ಗಿಲ್ಲದ ಪ್ರೀತಿ ನಗೆಯ ಅಲೆ ನಾವೆಲ್ಲ ಒಂದು ಎನ್ನುವ ನಿರ್ಮಲ ಭಾವ ಈ ಹಬ್ಬದೂಟದೊಂದಿಗೆ ರಕ್ತಗತ ಆಗ್ತದ.
ಸಜ್ಜೆ, ರೊಟ್ಟಿ, ಜ್ವಾಳದ ರೊಟ್ಟಿ ಅಗಸಿ ಪುಡಿ, ಗುಳ್ಳ ಪುಡಿ ಶೇಂಗಾದ ಹಿಂಡಿ, ಪುಠಾಣಿ ಹಿಂದಿ, ಬದ್ನಿಕಾಯಿ ಎಣ್ಣಿಗಾಯಿ ಕಾಳಪಲ್ಯ, ಹಿಟ್ಟಿನ ಪಲ್ಯ ಟೊಮ್ಯಾಟೊ ಚಟ್ನಿ, ಮೊಸರು, ಬೆಣ್ಣೆ  ಪಚಡಿ. ಎಳ್ಳ ಹೋಳಿಗಿ, ಶೇಂಗಾದ ಹೋಳಿಗಿ, ಕರ್ಚಿಕಾಯಿ ಹೂರಣ ಕಡಬು, ಭಜ್ಜಿ ಗೋಧಿಹಿಗ್ಗಿ–ಒಗ್ಗರಣೆ ಅನ್ನ, ಬಳಿ ಅನ್ನ, ಸಾರು, ಹಪ್ಪಳ, ಸಂಡಿಗಿ, ಬಾಳಕದ ಮೆಣಸಿನಕಾಯಿ. ಮ್ಯಾಲ ಕುಡೀಲಾಕ ಮಜ್ಜಿಗಿ ಇದು ಧಾರವಾಡ ನೋವೆಯ ಊಟ.

ಗುಲ್ಬರ್ಗಾ ಭಾಗದವರದು ಇನ್ನೂ ಒಂದು ಕೈ ಮುಂದು ಎಂದೇ ಹೇಳಬಹುದು. ಈ ಭಾಗದವರ ಬಜ್ಜಿ ಪಲ್ಯ, ಭರ್ತ ಹಿಂಡಿ ಪಲ್ಯ, ಧಪಾಟಿ ಅತ್ಯಂತ ವಿಶೇಷದವು.

ಬಜ್ಜಿ ಪಲ್ಯ
ಬಜ್ಜಿ ಪಲ್ಯ ಹೇಳು­ವಾಗಲೇ ಬಾಯಲ್ಲಿ ನೀರು ಸುರಿಯ­ಲಾರಂಭಿಸುತ್ತದೆ. ತೊಗರಿಕಾಳು, ಕಡಲಿಕಾಳು, ಹೆಸರಕಾಳು, ಅವರಿಕಾಳು, ಶೇಂಗಾ ಮುಂತಾದ ಹಾಲುಗಾಳುಗಳು. ಬೇಯಿಸಿದ ತೊಗರಿಬೇಳೆ ಮತ್ತು ಎಲ್ಲ ತರಹದ ಕಾಯಿಪಲ್ಯ ಮೆಂತ್ಯ ಪಲ್ಯ, ಹುಣಸಿಕ್ಕ, ಪುಂಡಿಪಲ್ಯ, ಕುಂಬಳಕಾಯಿ,  ಮೆಣಸಿಕಾಯೀ ಎಲ್ಲ ಕೂಡಿಸಿ ಮಾಡುವ ಖಾದ್ಯವೇ ಬಜ್ಜಿ ಪಲ್ಯ.

ಒಲೆ ಮೇಲೆ ಪಾತ್ರೆ ಇಟ್ಟು  ಮೊದಲು ತೊಗರಿಬೇಳೆ ಸುರುವಿ ಅದು ಪೂರ್ತಿ ಬೆಂದ ನಂತರ, ಹೋಳು ಪಲ್ಯ (ಗಜ್ಜರಿ, ಬದನೆ, ಕುಂಬಳ, ಮುಂತಾದವು)ಗಳನ್ನು ಹಾಕಿ ಅದರ ಮೇಲೆ ಎಲ್ಲ ತಪ್ಪಲು ಪಲ್ಲೆ ಸುರುವುತ್ತಾರೆ. ಅವು ಉಗಿಯಲ್ಲೇ ಬೇಯಬೇಕು. ನಂತರ ಸೋಸಿಟ್ಟುಕೊಂಡ ಕಾಳು, ಹಸಿ ಮೆಣಸಿನಕಾಯಿ, ಹುಣಸೇ ಹುಳಿ, ಉಪ್ಪು ಹಾಕಿ ಕೆಳಗಿಳಿಸಿ ಎಣ್ಣೆ ಹಾಕಿ ಮುಗುಚಿ ಮತ್ತೆ ಸಣ್ಣ ಉರಿಯಲ್ಲಿ ಬೇಯಿಸುವುದು. ಇದರ ಘಮ ಮನೀತುಂಬಾ ಹರಡಿದಾಗ ಎಣ್ಣೀ ಒಗ್ಗರಣಿ ಕೊಡೂದು. ಭಾಳಷ್ಟು ಬಳ್ಳೊಳ್ಳಿ, ಜೀರಗಿ, ಕರಿಬೇವಿನ ಒಗ್ಗರಣಿ ಚೊರ್‌ ಅನ್ಕೊಂತ ಪಲ್ಯದ ಮ್ಯಾಲೆ ಹರಡ್ತು ಅಂದ್ರ ಬಜ್ಜಿ ರೆಡಿ.

ಭರ್ತ ಮಾಡಬೇಕಾದರೆ
ಬದ್ನೇಕಾಯಿ, ಕುಂಬಳಕಾಯಿ, ಅವರಿಕಾಯಿ ಹುಣಸೇ­ಕಾಯಿ, ಮೆಣಸಿನಕಾಯಿ ಸ್ವಲ್ಪ ಗಜ್ಜರಿ ಟೊಮೆಟೊ ಕಾಯಿ ಎಲ್ಲ­ವನ್ನೂ ಸಣ್ಣಗೆ ಹೆಚ್ಚಿ ಎಣ್ಣೆ ಹಾಕಿ ಬಾಡಿಸಿ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳು­ತ್ತಾರೆ. ನಂತರ ಹುರಿದ ಎಳ್ಳು ಪುಡಿಯೊಂದಿಗೆ ಬೇಯಿಸಿದ ತರಕಾರಿಯನ್ನ ಅಬಡಾ ಜಬಡಾ ರುಬ್ಬಿಕೊಂಡು ಉಳ್ಳಾಗಡ್ಡಿ ತೊಪ್ಪಲ ಸೇರಿಸಿದರೆ ಭರ್ತ ರೆಡಿ.

ಇದಕ್ಕೆ ಜೋಳದ ಕಡುಬು ಮಾಡುತ್ತಾರೆ ಜೋಳದ ಹಿಟ್ಟಿಗೆ ಎಸರು ಹಾಕಿ ನಾದಿಕೊಂಡ; ಜಾಮೂನಿನ ತರಹ ಸಣ್ಣಗೆ ಗುಂಡು ಮಾಡಿ ಉಗಿಯಲ್ಲಿ ಬೇಯಿಸುತ್ತಾರೆ. ಬಜ್ಜಿ ಪಲ್ಯ, ಭರ್ತದ ಜತೆ ಬಿಸಿ ಬಿಸಿ ಇರುವಾಗಲೇ ತಿಂದರೆ ಆಹಾಹಾ...

ಹಿಂಡಿ ಪಲ್ಯ
ಯಾವದಾ­ದರೊಂದು ಕಾಳನ್ನು ಬೇಯಿ­ಕೊಂಡು ಸಬ್ಬಸ್ಸಿಗೆ, ಅಥವಾ ಮೆಂತ್ಯ ಸೊಪ್ಪು ಹಾಕಿ, ಉಪ್ಪು ಹಸಿಖಾರ ಹಾಕಿ ಒಗ್ಗರಣೆ ಮಾಡುತ್ತಾರೆ. ಗುಲ್ಬರ್ಗಾ ಭಾಗದ ವಿಶೇಷ ಪಲ್ಯ ಬಜ್ಜಿ ಪಲ್ಯ ಮೂರುದಿನ ಇಟ್ಟರೂ ಕೆಡುವುದಿಲ್ಲ. ರೊಟ್ಟಿ ಜತೆ ಮರುದಿನ ಹಸಿ ಎಣ್ಣೆ ಹಾಕಿಕೊಂಡು ತಿನ್ನುತ್ತಾರೆ.
ಜೋಳದ ಕಡುಬನ್ನು ಬಜ್ಜಿ ಪಲ್ಯದಲ್ಲಿ ಉರುಳಾಡಿಸಿ, ಹಿಂಡಿ ಪಲ್ಯದೊಂದಿಗೆ ಬಾಯಿಲಿಟ್ಟ, ಮೇಲೆ ಭರ್ತ ನೆಕ್ಕಬೇಕು. ಇದು ಜೋಳದ ಕಡಬು ತಿನ್ನುವ ಪದ್ಧತಿ.

ಚಕ್ಕಡಿ ಬೆಳಿಗ್ಗೆ ತೊಳೆದು ಪೂಜೆ ಮಾಡುತ್ತಿದ್ದರೂ ಎತ್ತುಗಳ ಕೋಡುಗಳಿಗೆ ರಿಬ್ಬನ್‌ ಕಟ್ಟಿ  ಕೊರಳ್ಗೆ ಗೆಜ್ಜೆ ಸರ, ಡುಬ್ಬಕ್ಕ ಝಾಲಾ ಹಾಕಿ ಸಿಸ್ತ್‌ ಮಾಡೋರು. ಸಾಕ್ಷಾತ್‌ ದಸರಾ ಆನಿಹಂಗ ಕಾಣೂವು.

ಗೌರಮ್ಮನ ಹಂಗ ಸಿಂಗಾರ ಮಾಡ್ಕೊಂಡು, ವಸ್ತಾ ಒಡವಿ ಹಾಕ್ಕೊಂಡು ಇಳಕಲ್‌ ಸೀರಿ ಉಟ್ಕೊಂಡ ಅಮ್ಮ, ಕಂಡೋರಿ­ಗೆಲ್ಲ, ಊಟಕ್ಕ ನಡೀರಿ ಅಂತ ಕರೀತಿದ್ಲು. ಸಿಂಗಾರಗೊಂಡ ನಮ್ಮಮ್ಮ  ವಸ್ತಿ ವಡವಿ ಹಕ್ಕೊಂಡು, ಇಲಕಲ್‌ ಸೀರೆ ಉಟ್ಟು  ಮೊದಲನೇ ಚಕ್ಕಡಿಯಲ್ಲಿ ಕುಂದರ್ತಿದ್ಲು. ಹಿಂದಕ ಅಪ್ಪನ ಚಕ್ಕಡಿಕೊಳ್ಳಗಟ್ಟುವಾಗಲೇ ನಗೆಯ ಅಲೆ ಹರಿದಾಡುತ್ತಿತ್ತು.

‘ಅವ್ವಾರ ನೀವ ಮುಂದ ಆದ್ರಿ ಬಿಡ್ರಿ’  ಅಂದ್ರ, ‘ಸಾವಿಗೂ ನಾನ ಮುಂದಿರ್ಲಿ’ ಅಂತಿದ್ಲು.

ಅಮ್ಮ ಅಷ್ಟರಲ್ಲಿ ಪೂಜೆಗೆ ತಯಾರಿ ಮಾಡುತ್ತಿದ್ದಳು. ಚರಗಾ ಚೆಲ್ಲಿ ಬಂದ ನಂತರ ಊಟಕ್ಕೆ ಶುರು ಹಚ್ಚುತ್ತಿದ್ದರು. ಮೊದಲು ಗಂಡಸರು, ಮಕ್ಕಳು, ಅವರದು ಮುಗೀತಿದ್ದ ಹಾಗೆ ಬ್ಯಾಂಕಿನ ಮಂದಿ, ಮಾಸ್ತರ ಮಂದಿ, ಉಳಿದ ಆಪ್ತೇಷ್ಟರರು. ಅವರದೆಲ್ಲ ಮುಗಿದ ನಂತರ ನಮ್ಮಮ್ಮನ ಊಟ. ಪಾಪ ಆರಿದ ಅಡಗಿ, ಹೆರ್ತಿದ್ದ ತುಪ್ಪ ಅದನ್ನೇ ಸವಿ ಸವಿದು ಉಣ್ಣುತ್ತ ಸರ್ವಜ್ಞನ ವಚನ ಹೇಳುತ್ತಿದ್ದಳು.

ಹರಕು ಹೊಳಿಗೆ ಲೇಸು
ಮುರುಕು ಹಪ್ಪಳ ಲೇಸು
ಕುರು ಕುರು ಕಡಲೆ ಬಲು ಲೇಸು
ಪಾಯಸದ ಸುರುಕು ಲೇಸೆಂದ ಸರ್ವಜ್ಞ/
ಊಟ ಮೆಚ್ಚಿಗೆಯ ಹಂತಕ್ಕೆ ಬಂದಾಗ
ಮಜ್ಜಿ, ಗೂಟಿಕೆ ಲೇಸು
ಮಜ್ಜನಕೆ ಮಸಿ ಲೇಸು
ಕಜ್ಜಾಯ ತುಪ್ಪ ಉಣಲೇಸು
ಮನೆಗೊಬ್ಬ ಅಜ್ಜಿ ಲೇಸೆಂದ ಸರ್ವಜ್ಞ
ಎಂದು ಹೇಳುತ್ತ ಊಟ ಮುಗಿಸಿ ಎಲ್ಲ ಕಟ್ಟಿಡುತ್ತಿದ್ದಳು. ಅವ್ವನ ಕೆಲಸ ಮುಗಿಯೂದ್ರೊಳಗ ಎಲ್ಲ, ಗಂಡಸರೂ ಒಂದು ಜೋಂಪು ತೆಗೀತಿದ್ರು. ನಂತರ ಗಂಡಸರ ಅವಸರ ಶುರು.

‘ನಡ್ರೀನ್ನ, ನಡ್ರೀನ್ನ’ ಎನ್ನುತ್ತ ಸವಾರಿ ಹೊರಡಿಸಿಯೇ ಬಿಡುತ್ತಿದ್ದರು. ಮನೆಗೆ ಹೋದ ನಂತರ ಎಮ್ಮಿ ಹಿಂಡುತ್ತಿ­ದ್ದರು. ಹಸಿ ಹಾಲಿನಲ್ಲಿ ಖಡಕ್‌ ಚಹಾ ಮಾಡಿ ಎಲ್ಲರಿಗೂ ಕೊಟ್ಟು ನಾವೂ ಕುಡಿದೆವೆಂದರೆ ಹಬ್ಬ ಮುಗೀತು ಎಂದರ್ಥ.

ಕಿಟ್ಟಿ ಪಾರ್ಟಿಯಲ್ಲಿ ನಾಜೂಕು ನಾರಿಯೊಬ್ಬಳಿಗೆ ಹತ್ತು ಮಂದಿಗೆ ಆಗುವಷ್ಟು ಪಲ್ಯ ಮಾಡಲು ಕೇಳಿದಾಗ, ಅವಳು 
‘ನನಗ ಅದೆಲ್ಲ ಬರೊದಿಲ್ಲ. ಅಂಗಡೀಲಿ ಸಿಗುವ ಚಟ್ನಿಪುಡಿ, ಮೊಸರು ಇಂಥದ್ದೇನಾದರೂ ತರ್ತೀನೀ ಎಂದಳು. ನೂರಾರು ಮಂದಿಗೆ ಥರೇವಾರಿ ಅಡಗಿ ಮಾಡಿ ಬಡಸೂ ತಲೆಮಾರು ಮುಗೀತದೇನು ಅನ್ನೂ ಆತಂಕ ನನಗಿತ್ತು. ಅವಾಗ ಅಮ್ಮನ ಗೆಳತಿ ಹುಬಳಿಮಠದ ದ್ರಾಕ್ಷಾಯಣಕ್ಕೆ ಹೇಳಿದ್ದ ಮಾತು ನೆನಪಾತು.

ಮಾಡಿ ಉಣ್ಣು ಬೇಡಿದಷ್ಟು, ಮಾಡಲಾರದ ಉಣ್ಣು ನೀಡಿದಷ್ಟು... ಮಾಡುತ್ತ, ನೀಡುತ್ತ, ಹಾಕುತ್ತ, ತೆಗೆಯುತ್ತ, ಬಾಗುತ್ತ, ಬಳಕುತ್ತ, ಉಣಿಸುತ್ತ ತಿನಿಸುತ್ತ ಮಾಗುತ್ತ ಬಾಳುವುದು ಅರ್ಥಪೂರ್ಣ.

‘ನಮ್ಮೂರ ಊಟ’ಕ್ಕೆ ನೀವೂ ಬರೆಯಿರಿ...
ಪ್ರತಿಯೊಂದು ಊರಿಗೂ ತನ್ನದೇ ಆದ ‘ಸಿಗ್ನೇಚರ್‌ ಡಿಶ್‌’ ಒಂದಿರುತ್ತದೆ. ರಾಣೆಬೆನ್ನೂರಿನ ಭಿರಂಜಿ ಆಗಿರಲಿ, ಬೀದರ್‌ನ ಬಜ್ಜಿ ಆಗಿರಲಿ... ಆಯಾ ಊರಿನ ಸೊಗಡನ್ನೂ ಅಡುಗೆಯ ಸೊಗಸನ್ನೂ ಹೇಳುವ ಖಾದ್ಯಗಳವು. ಊರಿಗೆ ಬಂದವರಿಗೆಲ್ಲ ಸ್ಪೆಷಲ್‌ ಅಂತ ಹೇಳಿ ಮಾಡಿ ಬಡಿಸುವ ಇಂಥ ಊಟಗಳ ಪರಿಚಯ ಸಮಸ್ತ ಕನ್ನಡಿಗರಿಗೆ ಆಗಲಿ. ಖಾದ್ಯ ತಯಾರಿಸುವ ವಿವರಗಳೊಂದಿಗೆ ಸಾಂಸ್ಕೃತಿಕ ವಿಶೇಷವನ್ನೂ ಬರೆಯಿರಿ. ಆ ಖಾದ್ಯವನ್ನು ತಯಾರಿಸುವುದು ಹೆಚ್ಚಾಗಿ ಯಾವ ಋತುವಿನಲ್ಲಿ? ಯಾವ ಸಂದರ್ಭದಲ್ಲಿ? ಯಾಕೆ ಹೆಚ್ಚು ಜನಪ್ರಿಯ? ಇಂಥ ಸಣ್ಣ ಸಣ್ಣ ವಿವರಗಳೂ ಲೇಖನದ ಜೊತಿಗಿರಲಿ. ಊಟದ ಚಿತ್ರದೊಂದಿಗೆ ನಿಮ್ಮ ಚಿತ್ರವೂ ಇರಲಿ. ಚಿತ್ರಗಳಿರದ ಬರಹಗಳನ್ನು ಸ್ವೀಕರಿಸಲಾಗುವುದಿಲ್ಲ. ಮದುವೆಯೂಟ, ಬಯಕೆಯೂಟ, ಬಾಣಂತಿಯೂಟ, ಪಥ್ಯದ ಅಡುಗೆ, ಸರಳ ಅಡುಗೆ ಮುಂತಾದವು ಓದುಗರ ಹಸಿವು ಕೆರಳಿಸುವಂತಿರಬೇಕು. ನಿಮ್ಮೂರಿನ ಬಗ್ಗೆ ಕರಳು–ಬಳ್ಳಿಯ ಸಂಬಂಧ ಬೆಳೆಯುವಂತಿ­ರಬೇಕು. ಮಾಂಸಾ­ಹಾರ ಅಥವಾ ಸಸ್ಯಾಹಾರ ಯಾವುದೇ ಬಗೆಯದ್ದಾಗಿರಲಿ. ಹೊಟ್ಟೆಗೆ ಹಿತವಾಗಿದ್ದರೆ ಸಾಕು. ಬರಹವು ನುಡಿ ಅಥವಾ ಬರಹ ತಂತ್ರಾಂಶ­ದಲ್ಲಿರಲಿ. ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಇ–ಮೇಲ್‌ ವಿಳಾಸಗಳಿರ­ಲೇಬೇಕು. ಉತ್ತಮ ಗುಣಮಟ್ಟದ ಚಿತ್ರಗಳಿಗೆ ಆದ್ಯತೆ.

ಇ-ಮೇಲ್: bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT