ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಗ್ಲಿ ದಡದಲ್ಲಿ ಹಾಡು, ಕುಣಿತದ ಅಲೆ...

Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕೋಲ್ಕತ್ತ: ಫುಟ್‌ಬಾಲ್ ಚಟುವಟಿಕೆಗಳಿಗೇ ಆತಿಥ್ಯ ವಹಿಸುವ `ಸಾಲ್ಟ್ ಲೇಕ್' ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ  ಕ್ರಿಕೆಟ್ ಹಬ್ಬದ ಸಂಭ್ರಮ. ಬಾಲಿವುಡ್ ನಟನಟಿಯರ ಸಂಗಮ. ಖ್ಯಾತ ಪಾಪ್ ಗಾಯಕ ಅಮೆರಿಕದ ಪಿಟ್‌ಬುಲ್ ಸಂಗೀತದ ಮೋಡಿ... ಇದಕ್ಕೆಲ್ಲಾ ವೇದಿಕೆ ಒದಗಿಸಿಕೊಟ್ಟಿದ್ದು ಐಪಿಎಲ್ ಆರನೇ ಆವೃತ್ತಿ ಉದ್ಘಾಟನಾ ಸಮಾರಂಭ.

ಕ್ರಿಕೆಟ್ ತಾರೆಯರು ಹಾಗೂ ಬಾಲಿವುಡ್ ತಾರೆಯರನ್ನು ಕಣ್ತುಂಬಿಕೊಳ್ಳುವ ಸಂಭ್ರಮದ ಜೊತೆಗೆ ಬಾಣಬಿರುಸುಗಳ ಅಬ್ಬರದ ಸದ್ದು. ಈ ಸದ್ದಿನಲ್ಲಿಯೇ ಬಾಲಿವುಡ್ ನಟಿ ಕತ್ರಿನಾ ಕೈಫ್ ಮೋಹಕ ನೃತ್ಯದ ಸೊಬಗು. ನಟ ಹಾಗೂ  ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮಾಲೀಕ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಕೂಡಾ ತಮ್ಮ ಅಮೋಘ ನೃತ್ಯದ ಮೂಲಕ ಕ್ರೀಡಾಪ್ರೇಮಿಗಳ ಮನ ಗೆದ್ದರು.
ಸಿಟಿ ಆಫ್ ಜಾಯ್‌ನಲ್ಲಿ ಎಂಜಾಯ್:

ಮಂಗಳವಾರ ಸಂಜೆ 7.30ಕ್ಕೆ ಉದ್ಘಾಟನಾ ಸಮಾರಂಭ ನಿಗದಿಯಾಗಿತ್ತು. ಅದಕ್ಕೆ ಸಾಕಷ್ಟು ಹೊತ್ತು ಮುನ್ನವೇ ಕ್ರಿಕೆಟ್ ಪ್ರೇಮಿಗಳು ಬಂಗಾರ ಹಾಗೂ ನೇರಳೆ ಬಣ್ಣದಿಂದ ಕೂಡಿದ ಹಾಲಿ ಚಾಂಪಿಯನ್ ನೈಟ್ ರೈಡರ್ಸ್ ತಂಡದ ಲಾಂಛನವನ್ನು ಹಿಡಿದುಕೊಂಡು ಕ್ರೀಡಾಂಗಣದತ್ತ ಆಗಮಿಸಿದರು.

ನೈಟ್ ರೈಡರ್ಸ್ ಧ್ಯೇಯಗೀತೆಯಾದ `ಕೊರ್ಬೊ, ಲೊರ್ಬೊ, ಜೀತ್‌ಬೊ ರೇ' ಕೂಡಾ ಅಭಿಮಾನಿಗಳಿಂದ ಪ್ರತಿಧ್ವನಿಸಿತು. ಕೆಕೆಆರ್ ತಂಡದ ಪೋಷಾಕನ್ನು ಧರಿಸಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇದರಿಂದ `ಸಿಟಿ ಆಫ್ ಜಾಯ್' ಖ್ಯಾತಿಯ ಕೋಲ್ಕತ್ತದಲ್ಲಿ ಮಂಗಳವಾರ ಕ್ರಿಕೆಟ್ ಪ್ರೇಮಿಗಳು ಹರ್ಷದ ಹೊಳೆಯಲ್ಲಿ ತೇಲಿದರು.

ಅಮೆರಿಕದ ಗಾಯಕ ಪಿಟ್‌ಬುಲ್ ಸಂಗೀತವೇ ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಯಾಗಿತ್ತು. ಲಕ್ಷಕ್ಕೂ ಹೆಚ್ಚು ಜನರಿಗೆ ಸ್ಥಳಾವಕಾಶ ಇರುವ  `ಸಾಲ್ಟ್ ಲೇಕ್'ನಲ್ಲಿ  `ಬಾಲಿವುಡ್ ತಾರಾ ಲೋಕ' ಹೊಸ ರಂಗು ಪಡೆದುಕೊಂಡಿತ್ತು.
ಶಾರುಖ್ ಖಾನ್, ಕತ್ರಿನಾ ಕೈಫ್ ಹಾಗೂ ದೀಪಿಕಾ ಅವರು ಪಿಟ್‌ಬುಲ್ ಜೊತೆ ಸೇರಿ `ಗ್ಯಾಂಗ್ನಮ್' ನೃತ್ಯಕ್ಕೆ ಹೆಜ್ಜೆ ಹಾಕಿದಾಗ ಕ್ರಿಕೆಟ್ ಪ್ರಿಯರು ಭಾರೀ ಸಂಭ್ರಮಪಟ್ಟರು.

ಕಪ್ಪು ಸೂಟಿನೊಂದಿಗೆ ವೇದಿಕೆ ಮೇಲೆ ಪಿಟ್‌ಬುಲ್ ಬಂದಾಗ ಅಭಿಮಾನಿಗಳ ಗುಂಪಿನಿಂದ `ಓಹೋ ಬೇಬಿ ಬೇಬಿ' ಎನ್ನುವ ಸಂಭ್ರಮದೊಂದಿಗೆ ಭರ್ಜರಿ ಸ್ವಾಗತ ನೀಡಲಾಯಿತು. ನೃತ್ಯಗಾರ್ತಿ ಉಷಾ ಅವರ ತಂಡ `ಕೊಯಿ ಯಹಾನ್ ನಾಚೇ ನಾಚೇ' ಹಾಡಿಗೆ ಹೆಜ್ಜೆ ಹಾಕಿದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಪ್ಪಾಳೆ ತಟ್ಟಿ ಸಂಭ್ರವಿಸಿದರು. ಕೆಲ ಹೊತ್ತಿನಲ್ಲಿಯೇ ಉಷಾ ಜೊತೆ ಸೇರಿದ ಶಾರುಕ್ ಹೆಜ್ಜೆ ಹಾಕಿದಾಗಲಂತೂ ಚಪ್ಪಾಳೆಯ ಅಬ್ಬರ ಮುಗಿಲು ಮುಟ್ಟಿತ್ತು.

ಇರುಳು ಬೆಳಕಿನ ಮಧ್ಯೆ ಡ್ರಮ್ಮರ್‌ಗಳ ಸದ್ದು, ಬಾಣಬಿರುಸುಗಳ ಸಂಭ್ರಮದ ನಂತರ ಒಂದು ಕ್ಷಣದ ಮೌನ. ಮತ್ತೆ ಕತ್ರಿನಾ ನೃತ್ಯದ ಸೊಬಗು. ಈ ವೇಳೆ ಪ್ರೇಕ್ಷಕರಿಂದ ಕರತಾಡನ ಸದ್ದು ಅಬ್ಬರಿಸಿತು.

ಗಣ್ಯರ ಉಪಸ್ಥಿತಿ:
ಈ ಅಭೂತಪೂರ್ವ ಸಮಾರಂಭಕ್ಕೆ ಹಲವು ಗಣ್ಯರು ಸಾಕ್ಷಿಯಾದರು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಶ್ರೀನಿವಾಸಲ್, ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಇತರ ಗಣ್ಯರು ಪಾಲ್ಗೊಂಡಿದ್ದರು. ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಕಾರ್ಯಕ್ರಮ ನಡೆಸಿಕೊಟ್ಟರು. ಐಪಿಎಲ್ ಟ್ರೋಫಿ  ಹಿಡಿದು ಬಂದ ಚೆಲುವೆಯೊಬ್ಬಳು ಬಲೂನಿನೊಂದಿಗೆ ಹಾರಾಡಿದಾಗ ಚಪ್ಪಾಳೆಗಳ ಸುರಿಮಳೆ.

ಮಹೇಂದ್ರ ಸಿಂಗ್ ದೋನಿ, ಆ್ಯಡಮ್ ಗಿಲ್‌ಕ್ರಿಸ್ಟ್, ರಿಕಿ ಪಾಂಟಿಂಗ್ , ಆ್ಯಂಜಲೊ ಮ್ಯಾಥ್ಯುಸ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಕುಮಾರ ಸಂಗಕ್ಕಾರ, ಗೌತಮ್ ಗಂಭೀರ್ ಸೇರಿದಂತೆ ಎಲ್ಲಾ ತಂಡಗಳ ನಾಯಕರು ಈ ವೇಳೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT