ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹೃದಯದಲ್ಲಿರುವ ದುಷ್ಟ ಶಕ್ತಿಗಳನ್ನು ಓಡಿಸಬೇಕು'

Last Updated 23 ಡಿಸೆಂಬರ್ 2012, 20:08 IST
ಅಕ್ಷರ ಗಾತ್ರ

ಬೆಂಗಳೂರು: `ಆಧುನಿಕ ಕಾಲಘಟ್ಟದಲ್ಲಿ ಮನುಷ್ಯನಲ್ಲಿ ಸ್ವಾರ್ಥ ಮನೋಭಾವ ವ್ಯಾಪಕವಾಗಿದ್ದು, ಇದರಿಂದಾಗಿ ಸಮಾಜದಲ್ಲಿ ಒಗ್ಗಟ್ಟು ಮಾಯವಾಗಿದೆ' ಎಂದು ಕರ್ನಾಟಕ ವಲಯದ ಕ್ಯಾಥೋಲಿಕ್ ಬಿಷಪ್‌ಗಳ ಪರಿಷತ್ತಿನ ರೆ.ಫಾ. ರೋನಿ ಪ್ರಭು ಎಸ್.ಜೆ. ಬೇಸರ ವ್ಯಕ್ತಪಡಿಸಿದರು.

`ಮಾನವೀಯ ಏಕತೆ ಹಾಗೂ ಭ್ರಾತೃತ್ವದ ಸಂದೇಶ'ದಡಿ ನಗರದ ರಿಚ್‌ಮಂಡ್ ಟೌನ್‌ನ ಶಿಯಾ ಆರ್‌ಮಾಘ್ ಸಭಾಂಗಣದಲ್ಲಿ ಭಾನುವಾರ ನಡೆದ `ಹುಸೇನ್ ಡೇ' ಸಮ್ಮೇಳನದಲ್ಲಿ ಅವರು ಮಾತನಾಡಿದರು.

`ಸಮಾಜದಲ್ಲಿ ಮೌಲ್ಯಗಳ ಕುಸಿತ ಆಗುತ್ತಿದೆ. ಅಪರಾಧ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಮ್ಮ ಹೃದಯದಲ್ಲಿರುವ ದುಷ್ಟ ಶಕ್ತಿಗಳನ್ನು ಹೊಡೆದೋಡಿಸುವ ಕೆಲಸ ಆಗಬೇಕು. ನಾವೆಲ್ಲ ಸಹೋದರ ಭಾವನೆಯಿಂದ ಬಾಳಬೇಕು. ಇಡೀ ಸಮಾಜ ಒಂದು ಕುಟುಂಬದಂತೆ ಸ್ನೇಹ ಸೌಹಾರ್ದದಿಂದ ಜೀವಿಸಬೇಕು' ಎಂದು ಅವರು ಅಭಿಪ್ರಾಯಪಟ್ಟರು.

`ಮಹಾತ್ಮ ಗಾಂಧಿ, ಜವಾಹರ್‌ಲಾಲ್ ನೆಹರು ಸೇರಿದಂತೆ ಮಹಾನ್ ವ್ಯಕ್ತಿಗಳು ಇಮಾಮ್ ಹುಸೇನ್ ಅವರ ಸಂದೇಶಗಳಿಂದ ಪ್ರಭಾವಿತರಾಗಿದ್ದರು. ಇಮಾಮ್ ಹಾಗೂ ಯೇಸು ಕ್ರಿಸ್ತ ಅವರ ಸಂದೇಶಗಳಲ್ಲಿ ಸಾಮ್ಯತೆ ಇದೆ. ಅವರ ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು' ಎಂದರು.

ಶಾಸಕ ಆರ್.ರೋಶನ್ ಬೇಗ್ ಮಾತನಾಡಿ, `ಅಕ್ಕಪಕ್ಕದ ದೇಶಗಳಲ್ಲಿ ಶಿಯಾ ಹಾಗೂ ಸುನ್ನಿಗಳ ನಡುವೆ ಸಂಘರ್ಷಗಳು ನಿರಂತರವಾಗಿ ನಡೆಯುತ್ತಿವೆ. ನಮ್ಮ ದೇಶದಲ್ಲಿ ಶಿಯಾ ಹಾಗೂ ಸುನ್ನಿಗಳು ಪರಸ್ಪರ ಸೌಹಾರ್ದದಿಂದ ಬಾಳುತ್ತಿರುವುದು ಶ್ಲಾಘನೀಯ. ಇಂತಹ ವಾತಾವರಣ ಸಮಾಜದಲ್ಲಿ ಸದಾಕಾಲ ಇರಬೇಕು' ಎಂದು ಅಭಿಪ್ರಾಯಪಟ್ಟರು.

`ಬೆಂಗಳೂರು ಹಾಗೂ ಬಾಗ್ದಾದ್, ಬೆಂಗಳೂರು ಹಾಗೂ ನಜಾಫ್ ನಡುವೆ ನೇರ ವಿಮಾನ ಸೇವೆ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ವಿಮಾನಯಾನ ಸಚಿವ ಅಜಿತ್ ಸಿಂಗ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ' ಎಂದು ಅವರು ತಿಳಿಸಿದರು.

ಮಾಜಿ ರಾಜ್ಯಪಾಲ ಸಯ್ಯದ್ ಸಿಬ್ತೆ ರಝಿ ಮಾತನಾಡಿ, `ವ್ಯಕ್ತಿ ಇತರ ಧರ್ಮವನ್ನು ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇಮಾಮ್ ಹುಸೇನ್ ಅವರ ಸಂದೇಶವೂ ಇದೇ ಆಗಿದೆ' ಎಂದರು.

ಮಜ್ಲಿಸ್-ಉಲ್ಮಾ-ಎ-ಹಿಂದ್‌ನ ಕಾರ್ಯದರ್ಶಿ ಮೌಲಾನಾ ಸೈಯದ್ ಕಲ್ಬೆ ಜವಾದ್, ಅಖಿಲ ಭಾರತ ಮಿಲ್ಲಿ ಕೌನ್ಸಿಲ್‌ನ ಉಪಾಧ್ಯಕ್ಷ ಮೌಲಾನಾ ವೈ.ಎ.ಉಸ್ಮಾನಿ, ಸಮ್ಮೇಳನದ ಸಂಚಾಲಕ ಆಗಾ ಸುಲ್ತಾನ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT