ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ರಿ ಬಳಿ ನಕ್ಸಲರು ಪ್ರತ್ಯಕ್ಷ

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹೆಬ್ರಿ: ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರ್ಲಾಲು ಗ್ರಾಮ ಪಡಿಬೆಟ್ಟುವಿನಲ್ಲಿ ನಕ್ಸಲರ ತಂಡ ಮತ್ತೆ ಪ್ರತ್ಯಕ್ಷವಾಗಿದೆ. ಪಡಿಬೆಟ್ಟು ಶಾಲೆ ಗೋಡೆ ಮೇಲೆ ನಕ್ಸಲರು ಭಿತ್ತಿಪತ್ರ ಅಂಟಿಸಿರುವುದು ಗುರುವಾರ ಕಂಡುಬಂದಿತು. ಆದರೆ, ಕಾಡಿನ ನಡುವಿನ ಕುಗ್ರಾಮದಲ್ಲಿನ ಈ ಬೆಳವಣಿಗೆ ಹೆಬ್ರಿ ವ್ಯಾಪ್ತಿಯಲ್ಲಿ ಶುಕ್ರವಾರ ಪ್ರಚಾರ ಪಡೆದಿದೆ.

ಶಾಲಾ ಆವರಣದಲ್ಲಿ 11 ಕಡೆ ಭಿತ್ತಿಪತ್ರ ಅಂಟಿಸಿರುವ ನಕ್ಸಲರು, ಆದಿವಾಸಿ ಯುವಕರನ್ನು ಪೊಲೀಸ್ ಇಲಾಖೆಗೆ ಸೇರ್ಪಡೆಗೊಳಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಪ್ರದೇಶದ ಯುವಕರು ಆಮಿಷಗಳಿಗೆ ಬಲಿಯಾಗಿ ಪೊಲೀಸ್ ಇಲಾಖೆಗೆ ಸೇರಬಾರದು. ಸರ್ಕಾರದ ವಿರುದ್ಧ ಸಶಸ್ತ್ರ ಕ್ರಾಂತಿ ಘೋಷಿಸಿರುವ ನಕ್ಸಲ್ ಸಂಘಟನೆಯನ್ನು ಬೆಂಬಲಿಸಬೇಕು ಎಂದು ಭಿತ್ತಿಪತ್ರದಲ್ಲಿ ಕೋರಿದ್ದಾರೆ.

ಕಬ್ಬಿನಾಲೆ ಸದಾಶಿವ ಗೌಡ ಅವರ ಹತ್ಯೆ ಬಳಿಕ ಎರಡು ಬಾರಿ ಕಾಣಿಸಿಕೊಂಡಿದ್ದು ಬಿಟ್ಟರೆ ನಕ್ಸಲ್ ಚಟುವಟಿಕೆ ಬಹುತೇಕ ತಣ್ಣಗಾಗಿತ್ತು. ಇದೀಗ ಪಡಿಬೆಟ್ಟುವಿನಲ್ಲಿ ಭಿತ್ತಿಪತ್ರ ಕಂಡು ಬಂದಿರುವುದು ಪಶ್ಚಿಮಘಟ್ಟದಲ್ಲಿ ನಕ್ಸಲರ ಚಟುವಟಿಕೆ ಮುಂದುವರಿದಿರುವುದಕ್ಕೆ ಸಾಕ್ಷಿಯಂತಿದೆ.

ಸ್ಥಳಕ್ಕೆ ಭೇಟಿ ನೀಡಿ ಭಿತ್ತಿಪತ್ರಗಳನ್ನು ತೆಗೆದುಹಾಕಿದ ಅಜೆಕಾರು ಪೊಲೀಸರು, ನಕ್ಸಲ್ ನಾಯಕ ವಿಕ್ರಮ ಗೌಡ, ತಂಡದ ಸದಸ್ಯರಾದ ಜಾನ್ ಯಾನೆ ಜಯಣ್ಣ, ಪ್ರದೀಪ ಯಾನೆ ತಂಗಪ್ಪ, ಉಷಾ ಯಾನೆ ಸಾವಿತ್ರಿ, ಮುಂಡಾಗಾರು ಲತಾ, ಕನ್ಯಾ ಕುಮಾರಿ ಮತ್ತು ಸುಂದರಿ ವಿರುದ್ಧ `ಭಿತ್ತಿಪತ್ರ~ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT