ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್ ಕೈಯಲ್ಲಿ ಮಹೇಶಪ್ಪ ಭವಿಷ್ಯ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದ ತಾಂತ್ರಿಕ ಎಂಜಿನಿಯರಿಂಗ್ ಪದವಿಯಲ್ಲಿ ತಾವು ಪಡೆದಿರುವುದು ದ್ವಿತೀಯ ದರ್ಜೆ ಎಂದು ಮೂರು ದಿನಗಳ ಹಿಂದಷ್ಟೇ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ಮಹೇಶಪ್ಪ ಅವರು, ತಾವು ಪಡೆದಿರುವುದು ಪ್ರಥಮ ದರ್ಜೆ ಎನ್ನುವ ಮೂಲಕ ಸೋಮವಾರ ನ್ಯಾಯಮೂರ್ತಿಗಳಿಗೇ ಅಚ್ಚರಿ ಹುಟ್ಟಿಸಿದರು.

`ನಾನು ಬಿ.ಇ ಪದವಿಯ 9ನೇ ಸೆಮಿಸ್ಟರ್‌ನಲ್ಲಿ ಎರಡು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದೆ. ಆದರೆ 10ನೇ ಸೆಮಿಸ್ಟರ್‌ಗೆ ಪರೀಕ್ಷೆ ತೆಗೆದುಕೊಂಡ ಸಂದರ್ಭದಲ್ಲಿ ಈ ಎರಡೂ ವಿಷಯಗಳ ಪರೀಕ್ಷೆ ಬರೆದು ಉತ್ತೀರ್ಣನಾದೆ. ಒಟ್ಟಾರೆ ಅಂಕಗಳನ್ನು ಗಣನೆಗೆ ತೆಗೆದುಕೊಂಡರೆ ನನಗೆ ಶೇ 62.92 ಅಂಕ ಬಂದಿದೆ. ಆದರೆ ಕೊನೆಯ ಸೆಮಿಸ್ಟರ್ ಅಂಕ ಗಣನೆಗೆ ತೆಗೆದುಕೊಂಡರೆ ಮಾತ್ರ ದ್ವಿತೀಯ ದರ್ಜೆ ಬಂದಿರುವುದು.

ನಾನು ಪಡೆದಿರುವುದು ಪ್ರಥಮ ದರ್ಜೆಯೇ~ ಎಂದು ವಕೀಲರ ಮೂಲಕ ಅವರು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಅದಕ್ಕೆ ನ್ಯಾಯಮೂರ್ತಿಗಳು, `ಅದು ಹೇಗೆ ಆಗುತ್ತದೆ. ಮೊದಲ ಹಂತದಲ್ಲಿಯೇ ಉತ್ತೀರ್ಣರಾಗುವ ಪರೀಕ್ಷೆಯಲ್ಲಿನ ಅಂಕಗಳನ್ನು ಮಾತ್ರ ದರ್ಜೆ ನೀಡುವಾಗ ಪರಿಗಣನೆಗೆ ತೆಗೆದುಕೊಳ್ಳಬೇಕು ಎನ್ನುವುದು ನಿಯಮವಲ್ಲವೆ~ ಎಂದು ಪ್ರಶ್ನಿಸಿದರು.

ಅದಕ್ಕೆ ಮಹೇಶಪ್ಪ ಪರ ವಕೀಲರು, ತಮ್ಮ ಕಕ್ಷಿದಾರರನ್ನು ಸಮರ್ಥಿಸಿಕೊಂಡು ಒಟ್ಟಾರೆ ಅಂಕಗಳು ಗಣನೆಗೆ ಬರುತ್ತದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಪೀಠವು, `ಮಹೇಶಪ್ಪನವರು ಬಿ.ಇ. ಮುಗಿಸಿದ ಸಂದರ್ಭದಲ್ಲಿ (1983) ದರ್ಜೆ ನೀಡುವಾಗ ಯಾವ ಮಾನದಂಡ ಅನುಸರಿಸಲಾಗಿತ್ತು ಎಂಬ ಬಗ್ಗೆ ಮಾಹಿತಿ ನೀಡಿ~ ಎಂದು ಎರಡೂ ಕಡೆಯ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು. ಆ ಸಂದರ್ಭದಲ್ಲಿ ಇರುವ ನಿಯಮಗಳ ಆಧಾರದ ಮೇಲೆ ಮಹೇಶಪ್ಪನವರ ಹುದ್ದೆಯ ಭವಿಷ್ಯ ನಿಂತಿದೆ.

ವಿದ್ಯಾರ್ಹತೆ ಹಾಗೂ ಅನುಭವಕ್ಕೆ ಸಂಬಂಧಿಸಿದಂತೆ ಇವರು ನಕಲಿ ದಾಖಲೆ ನೀಡುವ ಮೂಲಕ ನೇಮಕಗೊಂಡಿರುವುದಾಗಿ ದೂರಿ ಜೆ.ಎಚ್.ಅನಿಲ್‌ಕುಮಾರ್ ಹಾಗೂ ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

ಈ ಅರ್ಜಿಯ ವಿಚಾರಣೆ ಕಳೆದ ಶುಕ್ರವಾರ ಕೋರ್ಟ್ ಮುಂದೆ ಬಂದಿದ್ದಾಗ, `ಎಂಜಿನಿಯರಿಂಗ್ ಪದವಿಯಲ್ಲಿ ದ್ವಿತೀಯ ದರ್ಜೆ ಪಡೆದಿದ್ದೇನೆ. ಆದರೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ಎಂದು ವೈಯಕ್ತಿಕ ವಿವರದಲ್ಲಿ ಕಣ್ತಿಪ್ಪಿನಿಂದ ನಮೂದಿಸಲಾಗಿತ್ತು~ ಎಂದು ತಪ್ಪೊಪ್ಪಿಗೆ ನೀಡಿದ್ದರು.

`ದಾರಿ ತೋರುವುದು ಹೇಗೆ...?~
ಕುಲಪತಿಯೊಬ್ಬರು ವಿಭಿನ್ನ ಹೇಳಿಕೆ ನೀಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, `ಇದೇನಿದು? ವಿಶ್ವವಿದ್ಯಾಲಯದ ಕುಲಪತಿಯೊಬ್ಬರಿಗೆ ಅವರ ಅಂಕ, ದರ್ಜೆಯ ಬಗ್ಗೆ ತಿಳಿದಿಲ್ಲವೆ? ತಾವು ಕುಲಪತಿಯಾಗಿದ್ದಾಗ ನೀಡಿದ್ದ ಮಾಹಿತಿ ತಪ್ಪಾಗಿದೆ ಎಂದು ವಿಚಾರಣೆ ವೇಳೆ ಒಮ್ಮೆ ಹೇಳುವುದು, ಕೋರ್ಟ್‌ಗೆ ನೀಡಿದ್ದ ಮಾಹಿತಿಯೇ ತಪ್ಪಾಯಿತು ಎಂದು ಇನ್ನೊಂದು ಬಾರಿ ವಿಭಿನ್ನ ಹೇಳಿಕೆ ನೀಡುವುದು ಎಂದರೇನು, ಕುಲಪತಿಯವರೇ ಹೀಗೆ ಹೇಳಿದರೆ ಬೇರೆಯವರಿಗೆ ಅವರು ದಾರಿ ತೋರುವುದು ಹೇಗೆ~ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT