ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ನಲ್ಲಿ ಸಕ್ಕರೆ ಕಾರ್ಖಾನೆ ಸಂಘದ ವಾದ

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರತಿ ಟನ್‌ ಕಬ್ಬಿಗೆ ಕೇಂದ್ರ ಸರ್ಕಾರ ₨ 2,100 ನಿಗದಿ ಮಾಡಿದೆ. ಅದಕ್ಕಿಂತ ಹೆಚ್ಚಿನ ಮೊತ್ತ ನೀಡುವ ಸಾಮರ್ಥ್ಯ ಈ ಸಂದರ್ಭದಲ್ಲಿ ಸಕ್ಕರೆ ಕಾರ್ಖಾ­ನೆ­ಗಳಿಗೆ ಇಲ್ಲ’ ಎಂದು ದಕ್ಷಿಣ ಭಾರತದ ಸಕ್ಕರೆ ಕಾರ್ಖಾನೆಗಳ ಸಂಘ (ಸಿಸ್ಮಾ) ಬುಧವಾರ ಹೈಕೋರ್ಟ್‌ನಲ್ಲಿ ವಾದಿಸಿದೆ.

ಇದಕ್ಕೆ ಪ್ರತಿವಾದ ಮಂಡಿಸಿರುವ ರಾಜ್ಯ ಸರ್ಕಾರ, ‘ಕೇಂದ್ರ ಸರ್ಕಾರ ನಿಗದಿ ಮಾಡಿರುವುದು ಕನಿಷ್ಠ ಬೆಲೆ. ಅದಕ್ಕಿಂತ ಕಡಿಮೆ ಬೆಲೆ ನಿಗದಿ ಮಾಡುವ ಅಧಿಕಾರ ನಮಗಿಲ್ಲ. ಆದರೆ ಕೇಂದ್ರ ನಿಗದಿ ಮಾಡಿರುವ ಬೆಲೆಗಿಂತ ಹೆಚ್ಚಿನ ಬೆಲೆ ನಿಗದಿ ಮಾಡಬಹುದು’ ಎಂದು ಹೇಳಿದೆ.

‘ಸಿಸ್ಮಾ‘ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾ. ಎ.ಎಸ್‌. ಬೋಪಣ್ಣ ಅವರ ಪೀಠಕ್ಕೆ ಸರ್ಕಾರದ ನಿಲುವು ತಿಳಿಸಿದ ಅಡ್ವೊಕೇಟ್‌ ಜನರಲ್‌ ಪ್ರೊ. ರವಿವರ್ಮ ಕುಮಾರ್‌, ‘ಒಂದು ಟನ್‌ ಕಬ್ಬಿಗೆ ₨ 3,500 ಬೆಲೆ ನಿಗದಿ ಮಾಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ. ಆದರೆ ಸಕ್ಕರೆ ಕಾರ್ಖಾನೆಗಳ ಹಿತವನ್ನೂ ಗಮನದಲ್ಲಿಟ್ಟುಕೊಂಡು ನಾವು ₨ 2,500 ನಿಗದಿಪಡಿಸಿದ್ದೇವೆ’ ಎಂದರು.

‘ಕಾರ್ಖಾನೆಗಳ ಹಿತ ಕಾಯಲು ನಾವು ಬದ್ಧ. ಆದರೆ ಇಲ್ಲಿ ರೈತರ ಹಿತವನ್ನೂ ಗಮನಿಸಬೇಕು. ಜಾಗತೀಕರ­ಣದ ದಿನದಲ್ಲೂ, ರೈತರು ನಿಗದಿಪಡಿಸಿದ ಕಾರ್ಖಾನೆ­ಗಳಿಗೇ ಕಬ್ಬನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ. ಹೊರ ರಾಜ್ಯಗಳಲ್ಲಿ ಇಳುವರಿ ಕಡಿಮೆಯಿದ್ದರೂ, ನಮ್ಮ ರಾಜ್ಯಕ್ಕಿಂತ ಹೆಚ್ಚಿನ ಬೆಲೆಯನ್ನು ರೈತರಿಗೆ ನೀಡ­ಲಾಗುತ್ತಿದೆ’ ಎಂದು ಪ್ರೊ. ರವಿವರ್ಮ ಅವರು ಪೀಠಕ್ಕೆ ವಿವರಿಸಿದರು.

ಕಬ್ಬು ಬೆಲೆ ನಿಗದಿ ವಿಚಾರದಲ್ಲಿ ರೈತರು, ಕಾರ್ಖಾನೆ­ಗಳ ಪ್ರತಿನಿಧಿಗಳು ಮತ್ತು ಸರ್ಕಾರದ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಅಡ್ವೊಕೇಟ್‌ ಜನರಲ್‌ ತಿಳಿಸಿದ್ದನ್ನು ದಾಖಲಿಸಿಕೊಂಡ ಪೀಠ, ‘ಈ ವಿಚಾರದಲ್ಲಿ ಮಾತುಕತೆ ಮುಂದುವರಿಯಲಿ’ ಎಂಬ ಅನಿಸಿಕೆ ವ್ಯಕ್ತಪಡಿಸಿ, ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT