ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಂದಾಣಿಕೆ ಮೇಲೆ ‘ನೃಪತುಂಗ’ ನಗರ ಸಂಚಾರ

1.20 ಲಕ್ಷ ಪ್ರತಿದಿನ ಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರು: ₹30ಕ್ಕೆ ದಿನದ ಪಾಸ್
Last Updated 28 ಮೇ 2016, 7:01 IST
ಅಕ್ಷರ ಗಾತ್ರ

ಕಲಬುರ್ಗಿ: ಸಾರ್ವಜನಿಕರ ಮೆಚ್ಚುಗೆ ಗಳಿಸಿದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ‘ನೃಪತುಂಗ’ ಸಾರಿಗೆ ನಷ್ಟದಲ್ಲಿದ್ದರೂ ಇತರೆ ದೂರದ ಮಾರ್ಗಗಳಿಂದ ಸಂದಾಯವಾಗುವ ಆದಾಯದೊಂದಿಗೆ ಹೊಂದಾಣಿಕೆ ಮೂಲಕ ಉತ್ತಮ ಸೇವೆ ಒದಗಿಸುತ್ತಿದೆ.

ಕಲಬುರ್ಗಿ ಕೇಂದ್ರ ಸ್ಥಾನವಾದ್ದರಿಂದ ಇಲ್ಲಿಗೆ ಪ್ರತಿದಿನ ಸಾವಿರಾರು ಜನ ವಿವಿಧ ಕಾರ್ಯಗಳ ನಿಮಿತ್ತ ಬರುತ್ತಾರೆ. ನಗರ ಸಾರಿಗೆ ಬಸ್‌ಗಳಲ್ಲಿ ₹3 ಯಿಂದ ₹12ರ ವರೆಗೆ ಟಿಕೆಟ್‌ ದರ ಇದೆ. 88 ನೃಪತುಂಗ ಸಾರಿಗೆ ಬಸ್‌ಗಳು ನಗರದಲ್ಲಿ ಪ್ರತಿದಿನ 15 ಸಾವಿರ ಕಿಲೊಮೀಟರ್‌ ಕಾರ್ಯ ನಿರ್ವಹಿಸುತ್ತಿವೆ. 1 ಲಕ್ಷಕ್ಕೂ ಮೇಲ್ಪಟ್ಟು ಜನರು ಪ್ರಯಾಣಿಸುತ್ತಾರೆ. ಇವರಿಂದ ಪ್ರತಿದಿನ ಅಂದಾಜು ₹4.24 ಲಕ್ಷ ಆದಾಯ ಸಂದಾಯವಾಗುತ್ತಿದೆ.

‘ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಷ್ಟದಲ್ಲಿಯೂ ಇಲ್ಲ. ಇತ್ತ ಲಾಭದಲ್ಲಿಯೂ ಇಲ್ಲ. ಇಲ್ಲಿ ಒಂದೆಡೆ ಆದ ನಷ್ಟವನ್ನು ಮತ್ತೊಂದು ಘಟಕದಿಂದ ಹೊಂದಾಣಿಕೆ ಮಾಡಲಾಗುತ್ತಿದೆ. ಕಾಲಕ್ಕೆ ತಕ್ಕಂತೆ (ಸೀಜನ್‌ ವೈಸ್‌) ಬಸ್‌ಗಳ ಆದಾಯ ಇರುತ್ತದೆ. ಪ್ರಯಾಣಿಕರಿಗೆ ಉತ್ತಮ ಸೇವೆ ಮತ್ತು ಅವರ ಸುರಕ್ಷತೆ ಮುಖ್ಯ’ ಎಂದು ಸಂಸ್ಥೆಯ ಅಧ್ಯಕ್ಷ ಭೀಮಣ್ಣ ಸಾಲಿ ಹೇಳುತ್ತಾರೆ.

‘ನಗರ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ದರ ಸದ್ಯದ ಮಟ್ಟಿಗೆ ಪರಿಷ್ಕರಣೆ ಇಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಬಸ್‌ಗಳು ಬರುವ ನಿರೀಕ್ಷೆ ಇದೆ’ ಎಂದು ತಿಳಿಸುತ್ತಾರೆ ಸಂಚಾರ ವ್ಯವಸ್ಥಾಪಕ ನಿರ್ದೇಶಕ ಪ್ರಭುದಾಸ್‌.

ಪಾಸ್‌ಗಳ ಬಗ್ಗೆ ಅರಿವಿನ ಕೊರತೆ: ಸಾರಿಗೆ ಬಸ್‌ಗಳಲ್ಲಿ ಅಂಗವಿಕಲರು, ಅಂಧರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಸ್ವಾತಂತ್ರ್ಯ ಹೋರಾಟಗಾರರಿಗಾಗಿ ರಿಯಾಯಿತಿ ದರದಲ್ಲಿ  ಪಾಸ್‌ ನೀಡುವ ವ್ಯವಸ್ಥೆ ಇದೆ. ನಗರ ಸಾರಿಗೆ ಬಸ್‌ನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಸಾರ್ವಜನಿಕರ ಅನುಕೂಲಕ್ಕಾಗಿ ₹30ಗೆ ದಿನದ ಪಾಸ್‌ ನೀಡಲಾಗುತ್ತಿದೆ. ಆದರೆ, ಇದರ ಬಗ್ಗೆ ಅರಿವಿನ ಕೊರತೆ ಕಾರಣ ಹೆಚ್ಚು ಪಾಸ್‌ ಮಾರಾಟವಾಗುತ್ತಿಲ್ಲ. ಪ್ರತಿದಿನಕ್ಕೆ ಸರಾಸರಿ 200 ಪಾಸ್‌ಗಳು ಮಾರಾಟವಾಗುತ್ತಿವೆ.

‘ನೃಪತುಂಗದಲ್ಲಿ ₹30ಗೆ ದಿನದ ಪಾಸ್‌ ಕೊಡುತ್ತಾರೆ ಎಂದು ನನ್ನ ಗೆಳೆಯ ಹೇಳಿದ್ದ. ಇದರಿಂದ ಕಲಬುರ್ಗಿಯ ಪ್ರವಾಸಿ ತಾಣಗಳಾದ ಶರಣಬಸವೇಶ್ವರ ದೇವಸ್ಥಾನ, ಅಪ್ಪನ ಕೆರೆ, ಖಾಜಾ ಬಂದೇನವಾಜ್‌ ದರ್ಗಾ, ಕೋಟೆ, ಕೋರಂಟಿ ಹನುಮಾನ ದೇವಸ್ಥಾನ, ಬುದ್ಧ ವಿಹಾರ, ಕಿರು ಮೃಗಾಲಯ, ವಿಜ್ಞಾನ ಕೇಂದ್ರಗಳನ್ನು ಕೇವಲ ₹30ನಲ್ಲಿ ವೀಕ್ಷಿಸಲು ಸಾಧ್ಯವಾಯಿತು. ಇತರೆ ವಾಹನಗಳಲ್ಲಿ ಸಂಚಾರ ಮಾಡಿದರೆ, ₹300–400 ಖರ್ಚಾಗುತ್ತಿತ್ತು. ದಿನದ ಪಾಸ್‌ ಸ್ಥಗಿತಗೊಳಿಸಬಾರದು’ ಎಂದು ವಿನಂತಿಸುತ್ತಾರೆ ಚಿತ್ತಾಪುರದ ಭೀಮಾಶಂಕರ.

ನೃಪತುಂಗ ಸಂಚಾರಕ್ಕೆ ಅನಾನುಕೂಲ: ನಗರದಲ್ಲಿ ಪ್ರಯಾಣಿಕರ ಹೆಚ್ಚಿನ ಅನುಕೂಲಕ್ಕಾಗಿ 2 ಕಿಲೊಮೀಟರ್‌ಗೆ ಒಂದರಂತೆ ಮತ್ತು ಮುಖ್ಯ ಸ್ಥಳಗಳಲ್ಲಿ ನೃಪತುಂಗ ಸಾರಿಗೆ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಆದರೆ, ಇತರೆ ವಾಹನಗಳು ಅಲ್ಲಿ ನಿಲುಗಡೆ ಮಾಡುವುದರಿಂದ ಮಹಿಳೆಯರು, ಮಕ್ಕಳು, ವೃದ್ಧರಿಗೆ ತೊಂದರೆಯಾಗುತ್ತಿದೆ.

‘ನಗರದ ಹುಮನಾಬಾದ್‌ ರಿಂಗ್‌ ರಸ್ತೆ ಕ್ರಾಸ್‌, ಖಾಜಾ ಬಂದೇನವಾಜ್‌ ದರ್ಗಾ ಇನ್ನಿತರೆಡೆ ಬಸ್‌ಗಳ ಸುಲಭ ಸಂಚಾರಕ್ಕೆ ಆಟೊ ಚಾಲಕರು ಬಿಡುವುದಿಲ್ಲ. ಅವರ ಜೊತೆ ವಾಗ್ವಾದ ನಡೆಯುವುದು ಉಂಟು. ಈ ಬಗ್ಗೆ ಆರ್‌ಟಿಒ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡುತ್ತಾರೆ ಹೆಸರು ಹೇಳಲು ಇಚ್ಛಿಸದ ನೃಪತುಂಗ ಸಾರಿಗೆ ಬಸ್‌ ಚಾಲಕ ಮತ್ತು ನಿರ್ವಾಹಕರು.

** *** **
ಸಾರ್ವಜನಿಕರು ಸುರಕ್ಷತೆಯ ದೃಷ್ಟಿಯಿಂದ ಸಾರಿಗೆ ಸಂಸ್ಥೆ ಯ ಬಸ್‌ಗಳಲ್ಲಿ  ಪ್ರಯಾಣಿಸಬೇಕು. ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಪಾಸ್‌ಗಳನ್ನು ನೀಡಲಾಗುತ್ತಿದೆ.
-ಭೀಮಣ್ಣ ಸಾಲಿ,
ಅಧ್ಯಕ್ಷರು, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT