ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗುತ್ತಿಗೆ ನೇಮಕಾತಿ ಕೈಬಿಡಲು ಸೂಚನೆ

Last Updated 8 ಜನವರಿ 2011, 9:10 IST
ಅಕ್ಷರ ಗಾತ್ರ

ಮೈಸೂರು: ‘ಸರ್ಕಾರಿ ಇಲಾಖೆಗಳು, ನಿಗಮ ಮಂಡಳಿಗಳು ಹಾಗೂ ಇನ್ನಿತರೆ ಇಲಾಖೆಗಳಲ್ಲಿ ಏಜೆನ್ಸಿಗಳ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳದಂತೆ ಸರ್ಕಾರಕ್ಕೆ ಸೂಚಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸದಸ್ಯ ಬಿ.ಪಾರ್ಥಸಾರಥಿ ಹೇಳಿದರು. ‘ಮೊರಾರ್ಜಿ ದೇಸಾಯಿ ಶಾಲೆ, ಸರ್ಕಾರಿ ಆಸ್ಪತ್ರೆ ಹಾಗೂ ಹಾಸ್ಟೆಲ್ ಸೇರಿದಂತೆ ಅನೇಕ ಇಲಾಖೆಗಳಲ್ಲಿ  ಸರ್ಕಾರ ಏಜೆನ್ಸಿ ಮೂಲಕ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಇದರಿಂದಾಗಿ, ನಾವು ಕಾಯಂ ಸಿಬ್ಬಂದಿ ಅಲ್ಲ ಎನ್ನುವ ಮನೋಭಾವ ಕೆಲಸಗಾರರನ್ನು ಕಾಡುತ್ತಿದೆ. ಆದ್ದರಿಂದ, ಸರ್ಕಾರ ಯಾವುದೇ ಕಾರಣಕ್ಕೂ ಏಜೆನ್ಸಿ ಮೂಲಕ ನೇಮಕಕ್ಕೆ ಮುಂದಾಗಬಾರದು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ವಿವಿಧ ಇಲಾಖೆಗಳಿಗೆ ಕಾಯಂ ಆಗಿ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳದಿದ್ದರೆ ಕಾಯಂ ಸಿಬ್ಬಂದಿಗೆ  ನೀಡುವ ವೇತನವನ್ನಾದರೂ ಗುತ್ತಿಗೆ ನೌಕರರಿಗೆ ಕೊಡಬೇಕು. ಏಜೆನ್ಸಿಗೆ ಕೊಡುವುದರಿಂದ ಅವರು ತಮ್ಮ ಪಾಲಿನ ಲಾಭವನ್ನು ಪಡೆದುಕೊಂಡು ಸಂಬಳ ವಿತರಿಸುತ್ತಾರೆ. ಅಲ್ಲದೆ, ಸಮಯಕ್ಕೆ ಸರಿಯಾಗಿಯೂ ಸಂಬಳ ವಿತರಣೆ ಮಾಡುವುದಿಲ್ಲ. ಇದರಿಂದ ನೌಕರರಿಗೆ ಅನ್ಯಾಯವಾಗುತ್ತದೆ’ ಎಂದರು.

‘ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂಬ ದೂರುಗಳು ಬಂದಿದೆ. ದೂರನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು’ ಎಂದ ಅವರು, ‘ಸರ್ಕಾರ ಗುತ್ತಿಗೆ ನೇಮಕಾತಿಯನ್ನು ಗಂಭೀರವಾಗಿ ಪರಿಗಣಿಸಿ, ಖಾಸಗಿಯವರಿಗೆ ಮಾರ್ಗ ತೋರಿಸುವ ನಿಟ್ಟಿನಲ್ಲಿ ಮಾತ್ರ ಸರ್ಕಾರ ಕೆಲಸ ನಿರ್ವಹಿಸಬೇಕು’ ಎಂದು ಸೂಚಿಸಿದರು.

‘ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಡಿಸೆಂಬರ್ 31ರ ಒಳಗೆ 63 ಸಾವಿರ ಮನೆಗಳನ್ನು ಹಸ್ತಾಂತರಿಸಬೇಕು ಎಂದು ಸರ್ಕಾರಕ್ಕೆ ಗಡುವು ನೀಡಲಾಗಿತ್ತು. ಆದರೆ, ಇದುವರೆಗೂ ಮನೆಗಳನ್ನು ಹಸ್ತಾಂತರಿಸಿಲ್ಲ. ಇಲ್ಲಿಯವರೆಗೆ ಸರ್ಕಾರ 10 ಸಾವಿರ ಮನೆಗಳನ್ನು ಮಾತ್ರ ನಿರ್ಮಿಸಿದೆ. ಈಗ ಮಾರ್ಚ್ ಒಳಗೆ ಸಂತ್ರಸ್ತರಿಗೆ  ಮನೆ ವಿತರಿಸಲಾಗುವುದು ಎಂದು ಈಗ ಸರ್ಕಾರ ಹೇಳಿದೆ’ ಎಂದರು.

ಕೋರ್ಟ್‌ಗೆ ಹೋಗಲು ಚಿಂತನೆ: ‘ಸಂತ್ರಸ್ತರಿಗೆ ಮನೆ ವಿತರಣೆ, ತಲೆ ಮೇಲೆ ಮಲ ಹೊರುವ ಪದ್ಧತಿ ಹಾಗೂ ಭಿಕ್ಷುಕರ ಪುನರ್ವಸತಿ ಕೇಂದ್ರದ ಸಮಸ್ಯೆಗಳ ಕುರಿತು ನ್ಯಾಯಾಲಯದ ಮೊರೆ ಹೋಗುವ ಕುರಿತು ಚಿಂತನೆ ನಡೆದಿದೆ. ಅಲ್ಲದೆ, ಸಾರ್ವಜನಿಕರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಆಯೋಗದ ವತಿಯಿಂದ ಕೋರ್ಟ್ ಮೊರೆ ಹೋಗುವುದೇ ಹೆಚ್ಚು ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ’ ಎಂದು ಹೇಳಿದರು.

ಸ್ವಯಂ ಪ್ರಕರಣ: ‘ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಉಂಡಬತ್ತಿಕೆರೆಯಲ್ಲಿ ಈಚೆಗೆ ಟೆಂಪೊ  ಉರುಳಿ ಬಿದ್ದು 31 ಜನರು ಮೃತಪಟ್ಟಿರುವ ಕುರಿತು ಮಾನವ ಹಕ್ಕುಗಳ ಆಯೋಗದ ವತಿಯಿಂದ ಸ್ವಯಂ  ಪ್ರೇರಿತ ಪ್ರಕರಣ ದಾಖಲುಮಾಡಿಕೊಳ್ಳಲಾಗಿದೆ. ಘಟನೆ ಕುರಿತು ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದ ಅವರು, ‘ರಸ್ತೆ ಪಕ್ಕ ಇರುವ ಕೆರೆಗಳಿಗೆ ತಡೆಗೋಡೆ ನಿರ್ಮಿಸುವ ಕುರಿತು ರಾಜ್ಯ  ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT