ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಬೀಳದ ಅಂತಿಮ ನಿರ್ಣಯ

ದಾವಣಗೆರೆ ಜಿಲ್ಲಾ ಉತ್ಸವ ಪೂರ್ವಭಾವಿ ಸಭೆ
Last Updated 2 ಜನವರಿ 2014, 10:04 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ದಾವಣಗೆರೆ ಜಿಲ್ಲಾ ಉತ್ಸವ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉತ್ಸವದ ಶಾಶ್ವತ ಲಾಂಛನ ನಿರ್ಮಾಣ ಹೊರತುಪಡಿಸಿ, ನಿರ್ದಿಷ್ಟ ನಿರ್ಣಯ ಹೊರಬೀಳಲಿಲ್ಲ, ಜಿಲ್ಲಾಡಳಿತ ನಡೆಯಲಿರುವ ದಿನ ಕೂಡ ನಿಗದಿಯಾಗಲಿಲ್ಲ... ಔಪಚಾರಿಕ ಚರ್ಚೆ, ಗೊಂದಲದ ಸಲಹೆಗಳಿಂದ ಕೊನೆಗೊಂಡಿತು.

ಜಿಲ್ಲಾಧಿಕಾರಿ ಎಸ್.ಟಿ. ಅಂಜನಕುಮಾರ್ ಮಾತನಾಡಿ, ‘ದಾವಣಗೆರೆ ಉತ್ಸವಕ್ಕಾಗಿ ₨ 1ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಉತ್ಸವವನ್ನು ಶೀಘ್ರ ಹಮ್ಮಿಕೊಳ್ಳಲಿದ್ದು, ಉತ್ಸವ ಯಶಸ್ವಿಗೆ ವಿವಿಧ ಸಮಿತಿಗಳ ರಚನೆ ಅಗತ್ಯವಿದೆ. ಸಾಹಿತ್ಯ, ಕಲೆಗೆ ಜಿಲ್ಲಾ ಉತ್ಸವದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಕಲೆ–ನಾಡು–ನುಡಿ ಪ್ರತಿಬಿಂಬಿಸುವ ವ್ಯವಸ್ಥೆ ರೂಪಿಸಬೇಕು. ಅದಕ್ಕೆ ಜಿಲ್ಲೆಯಲ್ಲಿ ಎಲ್ಲರ ಸಹಕಾರ, ಸಲಹೆ ನೀಡಬೇಕು.

ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ, ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ಕುರಿತು ಚಿಂತನೆ ನಡೆಸಲಾಗಿದೆ. ಜವಾಬ್ದಾರಿ ಹೊರುವ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಹೇಳಿದರು. ‘ಜಿಲ್ಲಾ ಉತ್ಸವ ಕ್ಕೆ ನಿರ್ದಿಷ್ಟ ಲಾಂಛನದ ಅಗತ್ಯವಿದೆ. ಲಾಂಛನ ಕುರಿತಂತೆ ಸಲಹೆ ನೀಡಬಹುದು’ ಎಂದು ಜಿಲ್ಲಾಧಿಕಾರಿ ಕೋರಿದರು.

‘ಯಾವುದೇ ಉತ್ಸವಕ್ಕೆ ನಿರ್ದಿಷ್ಟ ಲಾಂಛನ ಮುಖ್ಯ. ದಾವಣಗೆರೆ ಜಿಲ್ಲೆ ಸಾಂಸ್ಕೃತಿಕವಾಗಿ ಸಮೃದ್ಧವಾಗಿದೆ. ಐತಿಹಾಸಿಕ ತಾಣಗಳ ಚಿತ್ರಗಳನ್ನು ಬಳಸಿ ಕಲಾವಿದರು ಹಾಗೂ ಸಾಹಿತಿಗಳ ಆಪ್ತ ಸಮಾಲೋಚನೆ ನಂತರ ಶಾಶ್ವತ ಲಾಂಛನ ನಿರ್ಮಿಸಬಹುದು’ ಎಂದು ಸಭೆಯಲ್ಲಿ ನೆರೆದಿದ್ದ ಸಾಹಿತಿಗಳಾದ ಮಲ್ಲಿಕಾರ್ಜುನ  ಕಲಮರಹಳ್ಳಿ, ಮಲ್ಲಿಕಾರ್ಜುನ ಕಡಕೋಳ, ಆನಂದ್ ಋಗ್ವೇದಿ, ಬಾ.ಮ.ಬಸವರಾಜಯ್ಯ, ದಾದಾಪೀರ್ ನವಿಲೇಹಾಲ್ ಸಲಹೆ ನೀಡಿದರು.

ಜಿಲ್ಲಾ ಉತ್ಸವ ನಡೆಸಲು ಜನವರಿ 26 ಮತ್ತು ಫೆಬ್ರುವರಿ  ಸಕಾಲ. ಮಾರ್ಚ್ ತಿಂಗಳ ಮೊದಲ ವಾರವೇ ದುರ್ಗಮ್ಮ ಜಾತ್ರೆ ನಡೆಯಲಿರುವುದರಿಂದ ತೊಂದರೆ ಯಾಗಲಿದೆ. ಹಾಗಾಗಿ, ಈ ಎರಡು ತಿಂಗಳಲ್ಲಿ ದಿನ ನಿಗದಿಯಾಗಬೇಕು ಎಂಬ ಮಾತುಗಳು ಬಹುತೇಕರಿಂದ ಕೇಳಿಬಂದವು.

ಕರವೇ (ನಾರಾಯಣಗೌಡ) ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ ಮಾತನಾಡಿ, ‘ಎಲ್ಲಾ ಜಿಲ್ಲೆಗಳಲ್ಲಿ ದ್ವಾರ ಬಾಗಿಲುಗಳನ್ನು ನಿರ್ಮಿಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ದ್ವಾರ ಬಾಗಿಲುಗಳನ್ನು ನಿರ್ಮಿಸಬೇಕು. ಇದರಿಂದ ನಗರ ಸಾಂಸ್ಕೃತಿಕ ಲಕ್ಷಣ ಪಡೆಯಲಿದೆ’ ಎಂದು ಸಲಹೆ ನೀಡಿದರು. ಅದಕ್ಕೆ ಜಿಲ್ಲಾಧಿಕಾರಿ ಮುಂದಿನ ದಿನಗಳಲ್ಲಿ ದ್ವಾರ ಬಾಗಿಲು ನಿರ್ಮಿಸುವ ಭರವಸೆ ನೀಡಿದರು.

ಜಿ.ಪಂ. ಸಿಇಒ ಎ.ಬಿ.ಹೇಮಚಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಹೆಚ್ಚುವರಿ ಎಸ್ಪಿ ರವಿನಾರಾಯಣ್, ಪಾಲಿಕೆ ಆಯುಕ್ತ ನಾರಾಯಣಪ್ಪ, ಉಪ ವಿಭಾಗದ ಅಧಿಕಾರಿ ನಾಗರಾಜ್‌, ತಹಶೀಲ್ದಾರ್‌ ಮಂಜುನಾಥ್‌ ಎನ್‌.ಬಳ್ಳಾರಿ, ಜಿಲ್ಲಾ ಕಸಾಪ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ಕರವೇ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ಯಲ್ಲಪ್ಪ, ನಗರಸಭೇ ಮಾಜಿ ಅಧ್ಯಕ್ಷ ಕೆ.ಜಿ.ಶಿವಕುಮಾರ್, ಹಿರಿಯ ವ್ಯಂಗ್ಯಚಿತ್ರಕಾರ ಎಚ್.ಬಿ. ಮಂಜುನಾಥ್, ಮಾಗಾನಹಳ್ಳಿ ಮಂಜುನಾಥ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT