ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರೆಯಾದ ಹೊಡೆದಾಟ (ಚಿತ್ರ: ನಂದೀಶ್ವರುಡು (ತೆಲುಗು)

Last Updated 21 ಜನವರಿ 2012, 19:30 IST
ಅಕ್ಷರ ಗಾತ್ರ

ದಾದಾಗಿರಿಯ ರೋಚಕ ಕತೆಗಳ ಬಗ್ಗೆ ಸಿನಿಮಾ ಮಂದಿಗೆ ಎಂದೆಂದಿಗೂ ಕುಗ್ಗದ ಕುತೂಹಲ! ಮುಗ್ಧನೊಬ್ಬ ಆಕಸ್ಮಿಕವಾಗಿಯೋ ಪರಿಸ್ಥಿತಿಯ ಪಿತೂರಿಯಿಂದಲೋ ರೌಡಿಯಾಗುವ, ದಾದಾ ಆಗಿ ಮೆರೆಯುವ ಅದೆಷ್ಟೋ ಕತೆಗಳು ಸಿನಿಮಾಗೆ ವಸ್ತು ಆಗಿವೆ. ಆ ಯಾದಿಗೆ ಹೊಸ ಸೇರ್ಪಡೆ `ನಂದೀಶ್ವರುಡು~.

ತನ್ನ ಪಾಡಿಗೆ ತಾನು ಎಂಬಂತೆ ಓದಿಕೊಂಡಿದ್ದ ವಿದ್ಯಾರ್ಥಿಯೊಬ್ಬನ ಬದುಕಿಗೆ ಕಾಲೇಜಿನಲ್ಲಿ ಜರುಗುವ ಕಬಡ್ಡಿ ಪಂದ್ಯವೊಂದು ಅನೂಹ್ಯ ತಿರುವು ನೀಡುತ್ತದೆ. ವಿನಾಕಾರಣ ಕೆಣಕಿ, ಮೈಮೇಲೆ ಏರಿಬಂದ ವ್ಯಕ್ತಿಯನ್ನು ನಂದು (ತಾರಕರತ್ನ) ತದುಕುತ್ತಾನೆ. ಆದರೆ, ಏಟು ತಿಂದ ವ್ಯಕ್ತಿ ನಗರದ ಕುಖ್ಯಾತ ರೌಡಿಯೊಬ್ಬನ ಸಹೋದರ.

ಪೊಲೀಸ್ ಅಧಿಕಾರಿ ಆಗಬೇಕೆಂಬ ಹಂಬಲದೊಂದಿಗೆ ಶ್ರದ್ಧೆಯಿಂದ ಓದಿಕೊಂಡಿದ್ದ ವಿದ್ಯಾರ್ಥಿಗೆ ಮೊದಲ ಬಾರಿಗೆ ಹೀಗೆ ನೆತ್ತರು ಕಲೆ ಮೆತ್ತಿಕೊಳ್ಳುತ್ತದೆ. ರಜೆಯಲ್ಲಿ ಊರಿಗೆ ಹೋದರೆ ಅಲ್ಲಿ ಮತ್ತೆ ಅಂತಹದೇ ಆಕಸ್ಮಿಕ! ಬಂಧುವೊಬ್ಬ ತಮ್ಮ ತಂದೆ ಮೇಲೆ ಕೈಮಾಡಿದ ಸಂಗತಿ ತಿಳಿಯುತ್ತದೆ. ಸಿಟ್ಟಿನ ಭರದಲ್ಲಿ ಹಿಡಿದು ಚಚ್ಚಿದಾಗ ಆತನ ಕಾಲು ಮುರಿಯುತ್ತದೆ. ಪರಿಣಾಮ: ನಂದುಗೆ ಜೈಲುವಾಸ.

ಜೈಲಿನಲ್ಲಿ ಕೈದಿ ಸಲೀಂ (ರಾಜೀವ್ ಕನಕಾಲ) ಪರಿಚಯ ಆಗುತ್ತದೆ. ಒಮ್ಮೆ ಜೈಲಿಗೆ ಬಂದರೆ ಮತ್ತೆ ಮಾಮೂಲು ಬದುಕು ಅಸಾಧ್ಯ ಎಂದು ಆತ ಭವಿಷ್ಯ ನುಡಿಯುತ್ತಾನೆ. ನಂದು ಮಟ್ಟಿಗೆ ಅದು ನಿಜವಾಗುತ್ತದೆ.
 
ಪುನಃ ವಿದ್ಯಾರ್ಥಿ ಬದುಕು ಸಾಗಿಸಲು ಆತನಿಗೆ ಸಾಧ್ಯವಾಗುವುದೇ ಇಲ್ಲ. ಬೇಡವೆಂದರೂ ಜಗಳ, ಹೊಡೆದಾಟ. ಅಲ್ಲಿಂದ ಲಾಂಗ್ ಸಂಗಾತಿ ಆಗುತ್ತದೆ. ನಂದು ಜನರ ದೃಷ್ಟಿಯಲ್ಲಿ ನಂದೀಶ್ವರನಾಗುತ್ತಾನೆ.

ಮಚ್ಚು ಹಿಡಿದ ಮೇಲೆ ಹೊಡೆದಾಟಗಳಿಗೆ ಕೊರತೆ ಆದೀತೆ? ಹೊಡಿ-ಬಡಿ ಅಬ್ಬರ ಇಡೀ ಚಿತ್ರವನ್ನು ಆವರಿಸಿಕೊಳ್ಳುತ್ತದೆ. ಆ್ಯಕ್ಷನ್‌ಪ್ರಿಯ ಪ್ರೇಕ್ಷಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ನಿರ್ದೇಶಕ ಶ್ರೀನು ಯರಜಾಲ ಈ ಚಿತ್ರ ರೂಪಿಸಿದಂತಿದೆ. ಆದರೆ, ರೂಢಿಗತ ಚೌಕಟ್ಟಿನಿಂದ ಆಚೆಗೆ ದೃಷ್ಟಿ ಹರಿಸುವ ಪ್ರಯತ್ನವೇ ನಡೆದಿಲ್ಲ ಎಂಬುದು ಚಿತ್ರದ ಬಹುದೊಡ್ಡ ಮಿತಿ.

ಅಂದಹಾಗೆ ಈ ಚಿತ್ರ ಕನ್ನಡದ `ಡೆಡ್ಲಿ ಸೋಮ~ ರಿಮೇಕ್. ತೆಲುಗು ಜಾಯಮಾನ ಮತ್ತು ಅಲ್ಲಿನ ಜೀವನಕ್ರಮಕ್ಕೆ ತಕ್ಕಂತೆ ನಿರ್ದೇಶಕರು ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಇಷ್ಟಾಗಿಯೂ ಕುತೂಹಲದಿಂದ ನೋಡಿಸಿಕೊಂಡು ಹೋಗುವ ಗುಣ ದಕ್ಕಿಲ್ಲ. ಹೀಗಾಗಿ ತೀರ ಸಾಧಾರಣ ಚಿತ್ರವಾಗಿ ಉಳಿದುಬಿಡುತ್ತದೆ.

ನಾಯಕನಟ ತಾರಕರತ್ನ ಅವರ ಗೆಟಪ್ ಬದಲಾಗಿದೆ. ಪೊದೆ ಮೀಸೆ ಬಿಟ್ಟುಕೊಂಡು ಸಾಹಸಪ್ರಧಾನ ಪಾತ್ರಕ್ಕೆ ನ್ಯಾಯ ಒದಗಿಸಲು ಶಕ್ತಿಮೀರಿ ಶ್ರಮಿಸಿದ್ದಾರೆ. ಆದರೂ ಭಾವಾಭಿವ್ಯಕ್ತಿಯಲ್ಲಿ ಅವರು ಇನ್ನಷ್ಟು ಪಳಗಬೇಕು ಅನ್ನಿಸುತ್ತದೆ. ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಜಗಪತಿಬಾಬು ಅಭಿನಯ ಇಷ್ಟವಾಗುತ್ತದೆ.

ನಾಯಕಿ ಶೀನಾ ಅವರಿಗೆ ಅಭಿನಯಕ್ಕೆ ಅವಕಾಶ ದೊರೆತಿಲ್ಲ. ಖಳನ ಪಾತ್ರದಲ್ಲಿ ಅಜಯ್ ನಟನೆ ಪಾತ್ರೋಚಿತ. ಸುಮನ್, ಸೀತಾ ಪಾತ್ರಗಳನ್ನು ಇನ್ನಷ್ಟು ಬೆಳೆಸಲು ಅವಕಾಶ ಇತ್ತು. ಸಲೀಂ ಪಾತ್ರದಲ್ಲಿ ರಾಜೀವ್ ಕನಕಾಲ ಕಾಣಿಸಿಕೊಂಡಿದ್ದಾರೆ.

ಥ್ರಿಲ್ಲರ್ ಮಂಜು ಅವರ ಸಾಹಸ ಸಂಯೋಜನೆ ಚಿತ್ರಕ್ಕೆ ಒಂದಷ್ಟು ಶಕ್ತಿ ತುಂಬಿದೆ. ಪಾರ್ಥು ನೀಡಿರುವ ಸಂಗೀತದಲ್ಲಿ ವಿಶೇಷ ಇಲ್ಲ. ಸುಧಾಕರ ರೆಡ್ಡಿ ಛಾಯಾಗ್ರಹಣ ಒದಗಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT