ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲಕ್ಕ ನೀರ ಬರಂಗಿಲ್ರಿ

Last Updated 19 ಫೆಬ್ರುವರಿ 2011, 6:35 IST
ಅಕ್ಷರ ಗಾತ್ರ

ಯಾದಗಿರಿ: “ಈ ವರ್ಷ ಹತ್ತಿಕುಣಿ ಡ್ಯಾಂ ತುಂಬೈತಿ ಅಂತ 6 ಸಾವಿರ ಕೊಟ್ಟ ಶೇಂಗಾ ಬೀಜಾ ಮಸಾಲಿ ತಂದು ಬಿತ್ತನಿ ಮಾಡಿದ್ವಿ. ಎರಡ ಸಲ ಮಾತ್ರ ನೀರ ಬಂದೈತಿ. ನೀರಿಲ್ಲದ ಶೇಂಗಾ ಎಲ್ಲಾ ಒಣಗಿ ಹೊಂಟೈತಿ. ನಾವು ಆತ್ಮಹತ್ಯೆ ಮಾಡಿಕೊಳ್ಳೋ ಪರಿಸ್ಥಿತಿ ಬಂದೈತಿ ಸಾಹೇಬ್ರ. ನೀವಾದ್ರು ಹೇಳಿ ನೀರ ಬಿಡಸ್ರಿ” ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಜಲಾಶಯ ಮತ್ತು ಸೈದಾಗರ ಜಲಾಶಯದ ಕಾಲುವೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಗುಲ್ಬರ್ಗ ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ ಅವರೆದುರು ರೈತರು ತೋಡಿಕೊಂಡ ಅಳಲಿದು.
“ಡ್ಯಾಂನ್ಯಾಗಿನ ನೀರ ನೋಡಿ, ಸಾಲ ಆದ್ರ ಆಗವಾಲ್ತು ಅಂತ 6 ಸಾವಿರಕ್ಕ ಕ್ವಿಂಟಲ್ ರೇಟ್‌ಲೇ ಶೇಂಗಾ ಬೀಜಾ ತಂದೇವ್ರಿ. ಈಗ ನೋಡಿದ್ರ ಹಾಕಿದ ರೊಕ್ಕನೂ ಬರದಂಗ ಕಾಣಾಕತೈತಿ. ಹೊಲಕ್ಕ ನೀರ ಬರವಾಲ್ತು, ಇನ್ನ ಬೆಳಿ ಹೆಂಗ ತಕ್ಕೊಳ್ಳೋದ್ರಿ” ಎಂದು ತಮ್ಮ ಸಂಕಟವನ್ನು ವ್ಯಕ್ತಪಡಿಸಿದರು.

ಶುಕ್ರವಾರ ಜಲಾಶಯಗಳ ಕೊನೆಯ ಭಾಗದ ಕಾಲುವೆಗಳ ವೀಕ್ಷಣೆ ಮಾಡಿದ ಗಿರೀಶ ಮಟ್ಟೆಣ್ಣವರ, ಅಲ್ಲಿನ ದುಸ್ಥಿತಿ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರೈತರ ಹೊಲಗಳಿಗೂ ತೆರಳಿ, ಬೆಳೆಯ ಸ್ಥಿತಿ ಬಗ್ಗೆ ಪರಿಶೀಲನೆ ಮಾಡಿದರು. ಒಂದು ವಾರದಲ್ಲಿ ರೈತರ ಜಮೀನಿಗೆ ನೀರು ಹರಿಸದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾವುದು ಎಂದು ಮಟ್ಟೆಣ್ಣವರ, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕಾಲುವೆಗಳಲ್ಲಿ ತುಂಬಿರುವ ಹೂಳು ತೆಗೆಯಲಾಗುವುದು. ಹದಗೆಟ್ಟ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು. ಕಾಲುವೆಗಳ ಸೋರಿಕೆ ತಡೆಗಟ್ಟಲು ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ರೈತರ ಜಮೀನಿಗೆ ನೀರು ಹರಿಯುವಂತೆ ಮಾಡಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸೂಚನೆ ನೀಡಿದರು. ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸುಧೀರ ಹೊನ್ನತ್ತಿ, ಸಹಾಯಕ ಎಂಜಿನಿಯರ್ ಬಸವರಾಜ, ಶರಣಗೌಡ ಯಡ್ಡಳ್ಳಿ, ರವಿ ಪಾಟೀಲ, ಬಸವರಾಜ ಕೊಡ್ಲಾ, ಶ್ರೀಕಾಂತ ತಮ್ಮಣ್ಣೋರ್, ಮಲ್ಲಣ್ಣಗೌಡ ಹೋರುಂಚಾ, ಸಿದ್ಧಣ್ಣ ದೇಸಾಯಿ, ವೀರಭದ್ರಪ್ಪ ಯಡ್ಡಳ್ಳಿ, ವೆಂಕಟರಡ್ಡಿ ಕೌಳೂರು, ಉಮೇಶ ಮುದ್ನಾಳ, ಸುಭಾಷ ನಾಯಕ, ಹಣಮಂತ ದುಗನೂರ, ಚಂದ್ರಪ್ಪ ನಾಯ್ಕಲ್, ಕುಮಾರ ಬಳಿಚಕ್ರ, ಶಿವಪ್ಪ ಬಂದಳ್ಳಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT