ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಘಟಕ ಸ್ಥಾಪನೆ ಮರೆತ ಸರ್ಕಾರ

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಸಮೀಪ ರಾಜ್ಯ ಹೆದ್ದಾರಿ 13ರ ಪಕ್ಕ 2400 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಮೂರು ಶಾಖೋತ್ಪನ್ನ ವಿದ್ಯುತ್ ಘಟಕಗಳನ್ನು ಸ್ಥಾಪನೆ ಮಾಡಲು ಆರಂಭದಲ್ಲಿ ಭಾರಿ ಹುಮ್ಮಸ್ಸು ತೋರಿದ್ದ ರಾಜ್ಯ ಸರ್ಕಾರ  ಈಗ ಮರೆತೇ ಬಿಟ್ಟಿದೆ.

ಅದ್ದೂರಿಯಾಗಿ ಶಂಕುಸ್ಥಾಪನೆ ಸಮಾರಂಭ ನಡೆಸಿ, ನಿವೇಶನದ ಸುತ್ತ ಕಾಂಪೌಂಡ್ ಕಟ್ಟಿದ್ದು ಬಿಟ್ಟರೆ ಎರಡೂವರೆ ವರ್ಷಗಳಿಂದ ಬೇರೆ ಯಾವ ರೀತಿ ಕಾಮಗಾರಿಗಳೂ ಅಲ್ಲಿ ನಡೆದಿಲ್ಲ.

ಆರ್‌ಟಿಪಿಎಸ್‌ನಲ್ಲಿರುವ 250 ಮೆಗಾವಾಟ್ ವಿದ್ಯುತ್ ಸಾಮರ್ಥ್ಯದ 8ನೇ ಘಟಕವೇ ತಾಂತ್ರಿಕ ಅಡಚಣೆಯಿಂದ ಈವರೆಗೆ ವಿದ್ಯುತ್ ಉತ್ಪಾದನೆ ಆರಂಭಿಸದೆ ಇರುವುದು ಮತ್ತು 550 ಮೆಗಾವಾಟ್ ಉತ್ಪಾದನೆ ಸಾಮರ್ಥ್ಯದ ಬಳ್ಳಾರಿಯ ಶಾಖೋತ್ಪನ್ನ ವಿದ್ಯುತ್ ಘಟಕವೂ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡದಿರುವುದು ಕರ್ನಾಟಕ ವಿದ್ಯುತ್ ನಿಗಮಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಹೊಸ ಮೂರು ಘಟಕಗಳ ಸ್ಥಾಪನೆ ಬಗೆಗಿನ ನಿರ್ಲಕ್ಷ್ಯಕ್ಕೆ ಇದು ಕೂಡಾ ಕಾರಣವಾಗಿರಬಹುದು ಎಂದು ಆರ್‌ಟಿಪಿಎಸ್ ತಜ್ಞರು ಹೇಳು ತ್ತಾರೆ.

ಮೂರು ಹೊಸ ಘಟಕ: ಆರ್‌ಟಿಪಿಎಸ್ ಹತ್ತಿರ ಯರಮರಸ್ ಸಮೀಪ ಕೆಪಿಸಿಎಲ್- ಬಿಎಚ್‌ಇಎಲ್ ಸಹಭಾಗಿತ್ವದಲ್ಲಿ ರಾಯಚೂರು ವಿದ್ಯುತ್ ನಿಗಮದ ಮೂಲಕ ತಲಾ 800 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಎರಡು ಘಟಕಗಳು ಹಾಗೂ ಯದ್ಲಾಪುರ ಹತ್ತಿರ 800 ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಒಂದು ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರ 2009ರಲ್ಲಿ ಶಂಕುಸ್ಥಾಪನೆ ನೆರವೇರಿಸಿತ್ತು.

ಈ ಎರಡು ಘಟಕಗಳ ಅಂದಾಜು ವೆಚ್ಚ 8,806 ಕೋಟಿ ರೂಪಾಯಿ. ತಲಾ 800 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಈ ಎರಡು ಘಟಕಗಳು ವರ್ಷಕ್ಕೆ 11,213 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿವೆ.

ಇನ್ನು 800 ಮೆಗಾವಾಟ್ ಸಾಮರ್ಥ್ಯದ ಮತ್ತೊಂದು ಘಟಕವಾದ ಯದ್ಲಾಪುರ ಘಟಕದ ನಿರ್ಮಾಣಕ್ಕೆ ಸರ್ಕಾರ ನಿಗದಿಪಡಿಸಿರುವ ವೆಚ್ಚ 4,487 ಕೋಟಿ ರೂಪಾಯಿ. ವರ್ಷಕ್ಕೆ 5,606 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿರುವ ಇದು 2013ರಲ್ಲಿಯೇ ಪೂರ್ಣಗೊಳ್ಳಬೇಕು.
 
2013ರ ವೇಳೆಗೆ ವಿದ್ಯುತ್ ಉತ್ಪಾದನೆ ಆರಂಭಿಸಿದರೆ ಆರ್‌ಟಿಪಿಎಸ್‌ನ 8 ಘಟಕಗಳೂ  ಸೇರಿದಂತೆ 4,120 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗುತ್ತದೆ. ಇದರಿಂದ ರಾಜ್ಯದ ವಿದ್ಯುತ್ ಕೊರತೆ ನೀಗಲಿದೆ ಎಂಬುದು ಕರ್ನಾಟಕ ವಿದ್ಯುತ್ ನಿಗಮದ ನಿರೀಕ್ಷೆ.

ಆದರೆ, ಈ ನಿರೀಕ್ಷೆ ಸಾಕಾರಗೊಳ್ಳಲು ಅಗತ್ಯವಾದ ಪ್ರಯತ್ನಗಳು ರಾಜ್ಯ ಸರ್ಕಾರದಿಂದ ನಡೆಯುತ್ತಿಲ್ಲ. ಈ ಹೊಸ ಮೂರು ಘಟಕಗಳ ಸ್ಥಾಪನೆಗೆ ಜಿಲ್ಲೆಯ ಕೆಲ   

ಪರಿಸರ ರಕ್ಷಣಾ ಸಂಘಟನೆಗಳ ವಿರೋಧ ಕೂಡಾ ಇದೆ.`ಒಂದೇ ಜಿಲ್ಲೆಯಲ್ಲಿ ಥರ್ಮಲ್ ಘಟಕಗಳನ್ನು ಸ್ಥಾಪನೆ ಮಾಡುವ ಸರ್ಕಾರದ ಉದ್ದೇಶ ಸರಿಯಲ್ಲ. ಬದಲಾಗಿ ಜಿಲ್ಲೆಯ ಜನತೆಗೆ ಉದ್ಯೋಗ ಕಲ್ಪಿಸುವ  ಬೇರೆ ಕೈಗಾರಿಕೆಗಳನ್ನು ಸ್ಥಾಪಿಸಬೇಕು~ ಎನ್ನುವುದು ಸ್ಥಳೀಯರ ಒತ್ತಾಯ.

ಹೊಸ ಘಟಕ ಪೂರ್ಣಗೊಳಿಸಲು ಸರ್ಕಾರವೇ ನಿಗದಿಪಡಿಸಿದ ವರ್ಷ 2013. ಅಂದರೆ ಉಳಿದಿರುವುದು ಒಂದುವರೆ ವರ್ಷ ಮಾತ್ರ. ಸದ್ಯದ ಸ್ಥಿತಿ ಗಮನಿಸಿದರೆ ಈ ಯೋಜನೆಗಳು ನಿರ್ದಿಷ್ಟ ಅವಧಿಯಲ್ಲಿ ಸಾಕಾರಗೊಳ್ಳುವುದು ಕನಸಿನ ಮಾತು. ತುರ್ತಾಗಿ ಈ ಘಟಕಗಳ ಸ್ಥಾಪನೆಗೆ ಒತ್ತು ಕೊಡಬೇಕಾದ ರಾಜ್ಯ ಸರ್ಕಾರವು, ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಗೆ ನೂರಾರು ಕೋಟಿ ಹಣ ಸುರಿಯುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT