ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸತೋಟ ಗ್ರಾಮ ಸಹಜ ಸ್ಥಿತಿಗೆ

Last Updated 5 ಫೆಬ್ರುವರಿ 2011, 8:40 IST
ಅಕ್ಷರ ಗಾತ್ರ

ಸೋಮವಾರಪೇಟೆ: ಇಲ್ಲಿಗೆ ಸಮೀಪದ ಹೊಸತೋಟ ಗ್ರಾಮದ ಜಂಕ್ಷನ್‌ನಲ್ಲಿ ಅಳವಡಿಸಿದ್ದ ಭಗವಾ ಧ್ವಜವನ್ನು ಕಿಡಿಗೇಡಿಗಳು ಕಿತ್ತಸೆದ ಘಟನೆ ಗುರುವಾರ ತಡ ರಾತ್ರಿ ನಡೆದಿದೆ. ಇದರಿಂದ ಶುಕ್ರವಾರ ಹೊಸತೋಟದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಕಂಡು ಬಂದಿತ್ತು. ಈ ಪ್ರಕರಣವನ್ನು ಬೇಧಿಸಲು ಪೊಲೀಸರು ಶ್ವಾನದಳದೊಳದೊಂದಿಗೆ ಆಗಮಿಸಿ ತನಿಖೆ ಪ್ರಾರಂಭಿಸಿದ್ದಾರೆ.

ಸದಾ ಸುದ್ದಿಯಲ್ಲಿರುವ ಹೊಸತೋಟ ಗ್ರಾಮದಲ್ಲಿ 2008ರಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಅಂದು  ಕೂಡ ಹಿಂದೂಪರ ಸಂಘಟನೆಗಳು ಗ್ರಾಮದಲ್ಲಿ ರಸ್ತೆತಡೆ, ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಭಗವಾ ಧ್ವಜ ಕಾಣೆಯಾಗಿರುವ ಬಗ್ಗೆ ಶುಕ್ರವಾರ ಬೆಳಿಗ್ಗೆ ಹೊಸತೋಟ ಗ್ರಾಮದ ಯೋಗಾನಂದ ಮಾಹಿತಿ  ನೀಡಿದ್ದರು. ಸುದ್ದಿ ಕ್ಷಣಾರ್ಧದಲ್ಲಿ ಹರಡುತ್ತಿದ್ದಂತೆಯೇ ಅಪಾರ ಸಂಖ್ಯೆಯ ಹಿಂದೂಪರ ಸಂಘಟನೆಗಳ  ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಗ್ರಾಮದಲ್ಲಿ ಉದ್ವಿಗ್ನ  ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಸಕಾಲದಲ್ಲಿ ಪೊಲೀಸ್ ಅಧಿಕಾರಿಗಳ ದಂಡು ಜಿಲ್ಲಾ ಮೀಸಲು ಪಡೆ ಹಾಗೂ  ಶ್ವಾನದಳದೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಿದರು.

ಈ ನಡುವೆ, ಭಗವಾ ಧ್ವಜ ಹರಿದ ಸ್ಥಿತಿಯಲ್ಲಿ 100 ಮೀಟರ್ ದೂರದ ಕಾಫಿ ತೋಟವೊಂದರಲ್ಲಿ  ಪತ್ತೆಯಾಗಿದೆ. ತೋಟದಲ್ಲಿ ಬಿದ್ದಿದ್ದ ಧ್ವಜದ ಜಾಡು ಹಿಡಿದ ಶ್ವಾನ ‘ಶೌರ್ಯ’ ಬಲಭಾಗದ ಇಳಿಜಾರು ರಸ್ತೆಯಲ್ಲಿ  ಸ್ವಲ್ಪ ದೂರ ಸಾಗಿ, ನಂತರ ಧ್ವಜ ಸ್ತಂಭದ ಬಳಿಯಿರುವ ಕ್ಯಾಂಟೀನ್ ಬಳಿ ಬಂದು ನಿಂತಿತು. ಕ್ಯಾಂಟೀನ್ ಮಾಲೀಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಹೊಸತೋಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಕೆ. ಅಣ್ಣಿಗೇರಿ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಸುಭಾಷ್ ತಿಮ್ಮಯ್ಯ ಮಾತನಾಡಿ, ಕಳೆದ ಮೂರು ವರ್ಷಗಳ ಹಿಂದೆ ಇಂತಹ ಘಟನೆ ನಡೆದಿತ್ತು. ಆದರೆ, ಪೊಲೀಸರ ಕ್ರಮ ತೃಪ್ತಿಕರವಾಗಿರಲಿಲ್ಲ. ಈ ಬಾರಿಯಾದರೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‘ಆರೋಪಿಗಳ ಪತ್ತೆಗೆ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಅಣ್ಣಿಗೇರಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

ಸ್ಥಳದಲ್ಲಿ ಹಿಂದೂಪರ ಸಂಘಟನೆಗಳ ಪ್ರಮುಖರಾದ ಟಿ.ಕೆ. ರಮೇಶ್, ಎನ್.ಎನ್.ದಯಾನಂದ, ಕೃಷ್ಣಕುಮಾರ್, ರತ್ನಕುಮಾರ್, ಮಹೇಶ್ ತಿಮ್ಮಯ್ಯ, ಕಿಬ್ಬೆಟ್ಟ ಶಶಿ, ಐಗೂರು ಪ್ರಕಾಶ್, ಕೆ.ಟಿ. ಪೂವಯ್ಯ ಸೇರಿದಂತೆ ಹಲವರು ಹಾಜರಿದ್ದರು. ಡಿವೈಎಸ್‌ಪಿ ಜಯಪ್ರಕಾಶ್, ಸರ್ಕಲ್ ಇನ್ಸ್‌ಪೆಕ್ಟರ್ ವಿ. ಕೃಷ್ಣಯ್ಯ, ಸಬ್ ಇನ್ಸ್‌ಪೆಕ್ಟರ್‌ಗಳಾದ ಮಹೇಶ್ ಹಾಗೂ ತಿಮ್ಮೇಗೌಡ ಮೊಕ್ಕಾಂ ಹೂಡಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT