ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೌದು...! ಎಂದು ಕೂಗಿ ಹೇಳಿ

Last Updated 28 ಜನವರಿ 2011, 18:30 IST
ಅಕ್ಷರ ಗಾತ್ರ

ಯಾರೂ ಸಾಮಾನ್ಯರಲ್ಲ. ಪ್ರತಿಯೊಬ್ಬರು ಅಸಾಮಾನ್ಯರೆ. ನಾವೆಲ್ಲ ಸೀಮಿತ ಜಗತ್ತಿನಲ್ಲಿ ಆಟವಾಡುತ್ತಿರುವ ಅನಂತ ವಿಶ್ವದ ಮಕ್ಕಳು.
ಆದರೆ, ನಮ್ಮ ಅನಂತ ಅಸ್ಮಿತೆಯ ಹೊರತಾಗಿಯೂ ನಾವು ಸಾಮಾನ್ಯವಾದ, ಸಂಕುಚಿತ ಮನೋಭಾವ ತೋರುತ್ತಿರುತ್ತೇವೆ. ಯಾವಾಗಲೂ ಯಾರ ಕುರಿತಾದರೂ ದೂರುವುದು. ತಪ್ಪು ಹುಡುಕುವುದು. ಬೇರೆಯವರ ಮೇಲೆ ಮೇಲುಗೈ ಸಾಧಿಸಲು ಅಪ್ರಸ್ತುತವಾದ ಹಳೆಯ ವಿಚಾರಗಳನ್ನು ಕೆದಕುವುದು. ಸ್ವಾರ್ಥ, ಅಸೂಯೆಯಲ್ಲಿ ಮುಳುಗಿಹೋಗುತ್ತೇವೆ.

ಹೌದು, ಪರವಾಗಿಲ್ಲ ಎಂದು ಹೇಳುವ ಬದಲು ಅಹಂಕಾರದಿಂದ ‘ಇಲ್ಲ’ ಎಂದು ಹೇಳುವಾಗಲೆಲ್ಲ ನಾವು ಮತ್ತಷ್ಟು ಕೆಳಮಟ್ಟಕ್ಕೆ ಇಳಿಯುತ್ತೇವೆ.
ಸ್ವಲ್ಪ ನಿಂತು ಯೋಚಿಸಿ. ನಿಮ್ಮನ್ನು ನೀವು ಸಂತೃಪ್ತಿಪಡಿಸಿಕೊಳ್ಳಲು, ಪೊಳ್ಳು ಅಹಂಕಾರ ತಣಿಸಿಕೊಳ್ಳಲು ‘ಇಲ್ಲ’  ಎಂದು ಹೇಳುತ್ತಿದ್ದೀರಾ.

ಯಾವಾಗಲೂ ತೊಂದರೆ ಕೊಡುವ, ಅಡೆತಡೆ ಒಡ್ಡುವ, ಸಮಸ್ಯೆ ಸೃಷ್ಟಿಸುವ ಮನಸ್ಸು ನಿಮ್ಮದಾಗಿದ್ದಲ್ಲಿ ನೀವು ದುರದೃಷ್ಟವಂತರು. ಎಂಥ ಅಸಂತುಷ್ಟ ಮನಸ್ಸು ನಿಮ್ಮದು. ಬೇರೆಯವರ ರೆಕ್ಕೆ ಕತ್ತರಿಸಿದ್ದು, ತುಳಿದಿದ್ದು ಆ ಕ್ಷಣಕ್ಕೆ ನಿಮಗೆ ಗೆಲುವು ಸಾಧಿಸಿದ ಅನುಭವ ನೀಡಬಹುದು. ಆದರೆ, ಅದೇ ಕ್ಷಣಕ್ಕೆ ನೀವು ನಿಮ್ಮ ಹೃದಯದ ರೆಕ್ಕೆಗಳನ್ನು ಕತ್ತರಿಸಿ ಹಾಕುತ್ತಿರುತ್ತೀರಿ. ಬೇರೆಯವರ ಆಶೋತ್ತರಗಳಿಗೆ ನೀರು ಎರೆಯುವುದು. ಮತ್ತೊಬ್ಬರ ಆತ್ಮವೂ ಖುಷಿಯಿಂದ ಕುಣಿಯುವಂತೆ ಮಾಡುವುದು ಹೃದಯದ ಸಹಜ ಪ್ರಕ್ರಿಯೆ, ಪ್ರತಿಕ್ರಿಯೆ.

ಶ್ರೇಷ್ಠ ಕವಿ ಹಫೀಜ್ ಹೀಗೆ ಹೇಳಿದ್ದಾರೆ. ಅವರೆಂದೂ ಅವರ ತುಟಿಯಿಂದ ‘ಇಲ್ಲ’ ಎಂಬ ಶಬ್ದ ಹೊರಬೀಳಲು ಅವಕಾಶವನ್ನೇ ನೀಡಲಿಲ್ಲವಂತೆ. ಏಕೆಂದರೆ ದೇವರು ಪ್ರತಿ ಗಳಿಗೆಯಲ್ಲೂ ಹೌದು, ಹೌದು, ಹೌದು ಎಂದು ಹೇಳುತ್ತಿರುತ್ತಾನಂತೆ..!

ಅಹಂಕಾರದಿಂದ ಹೊರಡುವ ‘ಇಲ್ಲ’ ಎಂಬ ಪ್ರತಿ ಶಬ್ದವೂ ಸಂಬಂಧವನ್ನು ಮತ್ತೆ ಮತ್ತೆ ಹಾಳುಗೆಡುವುತ್ತಿರುತ್ತದೆ. ನೀನು ಹೀಗೆ ಮಾಡುವಂತಿಲ್ಲ, ನೀನು ಹಾಗೆ ಮಾಡುವಂತಿಲ್ಲ... ಈ ಮಾತುಗಳು ಸಿಟ್ಟು, ಹತಾಶೆ, ಹಳಹಳಿಕೆಯನ್ನು ಮನದೊಳಗೆ ತುಂಬುತ್ತಿರುತ್ತದೆ. ಈ ಭಾವ ಪ್ರತಿ ಜೀವಕೋಶದೊಳಗೂ ದಾಖಲಾಗುತ್ತದೆ. ಋಣಾತ್ಮಕ ಭಾವ ಹೆಚ್ಚಾದಾಗ ಅದು ರೋಗವಾಗಿ ಹೊರಗೆ ಉಕ್ಕುತ್ತದೆ.

ಆಧ್ಯಾತ್ಮಿಕ ಸಾಧಕ ರಾಬರ್ಟ್ ಬ್ರೌನ್ ‘ವಿ ಆರ್ ಎಟರ್ನಲ್’ ಪುಸ್ತಕದಲ್ಲಿ ಹೀಗೆ ಹೇಳುತ್ತಾನೆ. ಋಣಾತ್ಮಕ ಅನುಭವಗಳನ್ನು ಅಡಗಿಸಿಟ್ಟುಕೊಂಡು ಮನದೊಳಗೆ ‘ಟೈಂ ಬಾಂಬ್’ಗೆ ನಾವು ಕಾವು ಕೊಡುತ್ತಿರುತ್ತೇವೆ. ಇದರಿಂದ ಆಗುವ ಪರಿಣಾಮದ ಅರಿವು ಮೂಡಿದಾಗ ನಮಗೆ ನಾವೇ ಶ್ರೇಷ್ಠತೆ, ಮಹತ್ವವನ್ನು ಆರೋಪಿಸಿಕೊಳ್ಳುವ ಪೊಳ್ಳು ಅಹಂಕಾರ ಕರಗಿಹೋಗುತ್ತದೆ. ಈ ಅರಿವು ಅಹಂಕಾರವನ್ನು ತಣಿಸುತ್ತದೆ. ಶುದ್ಧೀಕರಿಸುತ್ತದೆ. ಉದಾರವಾದ, ಘನತೆಯಿಂದ ಕೂಡಿದ ಮನಸ್ಸು ನಮ್ಮದಾಗುತ್ತದೆ.

ಉದಾರತನ ಮತ್ತು ‘ಹೌದು’ ಎಂಬ ಎರಡೂ ಶಬ್ದಗಳು ಒಂದರ ಜತೆ ಒಂದು ಸಾಗುತ್ತವೆ. ಸೃಷ್ಟಿಕಾರ್ಯಕ್ಕೆ ಅಣಿಯಾದಾಗ ಬ್ರಹ್ಮಾಂಡದ ಮೊದಲ ಉಸಿರು ‘ಹೌದು’ ಎಂದಾಗಿತ್ತು. ಸ್ತಬ್ಧತೆಯಿಂದ ಕೂಡಿದ ಶೂನ್ಯದಿಂದ ಹತ್ತು ಸಾವಿರ ವಸ್ತುಗಳನ್ನು ಸೃಷ್ಟಿಸುವಾಗ ದೈವಿಕ ಶಕ್ತಿ ‘ಹೌದು’ ಎಂದು ಹೇಳಿತ್ತು. ದೈವಿಕ ಶಕ್ತಿಯೊಂದು ಸೃಷ್ಟಿಕಾರ್ಯಕ್ಕೆ  ‘ಹೌದು’ ಎಂದು ಹೇಳುವಾಗ ಅನಂತನ ಮಕ್ಕಳಾದ ನಾವು ಅಲ್ಪಾವಧಿಯ ಜೀವನದಲ್ಲಿ ಸಣ್ಣ, ಪುಟ್ಟ ವಿಚಾರಗಳಿಗೆ  ‘ಹೌದು’ ಎಂದು ಹೇಳಲಾಗದೇ ?

ಈ ಕಥೆಯನ್ನು ಓದಿ...
ಕುಖ್ಯಾತ ದರೋಡೆಕೋರನೊಬ್ಬ ಅಪಘಾತದಲ್ಲಿ ಮೃತಪಟ್ಟ. ನರಕದ ಅಂಧಕಾರ ತುಂಬಿದ ಹೊಂಡದಲ್ಲಿ ಆತ ಬಿದ್ದ. ಸ್ವಲ್ಪಹೊತ್ತಿನಲ್ಲೇ ಬುದ್ಧನ ಚಿನ್ನದ ಪ್ರಭಾವಳಿ ಆತನ ಕಣ್ಣು ಚುಚ್ಚಿತು. ಬುದ್ಧನ ಕರುಣೆಯ ಕಿರಣ ವಿಶ್ವದ ಎಲ್ಲ ಮೂಲೆಗಳನ್ನು ತೋಯಿಸುತ್ತದೆ ಎಂದು ಹೇಳಲಾಗುತ್ತದೆ.

ಬೆಳಕಿನ ಜಗತ್ತಿನಲ್ಲಿ ಮೇಲೇರಲು ನನಗೆ ಅವಕಾಶ ನೀಡು ಎಂದು ಆ ದರೋಡೆಕೋರ ಬುದ್ಧನಲ್ಲಿ ಮೊರೆಯಿಟ್ಟ. ಭೂಮಿಯಲ್ಲಿ ಮಾಡಿದ ಒಂದಾದರೂ ಒಳ್ಳೆಯ ಕೆಲಸ ನಿನಗೆ ನೆನಪಿದೆಯೇ ಎಂದು ಬುದ್ಧ ಪ್ರಶ್ನಿಸಿದ.

ಕೆಲ ಕಾಲ ಯೋಚಿಸಿ ದರೋಡೆಕೋರ ಉತ್ತರಿಸಿದ. ‘ನಾನೊಮ್ಮೆ ಕಾಡಿನ ದಾರಿಯಲ್ಲಿ ಪಯಣಿಸುತ್ತಿದ್ದೆ. ಅಕಸ್ಮಾತ್ತಾಗಿ ಜೇಡದ ಮೇಲೆ ಕಾಲಿಡುತ್ತಿದ್ದೆ. ಆದರೆ, ಕೂಡಲೇ ನಿಂತೆ. ಆ ಜೇಡ ಮತ್ಯಾರ ಕಾಲಿಗೂ ಸಿಕ್ಕಿ ಸಾಯದಂತೆ ಅದನ್ನು ದಾರಿಯ ಪಕ್ಕದ ಕಾಡಿನೊಳಗೆ ಬಿಟ್ಟೆ.’
ಕೂಡಲೇ ಬುದ್ಧ ಕಣ್ಮರೆಯಾದ. ಬೆಳ್ಳಿಯಂತೆ ಹೊಳೆಯುವ ದಾರವೊಂದು ಹೊಂಡದೊಳಗೆ ಇಳಿದುಬಂತು.
 
ಆತನಿಗೆ ಆಶ್ಚರ್ಯವಾಗುವಂತೆ ಜೇಡ ಆ ಎಳೆಯನ್ನು ಹೆಣೆಯುತ್ತಿತ್ತು. ದಾರ ಗಟ್ಟಿ ಇದೆಯೇ ಎಂದು ನೋಡಲು ಆತ ಎಳೆದ. ಅದು ತುಂಡರಿಸಲೇ ಇಲ್ಲ. ಕೂಡಲೇ ಆ ಎಳೆಯನ್ನು ಏಣಿಯಂತೆ ಹಿಡಿದುಕೊಂಡು ಆತ ಮೇಲೇರತೊಡಗಿದ. ಇನ್ನೇನು ಬೆಳಕಿನ ಜಗತ್ತು ತಲುಪಲು ಒಂದೇ ಹೆಜ್ಜೆ ಉಳಿದಿತ್ತು. ಆತ ಒಂದು ಕ್ಷಣ ಕೆಳಗೆ ನೋಡಿದ. ಹೊಂಡದೊಳಗೆ ಇದ್ದವರೆಲ್ಲ ಇದೇ ಎಳೆ ಹಿಡಿದುಕೊಂಡು ಮೇಲೆ ಬರುತ್ತಿದ್ದರು. ವಿಚಿತ್ರವೆಂದರೆ ಆ ಎಳೆ ಎಲ್ಲರೂ ಹಿಡಿದುಕೊಂಡರೂ ತುಂಡರಿಸದಷ್ಟು ಗಟ್ಟಿಯಾಗಿತ್ತು. ಅದೇಕೋ ಸ್ವಾರ್ಥ ಭಾವ ಆತನಲ್ಲಿ ಹೆಡೆಯೆತ್ತಿತು. ಆತ ಕೂಡಲೇ ಕೂಗಿದ. ‘ಎಲ್ಲರೂ ಇಳಿಯಿರಿ. ಇದು ನನ್ನ ದಾರ’... ಕೂಡಲೇ ಎಳೆ ತುಂಡರಿಸಿತು. ಧಡ್ ಎಂಬ ಶಬ್ದದೊಂದಿಗೆ ಆತ ಮತ್ತೆ ಅಂಧಕಾರದ ಹೊಂಡದೊಳಗೆ ಬಿದ್ದ.

‘ಇಲ್ಲ’ ಎಂಬ ಅಹಂಕಾರದ ಉತ್ತರ ನಿಮ್ಮನ್ನು ಸಾಮಾನ್ಯ ಜೀವನಕ್ಕೆ ಮಿತಿಗೊಳಿಸುತ್ತದೆ. ಸಂತಸ, ಸೌಂದರ್ಯವನ್ನು ಅರಳಿಸುವ ದೈವಿಕ ಶಕ್ತಿಯ ‘ಹೌದು’ ಎಂಬ ಉತ್ತರದಿಂದ ನೀವು ಪಾಠ ಕಲಿಯಬಹುದು. ‘ಹೌದು’ ಎಂಬ ಉತ್ತರ ನೀಡಿದಾಗ ನಿಮ್ಮಲ್ಲಿ ಹಾಗೂ ನಿಮ್ಮ ಸುತ್ತಲಿನ ಜನರಲ್ಲಿ ಮೂಡುವ ಸಂತಸ ಹಾಗೂ ಸಂಭ್ರಮ ಗಮನಿಸಿ. ಅನಂತ ಬೆಳಕಿನ ಕೂಸಾದ ನೀವು ಉನ್ನತ ವಿಚಾರಧಾರೆಯಿಂದ ಕಂಪಿಸುತ್ತಿರಬೇಕು. ಅದು ನಿಮ್ಮನ್ನು ಮತ್ತಷ್ಟು ಎತ್ತರಕ್ಕೆ ಏರಿಸುತ್ತದೆ. ನಿಮ್ಮ ಅಹಂಕಾರವನ್ನು ತೊಡೆದು ಸಾವಿರ ಸಲ ‘ಹೌದು’ ಎಂದು ಸಂತಸದಿಂದ ಕೂಗಿ ಹೇಳಿ. ನಿಮ್ಮನ್ನು ಮತ್ತು ನಿಮ್ಮ ಸುತ್ತಲೂ ಇರುವವರನ್ನು ಹಂತ, ಹಂತವಾಗಿ ಮೇಲಕ್ಕೆ ಎತ್ತಿ. ಅಲ್ಪಾವಧಿಯ ಜಗತ್ತಿನಲ್ಲಿ ಅನಂತ ಹೃದಯವೊಂದು ದೇವತೆಗಳ ಹಾಡು ಹಾಡುವುದಕ್ಕಿಂತ ಅದ್ಭುತವಾದುದ್ದು ಮತ್ಯಾವುದಿದೆ ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT