ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಟ್ರಿಕ್‌ ಗೆಲುವಿನತ್ತ ಭಾರತ ಚಿತ್ತ

Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಿಶಾಖಪಟ್ಟಣ (ಪಿಟಿಐ): ಮೊದಲ ಎರಡೂ ಪಂದ್ಯಗಳಲ್ಲಿ ಜಯ ಪಡೆದು ಸರಣಿ ಗೆಲುವಿನ ಮುನ್ನಡೆ ಸಾಧಿಸಿರುವ ಭಾರತ ‘ಎ’ ತಂಡ ಗುರುವಾರ ನಡೆಯಲಿರುವ ನ್ಯೂಜಿಲೆಂಡ್‌ ‘ಎ‘ ಎದುರಿನ ಮೂರನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್‌ ಪಂದ್ಯದಲ್ಲೂ ಗೆಲುವು ಸಾಧಿಸುವ ವಿಶ್ವಾಸ ಹೊಂದಿದೆ.

ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ ಉನ್ಮುಕ್ತ್ ಚಾಂದ್‌ ಸಾರಥ್ಯದ ಭಾರತ ಆರು ವಿಕೆಟ್‌ಗಳ ಜಯ ಸಾಧಿಸಿ 2–0ರಲ್ಲಿ ಸರಣಿ ಗೆಲುವಿನ ಮುನ್ನಡೆ     ಪಡೆದಿತ್ತು. ಆದ್ದರಿಂದ ಮೂರನೇ ಪಂದ್ಯ ಮಹತ್ವ ಕಳೆದುಕೊಂಡಿದೆ. ಕೊನೆಯ ಪಂದ್ಯದಲ್ಲಿಯಾದರೂ ಗೆಲುವು ಸಾಧಿಸಿ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಬೇಕು ಎನ್ನುವ ಲೆಕ್ಕಾಚಾರ ಪ್ರವಾಸಿ ತಂಡದ್ದಾಗಿದೆ. ಆದರೆ, ಆತಿಥೇಯರು ಸರಣಿ ‘ವೈಟ್‌ ವಾಷ್‌’ ಮೇಲೆ ಕಣ್ಣು ಇಟ್ಟಿದ್ದಾರೆ.

ಮೊದಲ ಪಂದ್ಯದಲ್ಲಿ ಕರ್ನಾಟಕದ ರಾಬಿನ್‌ ಉತ್ತಪ್ಪ ಶತಕ ಗಳಿಸಿದ್ದರು. ನಾಯಕ ಚಾಂದ್‌ ಮೊದಲೆರೆಡೂ ಪಂದ್ಯಗಳಲ್ಲಿ ಕ್ರಮವಾಗಿ 94 ಮತ್ತು 59 ರನ್‌ ಗಳಿಸಿ ಉತ್ತಮ ಲಯದಲ್ಲಿದ್ದಾರೆ.

19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದ ದೆಹಲಿ ಬ್ಯಾಟ್ಸ್‌ಮನ್‌ ಚಾಂದ್‌ ನ್ಯೂಜಿಲೆಂಡ್‌ ‘ಎ’ ಎದುರಿನ ಎರಡೂ ಟೆಸ್ಟ್ ್ ಪಂದ್ಯಗಳಲ್ಲಿ ವಿಫಲರಾಗಿದ್ದರು. ಆದರೆ, ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.

ವೆಸ್ಟ್‌ ಇಂಡೀಸ್‌ ಮತ್ತು ದಕ್ಷಿಣ ಆಫ್ರಿಕಾ ಎದುರು ನಡೆಯಲಿರುವ ಕ್ರಿಕೆಟ್‌ ಸರಣಿಯಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಲು ಭಾರತದ ಆಟಗಾರರು ಉತ್ತಮ ಪ್ರದರ್ಶನ ತೋರುವುದು ಅಗತ್ಯವಿದೆ. ಕಿವೀಸ್‌ ‘ಎ’ ಎದುರಿನ ಸರಣಿ ಇದಕ್ಕೆ ವೇದಿಕೆಯಾಗಿದೆ.

ಮೊದಲ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು. ಎರಡನೇ ಪಂದ್ಯದಲ್ಲಿ ಮನ್‌ದೀಪ್‌ ಸಿಂಗ್‌, ಅಶೋಕ್‌ ಮನಾರಿಯಾ, ಮಹಾರಾಷ್ಟ್ರದ ಕೇದಾರ್‌ ಜಾಧವ್‌ ಉಪಯುಕ್ತ ಆಟವಾಡಿದ್ದರು. ಮನಾರಿಯಾ ಐದು ವಿಕೆಟ್‌ ಉರುಳಿಸಿದ್ದರು. ಈ ಆಟಗಾರರು ಕೊನೆಯ ಪಂದ್ಯದಲ್ಲೂ ಹಿಂದಿನ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT