ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂತಿಮ ನಿರ್ಧಾರ ಕೇಂದ್ರ ಸರ್ಕಾರದ್ದು’

ಚತುಷ್ಪಥ: ಅಹವಾಲು ಸ್ವೀಕಾರ
Last Updated 10 ಜನವರಿ 2014, 8:04 IST
ಅಕ್ಷರ ಗಾತ್ರ

ಕಾರವಾರ: ‘ಚತುಷ್ಪಥ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದು, ಹೆಚ್ಚಿನ ಜನರು ಈಗಿನ ಹೆದ್ದಾರಿ ವಿಸ್ತರಣೆ ಮಾಡುವ ಬದಲು ಬೈಪಾಸ್‌ಗೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಹಕ್ಕು ತಮಗಿಲ್ಲ. ಕೇಂದ್ರ ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

ರಾಷ್ಟ್ರೀಯ ಹೆದ್ದಾರಿ–17 ವಿಸ್ತರಣೆ ಯೋಜನೆಗೆ ಸಂಬಂಧಿಸಿದಂತೆ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಚತುಷ್ಪಥ ಬೇಕು. ಕೆಲವು ಕಡೆ ಬೈಪಾಸ್‌ ಬೇಕು ಎಂದು ಒತ್ತಡವಿದ್ದರೆ, ಕೆಲವು ಕಡೆ ಈಗಿನ ರಾಷ್ಟ್ರೀಯ ಹೆದ್ದಾರಿಯಲ್ಲೇ ಚತುಷ್ಪಥ ನಿರ್ಮಾಣ ಮಾಡಿ ಎನ್ನುವ ಬೇಡಿಕೆ ಬಂದಿದೆ. ಬೈಪಾಸ್ ನಿರ್ಮಿಸಬೇಕೇ ಅಥವಾ ರಸ್ತೆಯನ್ನು 40 ಮೀ. ಅಥವಾ 30 ಮೀ. ವಿಸ್ತರಿಸಬೇಕೆ ಎನ್ನುವ ಆಯ್ಕೆ ಜನರ ಮುಂದಿದೆ’ ಎಂದರು.

ಅಭಿಪ್ರಾಯ ಸಂಗ್ರಹ: ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರ ತಾಲ್ಲೂಕಿನ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಸಚಿವರು, ಈಗಿನ ರಾಷ್ಟ್ರೀಯ ಹೆದ್ದಾರಿಯನ್ನೇ ವಿಸ್ತರಣೆ ಮಾಡಿದರೆ ಅದರಿಂದ ಆಗುವ ಕಷ್ಟ– -ನಷ್ಟಗಳ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ವಿರೋಧಿ ಸಮಿತಿಯ ಕೆ. ಆರ್. ದೇಸಾಯಿ, ‘ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಯನ್ನೇ ವಿಸ್ತರಣೆ ಮಾಡಿದರೆ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ತಮ್ಮ ಆಸ್ತಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಹೆದ್ದಾರಿ ಪಕ್ಕದಲ್ಲೇ ಸಾಕಷ್ಟು ಮನೆಗಳಿವೆ. ಯೋಜನೆಗಾಗಿ ಅವುಗಳನ್ನು ತೆಗೆದರೆ ಜನರು ತಮ್ಮ ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾಗಬೇಕಾಗುತ್ತದೆ’ ಎಂದರು.

‘ಸೀಬರ್ಡ್‌ ಯೋಜನೆಗಾಗಿ ಈಗಾಗಲೇ ಕಾರವಾರ– -ಅಂಕೋಲಾ ಭಾಗದಲ್ಲಿ ಸಾಕಷ್ಟು ಮಂದಿ ತಮ್ಮ ಜಮೀನುಗಳನ್ನು ಕಳೆದುಕೊಂಡಿದ್ದಾರೆ. ಚತುಷ್ಪಥ ಯೋಜನೆಯಿಂದ ಇದೇ ಜನ ಮತ್ತೆ ನಿರಾಶ್ರಿತರಾಗುತ್ತಾರೆ. ಇದರಿಂದಾಗಿ ರಸ್ತೆಯನ್ನು ಬೈಪಾಸ್ ಮೂಲಕ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

‘ಹೊನ್ನಾವರದ ಮಾಜಿ ಶಾಸಕ ಎಂ.ಪಿ. ಕರ್ಕಿ, ಕುಮಟಾದ ಅರವಿಂದ ಶಾನಭಾಗ ಮಾತನಾಡಿ, ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ವರದಿಗಳನ್ನು ನೀಡುತ್ತಿದ್ದಾರೆ. ಒಂದು ವೇಳೆ ಬೈಪಾಸ್ ನಿರ್ಮಾಣವಾಗದಿದ್ದರೆ ದೇವಸ್ಥಾನ, ಸಾವಿರಾರು ಮನೆಗಳು ನೆಲಸಮವಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಚತುಷ್ಪಥವನ್ನು ಬೈಪಾಸ್ ಮೂಲಕವೇ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

ಪ್ರೀತಮ್ ಮಾಸೂರಕರ್ ಮಾತನಾಡಿ, ‘ಕಾರವಾರದ ಹೈದರ್‌ಘಾಟ್‌ ರಸ್ತೆಯ ಮೂಲಕ ಬೈಪಾಸ್ ಮಾಡಬೇಕು’ ಎಂದು ಆಗ್ರಹಿಸಿದಾಗ ಶಿರವಾಡ ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದರು.

ಕರುನಾಡ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎನ್. ದತ್ತಾ ಮಾತನಾಡಿ, ಅಭಿವೃದ್ಧಿ ದೃಷ್ಟಿಯಿಂದ ರಸ್ತೆಯನ್ನು ಈಗಿನ ಹೆದ್ದಾರಿಯಲ್ಲೇ ಚತುಷ್ಪಥವನ್ನು ನಿರ್ಮಾಣವಾಗಬೇಕು. ಹೆಚ್ಚಿನ ಜನವಸತಿ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಕಡಿಮೆ ಮಾಡುವುದರಿಂದ ಆಗುವ ಹೆಚ್ಚಿನ ನಷ್ಟವನ್ನು ತಪ್ಪಿಸಬಹುದು. ನಗರದಲ್ಲಿ ಕಡಲ ತೀರಕ್ಕೆ ನಷ್ಟವಾಗದ ರೀತಿಯಲ್ಲಿ ಲಂಡನ್ ಸೇತುವೆಯಿಂದ ಕೋಡಿಬಾಗದವರೆಗೆ ಫ್ಲೈ ಓವರ್ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಯೋಜನಾ ನಿರ್ದೇಶಕರಾದ ಎ.ಕೆ. ಮಾಥೂರ್, ಶ್ರೀರಾಮ್ ಮಿಶ್ರಾ, ಶಾಸಕರಾದ ಮಂಕಾಳು ವೈದ್ಯ, ಶಾರದಾ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಪ್ರಸಾದ ಮನೋಹರ್‌, ಹೆಚ್ಚುವರಿ ಜಿಲ್ಲಾಕಾರಿ ವಿಜಯ ಮಹಾಂತೇಶ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT