ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಪ್ಪಟ ಗಾಂಧಿವಾದಿ’ಗೆ ಭಾರತದ ಗಾಢನಂಟು

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್‌ (ಪಿಟಿಐ): ‘ದಕ್ಷಿಣ ಆಫ್ರಿಕಾದ ಗಾಂಧಿ’ ಎಂದೇ ಮನೆ ಮಾತಾಗಿದ್ದ ನೆಲ್ಸನ್‌ ಮಂಡೇಲಾ ಅವರಿಗೆ ಭಾರತದೊಂದಿಗೆ ಗಾಢವಾದ ನಂಟು ಬೆಸೆದುಕೊಂಡಿತ್ತು. ಭಾರತದ ಸ್ವಾತಂತ್ರ್ಯ ರೂವಾರಿ ಮಹಾತ್ಮ ಗಾಂಧಿ ಹಾಗೂ ಮಂಡೇಲಾ ಅವರ ವ್ಯಕ್ತಿತ್ವ ಗಳಲ್ಲಿ ಹಲವಾರು ಸಾಮ್ಯತೆ­ಗಳಿದ್ದುದೂ ಸೇರಿದಂತೆ ಆ ರಾಷ್ಟ್ರದೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದರು.

ಗಾಂಧಿ ಅವರನ್ನೇ ತಮ್ಮ ‘ರಾಜಕೀಯ ಗುರು’ ಹಾಗೂ ‘ಆದರ್ಶ ಪುರುಷ’ ಎಂದುಕೊಂಡಿದ್ದ ಮಂಡೇಲಾ 27 ವರ್ಷಗಳ ಸೆರೆವಾಸದಿಂದ 1990ರಲ್ಲಿ ಬಿಡುಗಡೆಯಾದ ನಂತರ ಮೊತ್ತಮೊದಲ ವಿದೇಶಿ ಭೇಟಿಗೆ ಆಯ್ಕೆ ಮಾಡಿಕೊಂಡದ್ದು ತಮ್ಮ ನೆಚ್ಚಿನ ಭಾರತವನ್ನೇ. ಮಂಡೇಲಾ ಜೈಲಿನಿಂದ ಬಿಡುಗಡೆ­ಯಾದ ನಂತರ ಭಾರತವು ಅವರನ್ನು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ನೀಡಿ ಪುರಸ್ಕರಿಸಿತು.

ಈ ಮೂಲಕ, ಮಂಡೇಲಾ ಅವರಿಗೆ 1993ರಲ್ಲಿ ನೊಬೆಲ್‌ ಶಾಂತಿ ಪ್ರಶಸ್ತಿ ನೀಡುವುದಕ್ಕೆ ಮುನ್ನವೇ ಭಾರತ ಅವರ ಸಾಧನೆಯನ್ನು ಗೌರವಿಸಿತ್ತು. ಅಲ್ಲದೇ, ಭಾರತವು ವಿದೇಶದ ವ್ಯಕ್ತಿಯೊಬ್ಬರನ್ನು ‘ಭಾರತ ರತ್ನ’ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದು ಅದೇ ಮೊದಲು!
ಗಾಂಧಿ ಪ್ರತಿಪಾದಿಸಿದ ‘ಸತ್ಯ ಮತ್ತು ಅಹಿಂಸೆ’ಯನ್ನೇ ತಮ್ಮ ಮಂತ್ರವಾಗಿಸಿ­ಕೊಂಡಿದ್ದ ಮಂಡೇಲಾ, ಗಾಂಧಿ ಅವರನ್ನು ತಮ್ಮ ತಾಯ್ನಾಡಿನ ಅವಿಭಾಜ್ಯ ಭಾಗವೆಂದೇ ಭಾವಿಸಿದ್ದರು.

‘ಗಾಂಧಿ ನಮ್ಮ ನೆಲದ ಚರಿತ್ರೆಯ ಅವಿಭಾಜ್ಯ ಅಂಗ. ಏಕೆಂದರೆ ಅವರು ತಮ್ಮ ಸತ್ಯದೊಂದಿಗಿನ ಅನ್ವೇಷಣೆ­ಯನ್ನು ಆರಂಭಿಸಿದ್ದು ಇಲ್ಲಿಯೇ. ಅವರು ಸತ್ಯಾಗ್ರಹವನ್ನು ಒಂದು ತತ್ವವಾಗಿ ಹಾಗೂ ಹೋರಾಟದ ವಿಧಾನವಾಗಿ ರೂಪಿಸಿದ್ದು ಈ ನೆಲದಲ್ಲಿಯೇ’ ಎಂದು 1993ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಸ್ಮಾರಕ ಅನಾವರಣಗೊಳಿಸುವ ವೇಳೆ ಮಂಡೇಲಾ ಎದೆತುಂಬಿ ನುಡಿದಿದ್ದರು.

ಮಂಡೇಲಾ ಭಾರತಕ್ಕೆ  ಬಂದಾಗಲೆಲ್ಲಾ ಅದನ್ನು ತಮ್ಮ ರಾಜಕೀಯ ಗುರುವಿನ ನಾಡಿಗೆ ತೀರ್ಥಯಾತ್ರೆ ಎಂದೇ ಭಾವಿಸುತ್ತಿದ್ದರು. ಗಾಂಧಿ ಅವರ ಸ್ವಸಹಾಯ ಪರಿಕಲ್ಪನೆಗಳಿಗೆ ಪ್ರಯೋಗಾರ್ಥ ನೆಲೆಯಾಗಿದ್ದ ಗುಜರಾತ್‌ನ ಅಹಮದಾಬಾದ್‌ ಬಳಿಯ ಗ್ರಾಮಕ್ಕೂ ಅವರು ಒಮ್ಮೆ ಭೇಟಿ ನೀಡಿದ್ದರು.

‘ಗಾಂಧಿ ಅವರ ಮಟ್ಟವನ್ನು ನನ್ನಿಂದ ಮುಟ್ಟಲಾಗದು. ಗಾಂಧಿ ಅವರು ದೌರ್ಬಲ್ಯಗಳಿಲ್ಲದ ವ್ಯಕ್ತಿಯಾಗಿದ್ದರು. ನಾನಾದರೋ ಹಲವು ದೌರ್ಬಲ್ಯಗಳಿರುವ ವ್ಯಕ್ತಿ’ ಎಂದೂ ಒಮ್ಮೆ ವಿನೀತರಾಗಿ ಉದ್ಗರಿಸಿದ್ದರು. ಕಾರಾಗೃಹದಿಂದ ಬಿಡುಗಡೆಯಾದ ನಂತರ ಆಗಾಗ ಭಾರತಕ್ಕೆ ಭೇಟಿ ನೀಡಿದ್ದ ಅವರು, ಇಲ್ಲಿನ ಹಲವು ಗಣ್ಯರನ್ನೂ ತಮ್ಮ ರಾಷ್ಟ್ರಕ್ಕೆ ಬರುವಂತೆ ಆಹ್ವಾನಿಸಿದ್ದರು. ಶಾಂತಿ ಸ್ಥಾಪನೆಗಾಗಿ ಮಂಡೇಲಾ ಅವರು ನಡೆಸಿದ ಹೋರಾಟಕ್ಕಾಗಿ ಭಾರತ ಸರ್ಕಾರವು 2001ರಲ್ಲಿ ಅವರಿಗೆ ಇಂದಿರಾಗಾಂಧಿ ಶಾಂತಿ ಪ್ರಶಸ್ತಿಯನ್ನೂ ಪ್ರದಾನ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT