ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಫ್ರಿಕಾ ಹಳ್ಳಿಗಳಿಗಿಂತ ಕೆಟ್ಟ ಸ್ಥಿತಿಯಲ್ಲಿದೆ ಕ್ಷೇತ್ರ’

Last Updated 7 ಏಪ್ರಿಲ್ 2014, 9:44 IST
ಅಕ್ಷರ ಗಾತ್ರ

ಬಾಗಲಕೋಟೆ: ಸುದೀರ್ಘ ಕಾಲ ಪೊಲೀಸ್‌ ಇಲಾಖೆಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ನಿವೃತ್ತರಾದ ಬಳಿಕ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿರುವ ಶಂಕರ ಬಿದರಿ ತಮ್ಮ ತವರೂರಾದ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ.

ಈಗಾಗಲೇ ಕಾಂಗ್ರೆಸ್‌, ಸಮಾಜವಾದಿ ಪಾರ್ಟಿಯನ್ನು ಸೇರಿ, ಅಷ್ಟೇ ಬೇಗ ಆ ಪಕ್ಷಗಳನ್ನು ತೊರೆದು ಯಾರದೇ ಹಂಗಿ­ಲ್ಲದ ‘ಸರ್ವಜನಶಕ್ತಿ’ ಎಂಬ ಸ್ವಂತ ಪಕ್ಷವನ್ನು ಕಟ್ಟಿ­ಕೊಂಡಿರುವ ಶಂಕರ ಬಿದರಿ ರಾಜಕಾರಣಿಯಾಗಲು ಯತ್ನಿಸುತ್ತಿದ್ದರೂ ಅವರೊಳಗಿನ ಖಾಕಿ ಗತ್ತು ಇಣುಕತ್ತಲೇ ಇದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಬಿದರಿ ಅವರು ಪ್ರಸ್ತುತ ಚುನಾ­ವಣೆಯಲ್ಲಿ ತಮ್ಮ ಪಾತ್ರ ಏನು, ಒಲವು, ನಿಲುವು­ಗಳೇನು ಎಂಬುದನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

*ಬಾಗಲಕೋಟೆ ಕ್ಷೇತ್ರದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕ್ಷೇತ್ರದ ಬಡವರು, ಶ್ರೀಮಂತರು, ದಲಿತರು, ಅಲ್ಪಸಂಖ್ಯಾತರು ವಾಸವಾಗಿರುವ ಪ್ರತಿ ಹಳ್ಳಿ, ಪಟ್ಟಣಗಳನ್ನು ಸುತ್ತಾಡಿದ್ದೇನೆ. ಜಿಲ್ಲೆಯ ಹಳ್ಳಿಗಳ ಸ್ಥಿತಿ ಬಡರಾಷ್ಟ್ರವಾದ ಆಫ್ರಿಕಾದ ಹಳ್ಳಿಗಳಿಗಿಂತ ಹೆಚ್ಚು ಕೆಟ್ಟುಹೋಗಿರುವುದನ್ನು ನೋಡಿದರೆ ಬೇಸರ ಎನಿಸುತ್ತದೆ.
ಕ್ಷೇತ್ರದ ಹಳ್ಳಿಗಳಿಗೆ ಸರಿಯಾದ ರಸ್ತೆಗಳಿಲ್ಲ, ಕೊಳಚೆ ನೀರು ಹರಿಯಲು ಚರಂಡಿಗಳೇ ಇಲ್ಲ, ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದೆ, ಬಯಲು ಶೌಚಾಲಯವೇ ಗತಿಯಾಗಿದೆ, ಹಳ್ಳಿಗಳು ಸಾಂಕ್ರಾಮಿಕ ರೋಗ ಹರಡುವ ತಾಣಗಳಾಗಿವೆ. ರಸ್ತೆಗಳಲ್ಲಿ ಬೈಕ್‌, ಕಾರು ಹೋಗುವುದಿರಲಿ ಮನುಷ್ಯರೇ  ನಡೆದುಕೊಂಡು ಹೋಗಲು ಸಾಧ್ಯವಿಲ್ಲದಂತ ಕೆಟ್ಟ ಸ್ಥಿತಿ ಇದೆ.

60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌, ಬಿಜೆಪಿ ಪಕ್ಷಗಳು ಕ್ಷೇತ್ರದ ಹಳ್ಳಿಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿವೆ. ಬಡವರನ್ನು ಭಿಕ್ಷುಕರನ್ನಾಗಿ, ಶ್ರೀಮಂತರನ್ನು ಬಡವರನ್ನಾಗಿ ಮಾಡುವ ಕೆಲಸ ಎರಡೂ ಪಕ್ಷಗಳು ಮಾಡಿವೆ. ಜನರ ಆಶೀರ್ವಾದದಿಂದ ಸಂಸದ, ಶಾಸಕರಾದವರು ಅಭಿವೃದ್ಧಿಯ ಹೆಸರಿನಲ್ಲಿ ತಮ್ಮ ತಮ್ಮ ಕುಟುಂಬದ ಅಭಿವೃದ್ಧಿ ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ವರ್ಗಾವಣೆ ನೆಪದಲ್ಲಿ ಸರ್ಕಾರಿ ಅಧಿಕಾರಿಗಳನ್ನು ಜನಪ್ರತಿನಿಧಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ. ವರ್ಗಾವಣೆಗೆ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾರೆ. ರಾಜಕಾರಣಿಗಳಿಗೆ ಹಣ ನೀಡಿದ ಅಧಿಕಾರಿಗಳು ಸಾರ್ವಜನಿಕರಿಂದ ಮುಕ್ತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಕೆಟ್ಟ ಹೆಸರು ಸರ್ಕಾರಿ ಅಧಿಕಾರಿಗಳಿಗೆ ಬರುತ್ತಿದೆ. ಸಾರ್ವಜನಿಕರಿಂದ ವಸೂಲಿ ಮಾಡಿದ ಹಣ ರಾಜಕಾರಣಿಗಳ ಪಾಲಾಗುತ್ತಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ರಾಜಕೀಯ ಬದಲಾವಣೆ ಆಗಬೇಕಿದೆ.

* ರಾಜಕೀಯ ಹೊಸದು, ಹೇಗೆನಿಸುತ್ತದೆ?
ರಾಜಕೀಯ ಕ್ಷೇತ್ರ ಕೆಟ್ಟಿದೆ ಎಂದು ಮೊದಲೇ ಗೊತ್ತಿತ್ತು. ಆದರೆ, ಇಷ್ಟೊಂದು ಪ್ರಮಾಣದಲ್ಲಿ ಅಂದರೆ, ಹೊಸದಾಗಿ ಗೆಡಿಸಲು ಏನೂ ಉಳಿಯದಷ್ಟು ರಾಜಕೀಯ ಕೆಟ್ಟು ಹೋಗಿರುವುದು ನೋಡಿ ಭೇಸರವಾಗುತ್ತಿದೆ. ಈ ಕ್ಷೇತ್ರವನ್ನು ಸರಿಪಡಿಸುವುದೇ ನನ್ನ ಉದ್ದೇಶ, ಯಾವುದೇ ಸ್ವಾರ್ಥ, ಅಧಿಕಾರದ ಆಸೆಯಿಂದ ನಾನು ರಾಜಕೀಯಕ್ಕೆ ಬಂದಿಲ್ಲ. ಕಣದಲ್ಲಿರುವ ಇತರೆ ಅಭ್ಯರ್ಥಿಗಳಿಗಿಂತ ನಾನು  ಸಮರ್ಥನಿದ್ದೇನೆ, ಅವಕಾಶ ನೀಡಿದರೆ ಕ್ಷೇತ್ರದ ಜನತೆ ಹೆಮ್ಮೆ ಪಡುವಂತೆ ಕಾರ್ಯನಿರ್ವಹಿಸುತ್ತೇನೆ.

* ಕ್ಷೇತ್ರದ ಜನತೆಗೆ ನೀವು ನೀಡುವ ಭರವಸೆ ಏನು?
ಕ್ಷೇತ್ರದ ಜನತೆ ನನಗೆ ಬಹುಮತ ನೀಡಿ ಆಯ್ಕೆ ಮಾಡಿ­ದರೇ ಆಲಮಟ್ಟಿ ಸಂತ್ರಸ್ತರಿಗೆ ನರ್ಮದಾ ಯೋಜನೆ ಮಾದ­ರಿಯಲ್ಲಿ ಪರಿಹಾರ, ಪುರ್ನವಸತಿ ಕಲ್ಪಿಸುವ ಉದ್ದೇಶವಿದೆ.

ಕಮತಗಿ, ಗುಳೇದಗುಡ್ಡ, ಇಳಕಲ್‌ ಭಾಗದಲ್ಲಿ ಒಂದು ಮತ್ತು ರಬಕವಿ, ಬನಹಟ್ಟಿ ಭಾಗದಲ್ಲಿ ಮತ್ತೊಂದು ಜವಳಿ ಪಾರ್ಕ್‌ ಸ್ಥಾಪಿಸುವ ಉದ್ದೇಶವಿದೆ. ಜಮಖಂಡಿಯಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಗುವುದು, ಬೃಹತ್‌ ಕೈಗಾರಿಕೆಗಳನ್ನು ಸ್ಥಾಪಿಸಿ ಕ್ಷೇತ್ರದ 10 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. 

ಬಾಗಲಕೋಟೆಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಐಐಟಿ ಸ್ಥಾಪಿಸುವ ಗುರಿ ಇದೆ. ಭೂಲೋಕದ ಯಾವೊಂದು ರಾಜ್ಯದಲ್ಲೂ ಇರದಷ್ಟು ಎಚ್‌ಐವಿ ಪೀಡಿತರು ಬಾಗಲಕೋಟೆ ಜಿಲ್ಲೆಯಲ್ಲಿದ್ದು, ಅವರಿಗಾಗಿ ಪ್ರತಿ ತಾಲ್ಲೂಕಿಗೊಂದು ವಿಶೇಷ ಆಸ್ಪತ್ರೆಗಳನ್ನು ಸ್ಥಾಪಿಸುವ ಉದ್ದೇಶವಿದೆ.

*ಪ್ರಚಾರ ಹೇಗೆ ನಡೆದಿದೆ, ಜನರ ಸ್ಪಂದನೆ ಹೇಗಿದೆ?
_ಈಗಾಗಲೇ ಕ್ಷೇತ್ರದ 150ಕ್ಕೂ ಅಧಿಕ ಹಳ್ಳಿಗಳನ್ನು ಸುತ್ತಾಡಿ ಕೈಮುಗಿದು ಮತ ಕೇಳಿದ್ದೇನೆ. ಜನತೆ ಪ್ರೀತಿ, ಗೌರವದಿಂದ ನನಗೆ ಆಶೀರ್ವಾದ ಮಾಡುತ್ತಿದ್ದಾರೆ.  ಬೆಂಗಳೂರು, ದೆಹಲಿ, ತುಮಕೂರು, ಬಳ್ಳಾರಿ, ಮೈಸೂರಿನಿಂದ ನನ್ನ ಪರವಾಗಿ ಸ್ನೇಹಿತರು, ಹಿತೈಷಿಗಳು ಆಗಮಿಸಿ ಪ್ರಚಾರ ನಡೆಸುತ್ತಿದ್ದಾರೆ. ಹೆಂಡತಿ ಉಮಾ ಬಿದರಿಯೂ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.

* ಚುನಾವಣೆಯಲ್ಲಿ ನಿಮ್ಮ ಪ್ರತಿಸರ್ಧಿ ಯಾರು?
ಬಾಗಲಕೋಟೆ ಕ್ಷೇತ್ರದಲ್ಲಿ ನನಗೆ ಸಮಾನವಾದ ಪ್ರತಿಸ್ಪರ್ಧಿಗಳೇ ಕಾಣಿಸುತ್ತಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ಎರಡು ಮತ್ತು ಮೂರನೇ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿರುವವರು ಕಳೆದ 10 ವರ್ಷದಿಂದ ಕ್ಷೇತ್ರದ ಪ್ರತಿನಿಧಿಯಾಗಿದ್ದರು. ಕ್ಷೇತ್ರಕ್ಕೆ ಯಾವೊಂದು ಹೊಸ ಕೊಡುಗೆ ನೀಡಿಲ್ಲ. ಇನ್ನು ಕಾಂಗ್ರೆಸ್‌ ಅಭ್ಯರ್ಥಿ ಒಮ್ಮೆ ಸಂಸದರಾಗಿದ್ದರು ಅಲ್ಲದೇ, ಸಚಿವರೂ ಆಗಿದ್ದರು. ಜಿಲ್ಲೆಗೆ ಇವರಿಬ್ಬರ ಕೊಡಗೆ ಏನೆಂಬುದು ಜನತೆಗೆ ಚೆನ್ನಾಗಿ ತಿಳಿದಿದೆ.

* ನರೇಂದ್ರ ಮೋದಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ದೇಶದ ಇತರೆ ರಾಜಕೀಯ ಪಕ್ಷಗಳನ್ನು, ಮುಖಂಡರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದಾರೆ. ಕಾಂಗ್ರೆಸ್‌ ಭ್ರಷ್ಟ ಇರಬಹುದು ಆದರೆ, ಕಳೆದ ಒಂದು ವರ್ಷದಿಂದ ಶತ,ಶತಕೋಟಿ ಹಣ ಖರ್ಚು ಮಾಡಿ ಚುನಾವಣಾ ಪ್ರವಾರ ನಡೆಸುತ್ತಿರುವ ಮೋದಿ, ಇದುವರೆಗೂ ತಮ್ಮ ವಿದೇಶಾಂಗ ನೀತಿ, ಆರ್ಥಿಕ ನೀತಿ, ಕೈಗಾರಿಕಾ ನೀತಿ, ಸಾಮಾಜಿಕ ನೀತಿ ಏನೆಂದು ಎಲ್ಲಿಯೂ ಮಾತನಾಡುತ್ತಿಲ್ಲ. ಇಂತಹ ಮೋದಿಯನ್ನು ದೇಶದ ಜನತೆ ನಂಬುವುದು ಹೇಗೆ?

* ಕಾಂಗ್ರೆಸ್‌, ಬಿಜೆಪಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕಾಂಗ್ರೆಸ್‌, ಬಿಜೆಪಿ ಒಂದೇ ಬಳ್ಳಿಯ ಎರಡು ಹೂಗಳು. ಅಧಿಕಾರ ಮತ್ತು ಹಣಕ್ಕಾಗಿ ಒಗ್ಗೂಡಿಕೊಂಡಿರುವ ಎರಡು ಪ್ರತ್ಯೇಕ ಗುಂಪುಗಳೇ ಹೊರತು ದೇಶದ ಹಿತಕ್ಕಾಗಿ ರಾಜಕೀಯ ಮಾಡುತ್ತಿಲ್ಲ. ಈ ಎರಡು ಪಕ್ಷಗಳಿಂದ ಸದೃಢ ಭಾರತ ನಿರ್ಮಾಣ ಕನಸಿನ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT