ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರೋಪಿಗಳನ್ನು ಬಂಧಿಸದಿದ್ದರೆ ಉಗ್ರ ಹೋರಾಟ’

Last Updated 11 ಜನವರಿ 2014, 4:59 IST
ಅಕ್ಷರ ಗಾತ್ರ

ಮಡಿಕೇರಿ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಜಾ ಕುಶಾಲಪ್ಪ ಅವರ ಮೇಲೆ ಪಟ್ಟಣದಲ್ಲಿ ಗುರುವಾರ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಕೃತ್ಯವನ್ನು ಖಂಡಿಸಿ, ಬಿಜೆಪಿ ಜಿಲ್ಲಾ ಘಟಕವು ಕರೆ ನೀಡಿದ್ದ ಕೊಡಗು ಜಿಲ್ಲಾ ಬಂದ್‌ ಸಂಪೂರ್ಣ ಯಶಸ್ವಿಯಾಯಿತು. ಜಿಲ್ಲೆ ಎಲ್ಲ ತಾಲ್ಲೂಕು– ಹೋಬಳಿ ಕೇಂದ್ರ ಹಾಗೂ ಗ್ರಾಮೀಣ ಪ್ರದೇಶದಲ್ಲೂ ಬಂದ್‌ ನಡೆಯಿತು. ಆರೋಪಿಗಳನ್ನು ಶೀಘ್ರ ಪತ್ತೆಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ರಸ್ತೆತಡೆ ಚಳವಳಿ ಕೂಡ ನಡೆಸಿದರು.

ವಿರಾಜಪೇಟೆ: ಸುಜಾ ಕುಶಾಲಪ್ಪ ಅವರ ಮೇಲೆ ಪಟ್ಟಣದಲ್ಲಿ ಗುರುವಾರ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಕೃತ್ಯವನ್ನು ಖಂಡಿಸಿ, ಬಿಜೆಪಿ ಜಿಲ್ಲಾ ಘಟಕವು ಕರೆ ನೀಡಿದ್ದ ಬಂದ್‌ನಿಂದಾಗಿ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು.

ಬೆಳಿಗ್ಗೆ 7 ಗಂಟೆಯಿಂದಲೇ ಪಟ್ಟಣದ ಮೂರ್ನಾಡು ರಸ್ತೆ, ತೆಲುಗರ ಬೀದಿ, ದೊಡ್ಡಟ್ಟಿ ಚೌಕಿ, ಮೊಗರ ಗಲ್ಲಿ ಮುಂತಾದ ಕಡೆಗಳಲ್ಲಿ ಬ್ಯಾರಿಕೇಡ್‌ ಹಾಗೂ ವಾಹನಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಬಂದ್‌ ನಡೆಸಲಾಯಿತು. ಪಟ್ಟಣದ ಸಹಕಾರ ಬ್ಯಾಂಕ್‌, ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಸರ್ಕಾರಿ ಕಚೇರಿಗಳು ಕೂಡ ಕಾರ್ಯನಿರ್ವಹಿಸಲಿಲ್ಲ. ವರ್ತಕರು ಸ್ವಯಂ ಪ್ರೇರಿತರಾಗಿ ಶಾಂತಿಯುತವಾಗಿ ಬಂದ್‌ ಮಾಡಿದರು. ನ್ಯಾಯಲಯಗಳು ಕಾರ್ಯಕಲಾಪಗಳಲ್ಲಿ ತೊಡಗಿದ್ದರೂ, ಕಕ್ಷಿದಾರರು ಗೈರುಹಾಜರಾದ್ದರಿಂದ ನ್ಯಾಯಾಲಯದ ಸಭಾಂಗಣ ಬಿಕೊಎನ್ನುತಿತ್ತು. ಬಸ್ಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಈ ಸಂದರ್ಭ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಮೂಕೊಂಡ ಬೋಸ್ ದೇವಯ್ಯ, ‘ದೇಶದ್ರೋಹಿಗಳಿಗೆ ಕೊಡಗಿನಲ್ಲಿ ನೆಲೆ ನೀಡಬಾರದು. ಪೊಲೀಸರು ಕಾನೂನು ಬಾಹಿರ ಶಕ್ತಿಯನ್ನು ಮಟ್ಟಹಾಕುವಲ್ಲಿ ಕಾಳಜಿ ತೋರಿಸಬೇಕು. ಪ್ರಕರಣದ ಆರೋಪಿಗಳನ್ನು 48 ಗಂಟೆಯಲ್ಲಿ ಬಂಧಿಸಿ ಪಟ್ಟಣದಲ್ಲಿ ಅವರನ್ನು ಮೆರವಣಿಗೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿ ತಾಲ್ಲೂಕು ಘಟಕದ ವಕ್ತಾರ ಅಡ್ಡಂಡ ಕಾರ್ಯಪ್ಪ ಮಾತನಾಡಿ, ‘ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಕೋಮು ಗಲಭೆಯ ಭಯ ಇಲ್ಲದೆ ನೆಮ್ಮದಿಯಲ್ಲಿದ್ದೆವು ಎಂದು ಮುಸ್ಲಿಮರೇ ಹೇಳುತ್ತಾರೆ. ಕೊಡಗು ಉಗ್ರಗಾಮಿಗಳ ತಾಣವಾಗಿರುವುದು ಸರ್ಕಾರ ಹಾಗೂ ಇಲಾಖೆಗೆ ತಿಳಿದ ವಿಚಾರವಾಗಿದ್ದರೂ ಗಂಭೀರವಾಗಿ ಪರಿಗಣಿಸಿಲ್ಲ. ಸ್ಥಳಿಯರೆ ಆದ ಗೃಹಸಚಿವರು ಗಮನಿಸಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಜಪ್ಪು ಅಚ್ಚಪ್ಪ  ಮಾತನಾಡಿದರು. ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಬಿ.ಆರ್. ರತ್ನಾಕರ ಶೆಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ರಾಜ್ಯ ಘಟಕದ ಉಪಾಧ್ಯಕ್ಷೆ ರೀನಾ ಪ್ರಕಾಶ್, ಗೋಣಿಕೊಪ್ಪ ಆರ್.ಎಂ.ಸಿ. ಅಧ್ಯಕ್ಷ ಅಚ್ಚಪಂಡ ಮಹೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೆಯಪಂಡ ದೇಚಮ್ಮ, ನಗರ ಘಟಕದ ಅಧ್ಯಕ್ಷ ಟಿ.ಪಿ. ಕೃಷ್ಣ, ಜಿಲ್ಲಾ ಯುವ ಮೋರ್ಚದ ಪ್ರಧಾನ ಕಾರ್ಯದರ್ಶಿ ಸುವಿನ್ ಗಣಪತಿ, ಜಿಲ್ಲಾ ಕಚೇರಿ ಪ್ರಧಾನ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಮುಂತಾದವರು ಭಾಗವಹಿಸಿದ್ದರು.

‘ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ’
ಮಡಿಕೇರಿ: ಸುಜಾ ಕುಶಾಲಪ್ಪ ಅವರ ಮೇಲೆ ಗುಂಡಿನ ದಾಳಿ ನಡೆಸಿದವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಶುಕ್ರವಾರ ಮಡಿಕೇರಿ ನಗರದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ನಡೆಸಲಾಯಿತು.

ಜಿಲ್ಲಾ ಬಿಜೆಪಿ ಕರೆ ನೀಡಿದ್ದ ಬಂದ್‌ ಹಿನ್ನೆಲೆಯಲ್ಲಿ ನಗರದ ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು
ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ನಿರ್ಮಿಸಿದ್ದ ಪ್ರಮುಖರ ಹೆಸರಿನ ದ್ವಾರಗಳನ್ನೇ ರಸ್ತೆಗೆ ಅಡ್ಡಲಾಗಿಟ್ಟು ರಸ್ತೆತಡೆ ನಡೆಸಿದರು.

ರಸ್ತೆತಡೆ ಪ್ರತಿಭಟನೆಯಲ್ಲಿ ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಬಿದ್ದಂಡ ಉಷಾ ದೇವಮ್ಮ, ಸದಸ್ಯಾದ ರಾಜಾರಾವ್‌, ಬೀನಾ ಬೊಳ್ಳಮ್ಮ, ಕಾಂತಿ ಸತೀಶ್‌, ನಗರಸಭೆ ಸದಸ್ಯರಾದ ಶಿವಕುಮಾರಿ, ಅನಿತಾ ಪೂವಯ್ಯ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮನು ಮುತ್ತಪ್ಪ, ನಾಪಂಡ ರವಿ ಕಾಳಪ್ಪ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ತಳೂರು ಕಿಶೋರ್‌ ಕುಮಾರ್‌, ಮಡಿಕೇರಿ ನಗರಾಧ್ಯಕ್ಷ ರಮೇಶ್‌ ಜೈನಿ ಭಾಗವಹಿಸಿದ್ದರು.

ಸ್ತಬ್ಧವಾದ ಗೋಣಿಕೊಪ್ಪಲು
ಗೋಣಿಕೊಪ್ಪಲು: ಗುಂಡೇಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಘಟಕ ಶುಕ್ರವಾರ ಕರೆ ನೀಡಿದ್ದ ಜಿಲ್ಲಾ ಬಂದ್‌ಗೆ ದಕ್ಷಿಣ ಕೊಡಗಿನಾದ್ಯಂತ ಬೆಂಬಲ ವ್ಯಕ್ತವಾಯಿತು.

ಗೋಣಿಕೊಪ್ಪಲು, ಶ್ರೀಮಂಗಲ, ಪೊನ್ನಂಪೇಟೆ, ತಿತಿಮತಿ, ಪಾಲಿಬೆಟ್ಟ ಮುಂತಾದ ಕಡೆ ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಔಷಧಿ ಅಂಗಡಿಗಳನ್ನು ಬಿಟ್ಟರೆ ಬೇರೆ ಯಾವುದೇ ಅಂಗಡಿಗಳು ತೆರೆದಿರಲಿಲ್ಲ. ವಾಹನಗಳು ಓಡಾಡಲಿಲ್ಲ. ದಿನನಿತ್ಯ ಗಿಜಿಗೂಡುತ್ತಿದ್ದ ಪಟ್ಟಣ ಬಂದ್‌ನಿಂದಾಗಿ ಬಿಕೊ ಎನ್ನುತ್ತಿತ್ತು.

ವ್ಯರ್ಥವಾದ ಮನವಿ
ಕುಶಾಲನಗರ: ಸುಜಾ ಕುಶಾಲಪ್ಪ ಅವರ ಮೇಲೆ ನಡೆದಿರುವ ಗುಂಡಿನ ದಾಳಿಯನ್ನು ಖಂಡಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಡೆಸಿದ ಬಂದ್ ಸಂಪೂರ್ಣ ಯಶಸ್ವಿಗೊಂಡಿತು.

ಬಿಜೆಪಿ ಕಾರ್ಯಕರ್ತರು ಬೆಳಿಗ್ಗೆ 6 ಗಂಟೆಯಿಂದಲೇ ಪಟ್ಟಣದ ಬಂದ್‌ಗೆ ಕರೆಕೊಟ್ಟಿದ್ದ ಅಂಗಡಿ ಮುಂಗಟ್ಟುಗಳು ತೆರೆಯಲೇ ಇಲ್ಲ. ಕುಶಾಲನಗರ, ಕೂಡಿಗೆ, ಕೂಡುಮಂಗಳೂರು, ಗುಡ್ಡೆಹೊಸೂರು ಮತ್ತು ಸಂಟಿಕೊಪ್ಪಗಳಲ್ಲಿ ಬಿಜೆಪಿ  ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಹೊರ ಜಿಲ್ಲೆಗಳಿಂದ ಬೆಳಿಗ್ಗೆಯೇ ಬಂದ ಬಸ್ಸುಗಳು ಪ್ರಯಾಣಿಕರನ್ನು ಕುಶಾಲನಗರದ ಬಸ್ಸು ನಿಲ್ದಾಣದಲ್ಲಿ ಇಳಿಸಿ ವಾಪಾಸ್ಸಾಗಿದ್ದರಿಂದ ಮಡಿಕೇರಿ, ಭಾಗಮಂಡಲ, ವಿರಾಜಪೇಟೆ ಮುಂತಾಡೆಗಳಿಗೆ ತೆರಳುವ ಪ್ರಯಾಣಿಕರು ಸಂಜೆ ಐದು ಗಂಟೆವರೆಗೆ ಕುಶಾಲನಗರ ಬಸ್‌ ನಿಲ್ದಾಣದಲ್ಲೇ ಕಾದುಕುಳಿತಿದ್ದರು.

ಇದನ್ನು ಗಮನಿಸಿ ಪೊಲೀಸರು ಸಂಚಾರ ಮುಕ್ತಗೊಳಿಸಲು ಪ್ರತಿಭಟನಾಕಾರರ ಮನವೊಲಿಸಲು ಸಾಕಷ್ಟು ಪ್ರಯಿತ್ನಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ 80ನೇ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ಸಾವಿರಾರು ಪ್ರತಿನಿಧಿಗಳು ತಮ್ಮ ಊರುಗಳಿಗೆ ತೆರಳಲು ಪರದಾಡುವಂತೆ ಆಗಬಾರದೆಂದು ಅರ್ಧ ಗಂಟೆಗೊಮ್ಮೆ ವಾಹನಗಳ ಸಂಚಾರಕ್ಕೆ ಅನುಮಾಡಿಕೊಟ್ಟರು. ಬಿಜೆಪಿ ನಗರಾಧ್ಯಕ್ಷ ವಿಜಯ್‌ಕುಮಾರ್, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಿ.ಕೆ. ತಿಮ್ಮಪ್ಪ, ಹಿರಿಯ ಮುಖಂಡ ಜಿ.ಎಲ್. ನಾಗರಾಜು, ಕೃಷ್ಣಪ್ಪ, ಬಿಜೆಪಿ ನಗರ ಕಾರ್ಯದರ್ಶಿ ಕೆ.ಜಿ. ಮನು ಇದ್ದರು.

ಬಂದ್‌ಗೆ ವರ್ತಕರ ಬೆಂಬಲ
ಸಿದ್ದಾಪುರ: ಗುಂಡಿನ ದಾಳಿ ಖಂಡಿಸಿ ಶುಕ್ರವಾರ ಕರೆ ನೀಡಲಾಗಿದ್ದ ಬಂದ್‌ಗೆ  ಸಿದ್ದಾಪುರ, ಪಾಲಿಬೆಟ್ಟ, ಅಮ್ಮತ್ತಿ, ಮಾಲ್ದಾರೆ ಹಾಗೂ ವಾಲ್ನೂರು ಗ್ರಾಮಗಳಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಆದರೆ, ನೆಲ್ಯಹುದಿಕೇರಿ ಗ್ರಾಮದಲ್ಲಿ ಜನಜೀವನ ಎಂದಿನಂತೆ ಸಾಗಿದ್ದು ಕಂಡುಬಂತು. ಅಮ್ಮತ್ತಿ ಹಾಗೂ ಮಾಲ್ದಾರೆ ಗ್ರಾಮಗಳಲ್ಲಿ ರಸ್ತೆ ತಡೆ ನಡೆಸಲಾಯಿತು. ಪಟ್ಟಣದಲ್ಲಿ ಔಷಧಿ ಅಂಗಡಿಗಳು, ಪತ್ರಿಕಾ ವಿತರಕರು ಹಾಗೂ ನಂದಿನಿ ಹಾಲಿನ ಮಳಿಗೆ ಹೊರತುಪಡಿಸಿದರೆ, ಯಾವುದೇ ವಹಿವಾಟು ನಡೆಯಲಿಲ್ಲ. ಗುಂಡಿನ ದಾಳಿಯನ್ನು ಬಿಜೆಪಿ ಸಿದ್ದಾಪುರ ಸ್ಥಾನೀಯ ಸಮಿತಿ ಖಂಡಿಸಿದ್ದು, ಅರೋಪಿಗಳಿಗೆ ಕಠಿಣ ಕ್ರಮ ಜರುಗಿಸುವಂತೆ ಸಮಿತಿ ಅಧ್ಯಕ್ಷ 
ವಿ. ಮನೋಹರ್ ಒತ್ತಾಯಿಸಿದ್ದಾರೆ.

ಬಂದ್‌ಗೆ ಬ್ಲಾಕ್ ಕಾಂಗ್ರೆಸ್‌ ಖಂಡನೆ
ಕುಶಾಲನಗರ: ಬಿಜೆಪಿ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಸುಜಾ ಕುಶಾಲಪ್ಪ ಅವರ ಮೇಲಿನ ಗುಂಡಿನ ದಾಳೀ ಖಂಡಿಸಿ ಬಿಜೆಪಿ ಜಿಲ್ಲಾ ಘಟಕವು ಶುಕ್ರವಾರ ಜಿಲ್ಲೆಯಾದ್ಯಂತ ನಡೆಸಿದ ಪ್ರತಿಭಟನೆಯನ್ನು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ಲೋಕೇಶ್ ಖಂಡಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸುಜಾ ಕುಶಾಲಪ್ಪ ಅವರ ಮೇಲೆ ನಡೆದಿರುವ ಹಲ್ಲೆ ತೀವ್ರ ಖಂಡನಾರ್ಹ. ಅದನ್ನು ಕಾಂಗ್ರೆಸ್ ಕೂಡ ಖಂಡಿಸುತ್ತದೆ. ಅಲ್ಲದೆ ಇಂತಹ ಹೀನ ಕೃತ್ಯ ಎಸಗಿದವರು ಯಾರೇ ಆದರೂ ಅವರನ್ನು ತಕ್ಷಣವೇ ಬಂಧಿಸಿ ಸರಿಯಾದ ಶಿಕ್ಷೆ ನೀಡಲು ಒತ್ತಾಯಿಸುತ್ತದೆ’ ಎಂದರು.

ಬಿಜೆಪಿ ಕಾರ್ಯಕರ್ತರು ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಹೀಗೆ ಜಿಲ್ಲೆಯಾದ್ಯಂತ ಸಂಪೂರ್ಣ ಬಂದ್ ಮಾಡಿರುವುದು ಸರಿಯಲ್ಲ. ಇದರಿಂದಾಗಿ ಸಾವಿರಾರು ಜನರು ಸಮಸ್ಯೆ ಎದುರಿಸುವಂತಾಗಿದೆ’ ಎಂದರು.

‘ಏಕಾಏಕಿ ಬಂದ್‌ ಸರಿಯಲ್ಲ’
ಸೋಮವಾರಪೇಟೆ: ಮುನ್ಸೂಚನೆ ನೀಡದೆ ಏಕಾಏಕಿ ಬಿಜೆಪಿ ಜಿಲ್ಲಾ ಬಂದ್‌ಗೆ ಕರೆ ಕೊಟ್ಟಿದ್ದರಿಂದ ಜನರು ಪರಿತಪಿಸುವಂತಾಗಿದ್ದು, ಇದನ್ನು ಖಂಡಿಸುವುದಾಗಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಹೇಳಿದ್ದಾರೆ.

ಸುಜಾ ಕುಶಾಲಪ್ಪ ಅವರ ಮೇಲಿನ ಗುಂಡಿ ದಾಳಿ ಖಂಡನೀಯ. ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕು. ಆದರೆ, ಬಿಜೆಪಿ ಕರೆ ನೀಡಿದ ಬಂದ್‌ನಿಂದಾಗಿ ಅಮಾಯಕರು ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಆರೋಪಿಗಳ ಬಂಧನಕ್ಕೆ ಗಡುವು ನೀಡಬೇಕಿತ್ತು  ಎಂದು ಅವರು ತಿಳಿಸಿದ್ದಾರೆ. ಕಾಗಡಿಕಟ್ಟೆಯಲ್ಲಿ ಅಲ್ಪಸಂಖ್ಯಾತರ ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ. ಇಂತಹ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಲೋಕೇಶ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT