ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇದು ಪುನರ್ಜನ್ಮದ ಬದುಕು’

ಕ್ರಿಕೆಟ್‌ ಅಂಗಳಕ್ಕೆ ಮರಳಿದ ಜೋಗಿಂದರ್‌ ಜೊತೆ ಮಾತುಕತೆ
Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಮ್ಮ ಮಗ ಬದುಕುಳಿಯುವ ಬಗ್ಗೆ ಖಚಿತವಾಗಿ ಏನನ್ನೂ ಹೇಳಲು ಆಗುವುದಿಲ್ಲ ಎಂದು ವೈದ್ಯರು ನನ್ನ ತಂದೆಯ ಬಳಿ ಹೇಳಿದ್ದರಂತೆ. ಅಪಘಾತದಲ್ಲಿ ತಲೆಗೆ ಬಲವಾಗಿ ಪೆಟ್ಟು ಬಿದ್ದಿತ್ತು. ಈಗ ಎಲ್ಲಾ ನೋವಿನಿಂದ ಚೇತರಿಸಿಕೊಂಡಿದ್ದೇನೆ. ಕ್ರಿಕೆಟ್‌ ಅಂಗಳಕ್ಕೂ ಮರಳಿದ್ದೇನೆ. ಇದು ನನ್ನ ಪುನರ್ಜನ್ಮ...’

ಎರಡು ವರ್ಷಗಳ ಹಿಂದೆ ದೆಹಲಿ ಯಲ್ಲಿ ನಡೆದ ಅಪಘಾತದಲ್ಲಿ ತೀವ್ರ ವಾಗಿ ಗಾಯಗೊಂಡು ಸಾವಿನ ಮನೆಯ ಕದ ತಟ್ಟಿ ಬಂದಿರುವ ಹರಿಯಾಣದ ಆಲ್‌ರೌಂಡರ್‌ ಜೋಗಿಂದರ್‌ ಶರ್ಮ ಹೀಗೆ ಹೇಳುತ್ತಲೇ ನೆನಪಿನಂಗಳಕ್ಕೆ ಜಾರಿದರು. ಆ ಅಪಘಾತದಲ್ಲಿ ಭಾರತ ತಂಡದ ಆಟಗಾರ ತೀವ್ರವಾಗಿ ಗಾಯಗೊಂಡಿದ್ದರು. ನಾಲ್ಕು ತಿಂಗಳು ಆಸ್ಪತ್ರೆಯಲ್ಲಿದ್ದರು.

ನಾಲ್ಕು ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ಜೋಗಿಂದರ್‌ 2007ರಲ್ಲಿ ಟ್ವೆಂಟಿ-20 ವಿಶ್ವಕಪ್‌ ಜಯಿಸಿದ ಭಾರತ ತಂಡದ ಸದಸ್ಯರಾಗಿದ್ದರು. ವಿಶ್ವಕಪ್‌ನ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನದ ಮಿಸ್ಬಾ ಉಲ್‌ ಹಕ್‌ ವಿಕೆಟ್‌ ಉರುಳಿಸಿ ಭಾರತದ ಗೆಲುವಿಗೂ ಕಾರಣರಾಗಿದ್ದರು.

ಜೋಗಿಂದರ್‌ ‘ಪ್ರಜಾವಾಣಿ’ಗೆ ನೀಡಿ ರುವ ಸಂದರ್ಶನದಲ್ಲಿ ಆಪ್ತವಾಗಿ ಮಾತನಾಡಿದ್ದಾರೆ. ಅದರ ವಿವರ ಹೀಗಿದೆ.

* ಅಪಘಾತದ ನಂತರ ಚೇತರಿಸಿ ಕೊಂಡು ಈಗ ಕ್ರಿಕೆಟ್‌ ಅಂಗಳಕ್ಕೆ ಮರಳಿದ್ದೀರಿ. ಈ ಬಗ್ಗೆ ಹೇಳಿ?
ಇದು ನನ್ನ ಎರಡನೇ ಬದುಕು ಎಂದು ಈಗಾಗಲೇ ಹೇಳಿದ್ದೇನೆ. ಆಸ್ಪತ್ರೆಯಲ್ಲಿದ್ದ ಆ ನಾಲ್ಕು ತಿಂಗಳು ಅತ್ಯಂತ ಕಷ್ಟಕರ ದಿನಗಳು. ಬದುಕಿ ಬಂದಿದ್ದೇ ಪವಾಡ ಎಂದು ವೈದ್ಯರು ಹೇಳಿದ್ದರು. ಆಸ್ಪತ್ರೆಯಲ್ಲಿದ್ದ ದಿನಗಳು ಸಾಕಷ್ಟು ಪಾಠಗಳನ್ನು ಕಲಿಸಿವೆ. ಒಟ್ಟಿನಲ್ಲಿ ಮತ್ತೆ ಕ್ರಿಕೆಟ್‌್ ಆಡಲು ಸಾಧ್ಯವಾಗಿದ್ದು ಎಲ್ಲಾ ನೋವುಗಳನ್ನು ಮೆರೆಸಿದೆ.

* ಮತ್ತೆ ಕ್ರಿಕೆಟ್ ಆಡುವ ಭರವಸೆ ಇತ್ತೇ?
ಚಿಕಿತ್ಸೆ ಪಡೆದ ಕೆಲ ದಿನಗಳ ನಂತರ ಮತ್ತೆ ಆಡುತ್ತೇನೆಂಬ ನಂಬಿಕೆ ಖಂಡಿತ ವಾಗಿಯೂ ಇರಲಿಲ್ಲ. ಆಗ ಬದುಕಿದರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದೆ. ಆದರೆ, ನನ್ನ ಕೋಚ್‌ ಅಶ್ವಿನಿ ಕುಮಾರ್‌ ಸಾಕಷ್ಟು ಭರವಸೆ ತುಂಬಿದರು. ಕನಸುಗಳನ್ನು ಕಟ್ಟಿಕೊಟ್ಟರು. ನಿನ್ನಿಂದ ಮತ್ತೆ ಆಡಲು ಸಾಧ್ಯವಿದೆ ಎಂದು ಆಶಾವಾದದ ಮಾತುಗಳನ್ನು ಆಡಿದರು. ಕೆಲ ದಿನಗಳ ನಂತರ ಫಿಸಿಯೊ ಅಮಿತ್‌ ತ್ಯಾಗಿ ತುಂಬಾ ಸಹಾಯ ಮಾಡಿದರು. ಇದರಿಂದ ಮತ್ತೆ ಕ್ರಿಕೆಟ್‌ಗೆ ಮರಳಲು ಸಾಧ್ಯವಾಯಿತು.

* ಕ್ರಿಕೆಟ್‌ ಜೀವನದಲ್ಲಿ ತುಂಬಾ ನೆನಪಿನಲ್ಲಿ ಉಳಿದಿರುವ ಸಂದರ್ಭ ಯಾವುದು?
ದಕ್ಷಿಣ ಆಫ್ರಿಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ ಗೆದ್ದ ತಂಡದಲ್ಲಿ ಸದಸ್ಯನಾಗಿದ್ದು ಮರೆಯಲಾಗದ ಸಂದರ್ಭ. ಭಾರತ ತಂಡದ ಈಗಿನ ನಾಯಕ ಮಹೇಂದ್ರ ಸಿಂಗ್‌ ದೋನಿ ಮತ್ತು ನಾನು ಒಟ್ಟಿಗೆ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದು ಸ್ಮರಣೀಯ ಕ್ಷಣ.

* ನಿಮ್ಮನ್ನು ಕಪಿಲ್‌ ದೇವ್‌ ಅವರೊಂದಿಗೆ ಹೋಲಿಸಲಾ ಗುತ್ತಿದೆಯಲ್ಲಾ. ಈ ಬಗ್ಗೆ ಹೇಳಿ?
ಕಪಿಲ್ ದೇವ್‌ ಮತ್ತು ನಾನು ಇಬ್ಬರೂ ಆಲ್‌ರೌಂಡರ್‌ ಆಗಿರುವ ಕಾರಣಕ್ಕಾಗಿ ಕೆಲವರು ಆ ರೀತಿ ಹೋಲಿಸಿರಬಹುದು. ಆದರೆ, ಈ ಹೋಲಿಕೆ ಸೂಕ್ತವಲ್ಲ. ಕಪಿಲ್‌ ದೇವ್‌ ಅವರು ಸಾಕಷ್ಟು ಸಾಧನೆ ಮಾಡಿದ್ದಾರೆ. ನಾನಿನ್ನೂ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದೇನೆ.

* ನಿಮಗೆ ಸ್ಫೂರ್ತಿ ಯಾರು?
ನನ್ನೆಲ್ಲಾ ಕನಸು, ಬದುಕು ಮತ್ತು ಸಾಧನೆಗೆ ಅಮ್ಮ ಸ್ಫೂರ್ತಿ. ಆಸ್ಪತ್ರೆಯಲ್ಲಿ ಪ್ರತಿ ದಿನವೂ ಆರೈಕೆ ಮಾಡುತ್ತಿದ್ದ ಅಮ್ಮನ ಪ್ರೀತಿ ಬಗ್ಗೆ ಎಷ್ಟು ಹೇಳಿದರೂ ಸಾಲದು. ಮತ್ತೆ ಕ್ರಿಕೆಟ್‌ ಆಡಲು ಸಾಧ್ಯವಾಗಿದೆಯೆಂದರೆ ಅದಕ್ಕೆ ಅಮ್ಮ ತೋರಿದ ಕಾಳಜಿಯೇ ಕಾರಣ.

* ಮುಂದಿನ ಗುರಿ ಏನಿದೆ?
ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕೆನ್ನುವ ದೊಡ್ಡ ಕನಸು ಇದೆ. ಅದಕ್ಕಾಗಿ ದೇಶಿಯ ಟೂರ್ನಿಗಳಲ್ಲಿ ಶಕ್ತಿ ಮೀರಿ ಹೋರಾಟ ತೋರುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT