ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒತ್ತುವರಿ ಸಮಸ್ಯೆಗೆ ಕಾಂಗ್ರೆಸ್‌ ಪರಿಹಾರ’

ಅಡಿಕೆ ನಿಷೇಧದ ಸುಳ್ಳು ವದಂತಿ ಮೂಲಕ ಬಿಜೆಪಿ ಅಪಪ್ರಚಾರ: ಜಯಪ್ರಕಾಶ ಹೆಗ್ಡೆ ಆರೋಪ
Last Updated 12 ಏಪ್ರಿಲ್ 2014, 5:18 IST
ಅಕ್ಷರ ಗಾತ್ರ

ಕಳಸ: ಅಡಿಕೆ ನಿಷೇಧದ ಯಾವುದೇ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದೆ ಇರದಿದ್ದರೂ ಆ ವಿಚಾರವನ್ನು ಚುನಾವಣೆಯ ಸಂದರ್ಭದಲ್ಲಿ ಅಡಿಕೆ ಬೆಳೆಯುವ ಪ್ರದೇಶದ ಮತದಾರರಲ್ಲಿ ಅಪಪ್ರಚಾರ ಮಾಡಿ ಬಿಜೆಪಿ ಮತ ಗಳಿಸುವ ಹುನ್ನಾರ ನಡೆಸಿದೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಆರೋಪಿಸಿದರು.

ಹೋಬಳಿಯ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ದಿನವಿಡೀ ಪ್ರಚಾರ ನಡೆಸಿದ ನಂತರ ಸಂಜೆ  ಕಳಸದ ಕೆ.ಎಂ.ರಸ್ತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಅಡಿಕೆ ನಿಷೇಧದ ಸಲಹೆ ಇದೆ ಎಂದು ಬಿಜೆಪಿ ಪದೇ ಪದೇ ಸುಳ್ಳು ಹೇಳುತ್ತಿದೆ. ಆದರೆ ಈ ಬಗೆಗಿನ ಪ್ರಮಾಣಪತ್ರದ  ಪ್ರತಿಯನ್ನು ಪ್ರದರ್ಶಿಸಿದ ಹೆಗ್ಡೆ ಈ ಪತ್ರದಲ್ಲಿ ಅಡಿಕೆ ನಿಷೇಧದ ಪದ ಇದ್ದರೆ ಬಿಜೆಪಿ ತೋರಿಸಲಿ ಎಂದು ಸವಾಲು ಹಾಕಿದರು.

ಅಡಿಕೆ ನಿಷೇಧದ ಸಂದರ್ಭದಲ್ಲಿ ಅಡಿಕೆ ಬೆಲೆ ಕ್ವಿಂಟಾಲಿಗೆ 10 ಸಾವಿರ ಇದ್ದಾಗ ನಾವು ಸರ್ಕಾರದ ಮೇಲೆ ಒತ್ತಡ ತಂದು ಅಡಿಕೆ ಆಮದು ನಿಯಂತ್ರಿಸಲು ಆಮದು ಸುಂಕ ದುಪ್ಪಟ್ಟು ಮಾಡಿದೆವು. ಅದರ ಪರಿಣಾಮವಾಗಿ ಇಂದು ರೈತ ಕ್ವಿಂಟಾಲಿಗೆ 30 ಸಾವಿರಕ್ಕೂ ಹೆಚ್ಚು ಬೆಲೆ ಪಡೆಯುತ್ತಿದ್ದಾರೆ ಎಂದು ಹೆಗ್ಡೆ ಹೇಳಿದರು. 

‘ಮಲೆನಾಡಿನಲ್ಲಿ ಒತ್ತುವರಿ ಸಮಸ್ಯೆ ನೀಗಿಸಲು ನನ್ನ ಒತ್ತಾಯದ ಫಲವಾಗಿ ರಾಜ್ಯ ಸರ್ಕಾರ ಪರಿಹಾರ ಕಂಡುಕೊಂಡಿದೆ. ಅರಣ್ಯ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿರುವವರನ್ನು ಒಕ್ಕಲೆಬ್ಬಿಸಬಾರದು ಎಂದು ಬುಧವಾರ ಹೈಕೋರ್ಟ್‌ ತೀರ್ಪು ನೀಡಿದೆ. ಗ್ರಾಮ ಮಟ್ಟದಲ್ಲಿ ಅರಣ್ಯ ಹಕ್ಕು ಸಮಿತಿ ರಚಿಸಿ ಹಕ್ಕು ಪತ್ರ ನೀಡಲು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ’ ಎಂದು ಹೆಗ್ಡೆ ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್‌ ಮಾತನಾಡಿ, ರಾಜ್ಯದ ನೂರಾರು ಅಭ್ಯರ್ಥಿಗಳ ಪೈಕಿ ಹೆಗ್ಡೆ ಅವರಷ್ಟು ಶುದ್ಧ ಹಸ್ತದ, ಜನಪರ ಕಾಳಜಿಯ, ಕಪ್ಪು ಚುಕ್ಕಿಯೇ ಇಲ್ಲದ ವ್ಯಕ್ತಿ ಮತ್ತೊಬ್ಬರಿಲ್ಲ ಎಂದು ಕೊಂಡಾಡಿದರು. ಭ್ರಷ್ಟಾಚಾರದ ನಿರ್ಮೂಲನೆಗಾಗಿ ಪಣ ತೊಟ್ಟಿರುವ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಆರಿಸಿ ಎಂದು ಮನವಿ ಮಾಡಿದ ಮಾಜಿ ಸಚಿವೆ ಮೋಟಮ್ಮ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರನ್ನು ಟೀಕಿಸಿದರು. ಮುಖಂಡ ಸಚಿನ್‌ ಮೀಗಾ ಮಾತನಾಡಿ, ಕ್ಷೇತ್ರದ ಎಲ್ಲ ಸಮಸ್ಯೆಗಳ ಅರಿವು ಇರುವ ಜಯಪ್ರಕಾಶ್‌ ಹೆಗ್ಡೆ ಅವರನ್ನು ಆರಿಸದಿದ್ದರೆ ಜನರು ಅಪಾರ ನಷ್ಟ ಅನುಭವಿಸುತ್ತಾರೆ ಎಂದರು.

ಮುಖಂಡರಾದ ರಾಮದಾಸ್‌, ಪ್ರಭಾಕರ್‌, ಹರ್ಷ, ರಾಜಮ್ಮ, ಕಮಲಾಕ್ಷಿ, ಶ್ರೇಣಿಕ, ರವಿ ರೈ, ಅನಿಲ್‌, ಬ್ರಹ್ಮದೇವ ಮತ್ತಿತರರು ಭಾಗವಹಿಸಿದ್ದರು. ಕಳಸ ಆಟೊ ಚಾಲಕರ ಸಂಘದ ಪದಾಧಿಕಾರಿಗಳು ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಸೇರಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT