ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂಗ್ರೆಸ್‌ ಅಲ್ಪಸಂಖ್ಯಾತ ವಿರೋಧಿ’

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವು ಮುಸ್ಲಿಂ ವಿರೋ­ಧಿ­ಗಳಲ್ಲ. ಕಾಂಗ್ರೆಸ್ಸಿಗರೇ ನಿಜ­ವಾದ ವಿರೋಧಿ­­ಗಳು. ಮುಸ್ಲಿಮರ ಕಲ್ಯಾಣಕ್ಕೆ ಅಗತ್ಯವಾದ ಕಾರ್ಯ­ಕ್ರಮ­ಗಳನ್ನು ಜಾರಿ­­ಗೊಳಿಸಲು  ಬದ್ಧ­ವಾಗಿ­ದ್ದೇವೆ’ ಎಂದು  ಜೆಡಿಎಸ್‌ ರಾಷ್ಟ್ರೀಯ ಅ­ಧ್ಯಕ್ಷ ಎಚ್‌.­ಡಿ. ದೇವೇಗೌಡ ಪ್ರತಿಪಾದಿಸಿದರು.

ನಗರದಲ್ಲಿ ಭಾನುವಾರ ಜೆಡಿಎಸ್‌ ಅಲ್ಪಸಂಖ್ಯಾತ ವಿಭಾಗ ಆಯೋಜಿಸಿದ್ದ ಮುಸ್ಲಿಂ ಬುದ್ಧಿ ಜೀವಿಗಳ ಸಮಾ­ವೇಶದಲ್ಲಿ ಮಾತನಾಡಿದ ಅವರು,  ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಅಥವಾ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಏಕಾಂಗಿಯಾಗಿಯೇ ಜೆಡಿಎಸ್‌ ಚುನಾವಣೆಗಳನ್ನು ಎದುರಿಸಲಿದೆ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಅನಿವಾರ್ಯ ಪರಿ­ಸ್ಥಿತಿ­ಗಳಿಂದ ಕಾಂಗ್ರೆಸ್‌ ಹಾಗೂ ಬಿಜೆಪಿ ಜತೆ ಸೇರಿ ಸರ್ಕಾರ ಮಾಡಬೇಕಾಯಿತು. ಮುಂದೆ ಅಂತಹ ಕೆಲಸ ಮಾಡುವು­ದಿಲ್ಲ. ಹಿಂದಿನ ಕಹಿ ಘಟನೆಗಳಿಂದ ಜೆಡಿಎಸ್‌ ಎಚ್ಚೆತ್ತು­ಕೊಂಡಿದೆ. ಜೆಡಿಎಸ್‌ ಬಗ್ಗೆ ತಪ್ಪು ಕಲ್ಪನೆ ಬೇಡ. ಅಲ್ಪ­ಸಂಖ್ಯಾತ ಸಮು­ದಾಯವನ್ನು ಜೆಡಿಎಸ್‌ ನಿರ್ಲಕ್ಷಿ­ಸುವುದಿಲ್ಲ. ಜೆಡಿಎಸ್‌ ಮುಸ್ಲಿಂ ಸಮು­ದಾಯಕ್ಕೆ ನೀಡಿದ ಭರವಸೆಗಳನ್ನು ಈಡೇರಿಸಿದೆ. ಎಂದಿಗೂ ಮಾತಿಗೆ ತಪ್ಪಿಲ್ಲ ಎಂದು ಸಮರ್ಥಿಸಿ­ಕೊಂಡರು.

ಕಾಂಗ್ರೆಸ್‌ ಮುಸ್ಲಿಂ ಸಮು­ದಾಯ­ವನ್ನು ಕೇವಲ ವೋಟ್‌ ಬ್ಯಾಂಕ್‌ ಆಗಿ ಬಳಸಿಕೊಂಡಿದೆ. ಕಾಂಗ್ರೆಸ್‌ ಬಗ್ಗೆ ಅಲ್ಪ­ಸಂಖ್ಯಾತರು ಎಚ್ಚರ­ ವಹಿಸಬೇಕು. ಕಾಂಗ್ರೆ­ಸ್ಸಿ­ಗರು ದ್ರೋಹ ಬಗೆಯು­ವುದರಲ್ಲಿ ನಿಸ್ಸೀಮರು. ಜಾತ್ಯತೀತ ಪಕ್ಷ ಎಂದು ಪ್ರತಿಪಾದಿಸಿಕೊಳ್ಳುವ ಹಕ್ಕು ಕಾಂಗ್ರೆಸ್‌ಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ,  ಜಾತ್ಯತೀತ ತತ್ವ ಉಳಿಸಿ­ಕೊಂಡಿರುವುದು ಜೆಡಿಎಸ್‌ ಮಾತ್ರ.  ಬಿಜೆಪಿ ಜತೆ ಕೈಜೋಡಿಸಿದ ಕಾರಣ­ವನ್ನಿಟ್ಟುಕೊಂಡು ಮುಸ್ಲಿಂ ಸಮು­ದಾಯ ಜೆಡಿಎಸ್‌ಗೆ ಶಿಕ್ಷೆ ನೀಡುವುದು ಬೇಡ. ಬಿಎಸ್‌ಪಿ ಸೇರಿದಂತೆ ಹಲವು ಪಕ್ಷಗಳು ಬಿಜೆಪಿ ಜತೆ ಕೈಜೋಡಿಸಿ ಅಧಿಕಾರ ಮಾಡಿವೆ. ಆದರೆ, ನಮ್ಮನ್ನು ಮಾತ್ರ ದೂರವಿಡಲಾಗುತ್ತಿದೆ. ಇನ್ನು ಎಷ್ಟು ದಿನ ಜೆಡಿಎಸ್‌ಗೆ ಈ ಶಿಕ್ಷೆ ಎಂದು ಪ್ರಶ್ನಿಸಿದರು.

ಇತ್ತೀಚೆಗೆ ನಡೆದ ಲೋಕಸಭೆ ಉಪ­ಚುನಾವಣೆಯ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್‌ ನಿರ್ನಾಮ ಮಾಡಲು ಕಾಂಗ್ರೆಸ್‌ ಮುಂದಾ­ಗಿತ್ತು. ಆ ಸಂದರ್ಭದಲ್ಲಿ ಬಿಜೆಪಿ ತಾನಾಗಿಯೇ ಬೆಂಬಲ ನೀಡಿತ್ತು ಎಂದು ಪ್ರತಿಪಾದಿಸಿದರು. ಕಾಂಗ್ರೆಸ್‌ ಎಂದಿಗೂ ಸ್ವಂತ ಶಕ್ತಿ ಮೇಲೆ ಅಧಿಕಾರ ಮಾಡಿಲ್ಲ.

ಜೆಡಿಎಸ್‌ ದುಡಿಮೆಯ ಫಲ ಕಾಂಗ್ರೆಸ್‌ಗೆ ಲಭಿ­ಸುತ್ತಿದೆ. ಕಾಂಗ್ರೆಸ್‌ನಲ್ಲಿ ನಾಯಕರೇ ಇಲ್ಲ. ಜೆಡಿಎಸ್‌ನಲ್ಲಿ ಬೆಳೆದವರೇ ಅಲ್ಲಿ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ಅವರು ಜೆಡಿಎಸ್‌ ತ್ಯಜಿಸಲು ಕಾಂಗ್ರೆಸ್ಸಿ­ಗರೇ ಕಾರಣ. ಸಿದ್ಧರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದು ಸಹ ಕಾಂಗ್ರೆಸ್ಸಿಗರೆ. ಆದರೆ, ಜೆಡಿಎಸ್‌­ನವರೇ ಇದಕ್ಕೆ ಕಾರಣ ಎಂದು ಅಪ­ಪ್ರಚಾರ ಮಾಡಲಾಗಿದೆ ಎಂದು ದೂರಿದರು.

ಕಾಂಗ್ರೆಸ್‌ ಮತ್ತು ಬಿಜೆಪಿ ಸ್ವಾರ್ಥಕ್ಕೆ ಮುಸ್ಲಿಂ ಯುವಕರನ್ನು ಭಯೋತ್ಪಾ­ದಕರಂತೆ ಕಾಣಲಾಗುತ್ತಿದೆ. ಮುಸ್ಲಿಂ ಸಮುದಾಯ ಇನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಪ್ರಗತಿ ಸಾಧಿಸಿಲ್ಲ.  ಅಲ್ಪಸಂಖ್ಯಾತರಿಗೆ ಮೀಸ­ಲಿಟ್ಟಿ­ರುವ ₨1024 ಕೋಟಿ ಅನು­ದಾನದಲ್ಲಿ ‘ಬಿದಾಯಿ’ ಯೋಜನೆಗೆ ಕೇವಲ ₨5 ಕೋಟಿ ನೀಡಲಾಗಿದೆ.

ಇದೊಂದು ಯೋಜನೆಯೇ? ಸರ್ಕಾರ ಶಾಶ್ವತ ಯೋಜನೆಗಳನ್ನು ರೂಪಿಸ­ಬೇಕು.  ತಾತ್ಕಾಲಿಕ ಯೋಜನೆಗಳಿಂದ ಯಾವುದೇ ಸಮುದಾಯಕ್ಕೂ ಪ್ರಯೋ­ಜನ­ವಾಗುವುದಿಲ್ಲ ಎಂದು ಹೇಳಿದರು. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎ. ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಅಜೀಂ, ವಿಧಾನಪರಿಷತ್‌ ಮಾಜಿ ಸದಸ್ಯ ಏಜಾಸುದ್ದೀನ್‌, ಮುಖಂಡರಾದ ಜಫರುಲ್ಲಾ ಖಾನ್‌,  ಸಯ್ಯದ್‌, ಮಾಹಿದ್‌ ಅಲ್ತಾಫ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT