ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೈವಿಕ ತಂತ್ರಜ್ಞಾನದ ಸಾಧಕ, ಬಾಧಕ ಚರ್ಚೆ ಅಗತ್ಯ’

Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕೃಷಿಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನ ಅಳವಡಿಕೆಯ ಸಾಧಕ– ಬಾಧಕಗಳ ಕುರಿತು ಕೃಷಿ ವಿಶ್ವವಿದ್ಯಾ­ಲಯದ ನೇತೃತ್ವದಲ್ಲಿ ಚರ್ಚೆ ನಡೆಯ­ಬೇಕು’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಭಾರತೀಯ ಕೈಗಾರಿಕಾ ಒಕ್ಕೂಟವು  (ಸಿಐಐ) ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕೃಷಿ ಜೈವಿಕ ತಂತ್ರ­ಜ್ಞಾನ’ ವಿಷಯ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಕೃಷಿ ಕ್ಷೇತ್ರದಲ್ಲಿ ಜೈವಿಕ ತಂತ್ರ­ಜ್ಞಾನದ ಬಳಕೆಯ ಬಗ್ಗೆ ರೈತರು, ಸ್ವಯಂ ಸೇವಾ ಸಂಸ್ಥೆಗಳು, ವಿಜ್ಞಾನಿ­ಗಳು ಹಾಗೂ ಈ ತಂತ್ರಜ್ಞಾನದ ಪರ ಮತ್ತು ವಿರೋಧ ವಾದವಿರುವವರು ಒಂದೇ ವೇದಿಕೆಯಲ್ಲಿ ಚರ್ಚೆ ನಡೆಸಬೇಕಾದ ಅಗತ್ಯವಿದೆ. ಆಗ ಮಾತ್ರ ಈ ತಂತ್ರಜ್ಞಾನದ ಸಾಧ್ಯತೆಗಳ ಬಗ್ಗೆ ತಿಳಿಯಲು ಸಾಧ್ಯ’ ಎಂದರು.

‘1996 ರಲ್ಲಿ  ರಾಜ್ಯಕ್ಕೆ ಬಿಟಿ ಹತ್ತಿ ಬೀಜ ಕಾಲಿಟ್ಟಿತು. ಈಗ ಶೇ 95 ರಷ್ಟು ರೈತರು ಬಿಟಿ ಹತ್ತಿಯನ್ನು ಬೆಳೆಯುತ್ತಿ­ದ್ದಾರೆ. ಬಿಟಿ ಹತ್ತಿಯ ಬಗ್ಗೆ ಕೃಷಿ ಇಲಾಖೆ ಯಾವುದೇ ಪ್ರಚಾರವನ್ನು ಕೈಗೊಂಡಿಲ್ಲ. ಬಿಟಿ ಹತ್ತಿಗೆ ಸಬ್ಸಿಡಿ­ಯನ್ನೂ ನೀಡಿಲ್ಲ. ರೈತರಿಗೆ  ಬಟಿ ಬೀಜ­ವನ್ನು ಸಹ ನೀಡಿಲ್ಲ. ಬಿಟಿ ಹತ್ತಿ ಬೆಳೆ­ಯುವುದು ರೈತರ ಆಯ್ಕೆಯ ಸ್ವಾತಂತ್ರ್ಯ. ಈ ವಿಚಾರದಲ್ಲಿ ಕೃಷಿ ಇಲಾಖೆ ಹೇಗೆ ಜವಾಬ್ದಾರಿಯಾಗು­ತ್ತದೆ’ ಎಂದು ಪ್ರಶ್ನಿಸಿದರು.

‘ಆಹಾರ ಭದ್ರತಾ ಕಾಯ್ದೆ ಜಾರಿಗೆ ಬಂದಿರುವುದರಿಂದ ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆ ಸಾಧಿಸಬೇಕಿದೆ. ಕೃಷಿ ಉತ್ಪಾದನೆ ಕಡಿಮೆಯಾದರೆ, ದೇಶದ ಆಹಾರ ವ್ಯವಸ್ಥೆಯಲ್ಲಿ ಅಸಮತೋ­ಲನ ಉಂಟಾಗುತ್ತದೆ’ ಎಂದರು.

ಬಯೋಕಾನ್‌ ಸಂಸ್ಥೆ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ ಮಾತ­ನಾಡಿ, ‘ಕೃಷಿ ಜೈವಿಕ ತಂತ್ರಜ್ಞಾನದ  ಬಗ್ಗೆ ತಪ್ಪು ಮಾಹಿತಿ ನೀಡಿ ಅಪ­ಪ್ರಚಾರ ಮಾಡಲಾಗುತ್ತಿದೆ. ರೈತರಲ್ಲಿ ತಪ್ಪು ಗ್ರಹಿಕೆ ಉಂಟು ಮಾಡಲಾಗುತ್ತಿದೆ’ ಎಂದರು.

‘ಕೃಷಿ ಜೈವಿಕ ತಂತ್ರಜ್ಞಾನದಲ್ಲಿ  ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯ­ಬೇಕು. ಕೃಷಿಯಲ್ಲಿ ಉತ್ಪಾದನೆ­ಯನ್ನು ಹೆಚ್ಚಿಸಲು, ರೈತರ ಆದಾಯ­ವನ್ನು ಹೆಚ್ಚಿಸಿ ರೈತರ ಆರ್ಥಿಕ ಪರಿಸ್ಥಿತಿ­ಯನ್ನು ಸುಧಾರಿಸಲು ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನಗಳ ಅಳ­ವಡಿಕೆ ಅಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಬಿಟಿ ಹತ್ತಿಯನ್ನು ಶೇ 95 ರಷ್ಟು ರೈತರು ಸ್ವೀಕರಿಸಿ ತಮ್ಮ ಜಮೀನಿನಲ್ಲಿ ಬೆಳೆದಿದ್ದಾರೆ. ಇದರಿಂದ, ಅವರ ಆದಾಯದ ಮಟ್ಟವೂ ಹೆಚ್ಚಾಗಿದೆ, ಅವರ ಜೀವನವೂ ಸುಧಾರಿಸಿದೆ’ ಎಂದು ಹೇಳಿದರು.

ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ದೀಪಕ್‌ ಪೆಂಟಲ್‌ ಮಾತನಾಡಿ, ‘ಕೆಲವು ಹೋರಾಟ­ಗಾರರು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ವಿಜ್ಞಾನಿಗಳು ಕೃಷಿ ಜೈವಿಕ ತಂತ್ರಜ್ಞಾನದ ಕುರಿತು ಅಪಪ್ರಚಾರ­ವನ್ನು ಮಾಡುತ್ತಿದ್ದಾರೆ. ಜೀವಾಂತರ ತಂತ್ರಜ್ಞಾನ ಸಮಿತಿ (ಟ್ರಾನ್ಸೆಜೆನಿಕ್‌ ಟೆಕ್ನಾಲಜಿ ಕಮಿಟಿ)ಯು ತಪ್ಪು ವರದಿ ನೀಡಿದೆ. ವರದಿಯಲ್ಲಿ ಕೃಷಿ ಜೈವಿಕ ತಂತ್ರಜ್ಞಾನದ ಕುರಿತು ಅನೇಕ ತಪ್ಪು ಮಾಹಿತಿಗಳನ್ನು ನೀಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT