ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಿಪ್ಪಜ್ಜಿ ಸರ್ಕಲ್‌’ನಲ್ಲಿ ಶೃಂಗಾರ ಪುಟ!

Last Updated 13 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಸಣ್ಣನೆ ಬೆಳಕು ಸೂಸುವ ದೀಪಗಳ ತೆಳುವಾದ ಕಿರಣಗಳು ಗುಲಾಬಿ ಹೂವಿನ ಪಕಳೆಗಳಿಂದ ತುಂಬಿದ್ದ ಕೊಳದ ನೀರಿನ ಮೇಲೆ ಮಂದವಾಗಿ ಬೀಳುತ್ತಿದ್ದವು. ಸುತ್ತಲೂ ನೃತ್ಯಗಾತಿಯರ ವಿವಿಧ ಭಂಗಿಯ ಪ್ರತಿಮೆಗಳು.

ಬಿಸಿ ನೀರಿನ ಹಬೆಯಲ್ಲಿ ಶೃಂಗಾರದ ಕಂಪು. ಆ ವಾತಾವರಣದಲ್ಲಿಯೇ ಒಂದು ತೆರನಾದ ಮಾದಕತೆ ಸೃಷ್ಟಿಯಾಗಿತ್ತು. ಅದಕ್ಕೆ ಇಂಬು ಕೊಡುವಂತೆ ತಮ್ಮ ಬಿಳಿ ದೇಹ ಸೌಂದರ್ಯವನ್ನು ತೆರೆದಿಡುತ್ತಾ ಮುಖದಲ್ಲಿ ಉನ್ಮತ್ತ ಭಾವ ಪ್ರದರ್ಶಿಸಲು ಪ್ರಯತ್ನಿಸುತ್ತಿದ್ದರು ಉಕ್ರೇನ್‌ ಮೂಲದ ಬೆಡಗಿ ಅನ್ನಾ. ಶೃಂಗಾರ ರಸಭಾವವನ್ನು ಉಕ್ಕಿಸುತ್ತಾ ಹಾಡಿನ ಲಯಕ್ಕೆ ಹೊಂದಿಕೊಳ್ಳುತ್ತಿದ್ದರು ಹಿರಿಯ ನಟ ಸುರೇಶ್‌ ಶರ್ಮಾ.

ಕಲ್ಪನೆಯಲ್ಲಿ ಮೂಡುವ ರತಿ ಮನ್ಮಥ ಶೃಂಗಾರ ಸನ್ನಿವೇಶದ ಹಾಡನ್ನು ಚಿತ್ರಿಸಲು ರಾಕ್‌ಲೈನ್‌ ಸ್ಟುಡಿಯೊದಲ್ಲಿ ಹಾಕಿದ್ದ ಸೆಟ್‌ನಲ್ಲಿ ನೃತ್ಯ ಸಂಯೋಜನೆ ಮಾಡುತ್ತಿದ್ದ ನೃತ್ಯ ನಿರ್ದೇಶಕ ತ್ರಿಭುವನ್‌ಗೆ ಮೂಡಿಬರುತ್ತಿದ್ದ ಶಾಟ್‌ಗಳು ತೃಪ್ತಿ ನೀಡುತ್ತಿರಲಿಲ್ಲ. ಚಿತ್ರೀಕರಣದ ನಡುವೆ ಕೆಲಸಕ್ಕೆ ವಿರಾಮ ನೀಡಿ ಮಾತಿಗಿಳಿಯಿತು ಚಿತ್ರತಂಡ.

ಸ್ಟುಡಿಯೊದಲ್ಲಿ ನಡೆಯುತ್ತಿದ್ದದ್ದು ‘ತಿಪ್ಪಜ್ಜಿ ಸರ್ಕಲ್‌’ ಚಿತ್ರದ ಹಾಡಿನ ಚಿತ್ರೀಕರಣ. ಸಾಹುಕಾರ ಮತ್ತು ಆತನ ಪತ್ನಿಯ ನಡುವಿನ ಜಗಳ ನೋಡಿ ಬೇಸರಪಟ್ಟುಕೊಳ್ಳುವ ಮನೆ ಕೆಲಸದವರು ಒಂದು ಕಾಲದಲ್ಲಿ ನಮ್ಮ ಸಾಹುಕಾರರು ಮನ್ಮಥನಂತೆ ಹೇಗಿದ್ದರು ಎನ್ನುತ್ತಾ ಕಲ್ಪನೆಗೆ ಜಾರುತ್ತಾರೆ. ಆಗ ಪ್ರಾರಂಭವಾಗುವುದೇ ಈ ರತಿ ಮನ್ಮಥ ಕಲ್ಪನೆಯ ಶೃಂಗಾರ ಭರಿತ ಹಾಡು ಎಂದು ವಿವರಿಸಿದರು ನಿರ್ದೇಶಕ ಆದಿತ್ಯ ಚಿಕ್ಕಣ್ಣ.

ಚಿಕ್ಕಂದಿನಿಂದಲೂ ನೃತ್ಯ ವ್ಯಾಮೋಹಿಯಾಗಿರುವ ಅನ್ನಾ ಅಲಿಯಾಸ್‌ ಲೂಸಿಯಾ ಬಾಂಬೆಯಲ್ಲಿ ನೆಲೆಯೂರಿರುವವರು. ಹತ್ತಾರು ಬಗೆಯ ನೃತ್ಯ ಪ್ರಕಾರಗಳಲ್ಲಿ ಪಳಗಿರುವವರು. ಆದರೆ ಸಿನಿಮಾ ನೃತ್ಯ ಚಿತ್ರೀಕರಣ ಅವರಿಗೆ ಹೊಸತು. ಆರಂಭದಲ್ಲಿ ಹೊಂದಿಕೊಳ್ಳಲು ಕಷ್ಟವಾದರೂ ಒಳ್ಳೆಯ ಅನುಭವ ಅವರಿಗಾಗಿದೆಯಂತೆ.

ದೇವದಾಸಿ ತಿಪ್ಪಜ್ಜಿಯ ಕಥೆಯನ್ನು ಸಿನಿಮಾಕ್ಕೆ ಇಳಿಸುತ್ತಿರುವ ಆದಿತ್ಯ ಚಿಕ್ಕಣ್ಣ ಎರಡು ಹಾಡುಗಳನ್ನು ಅಳವಡಿಸಿದ್ದಾರೆ. ಈ ಎರಡೂ ಹಾಡುಗಳಿಗೆ ಸಂಗೀತ ಹೊಸೆದಿರುವುದು ಕಾಸರಗೋಡು ಮೂಲದ ಭರಣಶ್ರೀ. ಅವರದಿದು ನಾಲ್ಕನೇ ಚಿತ್ರ. ನಟ ಸುರೇಶ್‌ ಶರ್ಮಾ ಅವರ ವಯಸ್ಸು ಚಿಕ್ಕದಾಗಿದೆ ಎಂದು ಕಿಚಾಯಿಸಿದರು ನೃತ್ಯ ಸಂಯೋಜಕ ತ್ರಿಭುವನ್‌.
ಏಪ್ರಿಲ್‌ ಅಂತ್ಯದಲ್ಲಿ ಚಿತ್ರವನ್ನು ತೆರೆಗೆ ತರುವುದು ನಿರ್ಮಾಪಕ ಸಿದ್ಧರಾಮಣ್ಣ ಅವರ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT