ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬರೀ ಅನುಕಂಪ ತೋರಿಸಿದರೆ ಏನೇನೂ ಸಾಲದು...’

Last Updated 5 ಡಿಸೆಂಬರ್ 2013, 8:31 IST
ಅಕ್ಷರ ಗಾತ್ರ

ಅಕ್ಕಿಆಲೂರ: ‘ಅಂಗವಿಕಲರಿಗೆ ಮನೋಸ್ಥೈರ್ಯ ತುಂಬಿ ಸಮಾಜದ ಮುಖ್ಯ ವಾಹಿನಿಯಲ್ಲಿ ಅವರನ್ನು ಕೊಂಡೊಯ್ಯ ಬೇಕು’ ಎಂಬ ಮಾತು ವೇದಿಕೆಗಳಲ್ಲಿ ಮೇಲಿಂದ ಮೇಲೆ ಕೇಳಿ ಬರುತ್ತದೆ.

ವಿಪರ್ಯಾಸವೆಂದರೆ ಸ್ಥಳೀಯವಾಗಿ ಅಂಗವಿಕಲರಿಗೆ ಆಸರೆಯಾಗಿ ನಿಲ್ಲಬೇಕಾದ ಗ್ರಾಮ ಪಂಚಾಯ್ತಿಗಳು ಮಾತ್ರ ಅನುದಾನ, ಸೌಲಭ್ಯ ಹಂಚಿಕೆಯಲ್ಲಿ ನಿರ್ಲಕ್ಷ್ಯ ವಹಿಸಿ ತಮಗೆ ತೋಚಿದಂತೆ ಫಲಾನುಭವಿಗಳನ್ನು ಆಯ್ಕೆ ಮಾಡುತ್ತ ಅಂಗವಿಕಲರ ಬದುಕನ್ನು ಬೀದಿಗೆ ತಂದಿವೆ ಎನು್ನವ ಮಾತು ಕೇಳಿಬಂದಿದೆ.

ಆಶ್ರಯ ಮತ್ತಿತರ ವಸತಿ ಯೋಜನೆಗಳಲ್ಲಿ ಅಂಗವಿಕಲರಿಗೆ ಶೇ.5 ಹಾಗೂ ಅನುದಾನ ಹಂಚಿಕೆಯಲ್ಲಿ ಶೇ.3ರಷ್ಟನ್ನು ಮೀಸಲಿಡಬೇಕು ಎನ್ನುವ ನಿಯಮವಿದೆ. ಆದರೆ ಈ ನಿಮಯ ಎಲ್ಲಿಯೂ ಕೂಡ ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎನ್ನುವುದು ಕಹಿಸತ್ಯ. ಅಂಗವಿಕಲರನ್ನು ಕಡೆಗಣಿಸಿ ತಮ್ಮದೇ ಆದ ಲೆಕ್ಕಾಚಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿ ರುವುದರಿಂದ ಅನೇಕರಿಗೆ ಸೌಲಭ್ಯ ದೊರೆಯುತ್ತಿಲ್ಲ.

ಅಂಗವಿಕಲರ ಕಲ್ಯಾಣ ಇಲಾಖೆಯ ವಿವಿಧ ಸೌಲಭ್ಯಗಳು ಪ್ರತಿ ತಾಲ್ಲೂಕಿನ 2–3 ಫಲಾನುಭವಿಗಳಿಗೆ ಮಾತ್ರ ಲಭ್ಯವಿರುವುದರಿಂದ ಗ್ರಾಮೀಣ ಪ್ರದೇಶದ ಅಂಗವಿಕಲರನ್ನು ಈ ಸೌಲಭ್ಯಗಳು ತಲುಪುವುದೇ ದುಸ್ತರ. ಹೀಗಾಗಿ ಹೆಸರಿಗೆ ಮಾತ್ರ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳು ರೂಪಿತ ವಾಗಿವೆಯೇ ವಿನಹ ನಿಜವಾದ ಅರ್ಥದಲ್ಲಿ ಅಲ್ಲ. ಅಂಗವಿಕಲರಿಗಾಗಿ ಮಾಸಾಶನವನ್ನೇನೋ ಸರ್ಕಾರ ನೀಡುತ್ತಿದೆ. ಆದರೆ ಇದಕ್ಕೆ ಬೇಕಾದ ಪೂರಕ ದಾಖಲೆ, ಪೊರೈಸಬೇಕಾದ ನಿಬಂಧನೆ ಮಧ್ಯೆ ಅಂಗವಿಕಲರು ಹೈರಾಣಾಗುತ್ತಿದ್ದಾರೆ.
ಹಲವು ಸಂದರ್ಭದಲ್ಲಿ ಮಧ್ಯವರ್ತಿಗಳ ಹಾವಳಿಯಿಂದಾಗಿ ಅನರ್ಹರು ಮಾಸಾಶನ ಪಡೆಯುತ್ತ, ಅರ್ಹರು ಪರಿತಪಿಸುತ್ತಿರುವುದೇ ಹೆಚ್ಚಾಗಿದೆ ಎನ್ನುವ ಮಾತು ಇಲ್ಲಿ ಕೇಳಿ ಬಂದಿದೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡ ಇಲ್ಲಿಯ ಅಂಗವಿಕಲ ಗುತ್ತೆಪ್ಪ ಸೈದಣ್ಣನವರ ‘ಸರ್ಕಾರ ಅಂಗವಿಕಲ್ರಿಗೆ ಬಾಳಷ್ಟು ಕಾರ್ಯಕ್ರಮ ರೂಪಿಸೇತ್ರಿ. ಆದ್ರ ಅವು ಎಷ್ಟರ ಮಟ್ಟಿಗೆ ನಿಜವಾದ ಅಂಗವಿಕಲ್ರಿಗೆ ತಲುಪ್ಯಾವೋ ಗೊತ್ತಿಲ್ಲರಿ. ಒಂದ ಕೆಲಸಾ ಮಾಡಕೋಬೇಕಂದ್ರ ಕೆಲಸಾ ಬಿಟ್ಟು ಆಫೀಸಿಗೆ ತಿರುಗಾಡಬೇಕ್ರಿ. ನಮ್ಮ ಬಗ್ಗೆ ಸರ್ಕಾರ ಮೊಸಳಿ ಕಣ್ಣೀರ ಹಾಕತೈತಿ ಹೊರತು ಗಮನ ನೀಡವಲ್ಲದ್ರಿ. ನಮ್ಮನ್ನ ನೋಡಿ ಅನುಕಂಪಾ ತೋರಿಸ್ತಾರ ಹೊರತು ಕೆಲಸಾ ಮಾಡಿಕೊಡಂಗಿಲ್ಲರಿ’ ಎನ್ನುತ್ತಾರೆ.

ಒಟ್ಟಿನಲ್ಲಿ ಅಂಗವಿಕಲರಿಗೆ ಸರ್ಕಾರಗಳು, ಸ್ಥಳೀಯ ಆಡಳಿತ, ಎನ್‌ಜಿಒ ಸೇವಾ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಅನುಷ್ಠಾನ ಹಂತದಲ್ಲಿನ ಲೋಪ ದೋಷದಿಂದಾಗಿ ಅಂಗವಿಕಲರು ಹಣೆಬರಹ ಹಳಿಯುತ್ತ  ಬದುಕು ಸಾಗಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT