ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಸಿಯೂಟ’ ಆಗದಿರಲಿ ತಂಗಳನ್ನ...

Last Updated 2 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಮಹತ್ವದ್ದು. ಸ್ವಾತಂತ್ರ್ಯ ಪಡೆದು ಆರು ದಶಕಗಳೇ ಕಳೆದರೂ ‘ಸರ್ವರಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ’ ಎಂಬ ಘೋಷಣೆ ಇನ್ನೂ ಘೋಷಣೆಯಾಗಿಯೇ ಉಳಿದಿದೆ. ಇದನ್ನು ಮನಗಂಡ ಸುಪ್ರೀಂಕೋರ್ಟ್ ಕಡ್ಡಾಯ ಶಿಕ್ಷಣಕ್ಕಾಗಿ ಬಿಸಿಯೂಟ ಯೋಜನೆಗೆ ನಿರ್ದೇಶನ ನೀಡಿದೆ. ಅದರಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಬಿಸಿಯೂಟ ಯೋಜನೆ  ಜಾರಿಯಾಗಿದೆ.

ರಾಜ್ಯದಲ್ಲಿ 2002–03ರಲ್ಲಿ ಆರಂಭವಾದ ಈ ಯೋಜನೆಯಿಂದ ಇಂದು 1ರಿಂದ 10ನೇ ತರಗತಿವರೆಗಿನ 65 ಲಕ್ಷ ಮಕ್ಕಳು ನಿಯಮಿತ ವಾಗಿ ಶಾಲೆಗೆ ಹಾಜರಾಗುತ್ತಿದ್ದಾರೆ. ಈ ಯಶಸ್ಸಿನ ಶ್ರೇಯಸ್ಸು ಸಲ್ಲಬೇಕಾದದ್ದು ಬಿಸಿಯೂಟ ಕಾರ್ಯಕರ್ತೆಯರಿಗೆ. ಆದರೆ, ಈ ಕಾರ್ಯಕರ್ತೆಯರ ಬದುಕು ಮಾತ್ರ ನುಂಗಲಾರದ ‘ಬಿಸಿ ತುತ್ತು’ ಆಗಿದೆ.

ಕಳೆದ 10–12 ವರ್ಷಗಳಿಂದ  ರಾಜ್ಯದ 65 ಲಕ್ಷ ಮಕ್ಕಳ ಪಾಲಿಗೆ ಅನ್ನಪೂರ್ಣೆಯರಾಗಿ ಸೇವೆ ಸಲ್ಲಿಸುತ್ತಿರುವ 1,14,000 ಕಾರ್ಯಕರ್ತೆ ಯರು ಸರ್ಕಾರ ‘ಗೌರವ ಧನ’ ಎಂಬ ದೊಡ್ಡ ಹೆಸರಲ್ಲಿ ನೀಡುವ ಸಣ್ಣಂಕಿಯ ₨ 1 ಸಾವಿರದಲ್ಲಿ ತಮ್ಮ ಬದುಕಿನ ಕೂಳು ಬೇಯಿಸಿಕೊಳ್ಳಲಾರದೇ ನಲುಗುತ್ತಿದ್ದಾರೆ. ತಮ್ಮ ಹೊಟ್ಟೆಗೆ ಹಿಟ್ಟಿಲ್ಲ ದಿದ್ದರೂ ಮಕ್ಕಳ ಹೊಟ್ಟೆ ತುಂಬಿಸುವ ಕಾಯಕ ದಲ್ಲಿ ತೊಡಗಿರುವ ಈ ಹೆಂಗಳೆಯರದು ವ್ಯವಸ್ಥೆಯ ಜತೆ ಅಕ್ಷರಶಃ ಹೋರಾಟದ ಬದುಕು.

ಪ್ರತಿನಿತ್ಯ 5–6 ತಾಸು ಒಲೆ ಮುಂದೆ ಕೂತು ಅಡುಗೆ ಬೇಯಿಸುವ ಇವರು, ಏನೇ ಅವಘಡ ಸಂಭವಿಸಿದರೂ ವೈಯಕ್ತಿಕ ನೆಲೆಯಲ್ಲಿ ಬೆಲೆ ತೆರು ವಂತಾಗಿದೆ. ಒಂದೆಡೆ ಸೇವಾ ಭದ್ರತೆಯ ಗುಮ್ಮ, ಮತ್ತೊಂದೆಡೆ ಖಾಸಗೀಕರಣದ ಭೂತ ಇವರನ್ನು ಬೆಂಬಿಡದೇ ಕಾಡುತ್ತಿದೆ. ಸಮಯಕ್ಕೆ ಸರಿಯಾಗಿ ಗ್ಯಾಸ್‌, ತರಕಾರಿ, ಸಂಬಳ ಬಾರದಿದ್ದರೂ ತಾವೇ ಸ್ವಂತ ಜವಾಬ್ದಾರಿ ವಹಿಸಿಕೊಂಡು ಮಕ್ಕಳಿಗೆ ಹಸಿವಿನ ಅರಿವು ಆಗದಂತೆ ನೋಡಿ ಕೊಳ್ಳುತ್ತಾರೆ. ಹಳ್ಳಿಗಾಡಿರಲಿ, ಎಷ್ಟೋ ನಗರಗಳಲ್ಲೂ ನೀರಿನ ಕೊರತೆ ಉಂಟಾ ದಾಗ, ಕಿಲೋಮೀಟರ್‌ಗಟ್ಟಲೆ ನಡೆದೇ ನೀರು ತಂದು ಅಡುಗೆ ಮಾಡುವ ತಾಯಂದಿರು ಇಲ್ಲಿದ್ದಾರೆ.

ಹೆರಿಗೆ ರಜೆ ಕೂಡಾ ಇಲ್ಲದೇ ದುಡಿಯುವ ಈ ಮಹಿಳೆಯರಿಗೆ ಸರ್ಕಾರ ನೀಡುತ್ತಿರುವುದು ದಿನಕ್ಕೆ ₨ 38 ಮಾತ್ರ! ಅತ್ಯಂತ ಕನಿಷ್ಠ ಕೂಲಿ ಮೂಲಕ ಇವರ ಸೇವೆ ಪಡೆಯುತ್ತಿರುವ ಸರ್ಕಾರ, ಇದುವರೆಗೂ ಇವರಿಗೆ ಕನಿಷ್ಠ ಸೌಲಭ್ಯಗಳನ್ನೂ ಕಲ್ಪಿಸಿಲ್ಲ. ಇವರನ್ನು ಗುಲಾಮರಂತೆ ಕಾಣುತ್ತಿ ರುವ ಸರ್ಕಾರ, ಬಿಸಿಯೂಟವನ್ನಷ್ಟೇ ಅಲ್ಲ, ಇತರ ಕೆಲಸಗಳನ್ನೂ ಇವರಿಂದ ಮಾಡಿಸಿಕೊಳ್ಳುತ್ತಿದೆ.

ಈ ತಾಯಂದಿರ ಕರ್ತವ್ಯನಿಷ್ಠೆಗೆ ಸಾವಿರ ರೂಪಾಯಿ ಬೆಲೆ ಕಟ್ಟುವ ಸರ್ಕಾರ, ಇದೀಗ ಇಡೀ ಯೋಜನೆಯನ್ನು ಖಾಸಗೀಕರಣ ಮಾಡಲು ಹೊರಟಿದೆ. ಕಾರ್ಪೊರೇಟ್‌ ಕಂಪೆನಿಗಳಿಗೆ ಬಿಸಿಯೂಟ ಯೋಜನೆ ವಹಿಸಿಕೊಡುವುದಾಗಿ ಖುದ್ದು ಶಿಕ್ಷಣ ಸಚಿವರೇ ಹೇಳಿದ್ದಾರೆ. ಈ ಮೂಲಕ ಸಾರ್ವಜನಿಕ ವಲಯದಲ್ಲಿರಬೇಕಾದ ಶಿಕ್ಷಣ ಮತ್ತು ಅದಕ್ಕೆ ಪೂರಕ ಪರಿಸರ ಕಲ್ಪಿಸು ತ್ತಿರುವ ಯೋಜನೆಯನ್ನು ಖಾಸಗಿ ಒಡೆತನಕ್ಕೆ ನೀಡಲಾಗುತ್ತಿದೆ.

ಸ್ವಯಂ ಸೇವಾ ಸಂಸ್ಥೆಗಳಿಗೆ ಈ ಹೊಣೆ ವಹಿ ಸಿದ ಕಾರಣ  40 ಸಾವಿರಕ್ಕೂ ಹೆಚ್ಚು ಮಹಿಳೆ ಯರು ಈಗಾಗಲೇ ಕೆಲಸ ಕಳೆದುಕೊಂಡಿದ್ದಾರೆ. ಹಾಗಂತ ಬಿಸಿಯೂಟ ಯೋಜನೆ ದೋಷರಹಿತ ವಾಗೇನೂ ನಡೆಯುತ್ತಿಲ್ಲ. ಕೆಲವು ಖಾಸಗಿ ಸಂಸ್ಥೆಗಳು  ನೀಡುತ್ತಿರುವ ಬಿಸಿಯೂಟದಲ್ಲಿ ಯೂ ಇಲಿ, ಹುಳುಗಳು ಕಂಡುಬಂದಿವೆ. ಅಷ್ಟೇ ಅಲ್ಲ, ಧಾರ್ಮಿಕ ಸಂಸ್ಥೆಯೊಂದು ನೀಡುತ್ತಿರುವ ಬಿಸಿಯೂಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಸೇರಿದಂತೆ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳು ‘ನಿಷೇಧ’ಕ್ಕೆ ಒಳಗಾಗಿವೆ.

ಮಕ್ಕಳು ಅಪೌಷ್ಟಿಕತೆ ಯಿಂದ ಬಳಲುವುದನ್ನು ತಪ್ಪಿಸಲು ಸುಪ್ರೀಂ ಕೋರ್ಟ್‌ ಪ್ರತಿ ಮಗುವಿಗೆ ದಿನಕ್ಕೆ ಕನಿಷ್ಠ 1,200 ಕ್ಯಾಲೊರಿಯಿಂದ 1,800 ಕ್ಯಾಲೊರಿಯ ಆಹಾರ ನೀಡಬೇಕೆಂದು ನಿರ್ದೇಶಿಸಿತ್ತು. ಆದರೆ, ಖಾಸಗಿ ಸಂಸ್ಥೆಗಳು ಈ ನಿರ್ದೇಶನಗಳನ್ನು ಗಾಳಿಗೆ ತೂರಿ, ಬಿಸಿಯೂಟದ ಮೂಲಕ ತಮ್ಮ ಧರ್ಮಾಂಧದ ಬೇಳೆ ಬೇಯಿಸಿಕೊಳ್ಳುತ್ತಿವೆ ಎಂದು ಆರೋಪಿಸು ತ್ತಾರೆ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಅಧ್ಯಕ್ಷೆ ಎಸ್‌. ವರಲಕ್ಷ್ಮೀ.

ಯೋಜನೆಗೆ ಸರ್ಕಾರ ಪ್ರತಿ ವಿದ್ಯಾರ್ಥಿಗೆ ₨3ರಿಂದ 6ರ ತನಕ ವೆಚ್ಚ ಮಾಡುತ್ತಿದೆ. ಆದರೆ, ಬೆಲೆ ಏರಿಕೆಯ ಈ ದಿನಗಳಲ್ಲಿ ₨ 6ಕ್ಕೆ ಒಂದು ಕಪ್‌ ಚಹಾ ಕೂಡಾ ಬರುವುದಿಲ್ಲ. ಅಂಥದ್ದರಲ್ಲಿ ಸರ್ಕಾರ ನೀಡುವ ಈ ಪುಡಿಗಾಸಿನಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುತ್ತದೆಯೇ ಎಂಬುದು ಪ್ರಶ್ನಾರ್ಹ.

ಕೇರಳ, ತಮಿಳುನಾಡಿನಲ್ಲಿ ಬಿಸಿಯೂಟದ ಜತೆ  ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಮತ್ತು ಅಗತ್ಯ ಕಾಳುಗಳ ಆಹಾರ ವಿತರಿಸಲಾಗುತ್ತಿದೆ. ಆದರೆ,  ರಾಜ್ಯದ ಬಿಸಿಯೂಟದಲ್ಲಿ ಬಿಸಿ ಬೇಳೆ ಬಾತ್, ಉಪ್ಪಿಟ್ಟು, ಸಿಹಿ ಪೊಂಗಲ್ ನೀಡಲು ಆದೇಶಿಸ ಲಾಗಿದೆ. ಬೆಳೆಯುವ ಮಕ್ಕಳು ಇಂಥ ಆಹಾರ ತಿಂದು ದೃಢಕಾಯರಾಗಲು ಸಾಧ್ಯವೇ? ಕನಿಷ್ಠ ಸ್ಥಳೀಯವಾಗಿ ಸಿಗುವ ಧಾನ್ಯ, ತರಕಾರಿ, ಹಣ್ಣು, ಮೊಟ್ಟೆಯನ್ನು ನೀಡಿದರೆ ಒಳಿತು ಎಂಬುದು ಹಲವು ಬಡಮಕ್ಕಳ ಪೋಷಕರ ಅಭಿಮತ.

ರಾಜ್ಯದಾದ್ಯಂತ ಇಂದು 1,14,000 ಅಡುಗೆ ಯವರು ಬಿಸಿಯೂಟ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯ ಅಡುಗೆಯವರಿಗೆ ತಿಂಗಳಿಗೆ ₨ 1,100, ಅಡುಗೆ ಸಹಾಯಕರಿಗೆ ತಿಂಗಳಿಗೆ ₨1,000 ನೀಡಲಾಗುತ್ತಿದೆ. ಪಕ್ಕದ ಕೇರಳದಲ್ಲಿ ಮುಖ್ಯ ಅಡುಗೆಯವರಿಗೆ ₨4,000, ಅಡುಗೆ ಸಹಾಯಕರಿಗೆ ₨ 3,000 ವೇತನ ನೀಡ ಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಸೇವಾ ಭದ್ರತೆ, ಕನಿಷ್ಠ ವೇತನ, ಅಗತ್ಯ ತರಬೇತಿಯಿಂದ ಅಡುಗೆ ತಯಾರಕರು ವಂಚಿತರಾಗಿದ್ದಾರೆ. ದೌರ್ಜನ್ಯ, ಅವಮಾನ ಮತ್ತು ಕೆಲಸದಿಂದ ತೆಗೆದುಹಾಕುವುದು ಸೇರಿದಂತೆ ಹಲವು ತೊಂದರೆ ಗಳನ್ನು ಸಹಿಸಿಕೊಂಡೇ ಈ ಮಹಿಳೆಯರು ದುಡಿಯುತ್ತಿದ್ದಾರೆ.

ಸರ್ಕಾರದ ಅತ್ಯಲ್ಪ ಗೌರವಧನದಲ್ಲೇ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿ, ಇಡೀ ದೇಶದಲ್ಲೇ ಬಿಸಿಯೂಟ ಯೋಜನೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ದೊರಕಿಸಿಕೊಟ್ಟಿರುವ ಕೀರ್ತಿ ಈ ಮಹಿಳೆಯರದು.ಆದರೆ, ಇಂಥ ಮಹಿಳೆಯರ ಉದ್ಯೋಗಕ್ಕೆ ಖಾಸಗೀಕರಣ ಗುಮ್ಮ ಕನ್ನ ಹಾಕಿ ಬದುಕು ಕಸಿ ಯುವ ಹುನ್ನಾರ ನಡೆಸಿದೆ. ಈಗಾಗಲೇ ರಾಜ್ಯ ದಲ್ಲಿ 93 ಸ್ವಯಂಸೇವಾ ಸಂಸ್ಥೆಗಳು 5,790 ಶಾಲೆಗಳ 10.68 ಲಕ್ಷದಷ್ಟು ಮಕ್ಕಳಿಗೆ ಬಿಸಿ ಯೂಟ ನೀಡುತ್ತಿವೆ. ಇದಕ್ಕಾಗಿ ಅವು ಸರ್ಕಾರ ದಿಂದ ಹಣ ಪಡೆಯುತ್ತಿವೆ. ಅಷ್ಟೇ ಅಲ್ಲ, ಕರ್ನಾಟಕದ ಬಡ ಮಕ್ಕಳ ಚಿತ್ರಗಳನ್ನು ತೋರಿಸಿ ದೇಶ–ವಿದೇಶಗಳಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡುತ್ತಿವೆ ಎಂಬ ಆರೋಪವೂ ಮಾಧ್ಯಮಗಳಲ್ಲಿ  ವರದಿಯಾಗಿದೆ.

‘ಮೊದಲು ನಮ್ಮ ಕೆಲಸ ಕಾಯಂ ಮಾಡಿ, ಗೌರವಧನ ಹೆಚ್ಚಿಸಬೇಕು. ಅಡುಗೆ ಮನೆ, ಶುದ್ಧ ಕುಡಿಯುವ ನೀರು, ಗ್ಯಾಸ್‌, ಪಾತ್ರೆಗಳು ಇನ್ನಿತರ ಅಗತ್ಯ ಪರಿಕರಗಳನ್ನು ಪೂರೈಸಬೇಕು’ ಎಂದು ಮಂಡ್ಯದ ಬಿಸಿಯೂಟ ಕಾರ್ಯಕರ್ತೆ ಮಹಾ ದೇವಮ್ಮ ಒತ್ತಾಯಿಸಿದರೆ, ‘ಬಿಸಿಯೂಟ ಪೂರೈಕೆ ಗೂ ಬೃಹತ್‌ ಕಂಪೆನಿಗಳೇ ಬೇಕೇ’ ಎಂದು ಪ್ರಶ್ನಿಸು ತ್ತಾರೆ ಗಂಗಾವತಿ ತಾಲ್ಲೂಕಿನ ಬಿಸಿಯೂಟ ಕಾರ್ಯಕರ್ತೆ ಲಕ್ಷ್ಮೀ.

ಮಹಾದೇವಮ್ಮ ಮತ್ತು ಲಕ್ಷ್ಮೀ ಅವರಂಥ ಸಾಮಾನ್ಯ ಮಹಿಳೆಯರಿಗೆ  ಅರ್ಥವಾಗುವ ಸತ್ಯ ಸರ್ಕಾರಕ್ಕೆ ಅರಿವಾಗುವುದಾದರೂ ಯಾವಾಗ? ಅಂಥ ಅರಿವಿನ ನಿರೀಕ್ಷೆಯಲ್ಲಿ ಡಿ. 2ರಿಂದ ಬಿಸಿ ಯೂಟ ಕಾರ್ಯಕರ್ತೆಯರು ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದಾರೆ. ತಾಯ್ತನದ ಅಂತಃಕರಣದಿಂದ ಸರ್ಕಾರ ಈ ಮಹಿಳೆಯರ ಅಗತ್ಯ ಬೇಡಿಕೆ ಈಡೇರಿಸಿದಲ್ಲಿ, ಬಿಸಿಯೂಟ ಕಾರ್ಯಕರ್ತೆಯರ ಬದುಕು ಹಸನಾದೀತು.
-ಮಂಜುಶ್ರೀ ಎಂ. ಕಡಕೋಳ,ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT