ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಠಗಳಿಂದ ಶಿಕ್ಷಣದ ವ್ಯಾಪಾರೀಕರಣ’

Last Updated 28 ಸೆಪ್ಟೆಂಬರ್ 2013, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಮಠಗಳೂ ಸಹ ಶಿಕ್ಷಣದ ವ್ಯಾಪಾರೀಕರಣದಲ್ಲಿ ತೊಡಗಿವೆ. ಇದು ನಿಜಕ್ಕೂ ದುರಂತದ ಸಂಗತಿ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌‌.ಎಸ್‌.ದೊರೆಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಶನಿವಾರ ನಗರದಲ್ಲಿ ಏರ್ಪಡಿಸಿದ್ದ ಶಿಕ್ಷಣ ಉಳಿಸಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಿದ್ದಗಂಗಾ ಮಠ, ಸುತ್ತೂರು ಮಠ, ಮುರುಘರಾಜೇಂದ್ರ ಮಠ ಸೇರಿದಂತೆ ಕೆಲವು ಮಠಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳ ಹೆಸರು ಮಾಡಿವೆ. ಆದರೆ ಇಂತಹ ಮಠಗಳಲ್ಲೂ ಉನ್ನತ ಶಿಕ್ಷಣಕ್ಕೆ ಅಧಿಕ ವಂತಿಕೆ ಪಡೆಯುತ್ತಿ ರುವುದು ಬೇಸರದ ಸಂಗತಿ ಎಂದರು.

ಹಣದ ಮೋಹಕ್ಕೆ ಬಲಿಯಾಗಿರುವ ಮಠಾಧೀಶರು ಹಣದ ಬೆನ್ನೇರಿ ಹೋಗುತ್ತಿದ್ದಾರೆ. ಸಾಮಾನ್ಯ ಹಾಗೂ ಉನ್ನತ ಶಿಕ್ಷಣ ಬಡವರಿಗೆ ಗಗನ ಕುಸುಮವಾಗಿರುವ ಪರಿಸ್ಥಿತಿಯಲ್ಲಿ ಆದರೂ ಮಠಾಧೀಶರು ಒಮ್ಮೆ ಯೋಚನೆ ಮಾಡಬೇಕಿತ್ತು ಎಂದು ಹೇಳಿದರು. 
 
ಶಿಕ್ಷಣ ವ್ಯವಸ್ಥೆ ಸರಿಯಾಗಬೇಕಾದರೆ ಪಠ್ಯಕ್ರಮ ಸೇರಿದಂತೆ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಉತ್ತಮ ಚಾರಿತ್ಯವುಳ್ಳ ಶಿಕ್ಷಣ ತಜ್ಞರಿಗೆ ನೀಡಬೇಕು. ತಜ್ಞರ ನಿರ್ಧಾರಗಳನ್ನು ಜಾರಿಗೆ ತರುವ ಕೆಲಸ ವನ್ನು ಮಾತ್ರ ಸರ್ಕಾರ ಮಾಡಬೇಕು. ಈ ನಿಟ್ಟಿನಲ್ಲಿ ತಜ್ಞರ ಸಮಿತಿಯನ್ನು ರಚಿಸಬೇಕು ಎಂದು ಸಲಹೆ ನೀಡಿದರು.

ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು ಮಾತನಾಡಿ,  ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳ ತಾಕಲಾಟದಲ್ಲಿ ಶಿಕ್ಷಣ ವ್ಯವಸ್ಥೆ ಮತ್ತಷ್ಟು ಹಾಳಾ ಗುತ್ತಿದೆ. ಹಿಂದೆ ಶಿಕ್ಷಕರು ಮಕ್ಕಳಿಗೆ ಪಠ್ಯವನ್ನು ಅರ್ಥ ಮಾಡಿಸುತ್ತಿದ್ದರು. ಆದರೆ ಪ್ರಸ್ತುತ ವ್ಯವಸ್ಥೆಯಲ್ಲಿ ಮಕ್ಕಳಿಗೆ ಬಾಯಿಪಾಠ ಮಾಡಿಸುವ ಮೂಲಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಲು ಮಾತ್ರ ತಯಾರಿ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ಮಾತನಾಡಿ, ‘ವಿದ್ಯಾರ್ಥಿಗಳು ಹಾಗೂ ಸರ್ಕಾರವನ್ನು ವಂಚಿಸುವ ಪ್ರಸಿದ್ಧ ಕಾಲೇಜುಗಳ ವಿರುದ್ಧ ಕ್ರಮ ಜರುಗಿಸಲು ಮುಂದಾ ದಾಗ ಲಂಚ ಸ್ವೀಕಾರ ಆರೋಪವನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಇದು ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರಾಮಾಣಿಕ ಅಧಿಕಾರಿಗಳು ಎದುರಿಸು ತ್ತಿರುವ ಸಮಸ್ಯೆ ಎಂದರು.

ಕಾಮಸೂತ್ರ ಓದಿರುವೆ..
ನಾನೂ ಕಾಮಸೂತ್ರ ಓದಿ ದ್ದೇನೆ. ಆದರೆ ಕಾಲೇಜಿನ ವ್ಯಾಸಂಗ ಮುಗಿದ ನಂತರ. ಎಲ್ಲದಕ್ಕೂ ಒಂದು ಸಮಯ ಮತ್ತು ವಯಸ್ಸು ಇರುತ್ತದೆ. ಹಾಗೆಯೇ ಶಾಲಾ ಮಕ್ಕಳಿಗೆ ಯಾವ ವಯಸ್ಸಿಗೆ ಯಾವ ಶಿಕ್ಷಣ ನೀಡಬೇಕು ಎಂಬು ದನ್ನು ಶಿಕ್ಷಣ ತಜ್ಞರಿಂದ ಸರ್ಕಾರ ತಿಳಿಯಬೇಕಿದೆ. ಕಾಂಡೋಮ್‌ ತಯಾರಿಕಾ ಕಂಪೆನಿಗಳು ಲೈಂಗಿಕ ಶಿಕ್ಷಣ ಪುಸ್ತಕ ಪ್ರಕಟಿಸಿವೆ. ಅವೇ ಈಗ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನೀಡಲು ಸರ್ಕಾರದ ಮೇಲೆ ಒತ್ತಡ ಹೇರಿವೆ.
– ಎಚ್‌.ಎಸ್‌.ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT