ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾರಾಣಿ’ಗೆ ಅಮೃತ ವರ್ಷ

Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಕ್ರಾಂತಿಗೆ ನಾಂದಿ ಹಾಡಿದ ಮಹಾರಾಣಿ ವಿಜ್ಞಾನ ಕಾಲೇಜು ಈಗ ಎಪ್ಪತ್ತೈದರ ಪ್ರೌಢೆ. ವಜ್ರ ಕಿರೀಟವನ್ನು ಮುಡಿದ ಅವಳ ಉಲ್ಲಾಸ, ಉತ್ಸಾಹ, ಹುಮ್ಮಸ್ಸು ಮತ್ತೊಂದಿಷ್ಟು ಮಹತ್ವಾಕಾಂಕ್ಷೆಗಳಿಗೆ ಮುನ್ನುಡಿ ಹಾಡುತ್ತಿದೆ. ಇಂದು, (ಸೆ. 12) ಅಮೃತ ಮಹೋತ್ಸವ ಚಟುವಟಿಕೆಗಳು ಆರಂಭವಾದರೆ ಮುಂದಿನ ಮಾರ್ಚ್‌ವರೆಗೂ ನಿರಂತರ ಕಾರ್ಯಕ್ರಮಗಳ ಸರಣಿಯೇ ‘ಮಹಾರಾಣಿ’ಯ ವಜ್ರದ ಹೊಳಪಿಗೆ ಇನ್ನಷ್ಟು ಮೆರುಗು ನೀಡಲಿದೆ.

ಹೆಣ್ಣಿನ ಮನಸ್ಸನ್ನು ಇನ್ನೊಬ್ಬ ಹೆಣ್ಣು ಮಾತ್ರ ಅರಿತುಕೊಳ್ಳಲು, ಗ್ರಹಿಸಲು ಸಾಧ್ಯ ಎಂಬ ಮಾತನ್ನು ಮೈಸೂರಿನ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರು 1938ರಲ್ಲೇ ಸಾಬೀತು ಮಾಡಿತೋರಿಸಿದ್ದರು. ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕು ಸಿಗಲೇಬೇಕು ಎಂಬ ಅವರ ಪ್ರತಿಪಾದನೆಯ ಫಲವಾಗಿ ಕಾರ್ಯಾರಂಭಗೊಂಡ ಮಹಾರಾಣಿ ಕಾಲೇಜು, ಬೆಂಗಳೂರಿಗಷ್ಟೇ ಸೀಮಿತವಾಗದೆ ನಾಡಿನುದ್ದಗಲದ ಶಿಕ್ಷಣಾಸಕ್ತ ಹೆಣ್ಣು ಮಕ್ಕಳ ಬಾಳಿಗೆ ಬೆಳಕಾಯಿತು. ಉನ್ನತ ವರ್ಗದ ಮಂದಿ ವಿದೇಶಕ್ಕೆ ಬೇಕಾದರೂ ಹೋಗಿ ಓದಿಯಾರು. ಬಡ ಮತ್ತು ಮಧ್ಯಮ ವರ್ಗದ ಹೆಣ್ಣು ಮಕ್ಕಳಿಗೆ ಸುಲಭವಾಗಿ ಶಿಕ್ಷಣ ಪಡೆಯಲು ಬೇಕಾದ ಸೌಕರ್ಯಗಳನ್ನು ನಾವೇ ಮಾಡಿಕೊಡಬೇಕು. ಶಿಕ್ಷಣದ ಹಕ್ಕಿನಿಂದ ಅವರು ವಂಚಿತರಾಗಬಾರದು ಎಂಬುದು ಅವರ ಚಿಂತನೆಯಾಗಿತ್ತು.

ಮಹಿಳಾ ಸಮ್ಮೇಳನದಲ್ಲಿ...
ಮಹಾರಾಣಿಯವರ ಈ ಚಿಂತನೆಗೆ ವೇದಿಕೆಯಾಗಿದ್ದು, 1930ರಲ್ಲಿ ನಡೆದ ಮೈಸೂರು ರಾಜ್ಯ ಮಹಿಳಾ ಸಮ್ಮೇಳನ. ಮಹಿಳೆಯರಿಗೆ ವಸತಿ ಕಾಲೇಜಿನ ಅವಶ್ಯಕತೆ ಕುರಿತು ಎರಡು ಬಾರಿ ಮಹಿಳಾ ಸಮ್ಮೇಳನದಲ್ಲಿ ಗಂಭೀರ ಚರ್ಚೆ ನಡೆದು ಮೈಸೂರಿನಲ್ಲಿ ಮಹಾರಾಣಿ ಮಹಿಳಾ ಕಾಲೇಜು ಕಾರ್ಯಾರಂಭಕ್ಕೆ ಅಂತಿಮ ಮೊಹರು ಬಿತ್ತು. ಆಗ ಮೈಸೂರು ವಿವಿ ಕುಲಪತಿಗಳಾಗಿದ್ದ ಇ. ಪಿ. ಮೆಟ್‌ಕಾಲ್ಫ್ ಅವರ ನೇತೃತ್ವದಲ್ಲಿ ರಚನೆಯಾದ ಸಮಿತಿ ಅಲ್ಲಿನ ಮಹಾರಾಣಿ ಕಾಲೇಜು ಮತ್ತು ಬೆಂಗಳೂರಿನ ಇಂಟರ್‌ಮೀಡಿಯೆಟ್ ಕಾಲೇಜನ್ನು ವಿಲೀನ ಮಾಡುವಂತೆಯೂ, ಈ ಕಾಲೇಜು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುವಂತೆಯೂ ಶಿಫಾರಸು ಮಾಡಿದ ಸಮಿತಿ, ಹೆಣ್ಣು ಮಕ್ಕಳಿಗೆ ಕಲೆ ಮತ್ತು ವಿಜ್ಞಾನ ವಿಷಯಗಳಲ್ಲಿ ಪದವಿ ಶಿಕ್ಷಣ ನೀಡುವಂತೆಯೂ ಐತಿಹಾಸಿಕ ಕ್ರಮ ಕೈಗೊಂಡಿತು.

ದೂರದೃಷ್ಟಿಯ ಸಾಕಾರ
1938ರಲ್ಲಿ ಬೆಂಗಳೂರಿನಲ್ಲಿ ಮಹಾರಾಣಿ ಕಾಲೇಜು ಆರಂಭಗೊಂಡಾಗ ಮೈಸೂರಿನ ಮಹಾರಾಜರೇ ಎಲ್ಲಾ ರೀತಿಯ ನೆರವನ್ನು ನೀಡುತ್ತಿದ್ದರು. ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಮತ್ತು ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿದ್ದ ಗೋಪಾಲಸ್ವಾಮಿ ಅಯ್ಯಂಗಾರ್ ಅವರ ಪರಿಶ್ರಮವೂ ಈ ಕಾಲೇಜು ಆರಂಭವಾಗಲು ಕಾರಣ. ಮಹಾರಾಣಿಯವರು ದೂರದೃಷ್ಟಿಯಿಂದ ಮಹಿಳಾ ಕಾಲೇಜುಗಳನ್ನು ಆರಂಭಿಸಿದರೂ ಬೆಂಗಳೂರು, ಮೈಸೂರು ಸುತ್ತಮುತ್ತಲಿನ ಹೆಣ್ಣುಮಕ್ಕಳಲ್ಲಿ ಕೆಲವರ ಪಾಲಿಗೆ ಕಾಲೇಜಿಗೆ ಹೋಗುವುದೆಂದರೆ ಮನೆಯಿಂದಾಚೆ ಹೋಗುವ, ವಿಶಿಷ್ಟವಾದೊಂದು ವಾತಾವರಣವನ್ನು ದಕ್ಕಿಸಿಕೊಳ್ಳುವ ಅವಕಾಶವಾಯಿತು

 ಶಿಕ್ಷಣ ತಮ್ಮ ಸ್ವಾಭಿಮಾನಿ, ಸ್ವಾವಲಂಬಿ ಭವಿಷ್ಯಕ್ಕೆ ಭದ್ರ ಬುನಾದಿ ಎಂದುಕೊಂಡವರು ಇರಲಿಲ್ಲವೆಂದಲ್ಲ. ಅದೇನೇ ಇದ್ದರೂ ಮಹಾರಾಣಿ ಕಾಲೇಜು ಸಮಾನ ಶಿಕ್ಷಣದ ಹಕ್ಕು ಚಲಾಯಿಸುವ ಅವಕಾಶವನ್ನಂತೂ ಹೆಣ್ಣುಮಕ್ಕಳಿಗೆ ಕಲ್ಪಿಸಿದ್ದು ನಿಜ. 190 ವಿದ್ಯಾರ್ಥಿನಿಯರಿಂದ ಆರಂಭವಾದ ಮಹಾರಾಣಿ ಕಾಲೇಜಿನಲ್ಲಿ ಈಗ ವಿಜ್ಞಾನ ಕಾಲೇಜು ಒಂದರಲ್ಲೇ ಅಂಡರ್ ಗ್ರ್ಯಾಜುಯೇಟ್‌ನಲ್ಲಿ 1060 ವಿದ್ಯಾರ್ಥಿಗಳಿದ್ದಾರೆ.

‘ಆಗ ಆಯ್ಕೆಗಳು ಇರಲಿಲ್ಲ. ಆದರೆ ಈಗ ಮಕ್ಕಳು ಆಧುನಿಕ ಸೌಕರ್ಯಗಳಿರುವ ಕಾಲೇಜುಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಸಹಜ. ಆದರೆ ಖಾಸಗಿಯವರ ಈ ಪೈಪೋಟಿ ಏನೇ ಇದ್ದರೂ ನಮ್ಮ ಕಾಲೇಜಿನಲ್ಲಿ ಪ್ರತಿ ವರ್ಷವೂ ವಿದ್ಯಾರ್ಥಿನಿಯರ ಪ್ರವೇಶ ಪ್ರಮಾಣ ಹೆಚ್ಚುತ್ತಲೇ ಇದೆ. ವೃತ್ತಿಪರ ಕಾಲೇಜುಗಳ ಸ್ಪರ್ಧೆಯಿಂದಾಗಿ ಖಾಸಗಿ ವಿಜ್ಞಾನ ಕಾಲೇಜುಗಳನ್ನು ಮುಚ್ಚುತ್ತಿರುವ ಈ ದಿನಗಳಲ್ಲೂ ನಮಗೆ ಹೆಚ್ಚು ಹೆಚ್ಚು ಮಕ್ಕಳು ಪ್ರವೇಶ ಪಡೆಯುತ್ತಿದ್ದಾರೆ. ಪ್ರತಿ ವರ್ಷ ಹೊಸ ವಿಜ್ಞಾನ ವಿಷಯಗಳನ್ನು ಸೇರ್ಪಡೆಗೊಳಿಸುತ್ತಲೇ ಇದ್ದೇವೆ’ ಎಂದು ಹೆಮ್ಮೆಯಿಂದ ನುಡಿಯುತ್ತಾರೆ, ಪ್ರಸ್ತುತ ಪ್ರಾಂಶುಪಾಲರಾಗಿರುವ
ಪ್ರೊ. ಲಲಿತಮ್ಮ ಅವರು.

ಜೈಲಿನಲ್ಲಿ ಕಾಲೇಜು!

ತರಾತುರಿಯಲ್ಲಿ ಬೆಂಗಳೂರಿನಲ್ಲಿ ಕಾಲೇಜು ಶುರು ಮಾಡಿದ್ದರಿಂದ ಮಹಾರಾಣಿ ಕಾಲೇಜು ಕಾರ್ಯಾರಂಭ ಮಾಡಿದ್ದು ಬ್ರಿಟಿಷರ ಕಾಲದಲ್ಲಿ ಜೈಲು ಅಧೀಕ್ಷಕರ ನಿವಾಸವಾಗಿದ್ದ ಕಟ್ಟಡದಲ್ಲಿ! ‘ನೋಡಿ, ನಾನು ಕುಳಿತ ಈ ಸ್ಥಳವಿದೆಯಲ್ಲ ಇದು ಜೈಲು ಅಧಿಕಾರಿಯ ಮನೆಯಾಗಿತ್ತಂತೆ. ಆಗ ಇದು ಹೇಗಿದ್ದಿರಬಹುದು ಊಹಿಸಿ’ ಎಂದು ನಗುತ್ತಾರೆ, ಪ್ರೊ. ಲಲಿತಮ್ಮ.

ಐತಿಹಾಸಿಕ ಮಹತ್ವವಿರುವ ಈ ಕಾಲೇಜಿನಲ್ಲಿ ಓದಿದವರು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದೂ ಇದೆ. ಹಿರಿಯ ಸಂಗೀತ ವಿದ್ವಾಂಸರಾದ ಶ್ಯಾಮಲಾ ಭಾವೆ, ಉದ್ಯಮಿ ಮಧುರಾ ಛತ್ರಪತಿ, ವಿಜಾಪುರ ಮಹಿಳಾ ವಿವಿಯ ನಿವೃತ್ತ ಕುಲಪತಿ ಡಾ. ಗೀತಾ ಬಾಲಿ, ಪ್ರಾಧ್ಯಾಪಕಿ ಡಾ. ಆಶಾದೇವಿ, ಮೌಂಟ್ ಕಾರ್ಮೆಲ್‌ನಲ್ಲಿ ಸಂಶೋಧನಾ ವಿಭಾಗದ ಮುಖ್ಯಸ್ಥೆಯಾಗಿರುವ ರಾಧಾ ಕಾಳೆ, ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಡಾ. ಮೋನಿಕಾ ಘೋಶ್, ಚಿತ್ರ ನಟಿ ಭಾರತಿ ವಿಷ್ಣುವರ್ಧನ್, ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್, ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಮತ್ತು ವಿನೂ ಜಯರಾಂ ಹೀಗೆ ಸಾವಿರಾರು ಮಂದಿ... ಕಳೆದ ವರ್ಷವಷ್ಟೇ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ ನಿವೃತ್ತರಾದ ಪದ್ಮಿನಿ ಅವರು ಇಲ್ಲಿನ ಹಳೆ ವಿದ್ಯಾರ್ಥಿನಿ, ಉಪನ್ಯಾಸಕಿ, ಪ್ರಾಧ್ಯಾಪಕಿ, ಪ್ರಾಂಶುಪಾಲರಾಗಿದ್ದವರು.

‘ಮಹಾರಾಣಿ’ ಹೆಸರಿಗೆ ತಕ್ಕಂತೆ ಶಿಕ್ಷಣ ಕ್ಷೇತ್ರದ ಸವಾಲನ್ನು ಸಮರ್ಥವಾಗಿ ಎದುರಿಸಿ ಎಲ್ಲಾ ವಿಭಾಗದಲ್ಲೂ ಮುಂಚೂಣಿಯನ್ನು ಕಾಯ್ದುಕೊಂಡು ಬಂದಿದೆ. ಮೈಕ್ರೋ ಬಯಾಲಜಿ ಮತ್ತು ಬಯೋಕೆಮಿಸ್ಟ್ರಿ ಸ್ನಾತಕೋತ್ತರ ಪದವಿ ವಿಭಾಗವೂ ಅತ್ಯುತ್ತಮ ಫಲಿತಾಂಶವನ್ನು ಪಡೆಯುತ್ತಿದೆ. ಡಿಜಿಟಲೀಕರಣಗೊಂಡ ಗ್ರಂಥಾಲಯ, ಅತ್ಯುತ್ತಮ ದರ್ಜೆಯ ಪ್ರಯೋಗಾಲಯ, ತಜ್ಞರಿಂದ ಕ್ರೀಡಾ ತರಬೇತಿ– ಹೀಗೆ ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನೂ ಮಹಾರಾಣಿ ಕಾಲೇಜು ಹೊಂದಿದೆ. ಇಲ್ಲಿನ ಎನ್‌ಸಿಸಿ ಕೆಡೆಟ್ ಮೇಘನಾ 19 ಸಾವಿರ ಅಡಿ ಎತ್ತರದ ಪರ್ವತವನ್ನೇರಿ ರಾಷ್ಟ್ರೀಯ ದಾಖಲೆ ಬರೆದಿದ್ದಾಳೆ. ರಾಷ್ಟ್ರೀಯ ಮಟ್ಟದ ಕ್ರೀಡಾಳುಗಳೂ ಇಲ್ಲಿದ್ದಾರೆ. ಹೀಗೆ, ‘ಮಹಾರಾಣಿ', ಅಂದಿನ ಮಹಾರಾಣಿಯವರ ಮಹತ್ವಾಕಾಂಕ್ಷೆಯಂತೆಯೇ ಸಾಗುತ್ತಿದೆ.

‘ಅಮೃತ’ಕ್ಕೆ ವಜ್ರದ ಒಡವೆ
ಅರ್ಥಪೂರ್ಣ 75 ವಸಂತಗಳಲ್ಲಿ ಸಾಧನೆಯ ಮೈಲುಗಲ್ಲುಗಳನ್ನು ದಾಟಿ ಬಂದಿರುವ ‘ಮಹಾರಾಣಿ ಕಾಲೇಜು’ ಪ್ರಸ್ತುತ ವಜ್ರದ ಬೆಳಕಿನಲ್ಲಿ ಮಿರಿಮಿರಿ ಮಿಂಚುತ್ತಿದೆ.

‘ವಜ್ರ ಮಹೋತ್ಸವ’ವನ್ನು ಅವಿಸ್ಮರಣೀಯ ವಾಗಿಸಲು ವರ್ಷವಿಡೀ ಕಾರ್ಯಕ್ರಮಗಳು ತಯಾರಾಗಿವೆ. ಹೊಸ ರಂಗಮಂದಿರ ನಿರ್ಮಾಣ, ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳಿಂದ ಉಪನ್ಯಾಸ ಮಾಲಿಕೆ, ವೈವಿಧ್ಯಮಯ ಸಾಂಸ್ಕೃತಿಕ ಉತ್ಸವ, ಕಲಾ ಶಿಬಿರ, ಕಮ್ಮಟ, ತರಬೇತಿಗಳು, ವಿವಿಧ ಹಂತದ ಕ್ರೀಡೋತ್ಸವಗಳು– ಹೀಗೆ ಸಾಲು ಸಾಲು ಕಾರ್ಯಕ್ರಮಗಳು.
ರಾಜಧಾನಿಯ ಅನೇಕ ಕಾಲೇಜುಗಳು ಶಿಕ್ಷಣದ ವ್ಯಾಪಾರೀಕರಣದ ಪ್ರಭೆಯಲ್ಲಿ ಕಂಗೊಳಿಸುತ್ತಿರುವ ದಿನಗಳಲ್ಲಿ, ಉದಾತ್ತ ಧ್ಯೇಯದ ಕಾರಣದಿಂದ ವರ್ಷದಿಂದ ವರ್ಷಕ್ಕೆ ಇನ್ನಷ್ಟು ಪ್ರಸ್ತುತವಾಗುತ್ತಲೇ ಇರುವ ವಿದ್ಯಾಸಂಸ್ಥೆಯೊಂದು ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದಕ್ಕೆ ವಿಶೇಷ ಮಹತ್ವವಿದೆ.

ಓದಿದಲ್ಲೇ ಪಾಠ ಮಾಡುವ ಹೆಮ್ಮೆ...’

ಓದಿದ ಕಾಲೇಜಿನಲ್ಲೇ ಪ್ರಾಧ್ಯಾಪಕರಾಗಿ ಕೆಲಸ ಮಾಡುವುದಕ್ಕಿಂತ ದೊಡ್ಡ ಹೆಮ್ಮೆ ಇನ್ನೇನಿದೆ ಎನ್ನುತ್ತಾರೆ, ಪ್ರಸ್ತುತ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಹೇಮಲತಾ.

ಈಗಿನ ಪ್ರಾಂಶುಪಾಲರಾದ ಪ್ರೊ. ಲಲಿತಮ್ಮ ಅವರ ವಿದ್ಯಾರ್ಥಿನಿಯಾಗಿದ್ದ ಹೇಮಲತಾ, ‘ಈಗ ಮಕ್ಕಳು ಮತ್ತು ಗುರುಗಳು ಸ್ನೇಹಿತರಂತಿರುತ್ತೇವೆ. ನಮ್ಮ ಕಾಲದಲ್ಲಿ ಗುರುಗಳನ್ನು ಕಂಡರೆ ಭಯವಾಗ್ತಿತ್ತು. ಅಪ್ಪಿತಪ್ಪಿ ಮಾತನಾಡಿದರೂ ಪಠ್ಯಕ್ಕೆ ಸಂಬಂಧಿಸಿದ್ದಷ್ಟೇ ಆಗಿರುತ್ತಿತ್ತು. ಬಹುತೇಕ ಎಲ್ಲರೂ ಶಿಸ್ತಿನ ವಿದ್ಯಾರ್ಥಿಗಳಾಗಿದ್ದೆವು’ ಎಂದು ನೆನೆಯುತ್ತಾರೆ.

ಜಯಮಹಲ್‌ನಿಂದ ನಡೆಯುತ್ತಾ...

ಮತ್ತೋರ್ವ ಹಿರಿಯ ಪ್ರಾಧ್ಯಾಪಕಿ ಸಾಯಿದಾಬಾನು, 1976ರಲ್ಲಿ ಹೊರಬಂದ ತಂಡದವರು. ಜಯಮಹಲ್‌ನ ತಮ್ಮ ಮನೆಯಿಂದ ನಡೆದುಕೊಂಡೇ ಬರುತ್ತಿದ್ದರಂತೆ. ‘ನಮಗೆ ಟೀಚರ್ಸ್‌ ಅಂದ್ರೆ ಭಯವಿತ್ತಾದರೂ ಸುಶೀಲಾ ಮೇಡಂ ಮಾತ್ರ ತಮ್ಮ ಕಪ್ಪು ಕಾರಿನಲ್ಲಿ ನಮ್ಮನ್ನು ಮನೆಗೆ ಡ್ರಾಪ್ ಮಾಡುತ್ತಿದ್ದುದು ಮರೆಯಲಾಗಲ್ಲ. ನಮಗಾಗಿ ಕಾದು ಕುಳಿತು ಕರೆದೊಯ್ಯುತ್ತಿದ್ದರು. ಕಾಲೇಜಿನಾಚೆ ನಮಗೆ ಅವರೂ ಸ್ನೇಹಿತೆಯೇ ಆಗಿರುತ್ತಿದ್ದರು. ಕಾಲೇಜಿನ ಸುತ್ತಮುತ್ತ ಕಾಡಿನಂತೆ ಮರಗಳಿದ್ದವು. ಈಗ ಬರಡು’ ಎಂದು ಭಾವುಕರಾಗುತ್ತಾರೆ, ಸಾಯಿದಾ ಬಾನು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT