ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಂಗಭೂಮಿ ಬದುಕಿನ ಭಾಗವಾಗಲಿ’

ನಾಟಕ ಅಕಾಡೆಮಿ, ರಂಗಾಯಣ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ
Last Updated 28 ಮಾರ್ಚ್ 2016, 5:24 IST
ಅಕ್ಷರ ಗಾತ್ರ

ಧಾರವಾಡ: ‘ದೇಶಿಯ ರಂಗಭೂಮಿ ಉಳಿದರೆ ಮಾತ್ರ ಜಾಗತಿಕ ರಂಗಭೂಮಿಯ ವಿದ್ಯಮಾನಗಳನ್ನು, ಬದಲಾವಣೆಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ’ ಎಂದು ಧಾರವಾಡ ರಂಗಾಯಣ ನಿರ್ದೇಶಕ ಡಾ.ಪ್ರಕಾಶ ಗರೂಡ ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿ, ರಂಗಾಯಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ  ಇಲ್ಲಿನ ರಂಗಾಯಣ ಆವರಣದಲ್ಲಿರುವ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.

‘ಸ್ಥಳೀಯ ಮತ್ತು ದೇಶಿಯ ರಂಗಭೂಮಿಯ ಬೇರುಗಳು ಗಟ್ಟಿಯಾಗಿದ್ದರೆ ಜಾಗತಿಕ ರಂಗಭೂಮಿ ಬೆಳೆಯಲು ಸಾಧ್ಯ. ರಂಗಭೂಮಿ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಅದು ನಿತ್ಯ ಬದುಕಿನ ಚಟುವಟಿಕೆ ಭಾಗವಾಗಬೇಕು’ ಎಂದರು.

‘ಜಾಗತಿಕ ರಂಗಭೂಮಿ ಎಂದಾಕ್ಷಣ ನಮ್ಮ ಮುಂದೆ ನವ್ಯೋತ್ತರ ರಂಗಭೂಮಿಯ ಅಂಶಗಳು ಮಹತ್ವ ಪಡೆದುಕೊಳ್ಳುತ್ತವೆ. ಆದರೆ ಭಾರತೀಯ ಮತ್ತು ಕನ್ನಡ ರಂಗಭೂಮಿಯ ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳಲ್ಲೂ ನವ್ಯೋತ್ತರ ರಂಗಭೂಮಿಯ ಅಂಶಗಳು ನಮಗೆ ದಕ್ಕುತ್ತವೆ. ಸಾಮಾಜಿಕ ಜೀವನದ ಪರಿಶುದ್ಧತೆಯನ್ನು ಪ್ರಶ್ನಿಸುವುದೇ ರಂಗಭೂಮಿಯ ಪ್ರಮುಖ ಆಶಯ, ಬದಲಾಗುತ್ತಿರುವ ಸಂದರ್ಭದಲ್ಲಿ ರಂಗಭೂಮಿ ಪ್ರಮುಖ ಆಶಯದಿಂದ ವಿಮುಖವಾಗುತ್ತಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ’ ಎಂದು ಹೇಳಿದರು.

‘ಆರಂಭದಿಂದಲೂ ಸಮಾಜವನ್ನು ಕಟ್ಟುವ ಕ್ರಿಯೆಯಲ್ಲಿ ತೊಡಗಿಕೊಂಡಿರುವ ರಂಗಭೂಮಿ ಅಪ್ಪಟ, ಸ್ಪಷ್ಟ ಜ್ಯಾತ್ಯತೀತ ಕಲ್ಪನೆಯಲ್ಲಿಯೇ ಬೆಳೆದು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ನುಸುಳುತ್ತಿರುವ ಜಾತೀಯತೆ ರಂಗಭೂಮಿಯಲ್ಲೂ ಕಂಡು ಬರುತ್ತಿರುವುದು ವಿಷಾದದ ಸಂಗತಿ. ಇದನ್ನು ರಂಗಕರ್ಮಿಗಳು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಇದರಿಂದ ಹೊರಬರುವ ಮಾರ್ಗಗಳ ಕುರಿತು ಚಿಂತನೆ ನಡೆಯಬೇಕಿದೆ. ಸ್ಪಷ್ಟ ತಾತ್ವಿಕ ನೆಲೆಯಲ್ಲಿ ರಂಗಭೂಮಿಯನ್ನು ಪ್ರೀತಿಸುವ ಅಗತ್ಯವಿದೆ’ ಎಂದು ಹೇಳಿದರು. 

‘ಒಂದು ಕಾಲದಲ್ಲಿ ಮನರಂಜನೆ ಜೊತೆ ಭಾವನಾತ್ಮಕ ಆಯಾಮ ಹೊಂದಿದ್ದ ರಂಗಭೂಮಿಯಲ್ಲಿ ವೈವಿಧ್ಯಮಯ ಪ್ರಯೋಗಗಳು ನಡೆಯುತ್ತಿವೆ. ಜಗತ್ತಿನ ಬೇರೆ, ಬೇರೆ ಭಾಗಗಳಲ್ಲಿ ನಡೆಯುತ್ತಿರುವ ರಂಗಭೂಮಿಯ ವಿದ್ಯಮಾನಗಳು, ಪ್ರಯೋಗಗಳನ್ನು ಗಮನಿಸಿ, ದೇಶಿಯ ರಂಗಭೂಮಿಯಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನಗಳು ನಡೆಯಬೇಕು.

ವಿಶ್ವ ರಂಗಭೂಮಿ ದಿನಾಚರಣೆ ಸಂದರ್ಭದಲ್ಲಿ ಪ್ರಸ್ತುತ ರಂಗಭೂಮಿ ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳ ಕುರಿತು ಚಿಂತನೆ ನಡೆದು, ಹೊಸ ಮಾರ್ಗಸೂಚಿಗಳನ್ನು ಹುಡುಕುವ ಅವಶ್ಯಕತೆ ಇದೆ’ ಎಂದು ಡಾ.ಗರೂಡ ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ಶಿವಾನಂದ ಶೆಟ್ಟರ, ಕೆ.ಜಗುಚಂದ್ರ, ವಿಠಲ ಕೊಪ್ಪದ, ನಿಂಗಣ್ಣ ಕುಂಟಿ, ಡಾ.ಲಿಂಗರಾಜ ಅಂಗಡಿ ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ ಅನಂತ ದೇಶಪಾಂಡೆ ನಡೆಸಿಕೊಟ್ಟ ವರಕವಿ ಡಾ.ದ.ರಾ.ಬೇಂದ್ರೆ ಅವರ ಅನುಕರಣೆ ರಂಗಾಸಕ್ತರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT