ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರಿಗೆ ಬಡ್ಡಿ ದರದ ಹೊರೆ’

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ
Last Updated 10 ಜನವರಿ 2014, 7:56 IST
ಅಕ್ಷರ ಗಾತ್ರ

ಕೌಜಲಗಿ (ಗೋಕಾಕ):  ರೈತರ ಬದುಕನ್ನು ಹಸನಾಗಿಸಲು ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿ ಸಂಘಗಳಿಗೆ ಪತ್ತನ್ನು ಬಿಡುಗಡೆಗೊಳಿಸುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಲಕ್ಷ್ಮಣ ಸವದಿ ಅವರನ್ನು ಕೋರಿದರು.

ಗುರುವಾರ ಗ್ರಾಮದ ದೇಸಾಯರ ರಾಜವಾಡೆಯಲ್ಲಿ ಜರುಗಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಡ್ಡಿದರ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಕೃಷಿಕರಿಗೆ ಸಾಲ ಮರು ಪಾವತಿಸಲು ಹೊರೆಯಾಗುತ್ತಿದೆ. ಈ ದಿಸೆಯಲ್ಲಿ ರೈತರ ಪರಿಸ್ಥಿತಿಯನ್ನು ಗಮನಿಸಿ ಸಂಘಗಳ ಸದಸ್ಯರಿಗೆ ಆರ್ಥಿಕವಾಗಿ ನೆರವಾಗಲು ಪತ್ತಿನಿಂದ ಹೆಚ್ಚಿನ ಸಾಲ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಬಹುವರ್ಷಗಳ ಬೇಡಿಕೆಯಾಗಿರುವ ಕೌಜಲಗಿ ತಾಲ್ಲೂಕು ರಚನೆಗೆ ಬೆಂಬಲ ವ್ಯಕ್ತಪಡಿಸಿದ ಅವರು, ಜಗದೀಶ್‌  ಶೆಟ್ಟರ್‌ ನೇತೃತ್ವದ ಸರ್ಕಾರ ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಿದ್ದರೂ ಅವುಗಳು ಇದುವರೆಗೂ ಜಾರಿಗೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅಥಣಿ ಶಾಸಕ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಲಕ್ಷ್ಮಣ ಸವದಿ ಅವರು, ಗೋಕಾಕ ತಾಲ್ಲೂಕಿನ ಸಹಕಾರಿ ಸಂಘಗಳಿಗೆ ಈಗಾಗಲೇ  ರೂ. 110ಕೋಟಿಗಳ ಸಾಲ ವಿತರಿಸಲಾಗಿದೆ. ತಾಲ್ಲೂಕಿನ ರೈತರ ಹಿತದೃಷ್ಟಿಯಿಂದ ಸಂಘಗಳ ಎಲ್ಲ ಸದಸ್ಯರಿಗೆ ಇನ್ನೂ ರೂ. 50 ಕೋಟಿಗಳ ಸಾಲ ನೀಡಲು ಡಿಸಿಸಿ ಬ್ಯಾಂಕ್‌ ಸಿದ್ಧವಿದೆ ಎಂದು ಹೇಳಿದರು.
108 ವರ್ಷಗಳ ಹಿಂದೆ ಗದಗ ಜಿಲ್ಲೆಯ ಕಣಗಿನಾಳದ ಸಿದ್ಧನಗೌಡ ಪಾಟೀಲ ಅವರು ಏಷ್ಯಾ ಖಂಡದಲ್ಲಿಯೇ ಮೊಟ್ಟಮೊದಲ ಬಾರಿಗೆ ಕೃಷಿ ಪತ್ತಿನ ಸಂಘವನ್ನು ಸ್ಥಾಪಿಸಿ ಆ ಮೂಲಕ ಸಹಕಾರಿ ಚಳವಳಿಗೆ ಚಾಲನೆ ನೀಡಿದರು.

ಸಿದ್ದನಗೌಡ ಪಾಟೀಲರ ಕನಸಿನ ಕೂಸಾದ ಸಹಕಾರಿ ಸಂಘಗಳ ಬಲವರ್ಧನೆಗೆ ನಮ್ಮ ಬ್ಯಾಂಕ್‌ ಆರ್ಥಿಕ ನೆರವು ನೀಡಲು ಸಿದ್ಧವಿದೆ. ವೈದ್ಯನಾಥನ್ ವರದಿ ಅನ್ವಯ ಈ ಸಂಘ ಹಾನಿಯಲ್ಲಿದ್ದರೂ ಬ್ಯಾಂಕಿನಿಂದ ರೂ. 55 ಲಕ್ಷ,  ಸಹಾಯ ಮಾಡಿದ್ದೇವೆ.  ಅಲ್ಲದೇ  ಮಳಿಗೆಗಳ ನಿರ್ಮಾಣಕ್ಕೂ ಸಹ ಸಾಲ ನೀಡಲು ಸಿದ್ಧರಿದ್ದೇವೆ. ಕೇವಲ ಸಂಘಗಳನ್ನು ಹುಟ್ಟುಹಾಕದೇ ಅವುಗಳ ಪ್ರಗತಿಗೆ ಗ್ರಾಮಸ್ಥರು ಪಕ್ಷಬೇಧ ಮರೆತು ಈ ಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಅಂದಾಗ ಮಾತ್ರ ಸಹಕಾರಿ ಸಂಘಗಳು ಬಲವರ್ಧನೆಗೊಳ್ಳಲು ಸಾಧ್ಯವೆಂದು ಸವದಿ  ಹೇಳಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಅವರು ಕೌಜಲಗಿ ಪಿಕೆಪಿಎಸ್ ಶತಮಾನೋತ್ಸವದ ನಿಮಿತ್ಯ ಹೊರತಂದಿರುವ ‘ಕೌತುಕ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಸಾನಿಧ್ಯವನ್ನು ಬಾಗೋಜಿಕೊಪ್ಪದ ಮುರುಘ ರಾಜೇಂದ್ರ ಸ್ವಾಮಿಗಳು ವಹಿಸಿ ಆಶೀರ್ವನ ನೀಡಿದರು,
ವೇದಿಕೆಯಲ್ಲಿ ವಿಠ್ಠಲ ದೇವಋಷಿ, ಮುಖಂಡ ಅರವಿಂದ ದಳವಾಯಿ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಸುಭಾಷ ಢವಳೇಶ್ವರ, ಶಿವಾನಂದ ಡೋಣಿ, ಪಿಕೆಪಿಎಸ್ ಅಧ್ಯಕ್ಷ ನಾರಾಯಣ ಅರಮನಿ ಮತ್ತು ಶಿವಾನಂದ ಲೋಕನ್ನವರ, ಶಶಿಕಲಾ ಸಣ್ಣಕ್ಕಿ, ಅಶೋಕ ಉದ್ದಪ್ಪನವರ ಹಾಗೂ ಆಡಳಿತ ಮಂಡಳಿಯ ದಿಗ್ದರ್ಶಕರು ಉಪಸ್ಥಿತಿದ್ದರು.

ಇದೇ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿ  ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT