ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಕ್ಷ್ಮಿಪುರ’ ಸಮಸ್ಯೆಗಳ ಆಗರ

Last Updated 24 ಡಿಸೆಂಬರ್ 2013, 6:26 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನ ಲಕ್ಷ್ಮಿಪುರ ಐತಿಹಾಸಿಕ ಗ್ರಾಮ. ಸುರಪುರವನ್ನು ಆಳಿದ ಗೋಸಲ ದೊರೆಗಳ ರಾಣಿ ಲಕ್ಷ್ಮಿದೇವಿ ಹೆಸರಿನಲ್ಲಿ ಅಂದಿನ ರಾಜರು ಈ ಗ್ರಾಮಕ್ಕೆ ಹೆಸರನ್ನು ಇಟ್ಟರು. ಆದರೆ ಈ ಗ್ರಾಮ ಈಗ ಮೂಲಸೌಕರ್ಯ­ವಿಲ್ಲದೆ ನರಳುತ್ತಿದೆ.

ಅರಕೇರಾ (ಕೆ.) ಎಂದೂ ಕರೆಯಲ್ಪ­ಡುವ ಈ ಗ್ರಾಮ, ಗ್ರಾಮ ಪಂಚಾಯಿತಿ ಕೇಂದ್ರ ಹೊಂದಿದೆ. ಲಕ್ಷ್ಮಿಪುರ ಮತ್ತು ಬಿಜಾಸಪುರ ಈ ಎರಡು ಗ್ರಾಮಗಳು ಸೇರಿ ಈ ಪಂಚಾಯಿತಿ ನಿರ್ಮಾಣ­ಗೊಂಡಿದೆ. ಲಕ್ಷ್ಮಿಪುರದ 7 ಮತ್ತು ಬಿಜಾಸಪುರದ 8 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ.

ಲಕ್ಷ್ಮಿಪುರ ಮೂರು ಸಾವಿರ ಜನಸಂಖ್ಯೆ ಹೊಂದಿದೆ. ತಾಲ್ಲೂಕು ಕೇಂದ್ರ ಸುರಪುರದಿಂದ ಕೇವಲ ಆರು ಕಿ.ಮೀ. ಅಂತರದಲ್ಲಿದೆ. ಆದರೂ ಸೌಕರ್ಯಗಳಿಂದ ವಂಚಿತವಾಗಿದ್ದು, ವಿಪರ್ಯಾಸ. ಊರಿನ ಜನ ಪರಿಸ್ಥಿತಿಗೆ ಹೊಂದಿಕೊಂಡು ಸುಮ್ಮನಿದ್ದಾರೆ.

ಮಹಿಳಾ ಶೌಚಾಲಯ ಇದ್ದರೂ ಉಪಯೋಗವಿಲ್ಲಂತಾಗಿದೆ. ಇದರ ಸುತ್ತಲೂ ಮುಳ್ಳುಕಂಟಿ ಬೆಳೆದಿರು­ವುದರಿಂದ ಶೌಚಾಲಯಕ್ಕೆ ಹೋಗಲು ದಾರಿಯೇ ಇಲ್ಲ. ಜೊತೆಗೆ ನೀರು ಮತ್ತು ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಕಾರಣ ಮಹಿಳೆಯರ ಪಾಡು ಹೇಳತೀರದಾಗಿದೆ.
ಗ್ರಾಮದಲ್ಲಿ ಸಿ.ಸಿ. ರಸ್ತೆ, ಚರಂಡಿ ಇಲ್ಲವೇ ಇಲ್ಲ. ಗ್ರಾಮದ ಒಳ ರಸ್ತೆಗಳು ಮುಳ್ಳು ಕಂಟಿಗಳಿಂದ ಆವೃತವಾಗಿ­ರುವುದರಿಂದ ಹದಗೆಟ್ಟಿವೆ. ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಬಚ್ಚಲು ಮತ್ತು ಕೊಳಚೆ ನೀರು ರಸ್ತೆಯ ಮೇಲೆಯೆ ಹರಿಯುತ್ತದೆ.

ಇದರಿಂದ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಅಧಿಕವಾಗಿದೆ. ಜಾನುವಾರು­ಗಳಿಗೂ ಇಲ್ಲಿ ಸೊಳ್ಳೆ ಪರದೆ ಉಪಯೋಗಿಸುತ್ತಾರೆ! ಫಾಗಿಂಗ್ ಮಾಡಿಲ್ಲ. ಅಂಗನವಾಡಿ ಕೇಂದ್ರದ ಸುತ್ತಲೂ ಹೊಲಸು ಸಾಮಾನ್ಯ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ಚರಂಡಿ ನೀರು ಹರಿಯುತ್ತದೆ.

ಗ್ರಾಮ ಪ್ರವೇಶದ ಮುಖ್ಯ ರಸ್ತೆ ಹೊಲಸಿನಿಂದ ಕೂಡಿದೆ. ರಸ್ತೆಯ ಬದಿಯಲ್ಲಿ ಮಲ–ಮೂತ್ರ ವಿಸರ್ಜನೆ ಮಾಡಲಾಗುತ್ತದೆ. ಗ್ರಾಮ ತುಂಬೆಲ್ಲ ತಿಪ್ಪೆಗುಂಡಿಗಳು ಸಾಮಾನ್ಯ. ಆಸ್ಪತ್ರೆ ಇಲ್ಲದಿರುವುದರಿಂದ ರೋಗಿಗಳಿಗೆ ತೊಂದರೆ ಇದೆ. ಕಿರು ನೀರು ಸರಬರಾಜು ಯೋಜನೆ ಇದ್ದರೂ ಸಮರ್ಪಕವಾಗಿಲ್ಲ. ಕೊಳವೆ ಬಾವಿ­ಗಳಿಗೆ ಕೆಂಪು ಬಣ್ಣ ಬಳಿಯಲಾಗಿದ್ದು, ಆರ್ಸೇನಿಕ್ ಅಂಶ ಇರುವುದರಿಂದ ನೀರು ಉಪಯೋಗಿಸದಿರುವಂತೆ ಸೂಚಿಸಲಾಗಿದೆ.

ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಈಗ ಅದನ್ನು ಸ್ಥಗಿತಗೊಳಿಸಿರುವುದರಿಂದ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ. ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಆದರೆ ಅದು ಕಾರ್ಯಾರಂಭ ಮಾಡಬೇಕಿದೆ.

‘ನಮ್ಮ ಗ್ರಾಮ ಸೌಕರ್ಯಗಳಿಂದ ವಂಚಿತವಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಡಿದ ಮನವಿ ಪ್ರಯೋಜನವಾಗಿಲ್ಲ. ಮಹಿಳೆಯರು ಬಯಲು ಶೌಚಾಲಯ ಅವಲಂಬಿಸಿ­ರು­ವುದು ನಮ್ಮ ದುರ್ದೈವ. ಕುಡಿವ ನೀರು ಒದಗಿಸಬೇಕು’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಮಲ್ಕಪ್ಪ ಶುಕ್ಲ.


‘ಸೌಕರ್ಯ ಒದಗಿಸಿ’

ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾದರೂ ಹದಗೆಟ್ಟಿರುವುದು ವಿಪರ್ಯಾಸ. ಕನಿಷ್ಟ ಕುಡಿವ ನೀರು, ನೈರ್ಮಲ್ಯ, ರಸ್ತೆ ಒದಗಿಸದಿದ್ದರೆ ಪಂಚಾಯಿತಿ ವ್ಯವಸ್ಥೆಗೆ ಅರ್ಥವಿಲ್ಲ. ಸಾಕಷ್ಟು ಅನುದಾನ ಇದ್ದರೂ ಸದ್ಬಳಕೆ ಆಗದಿರುವುದು ದುರಂತ.
–ವೆಂಕಟೇಶ ಪುಡೂರ, ಗ್ರಾ.ಪಂ. ಸದಸ್ಯ

‘ಅನುದಾನದ ಸದ್ಬಳಕೆ’
ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿವೆ. ವಿರೋಧ ಪಕ್ಷದ ಸದಸ್ಯರ ಅಸಹಕಾರದಿಂದ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಗ್ರಾ.ಪಂ. ಸಿಬ್ಬಂದಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ.
–ಆಶಣ್ಣ ಮಡಿವಾಳಕರ, ಗ್ರಾ.ಪಂ. ಸದಸ್ಯ

‘ಶೀಘ್ರದಲ್ಲಿ ನೀರಿನ ವ್ಯವಸ್ಥೆ’

ನೀರು ಶುದ್ಧೀಕರಣ ಘಟಕ್ಕೆ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕಿದೆ. ಶೀಘ್ರದಲ್ಲಿ ಘಟಕ ಆರಂಭಿಸಲಾಗುವುದು. ಶೌಚಾಲಯವನ್ನು ಶೀಘ್ರದಲ್ಲಿ ಆರಂಭಿಸಲಾಗುವುದು.
–ಡಿ.ಎನ್.ಹಳ್ಳಿ, ಗ್ರಾ.ಪಂ. ಪ್ರಭಾರಿ ಅಭಿವೃದ್ಧಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT