ನೀವೇ ಮಾಡಿ ಕೊಡಿ ಐಸ್ ಕ್ಯಾಂಡಿ...

ಗುರುವಾರ , ಏಪ್ರಿಲ್ 25, 2019
33 °C

ನೀವೇ ಮಾಡಿ ಕೊಡಿ ಐಸ್ ಕ್ಯಾಂಡಿ...

Published:
Updated:
Prajavani

‘ಅಮ್ಮಾ ಸೆಖೆ ಆಗ್ತಿದೆ ತಣ್ಣಗೆ ಏನಾದರೂ ಕೊಡಮ್ಮಾ’ ಎಂದು ಬೇಸಿಗೆಯಲ್ಲಿ ಮಕ್ಕಳು ಕೇಳುವುದು ಸಾಮಾನ್ಯ. ಮನೆಯಿಂದಾಚೆ ಹೋದಾಗ ಐಸ್‌ಕ್ಯಾಂಡಿ, ಗೋಲಾ, ಐಸ್‌ ಲಾಲಿಪಾಪ್‌ ಕೊಡಿಸುವಂತೆ ದುಂಬಾಲು ಬೀಳುತ್ತಾರೆ. ಮಕ್ಕಳ ಹಟಕ್ಕೆ ಸೋತರೂ ಅವುಗಳಿಗೆ ಬಳಸಿರುವ ನೀರು, ಸಕ್ಕರೆ, ಹಣ್ಣಿನ ರಸ, ಬಣ್ಣ ಎಂತಹುದೋ ಎಂಬ ಅಂಶ ಹಿಂದೇಟು ಹಾಕಿಸುತ್ತದೆ.

ಹೊರಗೆ ಹೋದಾಗ ಮಕ್ಕಳು ಕಂಡ ಕಂಡಲ್ಲಿ ಇಂತಹ ತಂಪು ಆಹಾರಗಳನ್ನು ಸವಿಯಲು ಆಸೆಪಡುವುದು ಸಹಜ. ಆದರೆ ಹೊರಗಿನ ಆಹಾರದ ಗುಣಮಟ್ಟದ ಬಗ್ಗೆ ಕಾಳಜಿ ವಹಿಸಬೇಕಾದ್ದು ನಮ್ಮ ಕರ್ತವ್ಯ. ಹಾಗಾಗಿ ಮನೆಯಲ್ಲೇ ಈ ತಂಪು ತಂಪು ಕೂಲ್‌ ಕೂಲ್‌ ರುಚಿಗಳನ್ನು ಸವಿಯಲು ಅವಕಾಶ ಮಾಡಿಕೊಡೋದೇ ಸೂಕ್ತ. ಮನೆಯಲ್ಲಿ ಲಭ್ಯವಿರುವ ಹಣ್ಣು, ತರಕಾರಿ, ಸೊಪ್ಪು ಮತ್ತು ಹಾಲನ್ನು ಬಳಸಿ ಯಾವುದೇ ಕೃತಕ ಅಂಶಗಳನ್ನು ಸೇರಿಸಿದೆಯೇ ಕ್ಯಾಂಡಿ, ಕುಲ್ಫಿ, ಐಸ್‌ಕ್ರೀಂ ತಯಾರಿಸಬಹುದು.

ಬನ್ನಿ ಒಂದಿಷ್ಟು ಕ್ಯಾಂಡಿಗಳನ್ನು ಮಾಡಿಯೇಬಿಡೋಣ... ಕ್ಯಾಂಡಿ ಮಾಡಬೇಕಾದರೆ ಕ್ಯಾಂಡಿ/ಕುಲ್ಫಿ ಮೌಲ್ಡ್‌ ಇರಬೇಕು. ಐಸ್‌ ಟ್ರೇ ಮಾದರಿಯ ಮೌಲ್ಡ್ ಮಾರುಕಟ್ಟೆಯಲ್ಲಿ ಮತ್ತು ಆನ್‌ಲೈನ್‌ನಲ್ಲಿ ಸಿಗುತ್ತದೆ. ಹೊರಗಿನ ಆಹಾರದ ಗುಣಮಟ್ಟದ ಬಗ್ಗೆ ಕಾಳಜಿ ವಹಿಸುವ ನಾವು ಮನೆಯಲ್ಲಿ ಮಾಡುವಾಗಲೂ ಅಗ್ಗದ ಪ್ಲಾಸ್ಟಿಕ್ ಟ್ರೇ ಮತ್ತು ಕಡ್ಡಿಗಳನ್ನು ಬಳಸಬಾರದಲ್ಲ? ಹಾಗಾಗಿ ಫುಡ್‌ ಗ್ರೇಡ್‌ನ ಟ್ರೇ, ಮೌಲ್ಡ್‌ ಮತ್ತು ಸ್ಟಿಕ್‌ಗಳನ್ನೇ ಆರಿಸಿಕೊಳ್ಳಲು ಮರೆಯಬೇಡಿ ಮತ್ತೆ.

ಕಲ್ಲಂಗಡಿ ಕ್ಯಾಂಡಿ

ಕಲ್ಲಂಗಡಿ ಹಣ್ಣಿನಲ್ಲಿ ಯಥೇಚ್ಛ ನೀರು ಮತ್ತು ನಾರಿನಂಶ ಇರುವ ಕಾರಣ ಬೇಸಿಗೆಯಲ್ಲಿ ಅಗ್ಗದ ದರದಲ್ಲಿ ದಾಹ ನೀಗಿಸಿಕೊಳ್ಳಬಹುದು. ಕಲ್ಲಂಗಡಿ ಹಣ್ಣನ್ನು ಬೀಜ ತೆಗೆದು ನೀರು ಹಾಕದೇ ಜ್ಯೂಸ್‌ ಜಾರ್‌ನಲ್ಲಿ ರುಬ್ಬಿಕೊಳ್ಳಿ.

ಮೌಲ್ಡ್‌ನ ಮುಕ್ಕಾಲು ಭಾಗ ತುಂಬಿಕೊಳ್ಳುವಂತೆ ರಸವನ್ನು ಸುರಿದು ಮಧ್ಯದಲ್ಲಿ ಸ್ಟಿಕ್‌ ಇರಿಸಿ ಫ್ರೀಜರ್‌ನಲ್ಲಿರಿಸಿ. ಅತಿಯಾದ ಕೋಲ್ಡ್‌ ಕೂಡಾ ಬೇಸಿಗೆಗೆ ಸೂಕ್ತವಲ್ಲ. ಹಾಗಾಗಿ ಎರಡರಿಂದ ಮೂರು ಗಂಟೆ ಫ್ರೀಜ್‌ ಮಾಡಿ ಸವಿಯಲು ಕೊಡಿ. 

ಇದೇ ರೀತಿ ದ್ರಾಕ್ಷಿ, ದಾಳಿಂಬೆ, ಕಿತ್ತಳೆ, ಮೂಸಂಬಿ, ಕಿವಿ, ಲಿಚಿ, ಪರಂಗಿ, ಅನಾನಸು ಹಣ್ಣುಗಳಿಂದ ಬಣ್ಣ ಬಣ್ಣದ ಕ್ಯಾಂಡಿ ಮಾಡಿಕೊಡಿ.

ಐಸ್‌ ಗೋಲಾದ ಮೌಲ್ಡ್‌ ಅಥವಾ ಟ್ರೇಗಳನ್ನು ಮನೆಯಲ್ಲಿಟ್ಟುಕೊಂಡರೆ ಇದೇ ರಸಗಳಿಂದ ಗೋಲಾ ಮಾಡಿಕೊಡಬಹುದು. ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌ ಕವರ್‌ಗಳಿದ್ದರೆ ಲಾಲಿಪಾಪ್‌ ಮಾಡಬಹುದು. 

ಬೇಸಿಗೆಯಲ್ಲಿ ಕಲುಷಿತ ನೀರು ಮತ್ತು ಆಹಾರ ಸೇವನೆ ಆರೋಗ್ಯಕ್ಕೆ ಮಾರಕ. ಹಾಗಾಗಿ ಹೊರಗಿನ ತಂಪು ಆಹಾರಗಳನ್ನು ಸೇವಿಸದಂತೆ ಮಕ್ಕಳನ್ನು ಓಲೈಸಲು ಅಡುಗೆ ಮನೆಯಲ್ಲೇ ಸರಳೋಪಾಯಗಳಿವೆ‍!

ಸಕ್ಕರೆ, ಬಣ್ಣದ ಅಗತ್ಯವಿಲ್ಲ

ಮಕ್ಕಳು ಸಿಹಿ ಬಯಸುವುದು ಸಹಜ. ಆದರೆ ಸಕ್ಕರೆ ಸೇವನೆಯನ್ನು ಸಾಧ್ಯವಾದಷ್ಟು ನಿಯಂತ್ರಿಸುವುದು ಸೂಕ್ತ. ಸಹಜವಾಗಿ ಬೆಳೆದು ಕಳಿತ ಹಣ್ಣುಗಳನ್ನು ಆರಿಸಿಕೊಂಡರೆ ಸಿಹಿಯೂ ನೈಸರ್ಗಿಕವಾಗಿಯೇ ಇರುತ್ತದೆ. ಅಂತಹ ಹಣ್ಣುಗಳ ರಸವೂ ಸಹಜವಾಗಿ ಉತ್ತಮವಾಗಿರುತ್ತದೆ. ಹಾಗಾಗಿ ಸಕ್ಕರೆ ಮತ್ತು ಬಣ್ಣ ಸೇರಿಸುವ ಅಗತ್ಯವೇ ಇರುವುದಿಲ್ಲ.

ಕ್ಯಾಂಡಿಗೊಂದಿಷ್ಟು ಸತ್ವ ಬೆರೆಸಿ

ಹೊರಗೆ ಸಿಗುವ ಕ್ಯಾಂಡಿಗಳು ಸಕ್ಕರೆ ಮತ್ತು ಬಣ್ಣಯುಕ್ತ ನೀರಿನ ಐಸ್‌ ರೂಪಗಳಾಗಿರುತ್ತವೆ. ಮನೆಯಲ್ಲಿ ತಯಾರಿಸುವಾಗ ಒಂದಿಷ್ಟು ಜಾಣ್ಮೆಯನ್ನೂ ಬೆರೆಸಿದರೆ ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುವ ಜೊತೆಗೆ ಆರೋಗ್ಯಕ್ಕೆ ಹಿತಕರವಾಗಿಸಬಹುದು.

* ಕ್ಯಾಂಡಿಗಾಗಿ ಹಣ್ಣುಗಳ ರಸ ತಯಾರಿಸುವಾಗ ಏಲಕ್ಕಿ ಮತ್ತು ಕಾಳುಮೆಣಸಿನ ಪುಡಿಯನ್ನು ಒಂದೊಂದು ಚಿಟಿಕೆ ಸೇರಿಸಿ

* ಉಪ್ಪು ಸೇರಿಸಲೇಬೇಕಾದರೆ ಸೈಂಧವ ಲವಣ ಅಥವಾ ರಾಕ್‌ ಸಾಲ್ಟ್‌ ಬಳಸಿ

* ಒಂದೊಂದು ಹಿಡಿ ತುಳಸಿ ಮತ್ತು ಪುದೀನಾ ಸೊಪ್ಪನ್ನು ನೀರು, ಸಾವಯವ ಬೆಲ್ಲ, ಏಲಕ್ಕಿ, ಚಿಟಿಕೆ ರಾಕ್‌ ಸಾಲ್ಟ್‌, ಚಿಟಿಕೆಯಷ್ಟು ಜೀರಿಗೆ ಮತ್ತು ಕೊತ್ತಂಬರಿ ಪುಡಿ, ಕಾಳುಮೆಣಸು ಪುಡಿ ಬೆರೆಸಿ ರುಬ್ಬಿ ಕ್ಯಾಂಡಿ ಮಾಡಿ ತಿಂಗಳಿಗೆರಡು ಬಾರಿ ಕೊಡಿ. ಈ ಕ್ಯಾಂಡಿ ಅಚ್ಚ ಹಸಿರು ಬಣ್ಣ ಮತ್ತು ರುಚಿಯಿಂದಾಗಿ ವ್ಹಾವ್‌ ಎನ್ನುವಂತಿರುತ್ತದೆ!

Tags: 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !