₹5 ಲಕ್ಷ ಹಣವಿದ್ದ ವಾಹನ ಕಳ್ಳತನಕ್ಕೆ ಯತ್ನ

7
ಕಸ್ಟೋಡಿಯನ್ ಸೇರಿ ಮೂವರ ಬಂಧನ

₹5 ಲಕ್ಷ ಹಣವಿದ್ದ ವಾಹನ ಕಳ್ಳತನಕ್ಕೆ ಯತ್ನ

Published:
Updated:

ಬೆಂಗಳೂರು: ಎಟಿಎಂ ಯಂತ್ರಗಳಿಗೆ ಹಣ ತುಂಬಿಸಲು ಹೊರಟಿದ್ದ ತಮ್ಮದೇ ಸೆಕ್ಯುರಿಟಿ ಏಜೆನ್ಸಿಯ ವಾಹನವನ್ನು ಕಳವು ಮಾಡಲು ಯತ್ನಿಸಿದ ಆರೋಪದಡಿ ಕಸ್ಟೋಡಿಯನ್ ಸೇರಿದಂತೆ ಮೂವರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಎಸ್‌ಕೆಜಿಎಚ್‌ ಸೆಕ್ಯುರಿಟಿ ಏಜೆನ್ಸಿಯ ಕಸ್ಟೋಡಿಯನ್ ಚೆಲುವರಾಜು, ಸೆಕ್ಯುರಿಟಿ ಗಾರ್ಡ್ ಮುನಿಕೃಷ್ಣನ್ ಹಾಗೂ ಚಾಲಕ ಮೋಹನ್ ಬಂಧಿತರು. ಅವರಿಂದ ವಾಹನ ಹಾಗೂ ₹5 ಲಕ್ಷ ನಗದು ಜಪ್ತಿ ಮಾಡಲಾಗಿದೆ.

‘ಎಚ್‌ಡಿಎಫ್‌ಸಿ ಬ್ಯಾಂಕ್‌ ಎಟಿಎಂ ಯಂತ್ರಗಳಿಗೆ ಹಣ ತುಂಬಿಸುವ ಜವಾಬ್ದಾರಿಯನ್ನು ಎಸ್‌ಕೆಜಿಎಚ್‌ ಸೆಕ್ಯುರಿಟಿ ಏಜೆನ್ಸಿ ವಹಿಸಿಕೊಂಡಿದೆ. ಅದರ ಸೆಕ್ಯುರಿಟಿ ಗಾರ್ಡ್ ಹಾಗೂ ಚಾಲಕ, ₹11 ಲಕ್ಷ ತೆಗೆದುಕೊಂಡು ಗುರುವಾರ ಬೆಳಿಗ್ಗೆ ಯಂತ್ರಗಳಿಗೆ ತುಂಬಿಸಲು ಹೋಗುತ್ತಿದ್ದರು. ಎರಡು ಎಟಿಎಂ ಯಂತ್ರಗಳಿಗೆ ₹6 ಲಕ್ಷ ತುಂಬಿಸಿ, ಉಳಿದ ₹5 ಲಕ್ಷ ಸಮೇತ ಮತ್ತೊಂದು ಎಟಿಎಂ ಘಟಕದತ್ತ ಹೊರಟಿದ್ದರು’ ಎಂದು ಬಾಣಸವಾಡಿ ಪೊಲೀಸರು ಹೇಳಿದರು.

‘ರಸ್ತೆ ಮಧ್ಯ ವಾಹನ ನಿಲ್ಲಿಸಿದ್ದ ಸಿಬ್ಬಂದಿ, ಮೂತ್ರ ವಿಸರ್ಜನೆಗೆ ಹೋಗಿದ್ದರು. ಅದೇ ವೇಳೆಯೇ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ವಾಹನ ಹತ್ತಿ ಸ್ಟಾರ್ಟ್‌ ಮಾಡಿಕೊಂಡು ಅಲ್ಲಿಂದ ಪರಾರಿಯಾಗಿದ್ದರು. ಅದನ್ನು ಗಮನಿಸಿ ಸಿಬ್ಬಂದಿ, ಕೂಗಾಡುತ್ತಿದ್ದಂತೆ ಸಹಾಯಕ್ಕೆ ಬಂದ ಸ್ಥಳೀಯರ ಗುಂಪು ವಾಹನ ಬೆನ್ನಟ್ಟಿತ್ತು. ಅವರಿಗೆ ಸಿಕ್ಕಿ ಬೀಳುವ ಭಯದಲ್ಲೇ ಆರೋಪಿಗಳು, ವಾಹನವನ್ನು ದಾರಿ ಮಧ್ಯೆದಲ್ಲೇ ಬಿಟ್ಟು ಹೋಗಿದ್ದರು’ ಎಂದು ವಿವರಿಸಿದರು.

‘ಸಿಬ್ಬಂದಿ ನೀಡಿದ್ದ ಮಾಹಿತಿಯಂತೆ ಆರೋಪಿಗಳನ್ನು ಬಂಧಿಸಿದ್ದೇವೆ. ಅವರು, ತಮ್ಮದೇ ಸೆಕ್ಯುರಿಟಿ ಏಜೆನ್ಸಿಯ ವಾಹನ ಕಳವು ಮಾಡಲು ಪ್ರಯತ್ನಿಸಿದ್ದು ಏಕೆ ಎಂಬುದು ವಿಚಾರಣೆಯಿಂದ ಗೊತ್ತಾಗಬೇಕಿದೆ’ ಎಂದು ಹೇಳಿದರು. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !