ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆಬಗೆಯ ಕಾರಿನಲ್ಲಿ ಸಂಚರಿಸಲು ಕಾರು ಶೇರಿಂಗ್‌

Last Updated 24 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಕಾಲ ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ಯುವ ಜನತೆಯ ಅಪೇಕ್ಷೆಯೂ ಬದಲಾಗುತ್ತಿದೆ. ಕೈಯಲ್ಲಿರುವ ಮೊಬೈಲ್‌ ಫೋನ್‌ಗಳು ಆಗಾಗ ಬದಲಾಗಬೇಕು. ಕೇಶ, ವಸ್ತ್ರ ವಿನ್ಯಾಸಗಳನ್ನು ಬದಲಿಸುತ್ತಿರಬೇಕು ಎಂಬ ಬಯಕೆ. ಹಾಗೆಯೇ ಓಡಿಸುವ ಕಾರು, ಬೈಕ್‌ ಒಂದೆರಡು ವರ್ಷಕ್ಕೆ ಬದಲಿಸಬೇಕು ಎಂಬ ಹಂಬಲ. ಆದರೆ ಅಷ್ಟೊಂದು ಹಣ ಬೇಕಲ್ಲಾ. ಇದಕ್ಕಾಗಿಯೇ ಈಗ ‘ಕಾರ್ ಶೇರ್‌’ ಎಂಬ ಪರಿಕಲ್ಪನೆ ಜನಪ್ರಿಯಗೊಳ್ಳುತ್ತಿದೆ.

ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಜನಪ್ರಿಯಗೊಂಡಿದೆ. ಭಾರತದಲ್ಲಿ ಇನ್ನೂ ಅಂಬೆಗಾಲಿಡುತ್ತಿದೆ. ಈಗಾಗಲೇ ಕಾರು ಹೊಂದಿರುವವರು ಇಂಥ ಶೇರಿಂಗ್ ಜಾಲದಲ್ಲಿ ತಮ್ಮ ಕಾರುಗಳನ್ನು ಇಟ್ಟು, ಅವುಗಳಿಂದ ಬರುವ ಬಾಡಿಗೆಯಲ್ಲಿ ಆದಾಯ ಗಳಿಸುತ್ತಿದ್ದಾರೆ. ಮತ್ತೊಂದೆಡೆ ಈ ಪರಿಕಲ್ಪನೆಯನ್ನು ಕಾರು ತಯಾರಿಕಾ ಕಂಪೆನಿಗಳೇ ಅಳವಡಿಸಿಕೊಂಡಿವೆ.

ಉದಾಹರಣೆಗೆ ಒಂದು ಸಾಮಾನ್ಯ ಕಾರು ಖರೀದಿಸಲು ಸರಾಸರಿಯಾಗಿ ₹7 ಲಕ್ಷ ರಿಂದ ₹8 ಲಕ್ಷ ಬೇಕು. ವಾರ್ಷಿಕ ನಿರ್ವಹಣೆ, ವಿಮೆ, ವಾಯುಮಾಲಿನ್ಯ ಪ್ರಮಾಣ ಪತ್ರ ಇತ್ಯಾದಿ ಎಲ್ಲ ಸೇರಿ ವಾರ್ಷಿಕ ₹25 ಸಾವಿರದಿಂದ ₹50 ಸಾವಿರ ಖರ್ಚು ಅನಿವಾರ್ಯ. ಇಷ್ಟೆಲ್ಲ ಖರ್ಚು ಮಾಡಿದರೂ ಕಾರು ಬಳಸುವುದು ವಾರಾಂತ್ಯದಲ್ಲಿ ಮಾತ್ರ. ಇನ್ನು, ಕಾರು ಖರೀದಿಸಿದರೆ ವರ್ಷದಿಂದ ವರ್ಷಕ್ಕೆ ಅದರ ಮೌಲ್ಯ ಕಡಿಮೆಯಾಗುತ್ತಾ ಸಾಗುತ್ತದೆ. ಹೀಗಾದರೆ ಸ್ವಂತ ಕಾರು ಏಕೆ ಬೇಕು? ಈ ಪ್ರಶ್ನೆಗಳಿಗೆ ಉತ್ತರವಾಗಿ ‘ಕಾರ್ ಶೇರಿಂಗ್’ ಕಾರ್ಯರೂಪಕ್ಕೆ ಬಂದಿದೆ.

ಈಗಾಗಲೇ ಕಾರು ಖರೀದಿಸಿ, ಅಪರೂಪಕ್ಕೊಮ್ಮೆ ಬಳಸುವವರು ಮತ್ತು ಕಾರು ಓಡಿಸುವ ಬಯಕೆ ಉಳ್ಳವರ ನಡುವಿನ ಕೊಂಡಿಯನ್ನು ಬೆಸೆದಿದ್ದು ಮೊಬೈಲ್ ಎಂಬ ತಂತ್ರಜ್ಞಾನ. ಮೊಬೈಲ್‌ಗಳಲ್ಲಿ ಕಾರು ಶೇರಿಂಗ್ ಕುರಿತು ಹಲವಾರು ಆ್ಯಪ್‌ಗಳು ಜನಪ್ರಿಯಗೊಂಡಿವೆ. ಇವುಗಳಲ್ಲಿ ಕೆಲವು ಆಯಾ ದೇಶ, ಅಲ್ಲಿನ ಪ್ರಾಂತ್ಯ ಮತ್ತು ಕೆಲ ಭಾಗಗಳಲ್ಲಿ ಹೆಚ್ಚು ಜನಪ್ರಿಯಗೊಂಡಿವೆ.

ಕಾರು ಶೇರ್ ಮೂಲಕ ಒಂದೆರೆಡು ದಿನ, ವಾರ, ತಿಂಗಳು ಹೀಗೆ ಪಡೆಯುವ ಕಾರಿಗೆ ಇಂಧನ ಭರಿಸಿ ಬಾಡಿಗೆ ಪಾವತಿಸಬೇಕು. ಕಾರಿನ ವಿಮೆ, ಒಂದೊಮ್ಮೆ ಅಪಘಾತವಾದರೆ ಅದರ ಖರ್ಚು ವೆಚ್ಚ ಇವು ಯಾವುದರ ಗೋಜೂ ಓಡಿಸುವವರಿಗೆ ಇರುವುದಿಲ್ಲ. ಆದರೆ ತಮ್ಮ ಪ್ರಾಣ ಕಾಪಾಡಿಕೊಳ್ಳಲಾದರೂ ಸುರಕ್ಷಿತವಾಗಿ ಓಡಿಸಬೇಕಷ್ಟೆ.

ಐರೋಪ್ಯ ರಾಷ್ಟ್ರದಲ್ಲಿ ಜರ್ಮನಿ ಅತಿ ಹೆಚ್ಚು ಕಾರು ಶೇರಿಂಗ್ ಜಾಲ ಹೊಂದಿದೆ. ಇಲ್ಲಿ ಸುಮಾರು 140ಕ್ಕೂ ಹೆಚ್ಚು ಕಾರು ಶೇರ್‌ ಕಂಪನಿಗಳು ಹುಟ್ಟಿಕೊಂಡಿವೆ. ಅಮೆರಿಕಾ, ಕೆನಡಾ, ಫ್ರಾನ್ಸ್‌, ಇಟಲಿ, ಸ್ಪೇನ್‌, ರಷ್ಯಾ, ಟರ್ಕಿ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಮಲೇಷ್ಯಾ, ತೈವಾನ್, ಆಸ್ಟ್ರೇಲಿಯಾ, ಬ್ರೆಜಿಲ್‌, ಮೆಕ್ಸಿಕೊ, ದಕ್ಷಿಣ ಆಫ್ರಿಕಾಗಳಲ್ಲಿ ಈಗಾಗಲೇ ಕಾರು ಶೇರಿಂಗ್‌ ವ್ಯವಸ್ಥೆ ಜನಪ್ರಿಯಗೊಂಡಿದೆ.

ಹಲವು ಸಮಸ್ಯೆಗೆ ಪರಿಹಾರ

ಮನೆಗೊಂದು ಕಾರು ಹೊಂದುವುದು ಈಗ ಭಾರತದಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದಷ್ಟರ ಮಟ್ಟಿಗೆ ಕಾರುಗಳು ಸಾಲಾಗಿ ನಿಂತಿರುತ್ತವೆ. ನಗರದೊಳಗೆ ಓಡಿಸಬೇಕೆಂದರೆ ವಾಹನ ದಟ್ಟಣೆ, ಇಂಧನ ಖರ್ಚು. ಹೀಗಾಗಿ ವಾರಾಂತ್ಯದಲ್ಲಿ ಅದೂ ರಜೆ ಸಿಕ್ಕರೆ ದೂರದ ಊರಿಗೆ ಅಥವಾ ಪ್ರವಾಸಕ್ಕೆ ಹೋಗುವವರೇ ಹೆಚ್ಚು. ಇದರಿಂದ ನಗರದಲ್ಲಿನ ಟ್ರಾಫಿಕ್‌ ಒತ್ತಡ ಹೆಚ್ಚಾಗಿದೆ, ವಾಯುಮಾಲಿನ್ಯವೂ ಏರುಮುಖವಾಗಿದೆ.ಇವೆಲ್ಲವಕ್ಕೂ ಪರಿಹಾರವಾಗಿ ಕಾರ್ ಶೇರಿಂಗ್ ಉತ್ತೇಜಿಸಲಾಗುತ್ತಿದೆ.

ಅಮರಿಕದಲ್ಲಿ ಜನಪ್ರಿಯವಾಗಿರುವಕಾರು ಶೇರಿಂಗ್ ವ್ಯವಸ್ಥೆ ಜಾರಿಗೆ ತರುವ ಕಂಪೆನಿಗಳಿಗೆ ಸರ್ಕಾರವೇ ಒಂದಷ್ಟು ರಿಯಾಯಿತಿ ಹಾಗೂ ಅನುದಾನ ನೀಡುತ್ತಿದೆ. ವಾಷಿಂಗ್ಟನ್ ರಾಜ್ಯದಲ್ಲಿ ಪ್ರತಿ ಉದ್ಯೋಗಿಗೆ ಪ್ರತಿ ವರ್ಷಕ್ಕೆ 60 ಅಮೆರಿಕನ್ ಡಾಲರ್‌ನಂತೆ ಆಯಾ ಕಂಪೆನಿಗೆ ಹಣ ಪಾವತಿ ಮಾಡುತ್ತಿದೆ. ಇಲ್ಲಿ ಮಾತ್ರವಲ್ಲ ಅಮೆರಿಕದ ಬಹಳಷ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಂಸ್ಥೆಗಳು ಕಾರು ಶೇರಿಂಗ್ ವ್ಯವಸ್ಥೆ ಜತೆ ಒಪ್ಪಂದ ಮಾಡಿಕೊಂಡಿವೆ. ಆ ಮೂಲಕ ಗ್ರಾಹಕರಿಗೆ ಯಾವುದೇ ಹಂತದಲ್ಲಿ ಸಾರ್ವಜನಿಕ ಮತ್ತು ಕಾರು ಶೇರಿಂಗ್‌ ವ್ಯವಸ್ಥೆ ಸುಲಭವಾಗಿ ಲಭ್ಯವಾಗುವಂತ ವ್ಯವಸ್ಥೆಯನ್ನು ಪರಿಚಯಿಸಿವೆ.

ಕಾರು ಶೇರಿಂಗ್‌ನಲ್ಲಿ ಕಾರು ತಯಾರಕರು

ಸಮಾಜದಲ್ಲಿ ಇಂಥದ್ದೊಂದು ಬದಲಾವಣೆಯಿಂದಾಗಿ ಮೊದಲ ಬಾರಿಗೆ ಜರ್ಮನಿಯ ಡ್ಯಾಮಿಲಿಯರ್‌ ಸಮೂಹ (ಬೆಂಜ್ ಮತ್ತು ಭಾರತ್ ಬೆಂಜ್ ಉತ್ಪಾದನಾ ಕಂಪನಿ) ಕಾರ್‌2ಗೊ ಎಂಬ ಸೇವೆಯನ್ನು 2008ರಲ್ಲಿ ಆರಂಭಿಸಿತು. ಸದ್ಯದ ಮಟ್ಟಿಗೆ ಇಡೀ ಜಗತ್ತಿನಲ್ಲಿ ಇದು ಅತಿ ದೊಡ್ಡ ಸಂಪರ್ಕ ಜಾಲ ಹೊಂದಿರುವ ಕಂಪನಿ. ಇಲ್ಲಿರುವ 14 ಸಾವಿರ ಕಾರುಗಳನ್ನು 25ಲಕ್ಷ ಬಳಕೆದಾರರು ಬಳಸುತ್ತಿದ್ದಾರೆ.

ಫೊಕ್ಸ್‌ ವ್ಯಾಗನ್ ಸಮೂಹವು ಪೋರ್ಷ್‌ ಪಾಸ್‌ಪೋರ್ಟ್ ಸೇವೆ ಎಂಬ ವಿನೂತನ ಮಾದರಿಯನ್ನು ಪರಿಚಯಿಸಿದೆ. ಒಂದು ತಿಂಗಳಿಗೆ ಬಾಡಿಗೆ ಪಡೆಯಲಿಚ್ಛಿಸುವವರಿಗೆ ಕಾರಿನ ವಿಮೆ, ನಿರ್ವಹಣೆ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇಷ್ಟು ಮಾತ್ರವಲ್ಲ ಕಾರನ್ನು ತೊಳೆದು ಶುಚಿಯಾಗಿಟ್ಟುಕೊಳ್ಳುವ ಹೊಣೆಯನ್ನೂ ಕಂಪನಿಯೇ ವಹಿಸಿಕೊಂಡಿದೆ. ಈ ಒಂದು ತಿಂಗಳಲ್ಲಿ ಪೋರ್ಷ್‌ನ ಎಲ್ಲಾ ಮಾದರಿಯ ಕಾರುಗಳನ್ನು ಓಡಿಸಲು ಅವಕಾಶವನ್ನೂ ನೀಡಲಿದೆ. ಈ ನಡುವೆ ಈ ಸೌಲಭ್ಯವನ್ನು ಯಾವಾಗ ಬೇಕಾದರೂ ಗ್ರಾಹಕರು ಹಿಂಪಡೆಯುವ ಸ್ವಾತಂತ್ರ್ಯವನ್ನೂ ನೀಡಿದೆ.

ಕಾರು ಬಾಡಿಗೆಗೆ ನೀಡುವ ಕಂಪನಿಗಳು ಕಾರಿನ ಸುರಕ್ಷತೆ ಕುರಿತೂ ಹೆಚ್ಚು ನಿಗಾ ವಹಿಸಿವೆ. ಕಾರು ಪಡೆಯಲಿಚ್ಛಿಸುವವರ ಭಾವಚಿತ್ರ, ಚಾಲನಾ ಪರವಾನಗಿ, ಹಣ ಪಾವತಿ ಮಾಡುವ ಕಾರ್ಡ್‌ನ ವಿವರಗಳನ್ನು ಪಡೆದ ನಂತರ ಕಾರು ನೀಡಲಾಗುತ್ತದೆ. ಕಾರಿನಲ್ಲಿ ಜಿಪಿಎಸ್‌ ಕಡ್ಡಾಯವಾಗಿ ಅಳವಡಿಸಿರಲಾಗುತ್ತದೆ. ಆಯಾ ಕಂಪನಿಗಳು ಕಾರುಗಳನ್ನು ಉಪಯೋಗಿಸಲು ತಮ್ಮದೇ ಆದ ಸ್ಮಾರ್ಟ್ ಲಾಕ್‌ಗಳನ್ನು ಬಳಸುತ್ತಿವೆ.

ಭಾರತದಲ್ಲೂ ಇಂಥ ವ್ಯವಸ್ಥೆ

ಮಹೀಂದ್ರಾ ಕಂಪನಿ ಇತ್ತೀಚೆಗಷ್ಟೇ ಇಂಥದ್ದೊಂದು ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಐದು ವರ್ಷಗಳವರೆಗೂ ಕಾರನ್ನು ಬಾಡಿಗೆಗೆ ಪಡೆಯಬಹುದು. ಮಾಸಿಕ ಬಾಡಿಗೆ ₹13,499ರಿಂದ ₹32,999ರವರೆಗೂ ಎಸ್‌ಯುವಿ ಮಾದರಿಯ ಕಾರುಗಳು ಲಭ್ಯ. ಕೆಯುವಿ100 ಆರಂಭಿಕ ಮಾದರಿಯಾದರೆ, ಎಕ್ಸ್‌ಯುವಿ500 ಮಾದರಿಯದ್ದು ಗರಿಷ್ಠ ಬೆಲೆಯದ್ದಾಗಿದೆ. ದೆಹಲಿ, ಮುಂಬೈ, ಬೆಂಗಳೂರು, ಅಹ್ಮದಾಬಾದ್ ಮತ್ತು ಪುಣೆಯಲ್ಲಿ ಈ ಸೌಲಭ್ಯ ಲಭ್ಯ.

ಕಾರು ಪಡೆದವರಿಗೆ ಈ ಕಾರುಗಳ ನಿರ್ವಹಣೆ, ವಿಮೆ ಕಟ್ಟುವಂತಿಲ್ಲ. ಜತೆಗೆ ಕಾರು ಅಪಘಾತಕ್ಕೀಡಾದರೆ, 24 ಗಂಟೆಯೊಳಗಾಗಿ ಹೊಸ ಕಾರು ಲಭ್ಯ. ಇನ್ನೂ 19 ನಗರಗಳಿಗೆ ಈ ಸೌಲಭ್ಯ ವಿಸ್ತರಿಸಲು ಕಂಪನಿ ಚಿಂತನೆ ನಡೆಸಿದೆ. ಜೂಮ್‌ಕಾರು ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ.2019ರಲ್ಲಿ ಭಾರತಕ್ಕೆ ಬರಲಿರುವ ಮೋರಿಸ್ ಗ್ಯಾರೇಜಸ್‌ (ಎಂಜಿ ಮೋಟಾರ್ಸ್‌) ಕೂಡಾ ಕಾರ್‌ ಶೇರಿಂಗ್ ವ್ಯವಸ್ಥೆಯನ್ನು ಭವಿಷ್ಯದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವುದಾಗಿ ಇತ್ತೀಚೆಗೆ ಶಾಂಘೈನಲ್ಲಿ ನಡೆದ ಸಮಾವೇಶದಲ್ಲಿ ಸ್ಪಷ್ಟಪಡಿಸಿದೆ.

ಕಾರ್‌ ಶೇರಿಂಗ್ ಮಾರುಕಟ್ಟೆ (ಜಾಗತಿಕ ಮಟ್ಟದಲ್ಲಿ)

2010–11ರಲ್ಲಿ 10ಲಕ್ಷ ಬಳಕೆದಾರರು ಈ ವ್ಯವಸ್ಥೆಯಲ್ಲಿದ್ದರು

2017ರಲ್ಲಿ ಒಂದು ಕೋಟಿ ಜನ ಈ ವ್ಯವಸ್ಥೆಗೆ ತೆರೆದುಕೊಂಡಿದ್ದಾರೆ

2025ರಲ್ಲಿ 3.5ಕೋಟಿ ಜನರು ಕಾರ್‌ ಶೇರಿಂಗ್ ಬಳಸಲಿದ್ದಾರೆ

ಈ ವ್ಯವಸ್ಥೆ ವಾರ್ಷಿಕ ಶೇ 16.4ರ ದರದಲ್ಲಿ ಬೆಳೆಯುತ್ತಿದೆ

2024ರ ಹೊತ್ತಿಗೆ ಈ ಕ್ಷೇತ್ರ 16.5ಶತಕೋಟಿ ಡಾಲರ್‌ ವಹಿವಾಟು ನಡೆಸುವ ಅಂದಾಜು ಇದೆ (ಫಾರ್ಸ್ಟ್‌ ಅಂಡ್‌ ಸುಲ್ಲಿವ್ಯಾನ್‌ ಸಮೀಕ್ಷೆ ಅನ್ವಯ)

ಅಮೆರಿಕ, ಯುರೋಪ್‌ನಲ್ಲಿ ಜನಪ್ರಿಯವಾಗಿದ್ದರೂ ಏಷ್ಯಾ ಖಂಡದಲ್ಲಿ ಅತ್ಯಂತ ವೇಗದಲ್ಲಿ ವಿಸ್ತರಿಸುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT