ಬುಧವಾರ, ಫೆಬ್ರವರಿ 8, 2023
17 °C

ಟಾಟಾ ಟಿಯಾಗೊ ಇವಿ ವಿಮರ್ಶೆ: ಆಧುನಿಕ ಸೌಕರ್ಯಗಳೊಂದಿಗೆ ಹಿತಕರ ಚಾಲನೆ

ಇ.ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನದ ಬೆಳವಣಿಗೆ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳದ ಪರಿಣಾಮವಾಗಿ ಇಂದು ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿವೆ. ಹಾಗೆಯೇ ಬೋಲ್ಟ್‌ ಇವಿ ಮೂಲಕ ಎಲೆಕ್ಟ್ರಿಕ್ ವಾಹನಗಳ ಲೋಕಕ್ಕೆ ಕಾಲಿಟ್ಟ ಟಾಟಾ, ಈಗ ತನ್ನ ಸಣ್ಣ ಕಾರುಗಳ ವಿಭಾಗದಲ್ಲಿ ಟಿಯಾಗೊ ಇವಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ದಶಕದ ಹಿಂದೆ ಬೆಂಗಳೂರು ಮೂಲದ ರೇವಾ ಕಾರನ್ನು ನೋಡುವುದೇ ಒಂದು ಕೌತುಕವಾಗಿತ್ತು. ಪೆಟ್ರೋಲ್, ಡೀಸೆಲ್‌ ಕಾರುಗಳೇ ರಸ್ತೆಯಲ್ಲಿ ತುಂಬಿದ್ದ ಸಂದರ್ಭದಲ್ಲಿ, ರೇವಾ ಇ.ವಿ. ಕಾರುಗಳನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದವರೇ ಹೆಚ್ಚು. ಪುಟ್ಟದಾದ ಈ ಕಾರು ಗಿಜಿಗಿಡುವ ರಸ್ತೆಗಳಲ್ಲಿ ಆಗೊಮ್ಮೆ, ಈಗೊಮ್ಮೆ ಸದ್ದಿಲ್ಲದೆ ನುಸುಳುತ್ತಾ ಸಾಗುತ್ತಿದ್ದ ದೃಶ್ಯ ಕಾಣುತ್ತಿತ್ತು. ನಂತರ ಮಹೀಂದ್ರ ಕಂಪನಿ ರೇವಾ ಖರೀದಿಸಿ, ಇ2ಒ ಹೆಸರಿನ ಕಾರು ಪರಿಚಯಿಸಿತು. ಆ ಹೊತ್ತಿಗಾಗಲೇ ಟಾಟಾ ಇ.ವಿ ಕಾರುಗಳ ವಿಭಾಗದಲ್ಲಿ ದಾಪುಗಾಲಿಡಲು ಆರಂಭಿಸಿತ್ತು.

ಮೊದಲು ಬೋಲ್ಟ್‌ ಮೂಲಕ ಇ.ವಿ ವಾಹನಗಳ ಪ್ರಯೋಗ ಆರಂಭಿಸಿದ ಟಾಟಾ, ನಂತರ ನೆಕ್ಸಾನ್‌ ಮೂಲಕ ಯಶಸ್ಸಿನ ಹಾದಿ ತುಳಿಯಿತು. ಟಿಗಾರ್‌ ಹಾಗೂ ಇದೀಗ ಟಿಯಾಗೊ ಮೂಲಕ ಮತ್ತೊಂದು ಇ.ವಿ ಮಾದರಿಯನ್ನು ಪರಿಚಯಿಸಿದೆ.

ಟಿಯಾಗೊ ಟಾಟಾದ ಜನಪ್ರಿಯ ಸಣ್ಣ ಕಾರು.  2015ರಲ್ಲಿ ಬಿಡುಗಡೆಗೊಂಡ ಈ ಕಾರು ಫ್ರೆಂಚ್‌ ಕಲಾವಿದನ ಕುಂಚದಲ್ಲಿ ಅರಳಿತ್ತು. ಫುಟ್‌ಬಾಲ್‌ ಲೋಕದ ಮೇರುತಾರೆ ಲಿಯಾನಲ್ ಮೆಸ್ಸಿ ಅದರ ರಾಯಭಾರಿಯಾಗಿದ್ದರು. ಹೆಚ್ಚು ಜನಪ್ರಿಯತೆ ಪಡೆದ ಈ ಕಾರನ್ನೇ ಇದೀಗ ಇ.ವಿ ರೂಪದಲ್ಲಿ ಟಾಟಾ ಪರಿಚಯಿಸಿದೆ.

24 ಕಿಲೋ ವ್ಯಾಟ್ ಹಾಗೂ 19.2 ಕಿಲೋ ವ್ಯಾಟ್ ಸಾಮರ್ಥ್ಯದ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್‌ನ ಎರಡು ಮಾದರಿಗಳನ್ನು ಟಿಯಾಗೊ ಹೊಂದಿದೆ. ಕಂಪನಿ ಹೇಳುವಂತೆ 24 ಕೆ.ವಿ. ಸಾಮರ್ಥ್ಯದ ಟಿಯಾಗೊ 315 ಕಿ.ಮೀ. ದೂರ ಕ್ರಮಿಸಿದರೆ 19.2 ಕೆ.ವಿ. ಟಿಯಾಗೊ 250 ಕಿ.ಮೀ. ಕ್ರಮಿಸುತ್ತದೆ. ಇದು ಪ್ರಯೋಗಾಲಯದ ದಾಖಲೆ. ಈ ರೇಂಜ್‌ಗಳು ಕಂಪನಿ ಶಿಫಾರಸು ಮಾಡಿದ ಚಾಲನಾ ಶೈಲಿಯಲ್ಲಿ ಮಾತ್ರ ಲಭ್ಯ. ಇಲ್ಲವಾದಲ್ಲಿ ಸುಮಾರು 50 ಕಿ.ಮೀ.ಗಳಷ್ಟು ವ್ಯತ್ಯಾಸವಾಗುವ ಸಾದ್ಯತೆ ಇದೆ.

ಆದರೆ ಇದನ್ನೂ ಮೀರಿದ್ದು, ಕಾರಿನ ಕಾರ್ಯಕ್ಷಮತೆ. ರಸ್ತೆಯಲ್ಲಿ ಟಿಯಾಗೊ ಎಲೆಕ್ಟ್ರಿಕ್ ಎಂಜಿನ್ ನೀಡುವ ವಿಶೇಷ ಅನುಭೂತಿ ಎಂಥವರನ್ನೂ ಮೆಚ್ಚಿಸುತ್ತದೆ. ಈ ಕಾರು 114 ನ್ಯೂಟನ್‌ಮೀಟರ್ ಶಕ್ತಿ ಉತ್ಪಾದಿಸಬಲ್ಲದು. ಹೀಗಾಗಿ 19.2 ಕೆ.ವಿ ಮೋಟಾರು ಹೊಂದಿರುವ ಟಿಯಾಗೊ ನಿಂತ ಸ್ಥಿತಿಯಿಂದ ಗಂಟೆಗೆ 60 ಕಿ.ಮೀ. ವೇಗವನ್ನು ಕೇವಲ 6.2 ಸೆಕೆಂಡ್‌ಗಳಲ್ಲಿ ಹಾಗೂ 24 ಕೆ.ವಿ. ಟಿಯಾಗೊ ಈ ವೇಗವನ್ನು 5.7 ಸೆಕೆಂಡುಗಳಲ್ಲಿ ಕ್ರಮಿಸುವಷ್ಟು ಕ್ಷಮತೆ ಹೊಂದಿದೆ ಎಂದು ಎಂಐಡಿಸಿ ವರದಿ ಹೇಳುತ್ತದೆ. ಚಾಲನೆ ಸಂದರ್ಭದಲ್ಲಿ ಇದು ಅನುಭವಕ್ಕೂ ಬರುತ್ತದೆ.

ಪ್ರತಿ ಚಾರ್ಜ್‌ಗೆ ಕಾರು ಕ್ರಮಿಸುವ ರೇಂಜ್‌ನಲ್ಲಿ ಗಮನಿಸಬೇಕಾದ ಅಂಶ ಒಂದಿದೆ. ಹವಾನಿಯಂತ್ರಕ ಬಳಕೆಯಲ್ಲಿದ್ದಾಗ, ಕಾರು ಕ್ರಮಿಸುವ ರೇಂಜ್ 20 ಕಿ.ಮೀ. ಕಡಿಮೆಯಾಗುತ್ತದೆ. ಹಾಗೆಯೇ ಬ್ಯಾಟರಿ ಶೇ 20ಕ್ಕೆ ತಲುಪಿದಾಗ ಹವಾನಿಯಂತ್ರಕ ತನ್ನ ಕಾರ್ಯ ಸ್ಥಗಿತಗೊಳಿಸುತ್ತದೆ. ಬ್ಯಾಟರಿ ಶೇ 10ಕ್ಕೆ ತಲುಪಿದಾಗ ವೇಗ ತಗ್ಗುವಂತೆ ವಿನ್ಯಾಸಗೊಳಿಸಲಾಗಿದೆ.

ಬ್ಯಾಟರಿ ಚಾರ್ಜಿಂಗ್‌ಗೆ ಮೂರು ರೀತಿಯ ಅವಕಾಶಗಳನ್ನು ಕಂಪನಿ ಕಲ್ಪಿಸಿದೆ. 7.2 ಕೆವಿ ಎಸಿ ಮನೆ ಚಾರ್ಜರ್‌ ವಾಲ್‌ಬಾಕ್ಸ್‌ ಕಂಪನಿ ನೀಡಲಿದೆ. ಶೇ 10ರಿಂದ ಶೇ 100ರಷ್ಟು ಬ್ಯಾಟರಿ ಚಾರ್ಜ್‌ ಮಾಡಲು 24 ಕೆವಿ ವಾಹನಕ್ಕೆ 3.6 ಗಂಟೆ ಹಾಗೂ 19.2 ಕೆವಿ ಕಾರಿಗೆ 2.6 ಗಂಟೆಯಷ್ಟು ತಗುಲಲಿದೆ. ಹಾಗೆಯೇ ಮನೆಯ ಸಾಮಾನ್ಯ ಚಾರ್ಜರ್‌ ಬಳಸಿದರೆ ಕ್ರಮವಾಗಿ 8.7 ಗಂಟೆ ಹಾಗೂ 6.9 ಗಂಟೆ ಬೇಕಾಗುತ್ತದೆ. ಹೊರಗೆ ಸಿಗುವ ಡಿ.ಸಿ ವೇಗದ ಚಾರ್ಜರ್ ಮೂಲಕ ಕೇವಲ 58 ನಿಮಿಷಗಳಲ್ಲಿ ಕಾರನ್ನು ಸಂಪೂರ್ಣ ಚಾರ್ಜ್ ಮಾಡಬಹುದು. 15 ಆ್ಯಂಪ್‌ ಪೋರ್ಟಲ್ ಚಾರ್ಜರ್‌ ಬಳಸಿದಲ್ಲಿ ಕ್ರಮವಾಗಿ 8.7 ಗಂಟೆ ಹಾಗೂ 6.9 ಗಂಟೆ ಚಾರ್ಜಿಂಗ್ ಸಮಯ ಬೇಕು.

ಟಿಯಾಗೊದಲ್ಲಿ ಬಳಸಿರುವ ಬ್ಯಾಟರಿಯು ನೀರು ಮತ್ತು ದೂಳಿನಿಂದ ರಕ್ಷಣೆ ಹೊಂದಿದೆ. ಇದಕ್ಕಾಗಿ ಐಪಿ 67 ಮಾನ್ಯತೆ ಪಡೆದಿದೆ. ಹೀಗಾಗಿ ಬ್ಯಾಟರಿ ಮೇಲೆ 8 ವರ್ಷ ಅಥವಾ 1.6 ಲಕ್ಷ ಕಿಲೋಮೀಟರ್‌ ವಾರೆಂಟಿ ಗ್ರಾಹಕರಿಗೆ ಸಿಗಲಿದೆ.

ಚಾಲನಾ ಅನುಭೂತಿ

ಎಲೆಕ್ಟ್ರಿಕ್ ಮೋಟಾರನ್ನು ಸರಿಯಾಗಿ ದುಡಿಸಿಕೊಳ್ಳುವ ನಿಟ್ಟಿನಲ್ಲಿ ವ್ಯವಸ್ಥಿತ ತಂತ್ರಗಾರಿಕೆಯನ್ನು ಬಳಸಿಕೊಳ್ಳಲಾಗಿದೆ. ಚಾಲನೆ ಸಂದರ್ಭದಲ್ಲಿ ಟಿಯಾಗೊ ಇ.ವಿ, ಪೆಟ್ರೋಲ್ ಕಾರು ಚಾಲನೆಯ ಅನುಭವವನ್ನೇ ನೀಡಲಿದೆ. ಆದರೆ ಹೆಚ್ಚು ಸದ್ದು ಇರದು. ಕಾರು ತ್ವರಿತವಾಗಿ ತನ್ನ ವೇಗ ಹೆಚ್ಚಿಸಿಕೊಳ್ಳುವುದನ್ನು ಅನುಭವಿಸದೇ ಇರಲಾರಿರಿ.

ಚಾಲನೆಗಾಗಿ ಎರಡು ಮೋಡ್‌ಗಳನ್ನು ಟಿಯಾಗೊ ಹೊಂದಿದೆ. ರೇಡಿಯೊ ಬಟನ್ ಮೂಲಕ ಈ ಮೋಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರತಿ ಮೋಡ್‌ನಲ್ಲೂ ಬ್ಯಾಟರಿಯ ಸಮರ್ಪಕ ಬಳಕೆಗೆ ತಲಾ 4 ಮೋಡ್‌ಗಳನ್ನು ನೀಡಲಾಗಿದೆ. ಚಾಲಕರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಸ್ಪೀಡ್ ಹಾಗೂ ಮೋಡ್‌ಗಳನ್ನು ಬಳಸಬಹುದು.

ನಗರ ಪ್ರದೇಶದಲ್ಲಿ ಅತ್ಯಂತ ಮೃದುವಾಗಿ ಸಾಗುವ ಟಿಯಾಗೊ, ಹೆದ್ದಾರಿಗಳಲ್ಲಿ ಇತರ ವಾಹನಗಳನ್ನು ಹಿಂದಿಕ್ಕುವಲ್ಲೂ ಅಷ್ಟೇ ಚುರುಕಾಗಿದೆ. ವಾಹನದ ವೇಗ ಹೆಚ್ಚುತ್ತಿದ್ದಂತೆ ಸ್ಟಿಯರಿಂಗ್‌ ಬಿಗಿಗೊಳ್ಳುತ್ತಾ ಸಾಗುತ್ತದೆ. ಪ್ರತಿ ಗಂಟೆಗೆ 110 ಕಿ.ಮೀ. ವೇಗದಲ್ಲೂ ಕಾರು ತನ್ನ ನಿಯಂತ್ರಣ ಕಳೆದುಕೊಳ್ಳದು.

ಹೆದ್ದಾರಿಯಲ್ಲಿ ಆ್ಯಕ್ಸಲರೇಟರ್‌ ಪೆಡಲ್ ತುಳಿಯದೇ ಕ್ರೂಸ್ ಕಂಟ್ರೋಲ್ ಮೂಲಕ ನಮಗೆ ಬೇಕಾದ ವೇಗದಲ್ಲಿ ಕಾರು ಸಾಗುವಂತೆ ಮಾಡಬಹುದು. ಸ್ಪೋರ್ಟ್‌ ಮೋಡ್‌ನಲ್ಲಂತೂ ಕಾರಿನ ಚಾಲನೆ ಯುವ ಸಮುದಾಯಕ್ಕೆ ಹೆಚ್ಚು ಮಜವೆನಿಸಬಹುದು. ಆರಂಭಿಕ ವೇಗ ಹೆಚ್ಚಳ, ನಂತರದಲ್ಲಿ ಇದರ ನಾಗಾಲೋಟದ ಮೂಲಕ ಸುಲಭವಾಗಿ ಮೂರಂಕಿಯ ವೇಗವನ್ನು ತಲುಪಬಹುದು. ಜತೆಗೆ, ಅದೇ ವೇಗದಲ್ಲಿ ಕಾರನ್ನು ನಿಯಂತ್ರಿಸಲೂ ಸುಲಭವಾಗುವಂತೆ ವಿನ್ಯಾಸ ಮಾಡಲಾಗಿದೆ.

ಸಿಟಿ ಮೋಡ್‌ಗೆ ಹೋಲಿಸಿದಲ್ಲಿ ಸ್ಪೋರ್ಟ್‌ ಮೋಡ್‌ನಲ್ಲಿ ಬ್ಯಾಟರಿ ಕ್ಷಮತೆ ಶೇ 10ರಷ್ಟು ಕುಸಿಯುತ್ತದೆ. ಹವಾನಿಯಂತ್ರಕ ಬಳಕೆ ಶೇ 20ರಷ್ಟು ಕುಸಿಯುತ್ತದೆ. ಹೀಗಾಗಿ ಲಭ್ಯವಿರುವ ಚಾರ್ಜ್ ಹಾಗೂ ಚಾರ್ಜಿಂಗ್ ಸ್ಟೇಷನ್‌ ದೂರವನ್ನು ಪರಿಗಣಿಸಿ ಸ್ಪೋರ್ಟ್ ಮೋಡ್ ಬಳಸುವುದು ಸೂಕ್ತ.

ಸಿಟಿ ಹಾಗೂ ಸ್ಪೋರ್ಟ್ಸ್‌ ಮೋಡ್‌ನಲ್ಲಿ ತಲಾ ನಾಲ್ಕು ರಿಜನರೇಟಿವ್ ಬ್ರೇಕಿಂಗ್ ಮೋಡ್‌ಗಳನ್ನು ನೀಡಲಾಗಿದೆ. ಚಾಲಕ ತನ್ನ ಕಾಲನ್ನು ಆ್ಯಕ್ಸಲರೇಟರ್‌ ಮೇಲಿಂದ ತೆಗೆದೊಡನೆ ಬ್ಯಾಟರಿಯಿಂದ ಮೋಟಾರಿಗೆ ಹೋಗಬೇಕಾದ ಇಂಧನ ಕಡಿತಗೊಳ್ಳುತ್ತದೆ. ಆದರೆ ರಿಜನರೇಟಿವ್ ಮೋಡ್‌ ಮೂಲಕ ಬ್ಯಾಟರಿ ಇಲ್ಲದೆ ಮೋಟಾರು ತಿರುಗುತ್ತದೆ. ಇದು ನಗರ ಪ್ರದೇಶಗಳಲ್ಲಿ ಹೆಚ್ಚು ಉಪಯುಕ್ತವಾಗಲಿದೆ. ಇದು ಇಂಧನ ಉಳಿತಾಯಕ್ಕೂ ನೆರವಾಗಲಿದೆ.

ಒಂದು ಸಾವಿರ ಕಿಲೋ ಮೀಟರ್ ಕ್ರಮಿಸಲು ಪೆಟ್ರೋಲ್‌ ಹ್ಯಾಚ್‌ಬ್ಯಾಕ್‌ಗೆ ₹ 7500 ಖರ್ಚಾದರೆ, ಟಿಯಾಗೊ ಇವಿ ಕಾರಿನಲ್ಲಿ ₹ 1100 ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ಚಾಲನೆಯ ಅನುಭವ

ಟಿಯಾಗೊ ಇವಿಯಲ್ಲಿ ಹೆಚ್ಚು ಹಿತ ನೀಡುವುದು ಆಸನ ಸೌಕರ್ಯ. ಲೆದರ್ ಸೀಟ್‌ ಬೆನ್ನಿಗೆ ಹಿತವೆನಿಸಿ, ಆರಾಮದಾಯಕ ಚಾಲನೆಗೆ ನೆರವಾಗುತ್ತದೆ. ಸ್ಟಿಯರಿಂಗ್‌ ನಗರ ಪ್ರದೇಶದ ಚಾಲನೆಯಲ್ಲಿ ಮೃದುವಾಗಿ, ಹೆದ್ದಾರಿ ಚಾಲನೆಯಲ್ಲಿ ಬಿಗಿಯಾಗುವುದರಿಂದ ಚಾಲಕರ ನಿಯಂತ್ರಣ ತಪ್ಪದಂತಿದೆ. ಕಾರಿನ ಸಸ್ಪೆನ್ಶನ್‌ ಕೂಡಾ ಉತ್ತಮವಾಗಿದೆ. ಹೆದ್ದಾರಿಯ ವೇಗದ ಚಾಲನೆಯ ಸಂದರ್ಭದಲ್ಲಿ ಎದುರಾಗುವ ತಿರುವುಗಳಲ್ಲೂ ಕಾರು ಸುಲಭವಾಗಿ ಚಾಲಕನ ಹಿಡಿತಕ್ಕೆ ಸಿಗಲಿದೆ. ಹಿಂಬದಿ ಆಸನವೂ ಆರಾಮದಾಯಕವಾಗಿದೆ. ಸ್ಟಿಯರಿಂಗ್‌ನಲ್ಲೇ ಮ್ಯೂಸಿಕ್ ಪ್ಲೇಯರ್ ನಿಯಂತ್ರಣ, ಕರೆಗಳ ನಿಯಂತ್ರಣ ಹಾಗೂ ಕ್ರೂಸ್‌ ಕಂಟ್ರೋಲ್‌ ಗುಂಡಿಗಳಿದ್ದು, ಚಾಲನೆಯ ಕೆಲಸವನ್ನು ಸುಲಭಗೊಳಿಸಿದೆ.

ಆ್ಯಪ್ ಮೂಲಕ ಕಾರು ನಿಯಂತ್ರಣ

ಟಾಟಾ ಟಿಯಾಗೊ ಇ.ವಿಯ ಮುಖ್ಯ ಹಾಗೂ ಅತ್ಯಾಧುನಿಕ ವಿಭಾಗ ಎಂದೆನಿಸುವುದು ಕಾರಿನೊಂದಿಗೆ ನೀಡುವ ಝೀಕನೆಕ್ಟ್ ಆ್ಯಪ್‌ನ ಸೌಕರ್ಯಗಳು. ಈ ಆ್ಯಪ್ ಮೂಲಕ ಕಾರಿನ ಹವಾನಿಯಂತ್ರಕ, ದೀಪಗಳು, ಚಾಲನೆಯ ವ್ಯಾಪ್ತಿ ಹೀಗೆ ಹಲವು ನಿಯಂತ್ರಣಗಳೊಂದಿಗೆ 45 ವಿವಿಧ ಬಗೆಯ ಸೌಕರ್ಯಗಳು ಲಭ್ಯ.

ಹೊರಡುವ ಮೊದಲು ಕಾರಿನೊಳಗಿನ ಹವೆಯನ್ನು ತಂಪುಗೊಳಿಸಲು ಮನೆಯಲ್ಲಿ ಕುಳಿತೇ ಝೀಕನೆಕ್ಟ್ ಆ್ಯಪ್ ಮೂಲಕ ಹವಾನಿಯಂತ್ರಕ ಆರಂಭಿಸಬಹುದು. ಕಾರನ್ನು ಅಪರಿಚಿತರು ತೆಗೆದುಕೊಂಡು ಹೋದರೆ, ಅದು ಎಲ್ಲಿದೆ ಎಂಬುದನ್ನು ಪತ್ತೆ ಮಾಡುವುದರ ಜತೆಗೆ, ಅದರ ಎಂಜಿನ್ ಆಫ್ ಮಾಡಬಹುದು (ಹೀಗೆ ಮಾಡಿದಲ್ಲಿ ತಕ್ಷಣ ಕಾರು ಬಂದ್ ಆಗದು. ಆದರೆ ಚಾಲಕ ಎಲ್ಲಿಯಾದರೂ ಕಾರನ್ನು ನಿಲ್ಲಿಸಿದರೆ, ನಂತರ ಸ್ಟಾರ್ಟ್‌ ಆಗದಂತೆ ವಿನ್ಯಾಸ ಮಾಡಲಾಗಿದೆ), ಚಾಲಕ ಹಾಗೂ ಮನೆಯ ವಯಸ್ಕ ಮಕ್ಕಳಿಗೆ ಕಾರು ನೀಡಿದರೆ, ಅದರ ಚಾಲನಾ ವ್ಯಾಪ್ತಿಯನ್ನು ಆ್ಯಪ್ ಮೂಲಕವೇ ನಿಯಂತ್ರಿಸಲು ಸಾಧ್ಯ.

ಇದರೊಂದಿಗೆ ಕಾರು ಚಾಲನೆ ನಂತರ ನಿಮ್ಮ ಚಾಲನಾ ಗುಣಮಟ್ಟ ತಿಳಿಸುವ ಬಹಳಷ್ಟು ಮಾಹಿತಿ ಚಿತ್ರ ಸಹಿತ ಲಭ್ಯ. ಇದರಲ್ಲಿ ನೀವು ಆ್ಯಕ್ಸಲರೇಟರ್‌ ಹೇಗೆ ಬಳಸಿದ್ದೀರಿ, ನೀವು ಎಷ್ಟರ ಮಟ್ಟಿಗೆ ಸುರಕ್ಷಿತ ಚಾಲಕರು, ಅನಿಯಂತ್ರಿತ ಚಾಲನೆ ಮಾಡುತ್ತಿದ್ದೀರಾ, ಬ್ಯಾಟರಿಯ ದೀರ್ಘಬಾಳಿಕೆಗೆ ತಕ್ಕಂತೆ ಚಾಲನೆ ಮಾಡುತ್ತಿದ್ದೀರಾ, ಹಗಲು ಅಥವಾ ರಾತ್ರಿಯ ಚಾಲನೆ ಹೇಗಿದೆ ಇತ್ಯಾದಿಗಳ ಮಾಹಿತಿ ಆಧರಿಸಿ ಚಾಲನೆಗೊಂದು ರೇಟಿಂಗ್ ನೀಡುತ್ತದೆ. ಜತೆಗೆ ಬ್ಯಾಟರಿ ಬಳಕೆಯ ಮಾಹಿತಿಯೂ ಈ ಆ್ಯಪ್‌ನಲ್ಲಿ ಲಭ್ಯ. ಭವಿಷ್ಯದಲ್ಲಿ ಈ ಮಾಹಿತಿ ಆಧರಿಸಿ ವಿಮಾ ಸೌಲಭ್ಯ ನೀಡುವ ವ್ಯವಸ್ಥೆಗೆ ಸಿದ್ಧತೆ ಇದ್ದಂತಿದೆ ಝೀಕನೆಕ್ಟ್‌.

ಹರ್ಮನ್ ಮನರಂಜನೆ

ಟಿಯಾಗೊ ಇವಿಯಲ್ಲಿ 7 ಇಂಚಿನ ಇನ್ಫೊಟೈನ್ಮೆಂಟ್‌ ಸಿಸ್ಟಂ ಇದೆ. ಹರ್ಮನ್‌ ಕಂಪನಿಯ ಈ ಸಾಧನ ಸುಲಭವಾಗಿ ಮೊಬೈಲ್‌ಗೆ ಕನೆಕ್ಟ್ ಆಗುತ್ತದೆ. ಆ್ಯಂಡ್ರಾಯ್ಡ್‌ ಆಟೊ ಹಾಗೂ ಆ್ಯಪಲ್ ಕಾರ್‌ಪ್ಲೇ ಇದರಲ್ಲಿ ಲಭ್ಯ. ಕಾರಿನಲ್ಲಿ 8 ಸ್ಪೀಕರ್‌ಗಳಿದ್ದು, ಹಿತಕರವಾಗಿವೆ.

ಡ್ಯಾಷ್‌ಬೋರ್ಡ್‌ನಲ್ಲಿರುವ ಗ್ಲೋಬಾಕ್ಸ್‌ಗೂ ಹವಾನಿಯಂತ್ರಕ ವ್ಯವಸ್ಥೆ ಇರುವುದರಿಂದ ಹಣ್ಣು ಹಾಗೂ ತಂಪು ಪಾನೀಯಗಳನ್ನು ಇಲ್ಲಿಡಬಹುದು. ರೈನ್‌ ಸೆನ್ಸಿಂಗ್‌ ವೈಪರ್‌, ಹಿಂಬದಿ ಗಾಜಿಗೂ ವೈಪರ್‌ ಹಾಗೂ ಡೆಮಿಸ್ಟರ್‌ ಅಳವಡಿಸಲಾಗಿದೆ. ಸುರಕ್ಷತೆಯ ದೃಷ್ಟಿಯಲ್ಲಿ ಟಾಟಾ ಸದಾ ಬದ್ಧತೆಯನ್ನು ಕಾಪಾಡಿಕೊಂಡೇ ಬರುತ್ತಿದೆ. ಟಿಯಾಗೊ ಇ.ವಿ ಕೂಡ ಜಾಗತಿಕ ಎನ್‌ಸಿಎಪಿ ಸುರಕ್ಷತಾ ರೇಟಿಂಗ್‌ನಲ್ಲಿ 4 ಸ್ಟಾರ್‌ಗಳನ್ನು ಪಡೆದು ಉತ್ತಮ ಸುರಕ್ಷಿತ ವಾಹನ ಎಂಬ ಮಾನ್ಯತೆ ಪಡೆದಿದೆ.

ಟಾಟಾ ಟಿಯಾಗೊ ಇ.ವಿ ಬೆಲೆ ₹ 8.49 ಲಕ್ಷದಿಂದ ₹ 11.79 ಲಕ್ಷದವರೆಗೆ ಇದೆ. ಪೆಟ್ರೋಲ್ ಮಾದರಿಯ ಕಾರಿನ ಬೆಲೆಗೆ ಅತ್ಯಂತ ಸಮೀಪವೇ ಇಟ್ಟಿರುವುದು, ಭವಿಷ್ಯದಲ್ಲಿ ಹೆಚ್ಚು ಜನರನ್ನು ಬ್ಯಾಟರಿ ಚಾಲಿತ ಕಾರಿನತ್ತ ಸೆಳೆಯುವ ಪ್ರಯತ್ನದಂತಿದೆ. ನಗರ ಪ್ರದೇಶದಲ್ಲಿ ಸುಲಭವಾಗಿ ಚಾಲನೆ ಹಾಗೂ ಪಾರ್ಕಿಂಗ್ ಮಾಡುವಂತ ಹಾಗೂ ಹಿತಕರ ಚಾಲನಾ ಅನುಭವ ಬಯಸುವವರಿಗೆ ಟಿಯಾಗೊ ಇ.ವಿ ಇಷ್ಟವಾಗಲಿದೆ. ಮನೆಯಿಂದ ಕಚೇರಿ, ಹಾಗೇ ನಗರದಲ್ಲಿ ಒಂದು ಸಣ್ಣ ಸುತ್ತಾಟದ ನಂತರ ಮನೆಗೆ ಮರಳುವವರಿಗೆ ಟಿಯಾಗೊ ಇವಿ ಉತ್ತಮ ಆಯ್ಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು