ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೂಬ್ ಲೆಸ್ ಟೈರ್ ಸುತ್ತಾ...

ತುಂಬಾ ಸುರಕ್ಷಿತ, ಆರಾಮದಾಯಕ, ಆದರೆ ದುಬಾರಿ
Last Updated 20 ಡಿಸೆಂಬರ್ 2018, 4:51 IST
ಅಕ್ಷರ ಗಾತ್ರ

ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಮುಕ್ಕಾಲುಪಾಲು ವಾಹನಗಳಿಗೆ ಟ್ಯೂಬ್‌ಲೆಸ್‌ ಟೈರ್‌ ಇರುತ್ತವೆ. ಗ್ರಾಹಕರು ಕೂಡ ಅಂಥ ವಾಹನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕಂಪನಿ ಕೂಡ ಗ್ರಾಹಕರ ಆಸಕ್ತಿಗೆ ಅನುಗುಣವಾಗಿ ಇಂಥ ವಾಹನಗಳನ್ನು ಹೆಚ್ಚು ಉತ್ಪಾದಿಸುತ್ತದೆ. ಯಾವುದೆ ವಾಹನ ಸಂಬಂಧಿ ಜಾಹೀರಾತನ್ನು ಗಮನಿಸಿ ನೋಡಿ, ಟ್ಯೂಬ್‌ಲೆಸ್‌ ಟೈರ್‌ಗಳ ಕುರಿತು ಹೆಚ್ಚು ಪ್ರಚಾರ ಮಾಡುತ್ತವೆ. ಇದು ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಬಹುತೇಕ ಗ್ರಾಹಕರ ಆದ್ಯತೆಗಳು ಇದೇ ಆಗಿರುತ್ತದೆ. ಹೀಗಾಗಿ ಟ್ಯೂಬ್‌ ಸಹಿತ ಟೈರ್‌ಗಳ ಬಳಕೆ ಕ್ರಮೇಣ ಕಡಿಮೆಯಾಗುತ್ತಿದೆ.

ಹಾಗಾದರೆ ಟ್ಯೂಬ್‌ಲೆಸ್‌ ಟೈರ್ ಎಂದರೆ ಏನು? ಇದು ಪಂಚರ್‌ ಆಗುವುದೇ ಇಲ್ಲವೇ. ಇದರಿಂದ ಆಗುವ ಉಪಯೋಗಗಳೇನು? ಹೀಗೆ ಹಲವು ಪ್ರಶ್ನೆಗಳು ಈಗಲೂ ಬಹಳಷ್ಟು ಮಂದಿಗಿವೆ. ಮಾತ್ರವಲ್ಲ, ಇದರ ಬಗ್ಗೆ ಅನುಮಾನಗಳೂ ಇವೆ.

ನಿಮ್ಮ ವಾಹನದಲ್ಲಿ ಟ್ಯೂಬ್‌ಲೆಸ್‌ ಟೈರ್‌ ಇದ್ದರೆ ತುಂಬಾ ಅನುಕೂಲ ಎಂದು ಅಭಿಪ್ರಾಯಪಡುತ್ತಾರೆ ಆಟೊ ಮೊಬೈಲ್ ಕ್ಷೇತ್ರದ ತಜ್ಞರು. ಆದರೆ ಟ್ಯೂಬ್‌ಲೆಸ್‌ ಟೈರ್‌ಗಳು ಸ್ವಲ್ಪ ದುಬಾರಿಯಾಗಿರುತ್ತವೆ. ಹೀಗಾಗಿ ಕೆಲವರು ಇಂದಿಗೂ ಟ್ಯೂಬ್‌ ಸಹಿತ ಟೈರ್‌ಗಳಿರುವ ವಾಹನವನ್ನು ಕೊಳ್ಳುವವರು ಇದ್ದಾರೆ.

ಪಂಚರ್ ಆದರೆ ಚಿಂತೆ ಬಿಡಿ

ಟ್ಯೂಬ್‌ ಸಹಿತ ಚಕ್ರಗಳು ಪಂಚರ್ ಆದರೆ, ಸವಾರ ಬೀಳುವ ಸಾಧ್ಯತೆ ಇರುತ್ತದೆ. ಮಾತ್ರವಲ್ಲ, ಪಂಚರ್ ಆದರೆ ಗಾಡಿ ಒಂದು ಹೆಜ್ಜೆಯೂ ಮುಂದಕ್ಕೆ ಹೋಗಲ್ಲ. ಹಾಗಾಗಿ ತಕ್ಷಣವೇ ಹತ್ತಿರದ ಪಂಚರ್‌ ಸರ್ವೀಸ್‌ ಸ್ಟೇಷನ್‌ ಹುಡುಕಬೇಕು.

ಇಲ್ಲದಿದ್ದರೆ, ಕಿಲೋಮೀಟರ್ ಗಟ್ಟಲೆ ದೂರದವರೆಗೂ ಗಾಡಿ ನೂಗಿಕೊಂಡು ಹೋಗಬೇಕು. ಒಂದು ವೇಳೆ ನಿಮ್ಮ ಬೈಕ್‌ನ ತೂಕ ಹೆಚ್ಚಿದ್ದರೆ ತಳ್ಳು ಮಗಾ... ಹೈಸಾ.. ಇನ್ನೂ ಸ್ವಲ್ಪ ಹೈಸಾ.. ಎಂದು ಗಾಡಿ ತಳ್ಳಿ ಸುಸ್ತಾಗುತ್ತದೆ.

ಈ ನಡುವೆ ಚೆಕ್ ನಟ್ (ವಾಲ್ವ ಜತೆ ಇರುವ ನಟ್) ಸಡಿಲ ಗೊಳಿಸದಿದ್ದರೆ, ಚೆಕ್ ನಟ್ ಬಳಿಯೇ ಮತ್ತೊಂದು ಪಂಚರ್ ಆಗಿ, ಟ್ಯೂಬ್ ಚೇಂಜ್ ಮಾಡುವ ಸಾಧ್ಯತೆ ಬರಬಹುದು. ಆಗ ಜೇಬಿಗೆ ಕತ್ತರಿ ಬೀಳುತ್ತದೆ.

ಟ್ಯೂಬ್‌ ಲೆಸ್ ಚಕ್ರಗಳು ಪಂಚರ್ ಆದರೂ ನಿಯಮಿತವೇಗದಲ್ಲಿ ಕಿಲೋಮೀಟರ್ ಗಟ್ಟಲೆ ಹೋಗಬಹುದು. ಸವಾರ ಬೀಳುವುದಿಲ್ಲ.

ಹೀಗಾಗಿ ಇದು ಹೆಚ್ಚು ಸುರಕ್ಷಿತ. ಇದರ ಜತೆಗೆ, ಪಂಚರ್ ಹಾಕುವುದು ಕೂಡ ತುಂಬಾ ಸರಳ ಹಾಗೂ ಸುಲಭ.

ಒಂದು ವಿಷಯ ಏನೆಂದರೆ, ಟ್ಯೂಬ್ ಸಹಿತ ಟೈರ್‌ಗೆ ಪಂಚರ್‌ಗೆ ತಗಲುವ ವೆಚ್ಚಕ್ಕಿಂತ ತುಸು ದುಬಾರಿ ಅಷ್ಟೇ.

ಟೈರ್‌ ಸ್ಫೋಟಗೊಳ್ಳುವ ಸಾಧ್ಯತೆ ಕಡಿಮೆ

ಹಳೆ ಮಾದರಿಯ ಟೈರ್‌ಗಳಿರುವ ಗಾಡಿಗಳು ವೇಗವಾಗಿ ಚಲಿಸಿದಾಗ ರಸ್ತೆ ಮತ್ತು ಟೈರ್‌ನ ಮಧ್ಯೆ ಘರ್ಷಣೆ ಏರ್ಪಟ್ಟು ಶಾಖ ಉತ್ಪತ್ತಿಯಾಗುತಿತ್ತು. ಚೂಪಾದ ವಸ್ತು ಅಥವಾ ಕಲ್ಲು, ಮೊಳೆ ಚುಚ್ಚಿದರೇ ಚಕ್ರ ಸಿಡಿಯುವ ಸಾಧ್ಯತೆಯೂ ಇರುತ್ತಿತ್ತು. ಆದರೆ ಟ್ಯೂಬ್‌ ಲೆಸ್‌ ಟೈರ್‌ ವಾಹನದಲ್ಲಿ ಈ ರೀತಿಯ ತೊಂದರೆ ಎದುರಾಗುವುದಿಲ್ಲ. ಏಕಂದರೆ ಈ ಟೈರ್‌ಗಳಲ್ಲಿ ಬಳಸಿರುವ ರಬ್ಬರ್‌ಗಳು ಉಷ್ಣ ನಿರೋಧಕವಾಗಿರುತ್ತದೆ. ಇಲ್ಲಿ ಚಕ್ರವನ್ನೇ ರಿಮ್‌ಗೆ ನೇರಾವಗಿ ಜೋಡಿಸಲಾಗುತ್ತದೆ. ಇದರಿಂದ ಹೆಚ್ಚಿನ ಶಾಖ ಉತ್ಪತ್ತಿಯಾಗುವುದಿಲ್ಲ.

ಟ್ಯೂಬ್‌ ಇಲ್ಲದಿದ್ದರೂ ಗಾಳಿ ಇರುತ್ತೆ

ಹೆಸರೇ ಸೂಚಿಸುವಂತೆ ಟ್ಯೂಬ್‌ ಲೆಸ್‌ ಟೈರ್‌ನಲ್ಲಿ ಟ್ಯೂಬ್‌ಇಲ್ಲದಿದ್ದರೂ ಆದರೂ ಗಾಳಿ ಇರುತ್ತದೆ. ಸಾಂಪ್ರದಾಯಿಕ ಟೈರ್‌ಗಳಿಗೆ ಪ್ರತ್ಯೇಕವಾಗಿ ಟ್ಯೂಬ್‌ ಇರುತ್ತಿತ್ತು. ಆದರೆ ಈ ಟೈರ್‌ಗಳಲ್ಲಿ ಟ್ಯೂಬ್‌ ಹೊಲುವಂತಹ ಅಂಶವಿದ್ದರೂ ಅದು ಟೈರ್‌ನೊಂದಿಗೆ ಬೆಸೆದುಕೊಂಡಿರುತ್ತದೆ. ಇಲ್ಲಿ ಚಕ್ರ ಮತ್ತು ರಿಮ್‌ಗಳ ನಡುವಿನ ಜಾಗ ಖಾಲಿ ಇರಲಿದ್ದು, ಅಲ್ಲಿ ಗಾಳಿಯೂ ಶೇಖರವಾಗಿರುತ್ತದೆ. ಟೈರ್‌ಗೆ ಸಣ್ಣ ಪುಟ್ಟ ಪೆಟ್ಟಾದ್ದರೂ ಅದನ್ನು ಮುಚ್ಚಿ ಗಾಳಿ ಹೊರ ಹೋಗದಂತೆ ತಡೆಯುವ ರಾಸಾಯನಿಕ ಅಂಶಗಳು ಇರುತ್ತವೆ.

ಮೈಲೇಜ್‌ ಹೆಚ್ಚಿಸಲು ಸಹಕಾರಿ

ಟ್ಯೂಬ್‌ ಲೆಸ್‌ ಚಕ್ರಗಳ ಭಾರ ಟ್ಯೂಬ್‌ ಇರುವ ಚಕ್ರಗಳಿಗಿಂತ ಕಡಿಮೆ ಇರುತ್ತದೆ. ಹಾಗೂ ಇವು ರಸ್ತೆಗೆ ಹೊಂದಿಕೊಂಡು ಸಂಚರಿಸುವುದರಿಂದ ವಾಹನಗಳ ಇಂಧನಕ್ಷಮತೆ ಜೊತೆ ಕಾರು ಸಮತೋಲನ ಕಾಯ್ದುಕೊಳ್ಳಲಿದೆ. ಪ್ರಯಾಣಿಕರು ಹೆಚ್ಚಾಗಿ ವಾಹನದ ಭಾರ ಗರಿಷ್ಠ ಮಟ್ಟ ತಲುಪಿದರೂ ಅದಕ್ಕೆ ಹೊಂದಿಕೊಂಡು ಈ ಟೈರ್‌ಗಳು ಹಿಗ್ಗುವ ಮತ್ತು ಕುಗ್ಗುತ್ತಾ ವಾಹನದ ಮೈಲೇಜ್‌ ಹೆಚ್ಚಿಸುತ್ತದೆ.

ಬಾಗುವುದಿಲ್ಲ, ಅಪಘಾತವು ಆಗುವುದಿಲ್ಲ

ರಿಮ್ ಹಾಗೂ ಚಕ್ರದ ನಡುವೆ ಗಾಳಿಯು ಶೇಖ ರಣೆಯಾಗುವುದರಿಂದ ಗಾಡಿಗೆ ಅತ್ಯುತ್ತಮ ಸ್ಥಿರತೆ ಹೆಚ್ಚಾಗಲಿದೆ. ಒಂದು ವೇಳೆ ವೇಗದಲ್ಲಿ ವಾಹನ ಸಾಗುತ್ತಿದ್ದಾಗ ಪಂಚರ್‌ ಆಗಿ ಕ್ರಮೇಣ ಗಾಳಿಯೂ ಕಡಿಮೆಯಾದಗ, ನಿಯಂತ್ರಣ ತಪ್ಪಿ ಅಪಘಾತವಾಗುವ ಸಂಭವಗಳು ಟ್ಯೂಬ್ ಲೆಸ್ ಗಾಡಿಗಳಲ್ಲಿ ಕಡಿಮೆ. ಇದರಿಂದ ವೇಗವಾಗಿ ವಾಹನ ಮುನ್ನುಗ್ಗುವಾಗ ನಿಯಂತ್ರಣ ತಪ್ಪುವ ಭಯವೂ ಇರುವುದಿಲ್ಲ.

ಎಲ್ಲರೂ ಪಂಚರ್‌ ಹಾಕಲು ಸಾಧ್ಯವಿಲ್ಲ

ಟ್ಯೂಬ್ ಲೆಸ್ ಚಕ್ರದಲ್ಲಿ ಗಾಳಿಯು ರಿಮ್ ಹಾಗೂ ಚಕ್ರದ ನಡುವೆ ಹಿಡಿದಿಟ್ಟುಕೊಳ್ಳುವುದರಿಂದ ಇದನ್ನು ಬದಲಾಯಿಸಲು ವಿಶೇಷ ಹೈಡ್ರಾಲಿಕ್ ಪರಿಕರದ ಅಗತ್ಯವಿರುತ್ತದೆ (ನಾಲ್ಕು ಚಕ್ರಗಳ ವಾಹನದ ವಿಷಯದಲ್ಲಿ). ಹಾಗಾಗಿ ಇದನ್ನು ಬದಲಾಯಿಸಿಕೊಳ್ಳಲು ನುರಿತ ಮೆಕ್ಯಾನಿಕ್ ಬಳಿಯಿಂದ ಮಾತ್ರ ಸಾಧ್ಯ. ಟಯರ್ ತಂತ್ರಜ್ಞಾನ ಎಷ್ಟೇ ಅಭಿವೃದ್ಧಿಯಾದರೂ ಪಂಚರ್ ಭಯ ಮಾತ್ರ ತಪ್ಪಿಸಲು ಸಾಧ್ಯವಿಲ್ಲ. ಇಲ್ಲಿ ಟ್ಯೂಬ್ ಲೆಸ್ ಚಕ್ರಗಳನ್ನು ಹೊರ ತೆಗೆಯಲು ವಿಶೇಷವಾದ ಹೈಡ್ರಾಲಿಕ್ ಉಪಕರಣವನ್ನು ಬಳಕೆ ಮಾಡಲಾಗುತ್ತದೆ.

ಡ್ಯಾಮೇಜ್‌ ಆದ್ರೆ ಸಂಪೂರ್ಣವಾಗಿ ಬದಲಿಸಬೇಕು

ಟ್ಯೂಬ್ ಲೆಸ್ ಚಕ್ರಗಳಲ್ಲಿ ರಿಮ್ ಹಾಗೂ ಚಕ್ರಗಳು ಹೊಂದಿಕೊಳ್ಳುವ ಜಾಗದಲ್ಲಿ ಡ್ಯಾಮೇಜ್ ಆದ್ದಲ್ಲಿ ಸಂಪೂರ್ಣ ಚಕ್ರವನ್ನೇ ಬದಲಾಯಿಸಬೇಕಾಗುತ್ತದೆ. ಇಲ್ಲಿ ಯಾವುದೇ ವಿಧದ ಡ್ಯಾಮೇಜ್ ಕಂಟ್ರೋಲ್ ಕೆಲಸಕ್ಕೆ ಬರುವುದಿಲ್ಲ. ಇನ್ನೊಂದೆಡೆ ಟ್ಯೂಬ್ ಚಕ್ರಗಳಲ್ಲಿ ಟ್ಯೂಬ್ ಮಾತ್ರ ಬದಲಾಯಿಸಿಕೊಳ್ಳುವ ಆಯ್ಕೆ ಇದರಲ್ಲಿರುವುದಿಲ್ಲ ಒಟ್ಟಿನಲ್ಲಿ ಸುಧಾರಿತ ತಂತ್ರಜ್ಞಾನವನ್ನು ಬೇಡುವ ಟ್ಯೂಬ್‌ಲೆಸ್‌ ಟೈರ್‌ಗಳು ದುಬಾರಿಯಾದರೂ, ಸುರಕ್ಷತೆಯ ದೃಷ್ಟಿಯಿಂದ ಉತ್ತಮವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT