ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಟೆಗೆ 147 ಕಿ.ಮೀ. ವೇಗ; ಇದು ಬೆಂಗಳೂರು ಮೂಲದ 'ಅಲ್ಟ್ರಾವೈಲೆಟ್‌ ಎಫ್‌77' ಬೈಕ್‌

50 ನಿಮಿಷಗಳಲ್ಲಿ ಶೇ 80ರಷ್ಟು ಚಾರ್ಜ್
Last Updated 13 ನವೆಂಬರ್ 2019, 11:06 IST
ಅಕ್ಷರ ಗಾತ್ರ

ಬೆಂಗಳೂರು:ವಿದ್ಯುತ್‌ ಚಾಲಿನ ವಾಹನಗಳೆಂದರೆ 'ದೂರದ ಪ್ರಯಾಣ ಸಾಧ್ಯವಿಲ್ಲ, ಅಧಿಕ ವೇಗ ನಿರೀಕ್ಷಿಸುವಂತಿಲ್ಲ' ಎಂಬ ಸಿದ್ಧ ಮಾತು ಕೇಳಿ ಬರುತ್ತದೆ. ಆದರೆ, ಅದೇ ಎಲೆಕ್ಟ್ರಿಕ್‌ ಬೈಕ್‌ ಗಂಟೆಗೆ 147 ಕಿ.ಮೀ. ವೇಗದಲ್ಲಿ ಮುನ್ನುಗ್ಗುವುದಾದರೆ?

ಬೆಂಗಳೂರು ಮೂಲದ ಸ್ಟಾರ್ಟ್‌–ಅಪ್‌ 'ಅಲ್ಟ್ರಾವೈಲೆಟ್‌' ಆಟೊಮೊಟೀವ್‌ ತನ್ನ ಮೊದಲ ಉತ್ಪನ್ನವನ್ನು ಬಿಡುಗಡೆ ಮಾಡಿದೆ. 'ಅಲ್ಟ್ರಾವೈಲೆಟ್‌ ಎಫ್‌77' ಹೆಸರಿನ ವಿದ್ಯುತ್‌ ಚಾಲಿತ ಮೋಟಾರ್‌ಸೈಕಲ್‌ ಹೊರತಂದಿದೆ. ಲೈಟ್ನಿಂಗ್‌, ಶಾಡೊ ಮತ್ತು ಲೇಸರ್‌ ಮಾದರಿಗಳಲ್ಲಿಈ ಬೈಕ್‌ ಲಭ್ಯವಿದೆ.

ಏರ್‌ ಕೂಲ್ಡ್‌ ಬ್ರಷ್‌ಲೆಸ್‌ ಡಿಸಿ(BLDC) ಮೋಟಾರ್‌ ಹೊಂದಿರುವ ಬೈಕ್‌ 25 ಕಿಲೋ ವ್ಯಾಟ್‌ (33.5 ಬಿಎಚ್‌ಪಿ) ಶಕ್ತಿ ಹೊಮ್ಮಿಸುತ್ತದೆ. ಗಂಟೆಗೆ 0–60 ಕಿ.ಮೀ ವೇಗವನ್ನು 2.9 ಸೆಕೆಂಡ್‌ಗಳಲ್ಲಿ ಹಾಗೂ 0–100 ಕಿ.ಮೀ. ವೇಗವನ್ನು 7.5 ಸೆಕೆಂಡ್‌ಗಳಲ್ಲಿ ತಲುಪುವ ಸಾಮರ್ಥ್ಯ ಹೊಂದಿದ್ದು, ಗಂಟೆಗೆ ಗರಿಷ್ಠ 147 ಕಿ.ಮೀ ವೇಗದಲ್ಲಿ ಚಲಿಸಬಲ್ಲದಾಗಿದೆ.

ಚಾಲನೆಯಲ್ಲಿಇಕೊ, ಸ್ಫೋರ್ಟ್‌ ಮತ್ತು ಇನ್‌ಸೇನ್‌ ಮೋಡ್‌ಗಳನ್ನು ಹೊಂದಿದೆ. 450 ಎನ್‌ಎಂ ಟಾರ್ಕ್‌ ಹೊಂದಿರುವ 'ಅಲ್ಟ್ರಾವೈಲೆಟ್‌ ಎಫ್‌77' ಬೆಲೆ ₹3 ಲಕ್ಷ–₹3.25 ಲಕ್ಷ(ಆನ್‌–ರೋಡ್‌) ಇರಲಿದೆ. ದೇಶೀಯ ಎಲೆಕ್ಟ್ರಿಕ್‌ ಬೈಕ್‌ಗಳ ಪೈಕಿ ಶಕ್ತಿಯುತ ಎನಿಸಿರುವ ಇದರ ಬೆಲೆಯೂ ಅಧಿಕ.ಬುಧವಾರದಿಂದಲೇ ಬುಕಿಂಗ್‌ಗೆ ಅವಕಾಶ ನೀಡಲಾಗಿದ್ದು, 2020ರ ಮೂರನೇ ತ್ರೈಮಾಸಿಕದ ವೇಳೆಗೆ ಬೈಕ್‌ ಗ್ರಾಹಕರ ಕೈಸೇರಲಿದೆ.

ಬೈಕ್‌ನಲ್ಲಿ ಅಳವಡಿಸಲಾಗಿರುವ ಮೂರು ಲಿಥಿಯಂ–ಅಯನ್‌ ಬ್ಯಾಟರಿಯನ್ನು ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ 130–140 ಕಿ.ಮೀ. ಕ್ರಮಿಸಬಹುದು. ಸ್ಟ್ಯಾಂಡರ್ಡ್‌ ಚಾರ್ಜರ್‌ ಮೂಲಕ ಬ್ಯಾಟರಿ ಪ್ಯಾಕ್‌ಗಳನ್ನು ಪೂರ್ಣ ಚಾರ್ಜ್‌ ಮಾಡಲು 5 ಗಂಟೆ ಬೇಕಾದರೆ, ಪೋರ್ಟಬಲ್‌ ಫಾಸ್ಟ್‌ ಚಾರ್ಜರ್‌ನಿಂದ ಕೇವಲ 50 ನಿಮಿಷಗಳಲ್ಲಿ ಶೇ 80ರಷ್ಟು ಚಾರ್ಜ್‌ ಆಗುತ್ತದೆ. ಶಾಕ್‌ ಪ್ರೂಫ್‌ ಪದರ ಹೊಂದಿರುವ ಪ್ರತಿ ಬ್ಯಾಟರಿ ಪ್ಯಾಕ್‌ 8.5 ಕೆ.ಜಿ. ತೂಕವಿದೆ.

ಡಿಸ್ಕ್ ಬ್ರೇಕ್‌ ಮತ್ತು ಎಬಿಸಿ ವ್ಯವಸ್ಥೆ, ಬ್ಲೂಟೂಥ್‌ ಸಂಪರ್ಕ, ಟಿಎಫ್‌ಟಿ ಪರದೆ, ಬೈಕ್‌ ಲೊಕೇಟರ್, ರೈಡ್‌ ಬಗ್ಗೆ ವಿಶ್ಲೇಷಣೆ ಸೇರಿದಂತೆ ಪ್ರತ್ಯೇಕ ಆ್ಯಪ್‌ಗಳೊಂದಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬೈಕ್‌ನಲ್ಲಿ ಅಳವಡಿಸಲಾಗಿದೆ. ಚಾರ್ಜಿಂಗ್‌ಗಾಗಿ ಸಂಸ್ಥೆಯು ಪ್ರತ್ಯೇಕ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸುತ್ತಿದೆ.

ದೇಶದ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಟಿವಿಎಸ್‌ ಮೋಟಾರ್‌ ಕಂಪನಿ ವರ್ಷದ ಹಿಂದೆ ಅಲ್ಟ್ರಾವೈಲೆಟ್‌ ಆಟೊಮೊಟಿವ್‌ಗೆ ಹಣಕಾಸು ನೆರವು ನೀಡಿತ್ತು. ಟಿವಿಎಸ್‌ ₹11 ಕೋಟಿ ಬಂಡಾವಳ ಹೂಡಿಕೆಯೊಂದಿಗೆ ಶೇ 25.76 ಪಾಲುದಾರಿಕೆ ಹೊಂದಿದೆ. ಬೆಂಗಳೂರಿನ ಬಿಎಂಎಸ್‌ ಇಂಜಿನಿಯರಿಂಗ್‌ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ನಿರಂಜನ್‌ ರಾಜ್‌ಮೋಹನ್‌ ಮತ್ತು ನಾರಾಯಣ್‌ ಸುಬ್ರಮಣಿಯಂ 2015ರಲ್ಲಿ ಅಲ್ಟ್ರಾವೈಲೆಟ್‌ ಸಂಸ್ಥೆ ಸ್ಥಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT