ಬುಧವಾರ, ಸೆಪ್ಟೆಂಬರ್ 22, 2021
21 °C

ದೋಷಪೂರಿತ 1,81,754 ಕಾರುಗಳನ್ನು ಹಿಂಪಡೆಯಲು ಮಾರುತಿ ಸುಜುಕಿ ಇಂಡಿಯಾ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ)ವು ದೋಷಪೂರಿತ ಮೋಟಾರ್ ಜನರೇಟರ್ ಬದಲಿಸಲು ಸಿಯಾಜ್, ವಿಟಾರಾ ಬ್ರೆಝಾ ಮತ್ತು ಎಕ್ಸ್‌ಎಲ್ 6 ಸೇರಿದಂತೆ ವಿವಿಧ ಮಾದರಿಗಳ 1,81,754 ಯೂನಿಟ್ ಪೆಟ್ರೋಲ್ ಕಾರುಗಳನ್ನು ಹಿಂಪಡೆಯುತ್ತಿರುವುದಾಗಿ ಹೇಳಿದೆ.

ಜವಾಬ್ದಾರಿಯುತ ಕಾರ್ಪೊರೇಟ್ ಕಂಪನಿಯಾಗಿ ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಸಿಯಾಜ್, ಎರ್ಟಿಗಾ, ವಿಟಾರಾ ಬ್ರೆಝಾ, ಎಸ್-ಕ್ರಾಸ್ ಮತ್ತು ಎಕ್ಸ್‌ಎಲ್ 6 ಸೇರಿ ಕೆಲವು ಪೆಟ್ರೋಲ್ ಇಂಧನ ಬಳಕೆಯ ವಾಹನಗಳನ್ನು ಮರುಪಡೆಯುವುದಾಗಿ ಕಂಪನಿ ಘೋಷಿಸಿದೆ ಎಂದು ಎಂಎಸ್‌ಐ ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ತಿಳಿಸಿದೆ.

ಮೇ 4,2018 ರಿಂದ ಅಕ್ಟೋಬರ್ 27,2020ರ ನಡುವೆ ತಯಾರಾದ ಈ ಮಾದರಿಗಳ 1,81,754 ಯುನಿಟ್‌ಗಳಲ್ಲಿ ನ್ಯೂನತೆ ಇರುವುದನ್ನು ಪರಿಶೀಲಿಸುವುದು ಇದರ ಉದ್ದೇಶವಾಗಿದೆ.

ವಾಹನಗಳಲ್ಲಿನ ದೋಷಗಳನ್ನು ಸರಿಪಡಿಸಲು ಜಾಗತಿಕವಾಗಿ ಹಿಂಪಡೆಯುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಎಂಎಸ್ಐ ಹೇಳಿದೆ.

‘ಗ್ರಾಹಕರ ಹಿತದೃಷ್ಟಿಯಿಂದ, ಮಾರುತಿ ಸುಜುಕಿ ಸ್ವಯಂಚಾಲಿತವಾಗಿ ದೋಷಪೂರಿತ ವಾಹನಗಳ ಮೋಟಾರ್ ಜನರೇಟರ್ ಘಟಕದ ತಪಾಸಣೆ/ಬದಲಿಗಾಗಿ ಉಚಿತವಾಗಿ ಹಿಂಪಡೆಯಲು ನಿರ್ಧರಿಸಿದೆ’ಎಂದು ಅದು ಹೇಳಿದೆ.

ವಾಹನಗಳ ಮಾಲೀಕರಿಗೆ ಕಂಪನಿಯ ಕಡೆಯಿಂದ ಈ ಬಗ್ಗೆ ಅಧಿಕೃತ ಕರೆ ಬರಲಿದೆ ಎಂದು ಕಂಪನಿ ತಿಳಿಸಿದೆ.

ವಾಹನಗಳ ದೋಷಯುಕ್ತ ಭಾಗವನ್ನು ಬದಲಾಯಿಸುವ ಪ್ರಕ್ರಿಯೆ ನವೆಂಬರ್ ಮೊದಲ ವಾರದಿಂದ ಪ್ರಾರಂಭವಾಗುತ್ತದೆ ಎಂದು ಅದು ಹೇಳಿದೆ.

ಅಲ್ಲಿಯವರೆಗೆ, ಗ್ರಾಹಕರು ನೀರು ತುಂಬಿರುವ ಪ್ರದೇಶಗಳಲ್ಲಿ ವಾಹನವನ್ನು ಚಾಲನೆ ಮತ್ತು ವಾಹನಗಳಲ್ಲಿ ವಿದ್ಯುತ್/ಎಲೆಕ್ಟ್ರಾನಿಕ್ ಭಾಗಗಳ ಮೇಲೆ ನೇರ ನೀರಿನ ಸಿಂಪಡಣೆಯನ್ನು ತಪ್ಪಿಸಲು ವಿನಂತಿಸಲಾಗಿದೆ ಎಂದು ವಾಹನ ತಯಾರಕ ಸಂಸ್ಥೆಯು ತನ್ನ ಗ್ರಾಹಕರಿಗೆ ಸಲಹೆ ನೀಡಿದೆ.

ಕಾರಿನ ಮೋಟಾರ್ ಜನರೇಟರ್ ಘಟಕವು ಎಂಜಿನ್‌ಗೆ ಹೆಚ್ಚಿನ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು