ಕಡಿದಾದ ಹಾದಿಯಲ್ಲಿ ಕಠಿಣ ತರಬೇತಿ!

7
ಮಹೀಂದ್ರಾ ಆಫ್‌ ರೋಡ್ ಅಕಾಡೆಮಿಯಲ್ಲಿ ಗ್ಲೋಬಲ್ ಎಕ್ಸ್‌ಪ್ಲೋರರ್‌

ಕಡಿದಾದ ಹಾದಿಯಲ್ಲಿ ಕಠಿಣ ತರಬೇತಿ!

Published:
Updated:

ಮಳೆಗಾಲ ಆರಂಭವಾಗುತ್ತಿದ್ದಂತೆ ದೇಶದ ವಿವಿಧೆಡೆ ಆಫ್‌ರೋಡ್‌ ಸ್ಪೋರ್ಟ್ಸ್‌ ಗರಿಗೆದರುತ್ತವೆ. ಇಂಥ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮಂದಿಗೆ ಅನುಭವ ಬಹಳ ಮುಖ್ಯ. ಜತೆಗೆ ವಾಹನ ಚಾಲನೆಯ ವಿಶೇಷ ತರಬೇತಿ ಇರಬೇಕು. ಕಚ್ಚಾ ರಸ್ತೆಯಲ್ಲಿ ಕಾರು ಓಡಿಸುವಾಗ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ತರಬೇತಿ ಇರಲೇಬೇಕು. ಹಾಗಾದರೆ, ಇಂಥ ತರಬೇತಿ ಎಲ್ಲಿ ಸಿಗುತ್ತದೆ?

ಇಂಥ ಸಾಹಸಮಯ ಡ್ರೈವಿಂಗ್ ಕಲಿಸುವುದಕ್ಕಾಗಿಯೇ ಮಹೀಂದ್ರಾ ಕಂಪೆನಿ ಒಂದು ಅಕಾಡೆಮಿ ಸ್ಥಾಪಿಸಿದೆ. ಮುಂಬೈನಿಂದ 120 ಕಿ.ಮೀ ದೂರವಿರುವ (ನಾಸಿಕ್ ಮಾರ್ಗದಲ್ಲಿ ) ಇಘತಪುರಿ ಮಹೀಂದ್ರಾ ಅಂಡ್‌ ಮಹೀಂದ್ರಾ ಕಡಿವಾಲಿ ಪ್ಲಾಂಟ್‌ನಲ್ಲಿ ಈ ಅಕಾಡೆಮಿ ಇದೆ. 28 ಎಕರೆ ಪ್ರದೇಶದಲ್ಲಿನ ಕಚ್ಚಾ ರಸ್ತೆಯಲ್ಲಿ ವಾಹನ ಚಾಲನೆ ತರಬೇತಿ ನೀಡಲಾಗುತ್ತದೆ. ಅಲ್ಲಿ ಎದುರಾಗುವ ಸವಾಲುಗಳನ್ನು ಶಕ್ತಿಯ ಬದಲು ಯುಕ್ತಿಯಿಂದ ಎದುರಿಸುವ ಕೌಶಲವನ್ನು ಕಲಿಸಲಾಗುತ್ತದೆ. ಇತ್ತೀಚೆಗೆ ಈ ಅಕಾಡೆಮಿಯಲ್ಲಿ ಮೂರು ದಿನಗಳ ‘ಆಫ್ ರೋಡ್‌ ಗ್ಲೋಬಲ್ ಎಕ್ಸ್‌ಪ್ಲೋರರ್‌ ಕೋರ್ಸ್‌’ ಆಯೋಜಿಸಲಾಗಿತ್ತು. ಆಹ್ವಾನದ ಮೇರೆಗೆ ಈ ತರಬೇತಿಯಲ್ಲಿ ‘ಪ್ರಜಾವಾಣಿ’ಯೂ ಪಾಲ್ಗೊಂಡಿತ್ತು. ಈ ಕೋರ್ಸ್ ಪ್ರತಿ ವಾರ ಶುಕ್ರವಾರದಿಂದ ಭಾನುವಾರದವರೆಗೆ ನಡೆಯುತ್ತದೆ.

ಈ ತರಬೇತಿಯಲ್ಲಿ ಕಲಿಕೆಯ ಜತೆಗೆ, ದೇಹದ ತೂಕವನ್ನೂ ಇಳಿಸುವ ಕಸರತ್ತು ಮಾಡಲು ಅವಕಾಶ ಸಿಗಲಿದೆ. ಮನೀಶ್‌ ಸರ್ಸೆರ್‌ ಹಾಗೂ ಸೆಲ್ವಿನ್‌ ಜೋಸ್‌ ಎಂಬ ಇಬ್ಬರು ತರಬೇತುದಾರು ಹೇಳಿಕೊಡುವ ಆಫ್‌ರೋಡ್ ಪಾಠ, ತರಬೇತಿ ಮುಗಿಯುವುದರೊಳಗಾಗಿ ಇಂಥ ಆಫ್‌ರೋಡ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು ಎನ್ನುವಷ್ಟರಮಟ್ಟಿಗೆ ಉತ್ತೇಜಿಸುತ್ತದೆ.

ತರಬೇತಿಯಲ್ಲಿ ಮಹೀಂದ್ರಾ ಥಾರ್ ಸಿಆರ್‌ಡಿಇ ಅಥವಾ ಎಂಎಂ540 ಆರ್‌ಡಿ ಎಂಜಿನ್‌ವುಳ್ಳ ಕಾರುಗಳನ್ನು ಬಳಸಲಾಗುತ್ತದೆ. ಇರುವುದೆಲ್ಲವೂ ಕಚ್ಚಾ ರಸ್ತೆಗಳೇ. ಅದರಲ್ಲೂ ಮಳೆಗಾಲದಲ್ಲಿ ಧೋ ಎಂದು ಮಳೆ ಸುರಿಯುವಾಗ ಈ ಪ್ರದೇಶದಲ್ಲಿ ಹತ್ತು ಅಡಿಗಿಂತ ದೂರದ್ದು ಏನೂ ಕಾಣಿಸದಷ್ಟು ಮಂಜು ಕವಿದಿರುತ್ತದೆ. ಎತ್ತ ನೋಡಿದರೂ ಹಸಿರು, ಇಲ್ಲವೇ ಕೆಸರು ತುಂಬಿದ ಕೆಂಪು ಗುಂಡಿಗಳು. ಇಂಥ ದುರ್ಗಮ ಹಾದಿಯಲ್ಲಿ ಸಾಗುವುದು ಕಷ್ಟ. ಇಂಥ ರಸ್ತೆಗಳಲ್ಲಿ ಅತ್ಯಂತ ಕೌಶಲ್ಯದಿಂದ ಸಾಗುವ ಕಲೆಯನ್ನು ಈ ಅಕಾಡೆಮಿಯಲ್ಲಿ ಕಲಿಸುತ್ತಾರೆ.

ಕಳೆದ ತಿಂಗಳು ಅಕಾಡೆಮಿಯಲ್ಲಿ ನಡೆದ ತರಬೇತಿಯಲ್ಲಿ ಏಳು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಆರಂಭದಲ್ಲಿ ತರಬೇತಿಗೆ ಬಂದವರೊಂದಿಗೆ ಸಂಪನ್ಮೂಲ ವ್ಯಕ್ತಿಗಳಾದ ಮನೀಶ್ ಹಾಗೂ ಸೆಲ್ವಿನ್ ಆರಂಭಿಕ ಮಾತುಕತೆ ನಡೆಸಿದರು. ಒಂದು ಸಣ್ಣ ಪರಿಚಯ, ಪರಿಚಯದ ನಂತರ ಅವರು ಹೇಳಿದ್ದಿಷ್ಟು, ‘ಇಲ್ಲಿ ಕಾರನ್ನು ಹೇಗೆ ಓಡಿಸಬೇಕು ಎಂದು ಹೇಳುವುದಕ್ಕಿಂಥ, ಹೇಗೆ ಓಡಿಸಬಾರದು ಎಂಬುದನ್ನು ಹೇಳಿಕೊಡಲಾಗುತ್ತದೆ. ಈವರೆಗೂ ಹೆದ್ದಾರಿಯಲ್ಲಿ ಟಾಪ್ ಗೇರ್‌ನಲ್ಲಿ ಇಷ್ಟದ ಸಂಗೀತ ಆಲಿಸುತ್ತಾ ಲೀಲಾಜಾಲವಾಗಿ ವಾಹನ ಓಡಿಸಿದ್ದರ ಅನುಭವವಿದ್ದರೆ, ಅದನ್ನು ಗೇಟಿನಾಚೆಯೇ ಇಟ್ಟು ಬನ್ನಿ. ಇಲ್ಲಿ 2 ಅಥವಾ 3ನೇ ಗೇರ್‌ಗಿಂತ ಮೇಲೆ ಹೋಗುವ ಹಾಗಿಲ್ಲ. ವೇಗದ ಮಾತಂತೂ ಇಲ್ಲವೇ ಇಲ್ಲ. ಏನಿದ್ದರೂ ಎದುರಾಗುವ ಸವಾಲನ್ನು ಕೌಶಲ್ಯದಿಂದ ಎದುರಿಸುವುದು ಹೇಗೆ ಎಂದು ಇಲ್ಲಿ ಹೇಳಿಕೊಡಲಾಗುತ್ತದೆ’ ಎಂದರು. ಎಲ್ಲಾ ಮಾತುಗಳನ್ನು ಕೇಳಿದ ನಂತರ ಇದೊಂಥರಾ ವಿಭಿನ್ನ ಕಲಿಕೆ ಎನ್ನಿಸಿತು.

ಮೂರೂ ದಿನಗಳ ಕಾಲ ನಡೆದ ತರಬೇತಿಯಲ್ಲಿ ಹಗಲಿನಲ್ಲಿ ಒಂದಷ್ಟು ಪ್ರವಾಸ, ಮೆಕ್ಯಾನಿಕಲ್ ತರಬೇತಿ, ಗುಂಡಿಯಲ್ಲಿ ಸಿಲುಕಿದ ವಾಹನಗಳನ್ನು ಮೇಲಕ್ಕೆತ್ತುವ ವಿಂಚಿಂಗ್ ತರಬೇತಿ ನೀಡಲಾಯಿತು. ಕತ್ತಲಾದ ನಂತರ ಸವಾಲಿನ ಹಾದಿಗಳಲ್ಲಿ ಸಾಗುವ ಬಗ್ಗೆ ಕಲಿಕೆ. ಒಂದೆಡೆ ಕಗ್ಗತ್ತಲು, ಮತ್ತೊಂದೆಡೆ ಧೋ... ಎಂದು ಸುರಿಯುವ ಮಳೆ. ಇನ್ನೊಂದು ಕಡೆ ಕೊಟ್ಟ ಸಮಯದಲ್ಲಿ ನಿರ್ದಿಷ್ಟ ಗುರಿಯನ್ನು ತಲುಪುವ ಸವಾಲು. ಒಟ್ಟಾರೆ, ಶಿಬಿರಾರ್ಥಿಗಳು ಮಳೆಯಲ್ಲೂ ಬೆವರು ಬರುವಷ್ಟು ಕಸರತ್ತು ಮಾಡಿದರು.

ಎರಡು ದಿನಗಳ ಸಂಜೆ ಇಂಥ ಸಣ್ಣ ಪುಟ್ಟ ಸವಾಲು ಎದುರಿಸಿದ ನಂತರ ಕೊನೆಯ ದಿನ ಶಿಬಿರಾರ್ಥಿಗಳಿಗೆ ಪರೀಕ್ಷೆಯ ಸಮಯ. ಬೆಳಿಗ್ಗೆಯಿಂದ ಸತತವಾಗಿ ನಾಲ್ಕು ಪರೀಕ್ಷೆಗಳು ನಡೆದವು. ಮಾರ್ಗದ ಎಡ ಮತ್ತು ಬಲ ಬದಿಯಲ್ಲಿ ಒಂದಷ್ಟು ಪ್ಲಾಸ್ಟಿಕ್ ಕೋನ್‌ಗಳನ್ನು ಇಟ್ಟರು. ರಸ್ತೆಯಲ್ಲಿ ಕಾರು ಚಾಲನೆ ಮಾಡುತ್ತಾ ಬಲ ಭಾಗದ ಸೀಟ್ ಬೆಲ್ಟ್‌ ತೆಗೆಯದೇ ಕೋನ್ ಎತ್ತಿಕೊಳ್ಳಬೇಕು. ಎಡ ಭಾಗದ್ದು ಸೀಟ್ ಬೆಲ್ಟ್ ತೆಗೆದು ಎತ್ತಿಕೊಳ್ಳಬಹುದಾದರೂ, ಕಾಲನ್ನು ನೆಲಕ್ಕಿಡುವಂತಿಲ್ಲ. ಕೋನ್‌ ಕೆಳಗೆ ಬೀಳಿಸುವಂತಿಲ್ಲ. ಮಾರ್ಗದಲ್ಲಿ ಹಾಕಿರುವ ಟೇಪ್‌ಗೆ ಕಾರು ಮುಟ್ಟುವಂತಿಲ್ಲ. ಒಂದು ಕೋನ್ ತೆಗೆದುಕೊಂಡ ನಂತರ ಮತ್ತೊಂದು ತೆಗೆದುಕೊಳ್ಳುವ ಹೊತ್ತಿಗೆ ಸೀಟ್ ಬೆಲ್ಟ್‌ ಹಾಕಿಕೊಳ್ಳದಿದ್ದರೆ ಅಂಕಗಳು ಕಡಿತ. ಇವಿಷ್ಟನ್ನೂ ಪಾಲಿಸಿ ನಿರ್ದಿಷ್ಟ ಸಮಯದೊಳಗೆ ಸವಾಲು ಎದುರಿಸಬೇಕು.

ಇದರ ಜತೆಗೆ, ಕಾರಿಗೆ ಹೆಚ್ಚು ಕಷ್ಟ ನೀಡದೇ ಸವಾಲು ಎದುರಿಸಬೇಕು. ಅಂದರೆ, ಕಾರಿನ ಒಂದು ಚಕ್ರ ಗುಂಡಿಯಲ್ಲಿ ಸಿಲುಕಿತು ಎಂದುಕೊಳ್ಳಿ. ಅದನ್ನು ಮೇಲಕ್ಕೆತ್ತಲು, ರೇರ್ ಆಕ್ಸೆಲ್‌ನ ಒಂದು ಚಕ್ರಕ್ಕೆ ಕೆಲಸ ನೀಡಿ, ಮುಂದಿನ ಚಕ್ರವನ್ನು ಹೊರಕ್ಕೆ ತೆಗೆಯಬೇಕು. ಕೆಲವೊಮ್ಮೆ ಎರಡು ಚಕ್ರ ನೆಲ ಬಿಟ್ಟು ಮೇಲಕ್ಕೆತ್ತಿರುತ್ತದೆ. ಅಂಥ ಸವಾಲುಗಳನ್ನು 4X4 ಸೌಲಭ್ಯ ಬಳಸಿ ಹೊರಕ್ಕೆಳೆಯಬೇಕು. ಇನ್ನೂ ಕೆಲವೊಮ್ಮೆ ಕೆಸರಿನಲ್ಲೇ ಕಾರು ಸಿಲುಕಿದ್ದರೆ, ತುಸುದೂರದಲ್ಲಿರುವ ಮತ್ತೊಂದು ಕಾರಿನಲ್ಲಿರುವ ವಿಂಚಿಂಗ್ (ಮೋಟಾರು ಸಹಾಯದಿಂದ ವಾಹನ ಹೊರಕ್ಕೆಳೆಯುವ ಯಂತ್ರ) ಸಹಾಯದಿಂದ ಹೊರಕ್ಕೆ ತರಬೇಕು. ಇವಿಷ್ಟೂ ಕೊಟ್ಟ ಸಮಯದೊಳಗೇ ಆಗಬೇಕು. ಇದು ಪರೀಕ್ಷೆ ನಡೆದ ರೀತಿ. ಇಂಥ ಪ್ರಾಯೋಗಿಕ ಪರೀಕ್ಷೆ ಜತೆಗೆ, ಆಫ್‌ ರೋಡ್ ಡ್ರೈವಿಂಗ್ ಮತ್ತು ಅದಕ್ಕೆ ಬಳಸುವ ಕಾರಿನ ಕುರಿತು ತರಬೇತಿ ವೇಳೆ ನೀಡಿದ್ದ ಮಾಹಿತಿಯುಳ್ಳ ಕಿರು ಹೊತ್ತಿಗೆ ಆಧರಿಸಿ 50 ಅಂಕಗಳ ಪರೀಕ್ಷೆಯೂ ಇರುತ್ತದೆ.

ಇಷ್ಟೆಲ್ಲ ಕೇಳಿದ ಮೇಲೆ, ‘ಇದೊಂದು ಕಷ್ಟದ ತರಬೇತಿ’ ಎಂದು ತೀರ್ಮಾನಕ್ಕೆ ಬರಬೇಡಿ. ಏಕೆಂದರೆ, ಇದರ ನಡುವೆಯೇ ಪ್ರವಾಸ ಆಯೋಜಿಸಲಾಗುತ್ತದೆ. ಆ ಪ್ರವಾಸದಲ್ಲಿ ವೈನ್‌ ತಯಾರಿಕೆಯ ಪ್ರಕ್ರಿಯೆಯ ಪರಿಚಯಿಸುತ್ತಾರೆ. ತರಬೇತಿಯಲ್ಲಿ ಸಾಹಸ ಚಾಲನೆಯೊಂದಿಗೆ, ಮಹೀಂದ್ರಾ ಅಕಾಡೆಮಿಯ ಮೆಕ್ಯಾನಿಕ್‌ಗಳು ತುರ್ತು ಸಂದರ್ಭದಲ್ಲಿ ವಾಹನಗಳಲ್ಲಿನ ಕೆಲ ಸಮಸ್ಯೆಗಳನ್ನು ಸರಳವಾಗಿ ಪರಿಹರಿಸಿಕೊಳ್ಳುವ ಕುರಿತು ಮಾಹಿತಿ ನಿಡುತ್ತಾರೆ. ಅಪಘಾತವಾದಾಗ ವ್ಯಕ್ತಿಯ ಪ್ರಾಣ ರಕ್ಷಿಸುವಲ್ಲಿ ಹೇಗೆ ನೆರವಾಗಬಹುದು ಎಂಬುದನ್ನು ತಜ್ಞ ವೈದ್ಯರು ಪಾಠ ಮಾಡುತ್ತಾರೆ. ಶಿಬಿರಾರ್ಥಿಗಳಿಗೆ ಉಳಿಯಲು ಉತ್ತಮ ವಸತಿ ವ್ಯವಸ್ಥೆ ಇರುತ್ತದೆ. ಬೆಳಿಗ್ಗೆ ಕಸರತ್ತು ಮುಗಿಸಿ ರಾತ್ರಿ ವಸತಿ ಜಾಗಕ್ಕೆ ಬಂದವರಿಗೆ ಪುಷ್ಕಳ ಭೋಜನ. ಅಕಾಡೆಮಿಯಿಂದಲೇ ಉತ್ತಮ ಹೋಟೆಲ್‌ನಲ್ಲಿ ವಾಸ್ತವ್ಯದ ವ್ಯವಸ್ಥೆಯೂ ಇರುತ್ತದೆ. ನೆನಪಿರಲಿ, ಊಟ ಮಾಡಿ ಮಲಗಿದರೆ, ಮರುದಿನ ಬೆಳಿಗ್ಗೆ ಸವಾಲು ಎದುರಿಸಲು ಸಜ್ಜಾಗಲೇ ಬೇಕು.

ಕಳೆದ ತಿಂಗಳು ನಡೆದ ತರಬೇತಿಯ ಮೂರನೇ ದಿನ, ಪರೀಕ್ಷೆಗಳು ಮುಗಿಯುವ ಹೊತ್ತಿಗೆ ರಾತ್ರಿ 9 ಆಗಿತ್ತು. ಬೆಂಗಳೂರಿನ ಎಚ್‌ಪಿ ಕಂಪೆನಿಯಲ್ಲಿ ಸಾಫ್ಟ್‌ವೇರ್ ಆರ್ಕಿಟೆಕ್ಟ್‌ ಕಾರ್ತಿಕ್ ಕಶ್ಯಪ್‌ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು. ಅವರು ಈ ಮೊದಲು ಟ್ರಯಲ್ ಸರ್ವೈವರ್‌ ತರಬೇತಿ ಪೂರ್ಣಗೊಳಿಸಿದ್ದರು. ಅವರ ಬಳಿ ಮಹೀಂದ್ರಾ ಥಾರ್‌ ವಾಹನವಿತ್ತು. ‘ಆಫ್‌ ರೋಡ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದೇನೆ’ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಎರಡನೇ ಸ್ಥಾನದಲ್ಲಿ ಓಂಕಾರ್ ಠಾಕೂರ್ ಹಾಗೂ ಮೂರನೇ ಸ್ಥಾನದಲ್ಲಿ ರಾಹುಲ್ ಕಾಮ್ರಾ ಟ್ರೋಫಿ ಪಡೆದರು. ಈ ವೇಳೆ ತರಬೇತಿ ಮುಖ್ಯಸ್ಥ ಮನೀಶ್‌ ಅಕಾಡೆಮಿ ಕುರಿತು ಮಾತನಾಡಿ, ‘2013ರಲ್ಲಿ ಈ ಅಕಾಡೆಮಿ ಆರಂಭಿಸಲಾಗಿದೆ. ಆಫ್ ರೋಡ್‌ ತಂತ್ರಗಳನ್ನು ಸರಿಯಾದ ಕ್ರಮದಲ್ಲಿ ಕಲಿಸುವುದು ಕೋರ್ಸ್ ಉದ್ದೇಶ. ಈವರೆಗೂ 1500ಕ್ಕೂ ಹೆಚ್ಚು ಮಂದಿ ಇಲ್ಲಿ ತರಬೇತಿ ಪಡೆದಿದ್ದಾರೆ. ಗೆಟ್ಟಿಂಗ್ ಡರ್ಟಿ ಹಾಗೂ ಟ್ರಯಲ್ ಸರ್ವೈವರ್‌ ಕೋರ್ಸ್ ಜತೆಗೆ ಈಗ ಗ್ಲೋಬಲ್ ಎಕ್ಸ್‌ಪ್ಲೋರರ್ ಕೋರ್ಸ್ ಕೂಡಾ ಆರಂಭವಾಗಿದೆ. ಇದು ಕಠಿಣವಾದರೂ, ಕಚ್ಚಾರಸ್ತೆ ಅಥವಾ ರಸ್ತೆಯೇ ಇಲ್ಲದ ಕಡೆ ಸುಗಮವಾಗಿ ಸಾಗಲು ಅಗತ್ಯವಿರುವ ಎಲ್ಲಾ ಕೌಶಲಗಳನ್ನು ಇಲ್ಲಿ ಕಲಿಸಲಾಗುವುದು’ ಎಂದರು.

ಮೂರು ದಿನಗಳ ತರಬೇತಿ ಮುಗಿಸಿ ಅಕಾಡೆಮಿಯಿಂದ ಹೊರ ಬರುತ್ತಿದ್ದಂತೆ ಒಂದೆಡೆ ದುರ್ಗಮ ಹಾದಿಯಲ್ಲೂ ಯಾವುದೇ ತೊಂದರೆ ನೀಡದೆ ಸಾಗಿದ ಮಹೀಂದ್ರಾ ಕಾರು ರೊಯ್ಯೆಂದು ಘರ್ಜಿಸುವುದೇ ನೆನಪಾದರೆ, ಇಘತಪುರಿ ಜಲಪಾತಗಳು ಹೃನ್ಮನ ತಣಿಸಿದ್ದು ಹಸಿರಾಗಿಯೇ ಉಳಿಯಿತು.

ಕೋರ್ಸ್ ತರಬೇತಿ ಮತ್ತು ಮಾಹಿತಿಗಾಗಿ http://mahindraadventure.com ಜಾಲತಾಣಕ್ಕೆ ಭೇಟಿ ನೀಡಬಹುದು. 

ತೆಗೆದುಕೊಂಡು ಹೋಗಬೇಕಾದ ಪರಿಕರಗಳು
ಅಕಾಡೆಮಿಯಲ್ಲಿ ಇರುವುದೆಲ್ಲವೂ ಕಚ್ಚಾ ರಸ್ತೆಗಳೇ. ಮಣ್ಣು, ಕೆಸರು, ಕಲ್ಲು, ಮುಳ್ಳು ಹಾದಿ. ಹೀಗಾಗಿ ಗಮ್‌ ಬೂಟ್ ತೊಡುವುದು ಉತ್ತಮ. ಇಲ್ಲವೇ ಆ್ಯಂಕಲ್‌ವರೆಗಿನ ಶೂ ಧರಿಸಬೇಕು. ಚಪ್ಪಲಿ ಅಥವಾ ಫ್ಲಿಪ್‌ಫ್ಲಾಪ್‌ಗಳನ್ನು ತೊಟ್ಟು ಅಕಾಡೆಮಿ ಪ್ರವೇಶಿಸುವಂತಿಲ್ಲ. ಇಲ್ಲಿ ನಡೆಸುವ ಕಸರತ್ತಿನಲ್ಲಿ ಬಟ್ಟೆಗಳು ಕೊಳೆಯಾಗುವುದು ಖಂಡಿತ. ಹೀಗಿದ್ದರೂ ಮುಳ್ಳು, ಗಿಡ, ಘಂಟಿಗಳು ಮೈ ತರುಚದಂತೆ ಜೀನ್ಸ್ ಮತ್ತು ಉದ್ದ ತೋಳಿನ ಟೀ ಶರ್ಟ್ ತೊಡುವುದು ಸೂಕ್ತ. ಮಳೆಗಾಲದಲ್ಲಿ ವಿಪರೀತ ಮಳೆ ಇರುವುದರಿಂದ ರೈನ್‌ಕೋಟ್ ಕಡ್ಡಾಯ. ಹಾಗೆಯೇ ಬೇಸಿಗೆಯಲ್ಲಿ ಹೆಚ್ಚು ಬಿಸಿಲು ಇರುವುದರಿಂದ ಟೋಪಿ ಕೊಂಡೊಯ್ಯಲು ಮರೆಯುವಂತಿಲ್ಲ.

ಹೋಟೆಲ್ ವ್ಯವಸ್ಥೆ
ಮುಂಬೈ ನಾಸಿಕ್ ಹೆದ್ದಾರಿಯಲ್ಲಿರುವ ನಾಸಿಕ್‌ನ ಹೋಟೆಲ್ ಎಕ್ಸ್‌ಪ್ರೆಸ್‌ ಇನ್‌ನಲ್ಲಿ ತಂಗುವ ವ್ಯವಸ್ಥೆ ಅಕಾಡೆಮಿಯೇ ಮಾಡಲಿದೆ.


–ತರಬೇತಿಯ ಅಂತಿಮ ಪರೀಕ್ಷೆಯಲ್ಲಿ ದುರ್ಗಮ ಹಾದಿಯಲ್ಲಿ ಕೋನ್ ಸಂಗ್ರಹಿಸುವ ಕಸರತ್ತು

ತರಬೇತಿಯೊಂದಿಗೆ ಪ್ರವಾಸ ಮಾಡಬಹುದು
ಇಘತಪುರಿ ಘಾಟ್‌ ಹತ್ತುತ್ತಲೇ ಹತ್ತಾರು ಜಲಪಾತಗಳು ಮೈಮನವನ್ನು ಅರಳಿಸುತ್ತವೆ. ಎಲ್ಲಿ ನೋಡಿದರೂ ಹಸಿರು ಹೊದ್ದೊಂಡಿರುವ ಈ ಪ್ರದೇಶಕ್ಕೆ ಭೇಟಿ ನೀಡಲು ಮಳೆಗಾಲ ಅತ್ಯಂತ ಪ್ರಶಸ್ತ. ಈ ತಾಣದ ಸುತ್ತಮುತ್ತ ಕ್ಯಾಮಲ್ ವ್ಯಾಲಿ, ತ್ರಿಂಗಲವಾಡಿ ಕೋಟೆ, ಭಾವಲಿ ಅಣೆಕಟ್ಟು, ಘಂಟಾದೇವಿ ದೇವಸ್ಥಾನ ಮತ್ತು ತ್ರಯಂಬಕೇಶ್ವರ ದೇವಸ್ಥಾನವಿದೆ. ಅಕಾಡೆಮಿ ತರಬೇತಿಯ ಜತೆಗೆ ಪ್ರವಾಸವನ್ನೂ ಪೂರ್ಣಗೊಳಿಸಬಹುದು.

ಅಕಾಡೆಮಿ ತಲುಪುವುದು ಹೀಗೆ
ರಾಷ್ಟ್ರೀಯ ಹೆದ್ದಾರಿ 3ರಲ್ಲಿ ಸಿಗುವ ನಾಸಿಕ್‌ ಮಾರ್ಗದಲ್ಲಿರುವ ಇಘತಪುರಿಯ ಮಹೀಂದ್ರಾ ಕಾರು ತಯಾರಿಕಾ ಘಟಕ. ಮುಂಬೈನಿಂದ ರಸ್ತೆ ಮೂಲಕ 3 ಗಂಟೆ ಪ್ರಯಾಣ. ಮುಂಬೈನಿಂದ ಪೂರ್ವ ಎಕ್ಸ್‌ಪ್ರೆಸ್‌ ಹೈವೇ ಮೂಲಕ ಹಾದು, ಥಾಣೆ, ಶಹಾಪುರ, ಕಸಾರ ನಂತರ ಸಿಗುವುದೇ ಇಘತಪುರಿ. ಮುಂಬೈಗೆ ವಿಮಾನ ಮೂಲಕ ಬಂದಿಳಿದು, ಅಲ್ಲಿಂದ ರಸ್ತೆ ಮೂಲಕ ಇಲ್ಲಿಗೆ ತಲುಪಬಹುದು. ಇಲ್ಲವೇ ನಾಸಿಕ್‌ಗೆ ರೈಲು ಮೂಲಕವೂ ಪ್ರಯಾಣಿಸಬಹುದು.

*

–ಗ್ಲೋಬಲ್ ಎಕ್ಸ್‌ಪ್ಲೋರರ್‌ 2.0ದ ವಿಜೇತ ಕಾರ್ತಿಕ್ ಕಶ್ಯಪ್ (ಮಧ್ಯದಲ್ಲಿರುವವರು) ಜತೆ ಓಂಕಾರ್ ಠಾಕೂರ್ ಮತ್ತು ರಾಹುಲ್ ಕಾಮ್ರಾ
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !