ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಮುನಿಯಪ್ಪ ರಾಜಕೀಯ ಗುರುವಲ್ಲ

ಶಾಸಕ ಕೊತ್ತೂರು ಜಿ.ಮಂಜುನಾಥ್‌ ತೀವ್ರ ವಾಗ್ದಾಳಿ
Last Updated 28 ಏಪ್ರಿಲ್ 2018, 11:47 IST
ಅಕ್ಷರ ಗಾತ್ರ

ಕೋಲಾರ: ಮುಳಬಾಗಿಲು ಕ್ಷೇತ್ರದಲ್ಲಿ ನಾನೇ ರಾಜ, ನಾನೇ ಸೈನಿಕ. ಸಂಸದ ಕೆ.ಎಚ್.ಮುನಿಯಪ್ಪ ನನ್ನ ರಾಜಕೀಯ ಗುರುವಲ್ಲ. ಮುನಿಯಪ್ಪ ಒಳಗೊಂಡಂತೆ ನನಗೆ ಯಾರೂ ಆಜ್ಞೆ ಮಾಡಲು ಸಾಧ್ಯವಿಲ್ಲ. ಸಲಹೆ ಕೊಡಬಹುದಷ್ಟೇ’ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್‌ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶುಕ್ರವಾರ ಬೆಂಬಲಿಗರ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುನಿಯಪ್ಪ ಅವರು ನನ್ನ ವಿರುದ್ಧ ನಡೆಸಿದ ರಾಜಕೀಯ ಸಂಚಿನ ದೃಶ್ಯಾವಳಿ ಮಾಧ್ಯಮದಲ್ಲಿ ಬಹಿರಂಗವಾಗಿದೆ. ಅವರ ಪಿತೂರಿಯ ಮತ್ತೆರಡು ದೃಶ್ಯಾವಳಿ ತುಣುಕುಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ. ನಂತರ ಅವರ ಅಸಲಿ ಮುಖ ಜನರಿಗೆ ಗೊತ್ತಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನನ್ನ ಜಾತಿ ಪ್ರಮಾಣಪತ್ರ ಅಸಿಂಧುವಾಗಿರುವುದರ ಹಿಂದೆ ಪಕ್ಷದಲ್ಲಿನ ಕೆಲ ಕಾಣದ ಕೈಗಳ ಪಾತ್ರವಿದೆ. ಕೆಲವರ ಕುತಂತ್ರದ ಕಾರಣಕ್ಕೆ ನಾನು ಚುನಾವಣಾ ಕಣದಿಂದ ಹಿಂದೆ ಸರಿಯುವಂತಾಗಿದೆ. ವಿರೋಧಿಗಳ ಷಡ್ಯಂತ್ರಕ್ಕೆ ಬೆದರುವುದಿಲ್ಲ’ ಎಂದರು.

‘ಕಾಂಗ್ರೆಸ್‌ ಪಕ್ಷ ನನ್ನನ್ನು ನಂಬಿ ಬಿ ಫಾರಂ ಕೊಟ್ಟಿತ್ತು. ಪಕ್ಷದ ಮಾನ ಕಾಪಾಡುವುದು ನನ್ನ ಜವಾಬ್ದಾರಿ. ವರಿಷ್ಠರಿಗೆ ಕೊಟ್ಟ ಮಾತಿನಂತೆ ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುತ್ತೇನೆ. ವರಿಷ್ಠರು ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸಿ ಪಕ್ಷದ ಮಾನ ಕಾಪಾಡುತ್ತೇನೆ. ನಾನೇ ಅಭ್ಯರ್ಥಿ ಎಂದು ತಿಳಿದು ದಿನದ 24 ತಾಸು ಪಕ್ಷಕ್ಕಾಗಿ ದುಡಿಯುತ್ತೇನೆ’ ಎಂದು ತಿಳಿಸಿದರು.

ವಾಸ್ತು ಕಾರಣ: ‘ಮುಳಬಾಗಿಲು ರಾಜಕೀಯವೇ ಸಾಕಾಗಿದೆ. ಕೋಲಾರ ಕ್ಷೇತ್ರದಲ್ಲಿ ನನ್ನ ಬೆಂಬಲಿಗ ಅಭ್ಯರ್ಥಿಗಳು ಯಾರೂ ಇಲ್ಲ. ಈ ಕ್ಷೇತ್ರದಲ್ಲಿ ಸ್ಪರ್ಧಿಸುವ ಇಚ್ಛೆ ಇರಲಿಲ್ಲ. ಆದರೆ, ವಾಸ್ತು ಕಾರಣಕ್ಕೆ ನಾಮಪತ್ರ ಸಲ್ಲಿಸಿದ್ದೆ. ನಾನು ಮೊದಲಿನಿಂದಲೂ ಎರಡು ಕಡೆ ನಾಮಪತ್ರ ಸಲ್ಲಿಸುವ ಪರಿಪಾಠವಿದೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲೂ ಮುಳಬಾಗಿಲು ಮತ್ತು ಕೆಜಿಎಫ್‌ ಕ್ಷೇತ್ರದಲ್ಲಿ ನಾಮಪತ್ರ ಹಾಕಿದ್ದೆ’ ಎಂದು ವಿವರಿಸಿದರು.

‘ನನ್ನ ಆತ್ಮೀಯ ಸ್ನೇಹಿತ ಜಿಲ್ಲಾ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಅನಿಲ್‌ಕುಮಾರ್‌ಗೆ ಕೋಲಾರ ಕ್ಷೇತ್ರದ ಟಿಕೆಟ್‌ ಕೊಡಿಸಲು ಶ್ರಮಪಟ್ಟಿದ್ದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೂ ಮನವಿ ಮಾಡಿದ್ದೆ. ಅನಿಲ್‌ಕುಮಾರ್‌ಗೆ ಟಿಕೆಟ್‌ ಕೊಟ್ಟರೆ ಅವರ ಚುನಾವಣಾ ವೆಚ್ಚ ಭರಿಸುವುದಾಗಿ ಹೇಳಿದ್ದೆ. ಅನಿಲ್‌ಕುಮಾರ್‌ ಅಭ್ಯರ್ಥಿಯಾಗಿದ್ದರೆ ಅವರ ಪರ ಪ್ರಚಾರ ಮಾಡುತ್ತಿದೆ’ ಎಂದರು.

ಅನಿವಾರ್ಯವಲ್ಲ: ‘ಸಮಾಜ ಸೇವೆಗೆ ರಾಜಕೀಯದ ಬಲ ದೊರೆತರೆ ಜನರಿಗೆ ಹೆಚ್ಚಿನ ಸೇವೆ ಮಾಡಲು ಅನುಕೂಲವಾಗುತ್ತದೆ ಎಂದು ಭಾವಿಸಿ ರಾಜಕೀಯಕ್ಕೆ ಬಂದೆ. ರಾಜಕೀಯ ಅನಿವಾರ್ಯವಲ್ಲ. ಹಿಂದಿನಂತೆಯೇ ಸಮಾಜ ಸೇವೆ ಮುಂದುವರಿಸುತ್ತೇನೆ. ತಿಂಗಳಲ್ಲಿ ಕನಿಷ್ಠ 10 ದಿನವಾದರೂ ಕ್ಷೇತ್ರದಲ್ಲಿ ಇರುತ್ತೇನೆ’ ಎಂದು ಸ್ಪಷ್ಟಪಡಿಸಿದರು.

‘ನನ್ನ ವಿರುದ್ಧ ನ್ಯಾಯಾಲಯಕ್ಕೆ ದೂರು ಕೊಟ್ಟಿದ್ದ ವೆಂಕಟರಮಣ ಎಂಬ ವ್ಯಕ್ತಿ ಮುನಿಯಪ್ಪರ ಜತೆ ಕಾರಿನಲ್ಲಿ ಸುತ್ತಾಡುತ್ತಿದ್ದರು. ಈ ಬಗ್ಗೆ ಮುನಿಯಪ್ಪ ಅವರಿಗೆ ಹಲವು ಬಾರಿ ಪ್ರಶ್ನೆ ಮಾಡಿದ್ದೇನೆ. ರಾಜಕೀಯದಲ್ಲಿ ತಂತ್ರ, ಕುತಂತ್ರ ಸಹಜ’ ಎಂದು ಹೇಳಿದರು.

**
ರಾಜಕೀಯ ನನ್ನ ಜೀವನವಲ್ಲ. ರಾಜಕೀಯಕ್ಕಿಂತ ಸಮಾಜ ಸೇವೆ ಹೆಚ್ಚಿನ ತೃಪ್ತಿ ಕೊಟ್ಟಿದೆ. ಎದುರಾಳಿಗಳ ಮುಂದೆ ನಿಂತು ಹೋರಾಡುತ್ತೇನೆಯೆ ಹೊರತು ಹಿಂಬದಿಯ ರಾಜಕಾರಣ ಮಾಡುವುದಿಲ್ಲ
– ಕೊತ್ತೂರು ಜಿ.ಮಂಜುನಾಥ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT