ಗುರುವಾರ , ಸೆಪ್ಟೆಂಬರ್ 24, 2020
20 °C

ವಿದಾಯಕ್ಕೆ ಮುನ್ನ...

ಕೆ.ರತ್ನಪ್ರಭಾ Updated:

ಅಕ್ಷರ ಗಾತ್ರ : | |

Deccan Herald

ಸ್ಪರ್ಧೆಯಿಲ್ಲದೆ, ಒಗ್ಗಟ್ಟಿನಿಂದ ಸಿಹಿಯನ್ನು ಹಂಚಿ ತಿಂದ ದಕ್ಷಿಣ ಆಫ್ರಿಕಾ ಸಮಾಜದ ಮಕ್ಕಳ ಕಥೆ ‘ಉಬುಂಟು’ ಬಗ್ಗೆ ಹಿಂದೆ ಇದೇ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಇದೇ ಉಬುಂಟು ಪರಿಕಲ್ಪನೆಯನ್ನು ಬಳಸಿ, ಮಹಿಳಾ ಉದ್ಯಮಿಗಳನ್ನು ಬೆಳೆಸಿದ್ದು ಕರ್ನಾಟಕ ರಾಜ್ಯ ಸರ್ಕಾರ. ‘ಇನ್ವೆಸ್ಟ್‌ ಕರ್ನಾಟಕ’ ಮಾಡುವಾಗ ಈ ಆಲೋಚನೆ ಅಂಕುರವಾದುದು. ಆಗ ಬೆರಳೆಣಿಕೆಯಷ್ಟು ಮಹಿಳಾ ಸಂಘಟನೆಗಳಿದ್ದವು. ಇವೆಲ್ಲ ಒಂದೊಂದೇ ಸಂಘಟನೆಯಾಗಿ ಮುನ್ನಡೆದರೆ ಅದಕ್ಕೆ ವೇಗ ತರುವುದು ಕಷ್ಟವಾಗಿತ್ತು. ಆಗ ಉಬುಂಟು ಪರಿಕಲ್ಪನೆಯನ್ನು
ಜಾರಿ ಮಾಡಲು ತಿಳಿಸಿದೆ. ಪ್ರತಿ ತಿಂಗಳೂ ಒಂದೊಂದು ಮಹಿಳಾ ಉದ್ಯಮಿಗಳ ಸಂಘಟನೆ ಕಾರ್ಯಕ್ರಮ ಆಯೋಜಿಸ
ಬೇಕು. ಉಳಿದ ಸಂಘಟನೆಗಳ ಮಹಿಳೆಯರು ಅದರಲ್ಲಿ ಭಾಗವಹಿಸಬೇಕು. ಒಮ್ಮೆ ಅವರಲ್ಲಿ ಸಂಘಟನಾ ಶಕ್ತಿ ಬೆಳೆದರೆ,
ಸಂಖ್ಯಾ ಬಲ ಹೆಚ್ಚಿದರೆ ಸರ್ಕಾರದ ಗಮನಸೆಳೆಯುವುದು ಕಷ್ಟವಾಗಲಿಕ್ಕಿಲ್ಲ ಎನಿಸಿತ್ತು. ಇದನ್ನು ಕಾರ್ಯರೂಪಕ್ಕೆ ತಂದೆವು. ನಾವೆಣಿಸಿದಂತೆಯೇ ಐನೂರರಿಂದ ಆರುನೂರು ಮಹಿಳೆಯರು ಒಗ್ಗೂಡಿದರು. ಅವರ ಒಗ್ಗಟ್ಟಿನ ಧ್ವನಿಗೆ ಎಲ್ಲ ಕಾರ್ಯಕ್ರಮಗಳೂ ಸರಾಗವಾದವು.

ಇದಕ್ಕೆ ಇನ್ನೊಂದು ಹಿನ್ನೆಲೆ ಕೊಡಬಯಸುವೆ. 2014ರಲ್ಲಿ ಹೊಸ ಕೈಗಾರಿಕಾ ನೀತಿ ರಚಿಸಬೇಕಾಗಿತ್ತು. ಆಗಷ್ಟೇ ಕೈಗಾರಿಕಾ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದೆ. ಮಹಿಳೆಯರಿಗಾಗಿಯೇ ಯಾವುದಾದರೂ ಯೋಜನೆಗಳಿವೆಯೇ ಎಂದು ವಿಚಾರಿಸಿದಾಗ, ‘ಇವೆ’ ಎಂದರು. ಎಸ್‌.ಸಿ, ಎಸ್‌.ಟಿ ಯೋಜನೆಗಳಲ್ಲಿ, ವಿಧವಾ ಯೋಜನೆಗಳಲ್ಲಿ, ಮಾಜಿ ಸೈನಿಕರ ಯೋಜನೆಗಳಲ್ಲಿ ಹಾಗೂ ಅಂಗವಿಕಲರಿಗಾಗಿ ಇರುವ ಯೋಜನೆಗಳಲ್ಲಿ ಎಲ್ಲವೂ ಹರಿದು– ಹಂಚಿ ಹೋಗಿದ್ದವು.

ಇವೆಲ್ಲ ಸರಿ... ಮಹಿಳೆಯರಿಗಾಗಿಯೇ ಯೋಜನೆಗಳು ಎಲ್ಲಿವೆ? ಎಂದಾಗ ಎಲ್ಲರೂ ನಿರುತ್ತರರಾದರು. ಮಹಿಳೆಯರಿಗಾಗಿಯೇ ಒಂದೇ ಒಂದು ವಿಶೇಷ ಯೋಜನೆ ಇರಲಿಲ್ಲ. ಉದ್ಯಮಿಯಾಗಲು ಬಯಸುವ ಮಹಿಳೆಯರಿಗಾಗಿ ಕೆಲವು ಯೋಜನೆಗಳಿದ್ದವು.

‘ಮಹಿಳೆಯಾಗಿರುವುದೇ ಹೊಸ ಉದ್ಯಮಿಯಾಗಲು ಅರ್ಹತೆ’ ಎಂಬಂತಿರುವ ಯೋಜನೆ ಇರಲಿಲ್ಲ. ಅದಕ್ಕಾಗಿ 2014ರಿಂದ 19ರ ನೀತಿಯಲ್ಲಿ ಇಂಥ ಒಂದು ಯೋಜನೆ ರೂಪಿಸಲು ಮಹಿಳಾ ಉದ್ಯಮಿಗಳನ್ನು ಕರೆಯಲಾಯಿತು.

ಒಂದಿಡೀ ಸಭಾಂಗಣ ತುಂಬುವಷ್ಟು ಮಹಿಳೆಯರು ಅಲ್ಲಿದ್ದರು. ಇವರನ್ನೆಲ್ಲ ಒಂದುಗೂಡಿಸಲು ಉಬುಂಟು ಪರಿಕಲ್ಪನೆಯನ್ನು ಪರಿಚಯಿಸಿದೆವು. ಪ್ರತಿಯೊಬ್ಬರೂ ಒಂದೊಂದು ಕಾರ್ಯಕ್ರಮ ರೂಪಿಸಲಾರಂಭಿಸಿದರು. ಎಲ್ಲರೂ ಆ ಕಾರ್ಯಕ್ರಮಕ್ಕೆ ಹಾಜರಾಗತೊಡಗಿದರು. ಕಾರ್ಯಕ್ರಮಕ್ಕೆ ‘ಒಂದೈದುನಿಮಿಷ– ಹತ್ತು ನಿಮಿಷ ಬರ್ತೀನಿ’ ಎಂದಿದ್ದ ಅಂದಿನ ಮುಖ್ಯಮಂತ್ರಿ, ಬಂದ ನಂತರ ನಮ್ಮೊಟ್ಟಿಗೆ ಹೆಚ್ಚು ಸಮಯ ಕಳೆದರು. ಮಹಿಳಾ ಉದ್ಯಮಿಗಳಿಗೆ ಅನುಕೂಲವಾಗುವ ಎಲ್ಲ ಯೋಜನೆಗಳಿಗೂ ಸರ್ಕಾರದಿಂದಲೂ ಬೇಗನೆ ಅನುಮೋದನೆ ದೊರೆಯಲಾರಂಭಿಸಿತು. ಒಗ್ಗಟ್ಟಿನಲ್ಲಿ ಬಲವಿದೆ. ಉಬುಂಟು ಪರಿಕಲ್ಪನೆಯೂ ಇದನ್ನೇ ಹೇಳುತ್ತದೆ.

ಮಹಿಳಾ ಉದ್ಯಮಿಗಳೆಂದರೆ ಹಪ್ಪಳ, ಉಪ್ಪಿನಕಾಯಿ, ಫಿನಾಯ್ಲ್‌, ಸೋಪು ಮಾಡುವವರು ಎಂಬ ಅನಿಸಿಕೆಯನ್ನು ಪುಡಿ ಮಾಡಿ ಎಲೆಕ್ಟ್ರಾನಿಕ್ಸ್‌, ಫುಡ್‌ ಪ್ರೊಸೆಸಿಂಗ್‌, ಟೆಕ್ಸ್‌ಟೈಲ್‌, ಎಲೆಕ್ಟ್ರಿಕಲ್‌ ಮುಂತಾದ ಕ್ಷೇತ್ರಗಳಲ್ಲಿ ಮಹಿಳೆಯರು ಮುಂದುವರಿದರು. ಕಲಬುರ್ಗಿಯ ಒಂದು ಸಂಘಟನೆ ಜೆಕ್‌ ರಿಪಬ್ಲಿಕ್‌ ಜೊತೆಗೆ ಒಡಂಬಡಿಕೆ ಮಾಡಿಕೊಂಡರೆ, ಕೆಲವು ಗುಂಪುಗಳು ನ್ಯೂಜಿಲೆಂಡ್‌ ಜೊತೆಗೆ ಒಡಂಬಡಿಕೆ ಮಾಡಿಕೊಂಡವು.

ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ರಾಜ್ಯ ಸರ್ಕಾರ ಎಂಬ ಪ್ರಶಸ್ತಿಯೂ ಸರ್ಕಾರಕ್ಕೆ ಬಂತು. ಅದನ್ನು ಸ್ವೀಕರಿಸಲು ವಾಷಿಂಗ್ಟನ್‌ಗೆ ಹೋಗಿ ಬಂದೆ. ‘ಕೈಗಾರಿಕಾ ಇಲಾಖೆಯಲ್ಲಿ ಹೆಣ್ಣುಮಕ್ಕಳು ಏನು ಮಾಡಿಯಾರು’ ಎಂದು ಪ್ರಶ್ನೆ ಮಾಡಿದವರಿಗೆ ಈ ಎಲ್ಲ ಬೆಳವಣಿಗೆಗಳು ಉತ್ತರ ನೀಡಿದ್ದವು.

‘ಉಬುಂಟು’ ಮತ್ತು ‘ಒಗ್ಗಟ್ಟು’ ಎಂಬ ಪದಗಳಲ್ಲಿ ಸಾಮ್ಯವಿದೆ. ನಮ್ಮ ವ್ಯವಸ್ಥೆ ಹೀಗೆಯೇ ಮುಂದುವರಿದರೆ, ಕೈಕೈ ಹಿಡಿದುಕೊಂಡು ಅತಿದೊಡ್ಡ ವಾದ್ಯ ಮೇಳದಂತೆ ತಾಳ, ಲಯ ತಪ್ಪದಂತೆ ಸಾಗಿದರೆ ಅಭಿವೃದ್ಧಿಯ ಹಾಡು ತಾನಾಗಿಯೇ ನುಡಿಯುತ್ತದೆ.

ಇದು ವಿದಾಯದ ಲೇಖನ. ಈ ಲೇಖನದಲ್ಲಿ ಮೂರು ಸಲಹೆಗಳನ್ನು ನೀಡಲು ಬಯಸುವೆ. ಸರ್ಕಾರಿ ನೌಕರಿ ಎನ್ನುವುದು ಜನರ ಸೇವೆ ಮಾಡಲು, ಅವರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ನಿಮಗೆ ಸಿಕ್ಕಿರುವ ಅವಕಾಶ. ಅದನ್ನು ಹಗುರವಾಗಿ ಪರಿಗಣಿಸಿ, ಕೆಲಸದ ಕಡೆ ಉಡಾಫೆ ತೋರಿಸದಿರಿ. ಆ ಹುದ್ದೆಗಳಿಗೆ, ನಿಮ್ಮ ಅಧಿಕಾರಕ್ಕೆ ಹಾಗೂ ನಿಮ್ಮ ಕೆಲಸಕ್ಕೆ ಗೌರವ ನೀಡಿ. ನಿಮ್ಮ ಹುದ್ದೆಗೊಂದು ಘನತೆ ಬರುವಂತೆ ನಡೆದುಕೊಳ್ಳಿ. ಜನರ ಜೊತೆಗೆ ಬೆರೆಯಿರಿ. ಇದೇ ಮಾತು ಐಎಎಸ್‌ ಅಧಿಕಾರಿಗಳಿಗೂ ಅನ್ವಯವಾಗುತ್ತದೆ. ನೀವಿದ್ದಲ್ಲಿ ಮಾತ್ರ ಈ ವಲಯವನ್ನು ಸೃಷ್ಟಿಸುವುದಲ್ಲ, ಇಂಥದ್ದೊಂದು ವ್ಯವಸ್ಥೆಯನ್ನು ಸೃಷ್ಟಿಸುವ ಕೆಲಸ ನಿಮ್ಮಿಂದಾಗಬೇಕಿದೆ.

ಎರಡನೆಯದು, ದೇವರ ಆರಾಧಕರೆನಿಸಿಕೊಳ್ಳುವ ಹಲವರನ್ನು ನೋಡಿದ್ದೇನೆ. ಊರೂರು, ದೇಶದೆಲ್ಲೆಡೆ ತಿರುತಿರುಗಿ ಹೆಣ್ಣುದೇವರಿಗೆ ಪೂಜೆ ಸಲ್ಲಿಸುವ ಅಧಿಕಾರಿಗಳು, ಜನನಾಯಕರು ಎಲ್ಲರನ್ನೂ ನೋಡಿದ್ದೇನೆ. ಜನಸಾಮಾನ್ಯರೂ ಅಷ್ಟೇ, ದೇವಿಯ ಮುಂದೆ ಗಲ್ಲಗಲ್ಲ ಬಡಿದುಕೊಂಡು, ಕೈ ಮುಗಿಯುತ್ತಾರೆ. ಅದೆಲ್ಲ ನಿಮ್ಮ ಶ್ರದ್ಧೆ, ನಿಮ್ಮ ನಂಬಿಕೆ. ಆದರೆ ನಿಮ್ಮ ಹೆಣ್ಣುಮಕ್ಕಳನ್ನು ಅವಕಾಶದಿಂದ ವಂಚಿತರನ್ನಾಗಿಸಬೇಡಿ. ಅವರನ್ನು ಓದಿಸಿ. ಅವರ ಆಸಕ್ತಿ ಅಭಿರುಚಿಯನ್ನು ಗಮನಿಸಿ ಪ್ರೋತ್ಸಾಹಿಸಿ. ಕಚೇರಿಯಲ್ಲಿ ನಿಮ್ಮೊಂದಿಗೆ ದುಡಿಯುವ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಿರಿ. ಮಹಿಳೆ ಎನ್ನುವ ಒಂದೇ ಕಾರಣಕ್ಕೆ ಅವರ ಸಾಮರ್ಥ್ಯವನ್ನು ಅಲ್ಲಗಳೆಯಬೇಡಿ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದಿದ್ದರೆ ಅವರಿಗೆ ಅಗತ್ಯ ತರಬೇತಿ ನೀಡಿ. ದೂರುವುದರಿಂದ, ಹಗುರವಾಗಿ ಮಾತನಾಡುವುದರಿಂದ ಯಾವ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ. ಪರಿಸ್ಥಿತಿಯೂ ಬದಲಾಗುವುದಿಲ್ಲ. ಅವರನ್ನು ಸ್ಪರ್ಧಿಯಂತೆ ಕಾಣುವುದು ಸರಿಯಲ್ಲ. ಆರೋಗ್ಯಕರ ಸ್ಪರ್ಧೆ ಇದ್ದಲ್ಲಿ ಪರಿಸ್ಥಿತಿಯಲ್ಲಿ ಬದಲಾವಣೆ ಕಂಡು ಬರುತ್ತದೆ. ಸುಧಾರಣೆಯೂ ಆಗುತ್ತದೆ.

ಮೂರನೆಯ ಮತ್ತು ಕೊನೆಯ ವಿಷಯ; ಯುವ ಜನರು ಅವಕಾಶಗಳಿಗಾಗಿ ಸ್ಪರ್ಧಿಸಲೇಬೇಕು. ಸಂಘರ್ಷವೂ ಇರಬೇಕು. ಹತಾಶರಾಗುವುದು ಬೇಡ. ವ್ಯವಸ್ಥೆಯನ್ನು ದೂರುತ್ತ ನಿರಾಶರಾಗುವುದು ಬೇಡ. ಒಂದು ಸರ್ಕಾರ, ವ್ಯವಸ್ಥೆ ಇರುವುದೇ ನಾಗರಿಕರಿಗಾಗಿ. ಅದರ ಗಮನಕ್ಕೆ ತರಬೇಕು. ಹೀಗೆ ಸರ್ಕಾರದ ಗಮನಕ್ಕೆ ತಂದ ಅದೆಷ್ಟೋ ವಿಷಯಗಳು ಪರಿಹಾರ ಕಂಡಿವೆ. ಹೊಸತೊಂದಕ್ಕೆ ನಾಂದಿಯಾದ ಪ್ರಕರಣಗಳನ್ನು ಇದೇ ಅಂಕಣದಲ್ಲಿ ಓದಿದ್ದೀರಿ. ಪ್ರಶ್ನಿಸದೇ ಏನನ್ನೂ ಒಪ್ಪಿಕೊಳ್ಳಬೇಡಿ.

ಓದುವುದರಷ್ಟೇ ಮಹತ್ವದ ವಿಷಯ, ಬರೆಯುವುದು. ನಿವೃತ್ತಿಯಂಚಿನಲ್ಲಿದ್ದಾಗ ಬೀದರ್‌ ಆಡಳಿತದ ದಿನಗಳ ಬಗ್ಗೆ ಪುಸ್ತಕ ಬರೆದೆ. ನಂತರ ಈ ಅಂಕಣ ಬರೆಯುವ ಅವಕಾಶ ದೊರೆಯಿತು. ಒಳಗಡೆ ಹೆಪ್ಪುಗಟ್ಟಿದ್ದ ನೆನಪುಗಳೆಲ್ಲವೂ ಈ ನೆಪದಲ್ಲಿ ತಿಳಿಯಾದವು. ಬರೆಯುತ್ತ ಬರೆಯುತ್ತ ಹೋದಂತೆ ಅದೆಷ್ಟೋ ಕೊಂಡಿಗಳು ನನ್ನೊಟ್ಟಿಗೆ ಮತ್ತೆ ಬೆಸೆದುಕೊಂಡವು. ಮೂರೂವರೆ ದಶಕಗಳ ಹಿಂದಿನಂತೆ ಈಗ ಪರಿಸ್ಥಿತಿ ಇಲ್ಲ. ಸರ್ಕಾರದ ಸಾಕಷ್ಟು ಯೋಜನೆಗಳು ಜನರ ಬದುಕನ್ನು ಉತ್ತಮಗೊಳಿಸುತ್ತಿವೆ. ಅವನ್ನು ಸದ್ಬಳಕೆ ಮಾಡಿಕೊಳ್ಳಿ. ಒಳಿತನ್ನೇ ಸೇವಿಸಿ, ಒಳಿತನ್ನು ಯೋಚಿಸಿ. ಒಳಿತನ್ನೇ ಹರಡಿ. ಒಳಿತಾಗುವುದು.

ಧನ್ಯವಾದ...

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.