ಭಾವೈಕ್ಯ ಕಟ್ಟಿಕೊಟ್ಟ ಅಯೋಧ್ಯೆಯ ಛಾಯಾಚಿತ್ರ ಪ‍್ರದರ್ಶನ

7

ಭಾವೈಕ್ಯ ಕಟ್ಟಿಕೊಟ್ಟ ಅಯೋಧ್ಯೆಯ ಛಾಯಾಚಿತ್ರ ಪ‍್ರದರ್ಶನ

Published:
Updated:
Prajavani

ಬೆಂಗಳೂರು: ಇಲ್ಲಿ ಕೋಮು ಸೌಹಾರ್ದದ ಹೊನಲು ತಣ್ಣಗೆ ಹರಿಯುತ್ತಿದೆ. ಮೂಲ ಸೌಲಭ್ಯಗಳ ಕೊರತೆಗಳ ನಡುವೆಯೇ ಹಿಂದೂ-ಮುಸ್ಲಿಮರು ಸಹಬಾಳ್ವೆಯಿಂದಲೇ ಜೀವನ ನಡೆಸುತ್ತಿದ್ದಾರೆ.  

ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿದ್ದ ‘ಅಯೋಧ್ಯೆಯ ಹಿಂದೂ–ಮುಸಲ್ಮಾನರ ಭಾವೈಕ್ಯತೆ ನೋಡಲು ಬನ್ನಿ’ ಛಾಯಾಚಿತ್ರ ಪ್ರದರ್ಶನ ಕಟ್ಟಿಕೊಡುವ ನೋಟ ಇದು. ಅಯೋಧ್ಯೆಯ ಇದುವರೆಗಿನ ಘಟನೆಗಳು ಸುಧೀರ್ ಶೆಟ್ಟಿ ಅವರು ತೆಗೆದ ಛಾಯಾಚಿತ್ರಗಳಲ್ಲಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತವೆ.

‘ಅಯೋಧ್ಯೆಯ ಹೆಸರಿನಲ್ಲಿ ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಆದರೆ, ಅಯೋಧ್ಯೆಗೆ ಭೇಟಿ ಕೊಟ್ಟರೆ ಅಲ್ಲಿನ ಸೌಹಾರ್ದ ವಾತಾವರಣದ ಅರಿವಾಗು
ತ್ತದೆ. ಶ್ರೀರಾಮನಿಗೆ ತೊಡಿಸುವ ಬಟ್ಟೆಯನ್ನು ಮುಸ್ಲಿಮರೇ ಹೊಲೆದುಕೊಡುತ್ತಿದ್ದಾರೆ. ಆದರೆ, ರಾಜಕಾರಣಿಗಳು ಅಯೋಧ್ಯೆ ಹೆಸರಿನಲ್ಲಿ ಎರಡೂ ಧರ್ಮಗಳ ನಡುವೆ ಕೊಳ್ಳಿ ಇಡುತ್ತಿದ್ದಾರೆ’ ಎಂದು ಶೆಟ್ಟಿ ವಿವರಿಸಿದರು.

‘ಮಳೆ ಬಂದರೆ ಇಡೀ ಪ್ರದೇಶ ಕೆರೆಯಂತಾಗುತ್ತದೆ. ಮಕ್ಕಳಿಗೆ ಬಯಲಿನಲ್ಲಿಯೇ ವಿದ್ಯಾಭ್ಯಾಸ‌ ನೀಡಲಾಗುತ್ತಿದೆ. ಸಾರಿಗೆ ವ್ಯವಸ್ಥೆ ಸರಿಯಾಗಿಲ್ಲ. ಆಸ್ಪತ್ರೆಗಳಿ
ಲ್ಲದೆ ಜನ ನಾನಾ ರೋಗಗಳಿಂದ ನರಳುತ್ತಿದ್ದಾರೆ. ಧ್ವಂಸವಾಗಿರುವ ರಾಮಮಂದಿರ, ಬಾಬ್ರಿ ಮಸೀದಿಗಳ ಇಟ್ಟಿಗೆಗಳ ಮಧ್ಯೆ ಜನ ನೆಲೆಸಿದ್ದಾರೆ’ ಎಂದು ಅಲ್ಲಿನ ಸನ್ನಿವೇಶವನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

‘1990ರಿಂದ ‌ಇಲ್ಲಿಯವರೆಗೂ ಅಯೋಧ್ಯೆ ಪೊಲೀಸ್ ಠಾಣೆಯಲ್ಲಿ ಕೋಮುಗಲಭೆ ಪ್ರಕರಣಗಳು ದಾಖಲಾಗಿಲ್ಲ. ಎರಡೂ ಧರ್ಮಗಳ ಜನ ಅಣ್ಣ–ತಮ್ಮಂದಿರಂತೆ ಇದ್ದಾರೆ. ಅವರಿಗೆ ಅಯೋಧ್ಯೆ ವಿವಾದ ಬೇಡವಾಗಿದೆ. ಅವರಿಗೆ ಬೇಕಿರುವುದು ಕ್ಷೇತ್ರದ ಪ್ರಗತಿ, ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗಾವಕಾಶ’ ಎಂದು ಅವರು ಹೇಳಿದರು.

ನಟ ಪ್ರಕಾಶ್‌ ರಾಜ್‌, ‘ಅಯೋಧ್ಯೆಯನ್ನು ಶೈಕ್ಷಣಿಕ, ಔದ್ಯೋಗಿಕವಾಗಿ ಅಭಿವೃದ್ಧಿಪಡಿಸಬೇಕು. ಆದರೆ, ಎರಡೂ ಕೋಮುಗಳ ಮಧ್ಯೆ ಕಂದಕ ಸೃಷ್ಟಿಸುವ ಕೆಲಸವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.‌‌

‘ಮೀಸಲಾತಿಯೂ ಸುಳ್ಳಾಗಬಾರದು’

‘ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಟ್ಟಿರುವುದು ಸ್ವಾಗತ. ಆದರೆ, ಮೋದಿ ಹೇಳಿರುವ ಸುಳ್ಳುಗಳಲ್ಲಿ ಇದೂ ಒಂದಾಗಬಾರದು. ಪ್ರತಿಯೊಬ್ಬರ ಖಾತೆಗೆ ಹಣ ಹಾಕುತ್ತೇನೆ. ಉದ್ಯೋಗ ನೀಡುತ್ತೇನೆ ಎಂದು ಹೀಗೆ ಬರೀ ಸುಳ್ಳುಗಳನ್ನು ಹೇಳಿದ್ದಾರೆ. ಅದೇ ರೀತಿ ಈ ಮೀಸಲಾತಿ ನೀಡಿರುವುದು ಸುಳ್ಳು ಆಗಬಾರದು’ ಎಂದು ಪ್ರಕಾಶ್‌ ರಾಜ್ ಹೇಳಿದರು.

‘ಕೇಜ್ರಿವಾಲ್‌ ಅವರು ಚುನಾವಣೆಗೆ ಬೆಂಬಲ ನೀಡುವುದಾಗಿ ಸೂಚಿಸಿದ್ದಾರೆ. ಅವರಂತೆ ಇನ್ನೂ ಬರುವವರಿದ್ದಾರೆ. ಬೆಂಬಲ ನೀಡಲಿದ್ದಾರೆ. ಜನರ ಸಮಸ್ಯೆಗಳಿಗೆ ದನಿಯಾಗಲು ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್‌ನಿಂದ ಕಣಕ್ಕೆ ಇಳಿಯುತ್ತಿದ್ದೇನೆ. ಪ್ರಣಾಳಿಕೆ ಮತ್ತಿತರ ವಿಚಾರಗಳ ಬಗ್ಗೆ ಸದ್ಯದಲ್ಲೇ ತಿಳಿಸುತ್ತೇನೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !